Saturday, June 15, 2024

ಸತ್ಯ | ನ್ಯಾಯ |ಧರ್ಮ

ಶಿಂಧೆ, ಅಜಿತ್‌ ಬಣದ 40 ಶಾಸಕರು ಘರ್ ವಾಪ್ಸಿ: ಸ್ಪೋಟಕ ಹೇಳಿಕೆ ನೀಡಿದ ಕಾಂಗ್ರೆಸ್‌ ಮುಖಂಡ

ಮುಂಬೈ: ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಡಿಸಿಎಂ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಯ 40 ಶಾಸಕರು ಘರ್ ವಾಪ್ಸಿಗೆ ಉತ್ಸುಕರಾಗಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಮತ್ತು ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಜಯ್ ವಾಡೆತ್ತಿವಾರ್ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಲೋಕಸಭಾ ಚುನಾವಣಾ ಫಲಿತಾಂಶವು ರಾಜ್ಯದಲ್ಲಿ ಯಾವ ದಿಕ್ಕಿನಲ್ಲಿ ಗಾಳಿ ಬೀಸುತ್ತಿದೆ ಎನ್ನುವುದನ್ನು ತೋರಿಸಿವೆ. ಇದರ ಪರಿಣಾಮ ವಿಧಾನಸಭಾ ಚುನಾವಣೆಗಳಲ್ಲಿಯೂ ಮುಂದುವರಿಯಲಿದೆ ಎಂದು ವಾಡೆತ್ತಿವಾರ್ ಹೇಳಿದ್ದಾರೆ.

ಮುಂದೆ ಬರುವ ಚುನಾವಣೆಯಲ್ಲಿ ಮಹಾ ವಿಕಾಸ್ ಅಘಾಡಿ – ಕಾಂಗ್ರೆಸ್, ಶರದ್ ಪವಾರ್ ಅವರ ಎನ್‌ಸಿಪಿ ಮತ್ತು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಮಹಾರಾಷ್ಟ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ನಮಗೆ ವಿಶ್ವಾಸವಿದೆ. ಲೋಕಸಭಾ ಚುನಾವಣೆಯ ಫಲಿತಾಂಶ ರಾಜ್ಯದ 288 ವಿಧಾನಸಭಾ ಕ್ಷೇತ್ರಗಳ ಪೈಕಿ 150ರಲ್ಲಿ ಎಂವಿಎ ಮುಂದಿದೆ ಮತ್ತು 130 ಕ್ಷೇತ್ರಗಳಲ್ಲಿ ಮಹಾಯುತಿ ಬಿಜೆಪಿ ನೇತೃತ್ವದ ಆಡಳಿತಾರೂಢ ಮೈತ್ರಿಕೂಟ ಮುಂದಿದೆ ಎನ್ನುವುದನ್ನು ತೋರಿಸಿದೆ ಎಂದು ವಾಡೆತ್ತಿವಾರ್ ತಿಳಿಸಿದ್ದಾರೆ.

ಎಂವಿಎ ಅಧಿಕಾರಕ್ಕೆ ಬರಲಿದೆ ಎನ್ನುವುದನ್ನು ಶಿಂಧೆ ಶಿವಸೇನೆ ಮತ್ತು ಎನ್ಸಿಪಿ ಬಣಗಳ 40 ಶಾಸಕರು ಅರ್ಥ ಮಾಡಿಕೊಂಡಿದ್ದಾರೆ ಮತ್ತು ಇದೇ ಕಾರಣಕ್ಕೆ ಘರ್ ವಾಪ್ಸಿಗೆ ಮನವಿ ಮಾಡಿಕೊಂಡು ತಮ್ಮ ಮೂಲಪಕ್ಷಗಳ ನಾಯಕರಿಗೆ ಕರೆಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಶರದ್ ಪವಾರ್ ನೇತೃತ್ವದ ಎನ್‌ಸಿಪಿಯ ರಾಜ್ಯಾಧ್ಯಕ್ಷ ಜಯಂತ್ ಅವರು ಶಿಂಧೆ ಮತ್ತು ಅಜಿತ್‌ ಬಣಕ್ಕೆ ಸೇರಿದ ಕೆಲವು ಶಾಸಕರು ಪಕ್ಷಕ್ಕೆ ವಾಪಾಸ್ಸು ಬರಲು ಮನವಿಯನ್ನು ನೀಡಿರುವುದನ್ನು ದೃಢಪಡಿಸಿದ್ದಾರೆ.

ಕೇಂದ್ರೀಯ ಸಂಸ್ಥೆಗಳಿಂದ ರಕ್ಷಣೆಗಾಗಿ ನಾವು ಬಿಜೆಪಿ ಜೊತೆಗಿದ್ದೇವೆ. ಬಿಜೆಪಿ 2014 ಮತ್ತು 2019ರಲ್ಲಿ ಇದ್ದಷ್ಟು ಶಕ್ತಿಶಾಲಿಯಾಗಿಲ್ಲ. ಬಿಜೆಪಿ ಮೈತ್ರಿಕೂಟದ ಪಾಲುದಾರರು, ಮುಖ್ಯವಾಗಿ ಜೆಡಿ(ಯು) ಮತ್ತು ಟಿಡಿಪಿ ಬೇರೆ ದಾರಿ ಹಿಡಿದರೆ, ಮೋದಿ ಸರ್ಕಾರ ಪತನಗೊಳ್ಳಬಹುದು ಎಂದು ಅಜಿತ್ ಪವಾರ್ ಬಣದ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ ಎಂದು ವಾಡೆತ್ತಿವಾರ್‌ ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು