Monday, June 17, 2024

ಸತ್ಯ | ನ್ಯಾಯ |ಧರ್ಮ

ಹೊಸ ನೀತಿಯಿಂದ 4-5 ವರ್ಷಗಳಲ್ಲಿ 45-50 ಸಾವಿರ ಕೋಟಿ ರೂ. ಹೂಡಿಕೆ ಸಾಧ್ಯತೆ: ಡಾ.ಕೆ ಸುಧಾಕರ್‌

ಬೆಂಗಳೂರು: ಬೆಂಗಳೂರಿನಲ್ಲಿ ಆರ್ಮಿ ಡಿಸೈನ್‌ ಬ್ಯೂರೋದ ರೀಜಿನಲ್‌ ಟೆಕ್ನಾಲಜಿ ನೋಡ್‌ (ಆರ್‌ಟಿಎನ್‌) ಉದ್ಘಾಟನಾ ಸಮಾರಂಭದಲ್ಲಿ ಸೋಮವಾರದಂದು  ಮಾತನಾಡಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌, ʼಕರ್ನಾಟಕ ಸರ್ಕಾರ ಜಾರಿಗೊಳಿಸುತ್ತಿರುವ ʼಏರೋಸ್ಪೇಸ್‌ ಮತ್ತು ಡಿಫೆನ್ಸ್‌ ನೀತಿ 2022-2027ʼ, ರಕ್ಷಣಾ ವಲಯದಲ್ಲಿ ಸ್ವದೇಶಿ ಉತ್ಪನ್ನಗಳನ್ನು ಹೆಚ್ಚಿಸಿ ಆತ್ಮನಿರ್ಭರತೆ ಸಾಧಿಸಲು ನೆರವಾಗಲಿದೆʼ ಎಂದು ಹೇಳಿದ್ದಾರೆ.

ಸಮಾರಂಭದಲ್ಲಿ ಮಾತನಾಡಿದ ಅವರು, ʼವೈಮಾನಿಕ ಕ್ಷೇತ್ರದಲ್ಲಿ ಭಾರತ ಬಹಳ ಪ್ರಗತಿ ಸಾಧಿಸಿದೆ. ಇತ್ತೀಚೆಗೆ ಕೊಚ್ಚಿಯಲ್ಲಿ ಸ್ವದೇಶಿ ನಿರ್ಮಿತ ಐಎನ್‌ಎಸ್‌ ವಿಕ್ರಾಂತ್‌ ಮೂಲಕ ರಕ್ಷಣಾ ಕ್ಷೇತ್ರದ ಸಾಮರ್ಥ್ಯ ಹೆಚ್ಚಾಗಿದೆ. ಕರ್ನಾಟಕವು ಎಲ್ಲಾ ಕ್ಷೇತ್ರಗಳಲ್ಲಿ ಹೂಡಿಕೆದಾರರ ಆದ್ಯತೆಯ ಕೇಂದ್ರವಾಗಿದೆ. ಬೆಂಗಳೂರಿನಲ್ಲಿ ಬಹಳ ಹಿಂದೆಯೇ ಎಚ್‌ಎಎಲ್‌ ಸಂಸ್ಥೆ ಆರಂಭವಾಗಿದ್ದರಿಂದ, ವಿಮಾನಯಾನ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿ ಸಾಧಿಸಿತು. ಏರೋಸ್ಪೇಸ್‌ ಮತ್ತು ಡಿಫೆನ್ಸ್‌ ನೀತಿ ತಂದ ಮೊದಲ ರಾಜ್ಯವೂ ಕರ್ನಾಟಕವೇ ಆಗಿದ್ದು, ವೈಮಾನಿಕ ಕ್ಷೇತ್ರದಲ್ಲಿ ಮುಂಚೂಣಿ ಸಾಧಿಸಿದೆ ಎಂದರು.

ದೇಶದ ಶೇ.25 ರಷ್ಟು ವಿಮಾನ ಹಾಗೂ ಅಂತರಿಕ್ಷ ನೌಕೆಯ ತಯಾರಿಕಾ ಉದ್ಯಮಗಳು ಕರ್ನಾಟಕದಲ್ಲೇ ಇದ್ದು, ಈ ಕ್ಷೇತ್ರದಲ್ಲಿ ರಾಜ್ಯ ಪ್ರಾಬಲ್ಯ ಹೊಂದಿದೆ. ರಕ್ಷಣಾ ಕ್ಷೇತ್ರಕ್ಕೆ ಪೂರೈಕೆಯಾಗುವ ಹೆಲಿಕಾಪ್ಟರ್‌, ವಿಮಾನಗಳಲ್ಲಿ ಶೇ.67 ರಷ್ಟು ರಾಜ್ಯದಲ್ಲೇ ತಯಾರಾಗುತ್ತಿವೆ. ರಾಜ್ಯ ಸರ್ಕಾರ ಏರೋಸ್ಪೇಸ್‌ ಮತ್ತು ಡಿಫೆನ್ಸ್‌ ನೀತಿಯನ್ನು ಜಾರಿ ಮಾಡಲಿದ್ದು, ಇದು ಹೊಸ ತಂತ್ರಜ್ಞಾನಗಳೊಂದಿಗೆ ಸ್ವದೇಶಿ ಉತ್ಪನ್ನಗಳ ತಯಾರಿಕೆಗೆ ಸಂಪೂರ್ಣ ಉತ್ತೇಜನ ನೀಡಲಿದೆ ಎಂದು ಮಾತನಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಆತ್ಮನಿರ್ಭರ ಪರಿಕಲ್ಪನೆಯಡಿ ʼಮೇಕ್‌ ಇನ್‌ ಇಂಡಿಯಾʼ ಹಾಗೂ ʼಸ್ಕಿಲ್‌ ಇಂಡಿಯಾʼ ಯೋಜನೆ ನೀಡಿದ್ದಾರೆ. ಈಗ ಹೊಸ ʼಏರೋಸ್ಪೇಸ್‌ ಮತ್ತು ಡಿಫೆನ್ಸ್‌ ನೀತಿ 2022-2027ʼ ಯಿಂದ ರಾಜ್ಯದಲ್ಲಿ 4-5 ವರ್ಷಗಳಲ್ಲಿ 45-50 ಸಾವಿರ ಕೋಟಿ ರೂ. ಹೂಡಿಕೆ ನಿರೀಕ್ಷಿಸಬಹುದು. ಇದರಿಂದ ಹೆಚ್ಚು ಉದ್ಯೋಗ ಸೃಷ್ಟಿಯ ಜೊತೆಗೆ, ಸಂಶೋಧನೆ ಮತ್ತು ಅಭಿವೃದ್ಧಿಯ ಬಲವರ್ಧನೆಯಾಗಲಿದೆ. ಹಾಗೆಯೇ, ಈ ನೀತಿಯಿಂದ ಉದ್ಯಮ ನಡೆಸುವ ಪ್ರಕ್ರಿಯೆಗಳು (ಈಸ್‌ ಆಫ್‌ ಡೂಯಿಂಗ್‌ ಬಿಸ್‌ನೆಸ್‌) ಸರಳವಾಗಲಿದೆ ಎಂದು ಹೇಳಿದರು.

ಕೋವಿಡ್‌ ಸಾಂಕ್ರಾಮಿಕದ ನಂತರ ಆರ್ಥಿಕತೆಯ ಪ್ರಗತಿಗೆ ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ರಾಜ್ಯ ಸರ್ಕಾರ ಆಯೋಜಿಸಿದ್ದು, 9.5 ಲಕ್ಷ ಕೋಟಿ ಹೂಡಿಕೆಗೆ ಒಪ್ಪಂದಗಳು ನಡೆದಿವೆ. ಹೂಡಿಕೆಯ ವಿಚಾರದಲ್ಲಿ ಈ ಮಟ್ಟಿಗೆ ಉದ್ಯಮಿಗಳ ವಿಶ್ವಾಸವನ್ನು ರಾಜ್ಯ ಗಳಿಸಿದೆ ಎಂದು ತಿಳಿಸಿದರು.

