ಹೊಸದಿಲ್ಲಿ: ಪ್ರತಿಷ್ಠಿತ ಜೆಎನ್‌ಯು ಕ್ಯಾಂಪಸ್‌ನಲ್ಲಿ ಮುಸುಕುಧಾರಿ ಎಬಿವಿಪಿ ಗೂಂಡಾಗಳ ದಾಳಿ ನಡೆದು ಇಂದಿಗೆ ನಾಲ್ಕು ವರ್ಷಗಳಾಗಿವೆ.
ಎಬಿವಿಪಿ ಗೂಂಡಾಗಳ ವಿರುದ್ಧ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದ ದೆಹಲಿ ಪೊಲೀಸರ ವಿರುದ್ಧ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಶಿಕ್ಷಕರ ಸಂಘ (ಜೆಎನ್‌ಯುಟಿಎ) ಅಸಮಾಧಾನ ವ್ಯಕ್ತಪಡಿಸಿದೆ. ಶುಕ್ರವಾರ ಮಾಧ್ಯಮ ಸಂಸ್ಥೆಯೊಂದರೊಡನೆ ಮಾತನಾಡಿದ ಜೆಎನ್‌ಯುಟಿಎ ಅಧ್ಯಕ್ಷ ಡಿಕೆ ಲೋಬಿಯಾಲ್, ಎಬಿವಿಪಿ ಗೂಂಡಾಗಳ ಭೀಕರ ದಾಳಿಯ ರಾತ್ರಿಯ ನೆನಪು ಈಗಲೂ ಕಾಡುತ್ತದೆ ಎಂದು ನೆನಪಿಸಿಕೊಂಡರು. ದಾಳಿ ನಡೆದು ನಾಲ್ಕು ವರ್ಷ ಕಳೆದರೂ ದೆಹಲಿ ಪೊಲೀಸರು ಮತ್ತು ವಿಶ್ವವಿದ್ಯಾಲಯದ ಅಧಿಕಾರಿಗಳು ಸಂತ್ರಸ್ತ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವ ಆಸಕ್ತಿ ಹೊಂದಿಲ್ಲ. ಈ ಹಿಂಸಾಚಾರ ಜಗತ್ತಿನಾದ್ಯಂತ ಚರ್ಚೆಗೆ ಗ್ರಾಸವಾಗಿದ್ದರೂ ಚಾರ್ಜ್ ಶೀಟ್ ದಾಖಲಾಗದಿರುವುದು ಹಾಗೂ ತನಿಖೆ ಪೂರ್ಣಗೊಳ್ಳದಿರುವುದು ನಮಗೆ ಆತಂಕ ತಂದಿದೆ ಎಂದರು.
ತನಿಖೆಯ ಆರಂಭದಲ್ಲಿ ಸಂತ್ರಸ್ತರ ಹೇಳಿಕೆಗಳನ್ನು ದಾಖಲಿಸಿಕೊಂಡ ಪೊಲೀಸರು ನಂತರ ಯಾವುದೇ ಕ್ರಮ ಕೈಗೊಳ್ಳದಿರುವುದು ಟೀಕೆಗೆ ಗುರಿಯಾಗಿತ್ತು. ದಾಳಿಗೆ ಯೋಜನೆ ರೂಪಿಸಿದ ‘ಫ್ರೆಂಡ್ಸ್ ಆಫ್ ಆರ್ ಎಸ್ ಎಸ್ ’ ಮತ್ತು ‘ಯೂನಿಟಿ ಎಗೇನ್ಸ್ಟ್ ಲೆಫ್ಟ್ ’ ಎಂಬ ವಾಟ್ಸ್ ಆ್ಯಪ್ ಗ್ರೂಪ್ ನ ಸದಸ್ಯರ ಮಾಹಿತಿಯನ್ನೂ ಪಡೆಯಲು ದೆಹಲಿ ಪೊಲೀಸರಿಗೆ ಸಾಧ್ಯವಾಗಿಲ್ಲ ಎಂದು ಆರೋಪಿಸಲಾಗಿದೆ. ಗೂಂಡಾಗಳ ವಿರುದ್ಧ ಯಾವುದೇ ಕನಿಷ್ಠ ಕ್ರಮ ಕೈಗೊಳ್ಳದಿರುವುದು ಈ ದಾಳಿಯಲ್ಲಿ ಜೆಎನ್‌ಯು ಅಧಿಕಾರಿಗಳು ಮತ್ತು ದೆಹಲಿ ಪೊಲೀಸರೂ ಭಾಗಿಯಾಗಿದ್ದಾರೆ ಎಂಬ ನಮ್ಮ ವಾದವನ್ನು ಬಲಪಡಿಸುತ್ತದೆ ಎಂದು ಅವರು ಹೇಳಿದರು.
ʼಎಬಿವಿಪಿ ಗೂಂಡಾಗಳು ದಾಳಿ ಮಾಡುತ್ತಾರೆ ಎಂಬ ಮೊದಲೇ ಮಾಹಿತಿ ಇದ್ದರೂ ಗೂಂಡಾಗಳ ಗುಂಪನ್ನು ಕ್ಯಾಂಪಸ್ ಒಳಗೆ ಬರಲು ಅನುಮತಿಸಲಾಯಿತು. ಹಿಂಸಾಚಾರ ತಡೆಯಲು ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ. ದಾಳಿಯ ಸಂದರ್ಭದಲ್ಲಿ ಸಹಾಯಕ್ಕಾಗಿ ಹಲವಾರು ಫೋನ್ ಕರೆಗಳಿಗೆ ಪ್ರತಿಕ್ರಿಯಿಸಲು ಪೊಲೀಸರು ವಿಫಲರಾಗಿದ್ದಾರೆ ಎಂದು ಟೀಕಿಸಲಾಯಿತು. ನಾಲ್ಕು ವರ್ಷಗಳ ಹಿಂದೆ ನಡೆದ ಜೆಎನ್‌ಯು ದಾಳಿಯು ‘ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವ ಅಧಿಕಾರದ ದುರುಪಯೋಗ’ ಎಂದು ಜೆಎನ್‌ಯುಟಿಎ ನಂಬುತ್ತದೆ ಎಂದು ಡಿಕೆ ಲೋಬಿಯಾಲ್ ಹೇಳಿದ್ದಾರೆ.
ಸುಮಾರು 50 ಎಬಿವಿಪಿ ಗೂಂಡಾಗಳ ಗುಂಪು 2020 ರ ಜನವರಿ 5 ರಂದು ಸಂಜೆ 7 ಗಂಟೆ ಸುಮಾರಿಗೆ ಶುಲ್ಕ ಹೆಚ್ಚಳದ ಹೆಸರಿನಲ್ಲಿ ಜೆಎನ್‌ಯು ಮೇಲೆ ಲಾಠಿ, ದೊಣ್ಣೆ ಮತ್ತು ಆಸಿಡ್ ದಾಳಿ ನಡೆಸಿತು. ಈ ಗುಂಪಿನಲ್ಲಿ ಮಹಿಳೆಯರೂ ಇದ್ದರು. ಸುಮಾರು 3 ಗಂಟೆಗಳ ಕಾಲ ದಾಳಿ ಮುಂದುವರೆಯಿತು. ಈ ದಾಳಿಯಲ್ಲಿ ಎಡಪಂಥೀಯ ಸಂಘಟನೆಗಳ ಮುಖಂಡರು ಮತ್ತು ವಿದ್ಯಾರ್ಥಿಗಳನ್ನು ಗುರಿಯಾಗಿಸಲಾಗಿತ್ತು. ಈ ದಾಳಿಯಲ್ಲಿ 39 ಮಂದಿ ಗಾಯಗೊಂಡಿದ್ದಾರೆ. ಇದುವರೆಗೆ ಆರೋಪಿಗಳನ್ನು ಬಂಧಿಸಿಲ್ಲ, ವಶಕ್ಕೆ ಪಡೆದಿಲ್ಲ.