Sunday, June 23, 2024

ಸತ್ಯ | ನ್ಯಾಯ |ಧರ್ಮ

ಪರೀಕ್ಷೆ ಎನ್ನುವ ಶಿಕ್ಷೆ: 5 ವರ್ಷಗಳಲ್ಲಿ 41 ಪ್ರಶ್ನೆ ಪತ್ರಿಕೆ ಸೋರಿಕೆ

ದೇಶದಲ್ಲಿ ಪರೀಕ್ಷೆಗಳು ತಮ್ಮ ವಿಶ್ವಾಸರ್ಹತೆಯನ್ನು ಕಳೆದುಕೊಳ್ಳುತ್ತಿವೆ. ವಿದ್ಯಾರ್ಥಿಗಳು, ಉದ್ಯೋಗಕಾಂಕ್ಷಿಗಳು ಕಣ್ಣು ಕಟ್ಟಿದಂತಾಗಿ ಪರದಾಡುತ್ತಿದ್ದಾರೆ. ಅವರ ಭವಿಷ್ಯದೊಂದಿಗೆ ಅಧಿಕಾರಶಾಹಿ ಆಟವಾಡುತ್ತಿದೆ.

ಳೆದ ಐದು ವರ್ಷಗಳಲ್ಲಿ, ಉತ್ತರ ಪ್ರದೇಶ, ಹರಿಯಾಣ, ಉತ್ತರಾಖಂಡ, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್, ಬಿಹಾರ, ಜಾರ್ಖಂಡ್, ಒಡಿಶಾ, ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಅಸ್ಸಾಂ, ಅರುಣಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರದಂತಹ ರಾಜ್ಯಗಳಲ್ಲಿ 41 ನೇಮಕಾತಿಗಳಿಗೆ ಸಂಬಂಧಿಸಿದ ಪರೀಕ್ಷಾ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿದೆ.

ಈ ಸೋರಿಕೆಯಿಂದಾಗಿ ಹಲವು ರಾಜ್ಯಗಳ ಕೋಟ್ಯಂತರ ವಿದ್ಯಾರ್ಥಿಗಳು ತೀವ್ರ ತೊಂದರೆಗೀಡಾಗಿದ್ದಾರೆ. ನೀಟ್ ಪರೀಕ್ಷೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ಪ್ರತಿಭಟನೆಗಳು ವಿದ್ಯಾರ್ಥಿಗಳ ಆಕ್ರೋಶದ ಪರಮಾವಧಿ ಎಂದೇ ಹೇಳಬಹುದು.

ವರ್ಷವಿಡೀ ಕಠಿಣ ಪರಿಶ್ರಮ ಪಟ್ಟು ಪರೀಕ್ಷೆಗೆ ತಯಾರಿ ನಡೆಸಿದರೂ ಪ್ರಶ್ನೆ ಪತ್ರಿಕೆ ಸೋರಿಕೆಯಾಗುತ್ತಿರುವುದು ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳಲ್ಲಿ ಸಿಟ್ಟು, ಅಸಹನೆ ಹೆಚ್ಚಿಸುತ್ತಿದೆ. ಈ ಪುನಾರಾವರ್ತಿತ ತಪ್ಪುಗಳ ಕಡೆಗಿನ ಸರ್ಕಾರದ ನಿರ್ಲಕ್ಷ್ಯದ ಕುರಿತು ವಿದ್ಯಾರ್ಥಿಗಳು ಆಕ್ರೋಶವನ್ನು ತೋರುತ್ತಿದ್ದಾರೆ. ಪ್ರತಿ ರಾಜ್ಯದಲ್ಲೂ ಪ್ರಶ್ನೆ ಪತ್ರಿಕೆ ಸೋರಿಕೆಯಾಗುತ್ತಿದೆ. ಇದನ್ನು ತಡೆಯದಿದ್ದರೆ ಕೋಟ್ಯಂತರ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ. NEET ಪರೀಕ್ಷೆಯ 47 ದಿನಗಳ ನಂತರ, ಕೇಂದ್ರ ಸರ್ಕಾರವು NTAಯ ಕಾರ್ಯಕ್ಷಮತೆಯನ್ನು ಸುಧಾರಿಸಲು ಸಮಿತಿಯನ್ನು ರಚಿಸಲು ನಿರ್ಧರಿಸಿದೆ.

2017ರಲ್ಲಿ, ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಉನ್ನತ ಶಿಕ್ಷಣದ ಪ್ರವೇಶಕ್ಕಾಗಿ ಸ್ವತಂತ್ರ ಏಜೆನ್ಸಿಯನ್ನು ಸ್ಥಾಪಿಸುವುದಾಗಿ ಘೋಷಿಸಿತು. ಪ್ರವೇಶ ಪರೀಕ್ಷೆಗಳ ನಿರ್ವಹಣೆಯಲ್ಲಿ ಯಾವುದೇ ತಪ್ಪುಗಳು ನಡೆಯದಂತೆ ನೋಡಿಕೊಳ್ಳಲು ಇದನ್ನು ಸ್ಥಾಪಿಸಲಾಗುತ್ತಿದೆ ಎಂದು ಸರ್ಕಾರ ಹೇಳಿಕೊಂಡಿತ್ತು. ಈ ರೀತಿಯಾಗಿ NTA ಮಾರ್ಚ್ 1, 2018ರಂದು ಅಸ್ತಿತ್ವಕ್ಕೆ ಬಂದಿತು. ಅಂದಿನಿಂದ ಈ ಸಂಸ್ಥೆಯು ಅನೇಕ ಪ್ರವೇಶ ಪರೀಕ್ಷೆಗಳನ್ನು ನಡೆಸಿದೆ. ಆದರೆ ಅನೇಕ ಸಂದರ್ಭಗಳಲ್ಲಿ ಅವುಗಳ ನಿರ್ವಹಣೆ ದೋಷಪೂರಿತವಾಗಿದೆ. ಪೇಪರ್‌ ಲೀಕ್‌ ಆಗಿ ಪರೀಕ್ಷೆ ಮುಂದೂಡುವುದು. ಅಕ್ರಮದ ತನಿಖೆಗೆ ಆಲಸ್ಯ ಮಾಡುವುದು ಅದಕ್ಕೆ ವಾಡಿಕೆಯಾಗಿಬಿಟ್ಟಿದೆ.

ನೀಟ್ ಪರೀಕ್ಷೆಯ ಬಗ್ಗೆ ಹಲವು ಆರೋಪಗಳು ಕೇಳಿಬಂದಿವೆ. ಪರೀಕ್ಷೆ ರದ್ದಾಗಲಿ ಬಿಡಲಿ ವಿದ್ಯಾರ್ಥಿಗಳೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಯಾವುದೇ ಧಕ್ಕೆ ಆಗುವುದಿಲ್ಲ ಎಂದು ಶಿಕ್ಷಣ ಇಲಾಖೆ ಹೇಳಿದೆ. ಆದರೆ ಪ್ರಾಥಮಿಕ ತನಿಖೆಯ ನಂತರ NET ಪರೀಕ್ಷೆಯನ್ನು ರದ್ದುಗೊಳಿಸಲಾಗಿರುವುದನ್ನು ವಿದ್ಯಾರ್ಥಿಗಳು ನೆನಪಿಸುತ್ತಾರೆ. ನೀಟ್ ವಿಚಾರದಲ್ಲಿ ಹೀಗೇಕೆ ಆಗಬಾರದು ಎಂಬುದು ಅವರ ಪ್ರಶ್ನೆ.

ಮುಂದಿನ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗುವುದಿಲ್ಲ ಎಂಬ ಖಾತ್ರಿ ಇಲ್ಲ ಎಂದು ನೆಟ್ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈಗೀಗ ಉದ್ಯೋಗ ನೇಮಕಾತಿ ಪರೀಕ್ಷೆಗಳ ಕುರಿತಾಗಿಯೂ ಅನುಮಾನಗಳ ಹುತ್ತ ಬೆಳೆಯುತ್ತಾ ಸಾಗಿದೆ.

ಎನ್‌ಟಿಎ ರಚನೆಯಾದ ನಂತರ ಪ್ರತಿ ವರ್ಷ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. 2019ರಲ್ಲಿ ಜೆಇಇ ಮೇನ್ಸ್ ಪರೀಕ್ಷೆಯ ಸಮಯದಲ್ಲಿ, ಸರ್ವರ್ ವೈಫಲ್ಯದಿಂದಾಗಿ ವಿದ್ಯಾರ್ಥಿಗಳು ತೊಂದರೆಗಳನ್ನು ಎದುರಿಸಿದರು. ಕೆಲವೆಡೆ ಪ್ರಶ್ನೆಪತ್ರಿಕೆ ನೀಡಲು ವಿಳಂಬ ಮಾಡುತ್ತಿರುವ ಬಗ್ಗೆಯೂ ದೂರುಗಳು ಬಂದಿದ್ದವು.

NEET ಪದವಿಪೂರ್ವ ವೈದ್ಯಕೀಯ ಪರೀಕ್ಷೆ 2020ಕ್ಕೆ ಸಂಬಂಧಿಸಿದಂತೆ NTAಯ ಕಾರ್ಯಕ್ಷಮತೆಯ ಕುರಿತು ಅನೇಕ ಪ್ರಶ್ನೆಗಳನ್ನು ಎತ್ತಲಾಗಿದೆ. ಈ ಪರೀಕ್ಷೆಯನ್ನು ಹಲವು ಬಾರಿ ಮುಂದೂಡಲಾಗಿದೆ. ಅಕ್ರಮಗಳ ಬಗ್ಗೆಯೂ ಸಾಕಷ್ಟು ದೂರುಗಳು ಬಂದಿವೆ.

ಜೆಇಇ ಮೇನ್ಸ್ 2021ರ ಪರೀಕ್ಷೆಯಲ್ಲಿ ಕೆಲವು ತಪ್ಪು ಪ್ರಶ್ನೆಗಳ ಕುರಿತು ಗೊಂದಲ ಉಂಟಾಯಿತು. ಶಿಕ್ಷಣ ಮಾಫಿಯಾ ಅನಪೇಕ್ಷಿತ ವಿಧಾನಗಳ ಮೂಲಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಲು ಪ್ರಯತ್ನಿಸಿದೆ ಎಂಬ ಆರೋಪವೂ ಇತ್ತು. ಆ ವರ್ಷವೇ ರಾಜಸ್ಥಾನದ ತಂಡವೊಂದು ನೀಟ್ ಪರೀಕ್ಷೆಯಲ್ಲಿ ಅಕ್ರಮ ಎಸಗಿತ್ತು.

2022ರಲ್ಲಿ ಕೇಂದ್ರ, ರಾಜ್ಯ, ಖಾಸಗಿ ಹಾಗೂ ಡೀಮ್ಡ್ ವಿವಿಗಳ ಪ್ರವೇಶಕ್ಕೆ ನಡೆಸಿದ ಜಂಟಿ ಪ್ರವೇಶ ಪರೀಕ್ಷೆಯಲ್ಲೂ ಅಕ್ರಮ ನಡೆದಿರುವ ಬಗ್ಗೆ ದೂರುಗಳು ಬಂದಿವೆ. ಇವುಗಳಲ್ಲಿ ಹೆಚ್ಚಿನ ದೂರುಗಳು ರಾಜಸ್ಥಾನದಿಂದ ಬಂದಿವೆ. ಆ ನಂತರ NTA ಕೆಲವು ಪ್ರದೇಶಗಳಲ್ಲಿ ಮರು ಪರೀಕ್ಷೆ ನಡೆಸಿತು.

ಈ ವರ್ಷವೂ ನಡೆದ ನೀಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಆರೋಪವಿದೆ. ಗ್ರೇಸ್ ಅಂಕಗಳ ಕುರಿತು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಬಿಹಾರದಲ್ಲಿ ಪೇಪರ್ ಲೀಕ್ ಆಗಿರುವ ಸುದ್ದಿ ಬೆಳಕಿಗೆ ಬಂದಿದೆ. ಇದರೊಂದಿಗೆ, ಎನ್‌ಟಿಎಯ ವಿಶ್ವಾಸಾರ್ಹತೆ ಮತ್ತು ಹೊಣೆಗಾರಿಕೆಯನ್ನು ಪ್ರಶ್ನಿಸಲಾಗಿದೆ.

ಇದೇ ತಿಂಗಳ 18ರಂದು ನಡೆಯುತ್ತಿದ್ದ ಯುಜಿಸಿ-ನೆಟ್ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. NTA ರಚನೆಯ ನಂತರ, 2018 ಮತ್ತು 2023 ವರ್ಷಗಳಲ್ಲಿ ಮಾತ್ರ, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಕಾರ್ಯನಿರ್ವಹಣೆ ಕುರಿತು ಯಾವುದೇ ಆರೋಪಗಳು ಕೇಳಿಬಂದಿಲ್ಲ.

ಒಂದು ಕಡೆ ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಆತಂಕಕ್ಕೊಳಗಾಗಿದ್ದರೆ ಮತ್ತೊಂದೆಡೆ ಪೇಪರ್ ಲೀಕ್ ರಾಜಕೀಯ ಶುರುವಾಗಿದೆ. ಬಿಹಾರದಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ನೀಟ್ ಹಗರಣದ ಪ್ರಮುಖ ಆರೋಪಿ ಅಮಿತ್ ಆನಂದ್ ಪತ್ರಿಕೆ ಸೋರಿಕೆ ಮಾಡಿದ್ದು, ಎರಡನೇ ಆರೋಪಿ ಸಿಕಂದರ್ ಯದುವೆಂದು ಪೇಪರ್ ಮಾರಾಟ ಮಾಡಲು ಒಪ್ಪಂದ ಮಾಡಿಕೊಂಡಿದ್ದಾನೆ. ಆ ನಂತರ ಹಲವು ವಿದ್ಯಾರ್ಥಿಗಳು ಆ ಪ್ರಶ್ನೆ ಪತ್ರಿಕೆಯನ್ನು ರೂ.40 ಲಕ್ಷಕ್ಕೆ ಖರೀದಿಸಿದರು.

ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರ ಆಪ್ತ ಕಾರ್ಯದರ್ಶಿ ಪ್ರದೀಪ್ ಕುಮಾರ್ ಆರೋಪಿ ವಿದ್ಯಾರ್ಥಿಗಳಿಗಾಗಿ ಅತಿಥಿ ಗೃಹವನ್ನು ಕಾಯ್ದಿರಿಸಿದ್ದಾರೆ. ಅವರು ತಮ್ಮ ಆಪ್ತ ಸಹಾಯಕರನ್ನು ಕರೆಸಿ ವಿಚಾರಣೆ ನಡೆಸಬಹುದು ಎಂದಿದ್ದಾರೆ.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯ ಮಾಸ್ಟರ್ ಮೈಂಡ್ ಅಮಿತ್ ಆನಂದ್ ಈ ಹಿಂದೆಯೂ ಹಲವು ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡಿರುವುದು ಗೊತ್ತಾಗಿದೆ. ಸೋರಿಕೆಯಾದ ಪ್ರತಿ ಪ್ರಶ್ನೆ ಪತ್ರಿಕೆಯನ್ನು ಲಕ್ಷಗಟ್ಟಲೆ ರೂಪಾಯಿಗೆ ಸಿಕಂದರ್‌ಗೆ ಮಾರಾಟ ಮಾಡಿದ್ದಾಗಿ ಅಮಿತ್ ಒಪ್ಪಿಕೊಂಡಿದ್ದಾನೆ.

ಇದೆಲ್ಲ ಕೆಸರೆರಚಾಟದ ನಡುವೆ ಉಳಿದುಹೋಗುವ ಪ್ರಶ್ನೆಯೆಂದರೆ ಅನ್ಯಾಯಕ್ಕೊಳಗಾದ ಮಕ್ಕಳಿಗೆ ನ್ಯಾಯ ಕೊಡಿಸುವವರು ಯಾರು ಎನ್ನುವುದು. ಅವರ ಭವಿಷ್ಯವನ್ನೇ ಬಲಿ ತೆಗೆದುಕೊಂಡವರಿಗೆ ಶಿಕ್ಷೆಯಾಗುವುದು ಯಾವಾಗ ಎನ್ನುವುದು.

Related Articles

ಇತ್ತೀಚಿನ ಸುದ್ದಿಗಳು