Home ಬ್ರೇಕಿಂಗ್ ಸುದ್ದಿ ದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ...

ದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟ

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಯನ್ನು ವೀಕ್ಷಿಸಲು ಪೋಷಕರೊಂದಿಗೆ ಬಂದಿದ್ದ ನಾಲ್ಕು ವರ್ಷದ ಬಾಲಕನ ತಲೆಗೆ ಗಂಭೀರ ಗಾಯವಾಗಿದ್ದು, ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದಾನೆ. ಬುಧವಾರ ಸಂಜೆ ಮೈಸೂರಿನ ಹೈವೇ ಸರ್ಕಲ್‌ ಬಳಿ ಭಾರೀ ಜನಸಂದಣಿ ನಿಯಂತ್ರಿಸುವ ವೇಳೆ ಪೊಲೀಸರು ನಡೆಸಿದ ಲಾಠಿಚಾರ್ಜ್‌ನಲ್ಲಿ ಬಾಲಕನಿಗೆ ಲಾಠಿ ಬಡಿದಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.ಗಾಯಗೊಂಡ ಬಾಲಕನನ್ನು ಶಿಶಿರ್ ಎಂದು ಗುರುತಿಸಲಾಗಿದ್ದು, ತಲೆಗೆ ಗಂಭೀರ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಆತನನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ತುರ್ತು ಚಿಕಿತ್ಸೆ ನೀಡಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿಯ ಪ್ರಕಾರ, ಬಾಲಕನ ತಂದೆ ಗಿರೀಶ್‌ ಅವರು ಘಟನೆ ಕುರಿತು ಮಾಹಿತಿ ನೀಡಿದ್ದಾರೆ. ಜಂಬೂಸವಾರಿ ಮೆರವಣಿಗೆಯ ಹಿನ್ನೆಲೆಯಲ್ಲಿ ಹೈವೇ ಸರ್ಕಲ್‌ ಬಳಿ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು. ಜನಸಂದಣಿ ನಿಯಂತ್ರಿಸಲು ನಿಯೋಜಿಸಲಾಗಿದ್ದ ಪೊಲೀಸರು ಲಾಠಿಚಾರ್ಜ್‌ ನಡೆಸಿದ ವೇಳೆ, ಪೋಷಕರೊಂದಿಗೆ ನಿಂತಿದ್ದ ಬಾಲಕನ ತಲೆಗೆ ಲಾಠಿ ಬಡಿದಿದೆ ಎಂದು ಹೇಳಲಾಗಿದೆ.

ಲಾಠಿ ಬಡಿದ ಪರಿಣಾಮ ಬಾಲಕನ ತಲೆಯಿಂದ ತೀವ್ರ ರಕ್ತಸ್ರಾವವಾಗಿದ್ದು, ಇದರಿಂದ ಪೋಷಕರು ಆತಂಕಕ್ಕೊಳಗಾಗಿದ್ದಾರೆ. ಕೂಡಲೇ ಆತನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ತಲೆಯ ಗಾಯಕ್ಕೆ ತುರ್ತು ಚಿಕಿತ್ಸೆ ನೀಡಿ ಹೊಲಿಗೆ ಹಾಕಿದ್ದಾರೆ ಎನ್ನಲಾಗಿದೆ. ಸದ್ಯ ಬಾಲಕನ ಆರೋಗ್ಯ ಸ್ಥಿತಿ ಕುಟುಂಬಸ್ಥರಲ್ಲಿ ತೀವ್ರ ಆತಂಕ ಮೂಡಿಸಿದೆ. ಘಟನೆ ಕುರಿತು ನೋವು ವ್ಯಕ್ತಪಡಿಸಿರುವ ಬಾಲಕನ ತಂದೆ ಗಿರೀಶ್‌, ಪೊಲೀಸರ ಕ್ರಮದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. “ನಾವು ನಮ್ಮ ಮಗನಿಗೆ ದಸರಾ ತೋರಿಸಬೇಕು ಎಂದು ಕರೆತಂದಿದ್ದೆವು. ಆದರೆ, ಆತ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಲು ನಮ್ಮಿಂದ ಸಾಧ್ಯವಾಗಲಿಲ್ಲ. ಇಷ್ಟು ಚಿಕ್ಕ ಮಗುವಿನ ಮೇಲೆ ಲಾಠಿ ಬೀಸುವ ಅಗತ್ಯವಿತ್ತೇ?” ಎಂದು ಅವರು ಪ್ರಶ್ನಿಸಿದ್ದಾರೆ.

ಬಾಲಕನ ತಲೆಗೆ ಗಂಭೀರ ಗಾಯವಾಗಿರುವುದರಿಂದ ಶಸ್ತ್ರಚಿಕಿತ್ಸೆ ನಡೆಸಬೇಕಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ. ತಲೆಬುರುಡೆಯನ್ನು ತೆರೆದು ರಕ್ತ ಹೆಪ್ಪುಗಟ್ಟಿದೆಯೇ ಎಂಬುದನ್ನು ಪರಿಶೀಲಿಸಬೇಕಿದೆ ಎಂದು ವೈದ್ಯರು ಹೇಳಿದ್ದಾರೆ ಎಂಬುದಾಗಿ ತಂದೆ ತಿಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಮಾಜಿ ನಗರಪಾಲಿಕೆ ಸದಸ್ಯ ರಂಗಸ್ವಾಮಿ ಪ್ರತಿಕ್ರಿಯಿಸಿದ್ದು, ಬಾಲಕನಿಗೆ ಹೊಡೆದ ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಲಾಗುವುದು ಎಂದು ತಿಳಿಸಿದ್ದಾರೆ.

You cannot copy content of this page

Exit mobile version