Saturday, June 15, 2024

ಸತ್ಯ | ನ್ಯಾಯ |ಧರ್ಮ

ಬೆಂಗಳೂರು | RSS ಹೆಸರಿನಲ್ಲಿ ದನದ ಮಾಂಸ ದರೋಡೆ – ನಾಲ್ವರ ಬಂಧನ

ಬೆಂಗಳೂರು: ಆರ್‌ಎಸ್‌ಎಸ್ ಕಾರ್ಯಕರ್ತರ ವೇಷದಲ್ಲಿ ದನದ ಮಾಂಸ ದರೋಡೆ ಮತ್ತು ಅಪಹರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಈ ಸಂಬಂಧ ಬೆಂಗಳೂರಿನ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಂಸ ಮಾರಾಟಗಾರ ಮೊಹಮ್ಮದ್ ಹಾಗೂ ಆತನ ಮೂವರು ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ, ಈ ಘಟನೆ ಸೆಪ್ಟೆಂಬರ್ 10ರಂದು ನಡೆದಿದೆ. ಜಾವೇದ್ ಎನ್ನುವ ವ್ಯಕ್ತಿ ರಾಮನಗರದಿಂದ ಬೆಂಗಳೂರಿನ ತಿಲಕನಗರಕ್ಕೆ ದನದ ಮಾಂಸವನ್ನು ಸಾಗಿಸುತ್ತಿದ್ದರು. ಆರೋಪಿ ಮೊಹಮ್ಮದ್ ನಡೆಸುತ್ತಿದ್ದ ಅಂಗಡಿ ಸೇರಿದಂತೆ ವಿವಿಧ ಅಂಗಡಿಗಳಿಗೆ ಜಾವೇದ್ ದನದ ಮಾಂಸ ತಲುಪಿಸುತ್ತಿದ್ದರು.

ಬೆಂಗಳೂರಿನ ಮೈಕೋ ಲೇಔಟ್ ಸಿಗ್ನಲ್ ಬಳಿ ಮೊಹಮ್ಮದ್‌ನ ಮೂವರು ಸಹಚರರು ತಮ್ಮನ್ನು ಆರ್‌ಎಸ್‌ಎಸ್ ಕಾರ್ಯಕರ್ತರು ಎಂದು ಹೇಳಿಕೊಂಡು ವಾಹನವನ್ನು ಅಡ್ಡಗಟ್ಟಿದ್ದಾರೆ. ಆರೋಪಿಗಳು ವಾಹನ ಸಮೇತ ಜಾವೇದ್ ಅವರನ್ನು ಅಪಹರಿಸಿದ್ದರು.

ಜಾವೇದ್ ಬಿಡುಗಡೆಗೆ 1 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದು, ಬಳಿಕ 10 ಸಾವಿರ ಹಣ ಪಡೆದು ಬಿಡುಗಡೆಗೊಳಿಸಿದ್ದಾರೆ. ಆರೋಪಿಗಳು ಜಾವೇದ್‌ಗೆ ವಾಹನವನ್ನು ಬೇರೆ ಸ್ಥಳದಿಂದ ಪಡೆಯಲು ಹೇಳಿದ್ದರು. ಕೊನೆಗೆ ವಾಹನ ಸಿಕ್ಕಿತಾದರೂ ಅದರಲ್ಲಿದ್ದ ದನದ ಮಾಂಸ ನಾಪತ್ತೆಯಾಗಿತ್ತು.

ಈ ಬಗ್ಗೆ ಜಾವೇದ್ ಪೊಲೀಸ್ ದೂರು ದಾಖಲಿಸಿದ್ದರು. ತನಿಖೆ ಕೈಗೆತ್ತಿಕೊಂಡ ಆಡುಗೋಡಿ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಪ್ರಕರಣವನ್ನು ಭೇದಿಸಿದ್ದಾರೆ. ಮೊಹಮ್ಮದ್‌ನ ಸೂಚನೆಯಂತೆ ಈ ಕೃತ್ಯ ಎಸಗಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ಹೇಳಿದ್ದರು. ಮುಂದಿನ ತನಿಖೆ ನಡೆಯುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು