ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR) ವಿಚಾರದಲ್ಲಿ ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ವಿರೋಧ ಪಕ್ಷಗಳು ನಡೆಸುತ್ತಿರುವ ಪ್ರತಿಭಟನೆಗಳ ನಡುವೆಯೇ, ಸುಪ್ರೀಂ ಕೋರ್ಟ್‌ನ ಇಬ್ಬರು ಮಾಜಿ ನ್ಯಾಯಮೂರ್ತಿಗಳು ಸೇರಿದಂತೆ 42 ನಿವೃತ್ತ ನ್ಯಾಯಾಧೀಶರು ಆಯೋಗದ ಬೆಂಬಲಕ್ಕೆ ನಿಂತಿದ್ದಾರೆ.
ಸಾಂವಿಧಾನಿಕ ಸಂಸ್ಥೆಗಳು ಮತ್ತು ನ್ಯಾಯಾಂಗದ ವಿಶ್ವಾಸಾರ್ಹತೆಯನ್ನು ಕುಗ್ಗಿಸಲು ಸಂಘಟಿತ ಪಿತೂರಿ ನಡೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿ ಅವರು ಬಹಿರಂಗ ಪತ್ರ ಬರೆದಿದ್ದಾರೆ.
ಮಾಜಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ, ಪಂಕಜ್ ಮಿತ್ತಲ್ ಹಾಗೂ ಹೈಕೋರ್ಟ್‌ಗಳ ಮಾಜಿ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಸಿ. ಪಟೇಲ್, ಸುಭ್ರೋ ಕಮಲ್ ಮುಖರ್ಜಿ ಸೇರಿದಂತೆ 42 ಹಿರಿಯ ನ್ಯಾಯಾಧೀಶರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ. “ಸಾರ್ವಜನಿಕ ಸಂಸ್ಥೆಗಳನ್ನು ಟೀಕಿಸುವುದು ಪ್ರಜಾಪ್ರಭುತ್ವದ ಹಕ್ಕು, ಆದರೆ ಅವುಗಳ ತೇಜೋವಧೆ ಮಾಡುವುದು ಪ್ರಜಾಪ್ರಭುತ್ವವಲ್ಲ” ಎಂದು ಪತ್ರದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ಚುನಾವಣಾ ಆಯೋಗದ ಅಧಿಕಾರಿಗಳನ್ನು ಸಾರ್ವಜನಿಕ ವೇದಿಕೆಗಳಲ್ಲಿ ‘ಕಳ್ಳರು’, ‘ಗೊಂಬೆಗಳು’ ಎಂದು ಕರೆಯುವುದು ಮತ್ತು ಸರ್ಕಾರ ಬದಲಾದ ಮೇಲೆ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ‘ಮತಗಳ ಕಳವು’ (Vote Theft) ಎಂಬ ಆರೋಪ ಮಾಡಲಾಗುತ್ತಿದೆ ಎಂದು ನ್ಯಾಯಾಧೀಶರು ಕಿಡಿಕಾರಿದ್ದಾರೆ.
ಚುನಾವಣೆಗಳಲ್ಲಿ ಸೋತಾಗ ಇವಿಎಂ (EVM) ಮೇಲೆ ಗೂಬೆ ಕೂರಿಸುವುದು, ಅದೇ ವ್ಯವಸ್ಥೆಯಲ್ಲಿ ಗೆದ್ದಾಗ ಮೌನವಾಗಿರುವುದು ಸ್ವಾರ್ಥ ರಾಜಕೀಯದ ಭಾಗವಾಗಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಮತದಾರರ ಪಟ್ಟಿ ಪರಿಷ್ಕರಣೆಯು (SIR) ಜನಪ್ರಾತಿನಿಧ್ಯ ಕಾಯ್ದೆ 1950ರ ಸೆಕ್ಷನ್ 21(3) ರ ಅಡಿಯಲ್ಲಿ ಕಾನೂನುಬದ್ಧವಾಗಿದ್ದು, ಮೃತರು, ನಕಲಿ ಮತದಾರರು ಮತ್ತು ವಲಸೆ ಹೋದವರ ಹೆಸರುಗಳನ್ನು ತೆಗೆದು ಅರ್ಹರನ್ನು ಸೇರಿಸುವ ನಿಯಮಿತ ಪ್ರಕ್ರಿಯೆಯಾಗಿದೆ. ಇದನ್ನು ಸುಪ್ರೀಂ ಕೋರ್ಟ್ ಕೂಡ ಎತ್ತಿಹಿಡಿದಿದೆ.
“ಪ್ರಜಾಪ್ರಭುತ್ವದ ಕರೆನ್ಸಿಯೇ ಜನರ ನಂಬಿಕೆ. ಮತಗಳು ಲೆಕ್ಕಕ್ಕೇ ಬರುತ್ತಿಲ್ಲ ಎಂದು ಪದೇ ಪದೇ ಸುಳ್ಳು ಹರಡಿದರೆ ದೇಶದಲ್ಲಿ ಅಶಾಂತಿ ಸೃಷ್ಟಿಯಾಗಬಹುದು” ಎಂದು ಎಚ್ಚರಿಸಿರುವ ಮಾಜಿ ನ್ಯಾಯಮೂರ್ತಿಗಳು, ರಾಜಕೀಯ ಪಕ್ಷಗಳು ತಮ್ಮ ತಕರಾರುಗಳನ್ನು ರಸ್ತೆಗಿಳಿದು ಕಿರುಚುವ ಬದಲು ನ್ಯಾಯಾಲಯ ಹಾಗೂ ಸಾಕ್ಷ್ಯಗಳ ಮೂಲಕ ಸಾಬೀತುಪಡಿಸಲಿ ಎಂದು ಆಗ್ರಹಿಸಿದ್ದಾರೆ.