ಭಾರತೀಯ ಸೇನೆಯ ಯಾವುದೇ ಕಾರ್ಯಕ್ರಮ, ಯೋಜನೆಗಳಿಗೆ ಕರ್ನಾಟಕ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ. ಬೆಂಗಳೂರಿನಲ್ಲಿ ಭಾರತೀಯ ಸೇನೆಯ ರೀಜಿನಲ್‌ ಟೆಕ್ನಾಲಜಿ ನೋಡ್‌ ಸ್ಥಾಪನೆ ಮಾಡಿರುವ ಭಾರತೀಯ ಸೇನೆಯ ನಡೆ ಅತ್ಯಂತ ಸ್ವಾಗತಾರ್ಹವಾಗಿದ್ದು, ಇದು ನವೋದ್ಯಮ, ಎಂಎಸ್‌ಎಂಇ ಮೊದಲಾದವುಗಳಿಗೆ ಹೊಸ ಅವಕಾಶಗಳನ್ನು ನೀಡಲಿದೆ. ರಾಜ್ಯ ಸರ್ಕಾರವು ʼಏರೋಸ್ಪೇಸ್‌ ಮತ್ತು ಡಿಫೆನ್ಸ್‌ ನೀತಿ 2022-2027ʼ ಜಾರಿಗೊಳಿಸುತ್ತಿರುವ ಕಾಲದಲ್ಲೇ ಆರ್‌ಟಿಎನ್‌ ಆರಂಭವಾಗುತ್ತಿದೆ. ರಕ್ಷಣಾ ವಲಯದ ಆಧುನೀಕರಣ, ರಕ್ಷಣಾ ಕ್ಷೇತ್ರದಲ್ಲಿ ಆಮದು ಇಳಿಕೆ ಹಾಗೂ ರಫ್ತು ಉತ್ತೇಜನದಲ್ಲಿ ಕರ್ನಾಟಕ ಮುಖ್ಯ ಪಾತ್ರ ವಹಿಸಲು ಈ ಕ್ರಮಗಳು ಕಾರಣವಾಗಲಿದೆ. ಈ ಮೂಲಕ ಆತ್ಮನಿರ್ಭರ ಭಾರತವನ್ನು ಸಾಧಿಸಬಹುದಾಗಿದೆ ಎಂದರು.

ಕನ್ನಡಿಗರೇ ಆದ ಲೆಫ್ಟಿನೆಂಟ್‌ ಜನರಲ್‌ ಬಿ.ಎಸ್‌.ರಾಜು ಹಾಗೂ ಲೆಫ್ಟಿನೆಂಟ್‌ ಕರ್ನಲ್‌ ಬಿ.ಕೆ.ರೆಪ್ಸ್‌ವಾಲ್‌ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಆರ್‌ಟಿಎನ್‌ ಆರಂಭವಾಗಿದೆ. ಬೆಂಗಳೂರು ತಂತ್ರಜ್ಞಾನದ ರಾಜಧಾನಿ, ನವೋದ್ಯಮಗಳ ಕೇಂದ್ರವಾಗಿದ್ದು, ಇಲ್ಲಿ ಆರ್‌ಟಿಎನ್‌ಗೆ ಪೂರಕ ವಾತಾವರಣವಿದೆ. ಈ ಕೇಂದ್ರದಿಂದ ಪ್ರಧಾನಿ ನರೇಂದ್ರ ಮೋದಿಯವರ ಆತ್ಮನಿರ್ಭರ ಭಾರತ ಪರಿಕಲ್ಪನೆ ಸಾಕಾರವಾಗಲಿದೆ. ಸೇನೆಗೆ ಬೇಕಾದ ಎಲ್ಲಾ ತಂತ್ರಜ್ಞಾನ, ಉಪಕರಣಗಳನ್ನು ಭಾರತೀಯರೇ, ಭಾರತದಲ್ಲೇ ಅದರಲ್ಲೂ ಬೆಂಗಳೂರಿನಲ್ಲಿ ತಯಾರಿಸುವ ಕೆಲಸವನ್ನು ಸೇನೆ ಮಾಡುತ್ತಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪರವಾಗಿ ತುಂಬು ಹೃದಯದ ಅಭಿನಂದನೆ ತಿಳಿಸುತ್ತೇನೆ ಎಂದು ಸಚಿವ ಡಾ.ಕೆ.ಸುಧಾಕರ್‌ ಸೇನೆಗೆ ಧನ್ಯವಾದ ಅರ್ಪಿಸಿದರು.

Related Articles

ಇತ್ತೀಚಿನ ಸುದ್ದಿಗಳು