ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯನ್ನು ಮಹಿಳಾ ವೈದ್ಯರೇ ಪರೀಕ್ಷಿಸುವಂತೆ ಕಾನೂನಿಗೆ ತಿದ್ದುಪಡಿ ತನ್ನಿ: ಹೈಕೋರ್ಟ್

ಬೆಂಗಳೂರು: ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ಖಾಸಗಿತನದ ಹಕ್ಕನ್ನು ರಕ್ಷಿಸುವ ಸಲುವಾಗಿ ಅವರ ಆರೋಗ್ಯ ತಪಾಸಣೆಯನ್ನು ಮಹಿಳಾ ವೈದ್ಯರೇ ನಡೆಸುವಂತಾಗಬೇಕು ಅದಕ್ಕಾಗಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಗೆ (ಬಿಎನ್‌ಎಸ್‌ಎಸ್‌) ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ನಿರ್ದೇಶನ ನೀಡಿದೆ.

ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಬಿಹಾರ ಮೂಲದ ಅಜಯ್‌ ಕುಮಾರ್‌ ಬೆಹೆರಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸುವ ವೇಳೆ ನ್ಯಾಯಮೂರ್ತಿ ಎಂ ಜಿ ಉಮಾ ಅವರ ಏಕಸದಸ್ಯ ಪೀಠ ಕೇಂದ್ರ ಸರ್ಕಾರಕ್ಕೆ ಈ ನಿರ್ದೇಶನವನ್ನು ನೀಡಿದ್ದಾರೆ. ನೋಂದಾಯಿತ ಮಹಿಳಾ ವೈದ್ಯಾಧಿಕಾರಿ ಸಂತ್ರಸ್ತೆಯ ತಪಾಸನೆಯನ್ನು ಮಾಡುವುದನ್ನು ಖಾತರಿಪರಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನ್ಯಾಯಾಲಯ ನಿರ್ದೇಶಿಸಿದೆ.

ಬಿಎನ್‌ಎಸ್‌ಎಸ್‌ ಮತ್ತು ಸಿಆರ್‌ಪಿಸಿಯ ಎರಡೂ ಸೆಕ್ಷನ್‌ಗಳು ಪೋಕ್ಸೊ ಕಾಯ್ದೆಯೆ ನಿಬಂಧನೆಗಳಿಗೆ ತದ್ವಿರುದ್ದವಾಗಿದೆ. ಪೋಕ್ಸೊ ಕಾಯ್ದೆಯಲ್ಲಿ ಅಪ್ರಾಪ್ತ ಸಂತ್ರಸ್ತೆಯರ ವೈದ್ಯಕೀಯ ಪರೀಕ್ಷೆಯನ್ನು ಮಹಿಳಾ ವೈದ್ಯಾಧಿಕಾರಿ ಮಾತ್ರ ಮಾಡಬೇಕು ಎಂದು ಹೇಳಲಾಗಿದೆ. ಆದರೆ, ಸಿಆರ್‌ಪಿಸಿ ಮತ್ತು ಬಿಎನ್‌ಎಸ್‌ಎಸ್‌ ಸೆಕ್ಷನ್‌ಗಳಾದ 53 ಮತ್ತು 51ರಲ್ಲಿ ಮಹಿಳಾ ಸಂತ್ರಸ್ತೆಯನ್ನು ಮಹಿಳಾ ಅಧಿಕಾರಿ ಅಥವಾ ಕನಿಷ್ಠ ಮಹಿಳಾ ವೈದ್ಯಾಧಿಕಾರಿಯ ಉಸ್ತುವಾರಿಯಲ್ಲಿ ಮಾತ್ರ ಪರೀಕ್ಷೆಗೆ ಒಳಪಡಿಸಬೇಕು ಎಂದು ಹೇಳಲಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯನ್ನು ಮಹಿಳಾ ವೈದ್ಯ ಸಿಬ್ಬಂದಿ ಅಥವಾ ಅವರ ಉಸ್ತುವಾರಿಯಲ್ಲಿ ಪರೀಕ್ಷೆಗೆ ಒಳಪಪಡಿಸಬಾರದು. ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯರು ಪುರುಷ ವೈದ್ಯಾಧಿಕಾರಿಗಳಿಂದ ದೈಹಿಕ ಪರೀಕ್ಷೆಗೆ ಒಳಗಾಗುವ ಮೂಲಕ ಏಕೆ ಮುಜುಗರ ಅನುಭವಿಸಬೇಕು? ಎಂದು ನ್ಯಾಯಾಲಯ ಪ್ರಶ್ನಿಸಿದೆ.

Related Articles

ಇತ್ತೀಚಿನ ಸುದ್ದಿಗಳು