ಜಮ್ಮು: ಜಮ್ಮು ಮತ್ತು ಕಾಶ್ಮೀರದ ಬೆಟ್ಟಗಳಲ್ಲಿ ಮೇಘಸ್ಫೋಟ (ಕ್ಲೌಡ್ ಬರ್ಸ್ಟ್) ಭೀಕರತೆ ಸೃಷ್ಟಿಸಿದೆ. ಮಚೈಲ್ ಮಾತಾ ದೇವಿಯ ದರ್ಶನಕ್ಕೆ ತೆರಳುತ್ತಿದ್ದ ಯಾತ್ರಾರ್ಥಿಗಳ ಮೇಲೆ ಈ ದುರಂತ ಎರಗಿದೆ. ಹಠಾತ್ ಪ್ರವಾಹದಿಂದ 46 ಜನರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ನಾಪತ್ತೆಯಾಗಿದ್ದಾರೆ. ಮೃತರಲ್ಲಿ ಇಬ್ಬರು ಸಿಐಎಸ್‌ಎಫ್ ಸಿಬ್ಬಂದಿ ಸೇರಿದ್ದಾರೆ. ರಕ್ಷಣಾ ತಂಡಗಳು 167 ಜನರನ್ನು ರಕ್ಷಿಸಿದ್ದು, ಅವರಲ್ಲಿ 38 ಜನರ ಸ್ಥಿತಿ ಗಂಭೀರವಾಗಿದೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಮೇಲ್ಭಾಗದ ಪ್ರದೇಶಗಳಲ್ಲಿ ಅನಿರೀಕ್ಷಿತವಾಗಿ ಸುರಿದ ಭಾರೀ ಮಳೆಯಿಂದಾಗಿ ಪ್ರವಾಹ ಉಂಟಾಗಿ ಹಲವಾರು ಕಟ್ಟಡಗಳು ಮತ್ತು ಅಂಗಡಿಗಳು ಕೊಚ್ಚಿ ಹೋಗಿವೆ. ಪ್ರವಾಹದಿಂದಾಗಿ ಈ ಘಟನೆ ನಡೆದ ಹಿನ್ನೆಲೆಯಲ್ಲಿ ಮಚೈಲ್ ಮಾತಾ ದೇವಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ಮೋದಿ ಸೇರಿದಂತೆ ಹಲವರು ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಮುಖ್ಯಮಂತ್ರಿ ಒಮರ್ ಅವರೊಂದಿಗೆ ಮಾತನಾಡಿದ್ದಾರೆ.
ಪ್ರತಿ ವರ್ಷ ನಡೆಯುವ ಮಚೈಲ್ ಮಾತಾ ಯಾತ್ರೆಯು ಕಿಸ್ತ್ವಾಡ್ ಜಿಲ್ಲೆಯ ಚಶೋತಿ ಗ್ರಾಮದ ಮೂಲಕ ಸಾಗುತ್ತದೆ. ಇಲ್ಲಿಗೆ ವಾಹನಗಳಲ್ಲಿ ಬರುವ ಭಕ್ತರು, ಅಲ್ಲಿಂದ 9,500 ಅಡಿ ಎತ್ತರದಲ್ಲಿರುವ ದೇವಾಲಯಕ್ಕೆ 8.5 ಕಿಲೋಮೀಟರ್ ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸುತ್ತಾರೆ. ಪ್ರತಿ ವರ್ಷದಂತೆ ಈ ಬಾರಿಯೂ ಗುರುವಾರ ಚಶೋತಿಗೆ ಭಾರೀ ಸಂಖ್ಯೆಯ ಭಕ್ತರು ಆಗಮಿಸಿದ್ದರು. ಮಧ್ಯಾಹ್ನ 12ರಿಂದ 1 ಗಂಟೆಯ ನಡುವೆ, ಹಠಾತ್ ಪ್ರವಾಹವು ಬಲವಾಗಿ ಅಪ್ಪಳಿಸಿತು. ಇದರಿಂದಾಗಿ ಸಾಮೂಹಿಕ ಅಡುಗೆಮನೆ, ಸಮೀಪದ ಅಂಗಡಿಗಳು ಮತ್ತು ಭದ್ರತಾ ಹೊರಠಾಣೆ ಕೊಚ್ಚಿಹೋಗಿವೆ. ಕೆಸರು ನೀರು, ಸಿಲ್ಟ್ ಮತ್ತು ಅವಶೇಷಗಳು ಬೆಟ್ಟದ ಮೇಲಿಂದ ವೇಗವಾಗಿ ಹರಿದು ಬಂದವು. ಕೆಲವೇ ಕ್ಷಣಗಳಲ್ಲಿ ಎಲ್ಲವೂ ನಾಶವಾಯಿತು. ಮನೆಗಳು ಪೀಠೋಪಕರಣಗಳಂತೆ ಕೊಚ್ಚಿಹೋದವು. ದೊಡ್ಡ ಬಂಡೆಗಳು ಕೆಳಗಡೆ ಉರುಳಿಬಂದವು. ರಸ್ತೆಗಳು ಬಂದ್ ಆದವು.
ಗಾಯಗೊಂಡ ಹುಡುಗ ಯಾತ್ರೆ ಸ್ಥಗಿತ ಭೀಕರ ದುರಂತದ ಹಿನ್ನೆಲೆಯಲ್ಲಿ ಮಚೈಲ್ ಮಾತಾ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಈ ಯಾತ್ರೆಯು ಜುಲೈ 25ರಂದು ಪ್ರಾರಂಭವಾಗಿ, ಸೆಪ್ಟೆಂಬರ್ 5ರಂದು ಮುಕ್ತಾಯಗೊಳ್ಳಬೇಕಿತ್ತು. ಚಶೋತಿಯು ಕಿಸ್ತ್ವಾಡ್‌ನಿಂದ 90 ಕಿಲೋಮೀಟರ್ ದೂರದಲ್ಲಿದೆ. ಒಂಬತ್ತು ದಿನಗಳ ಹಿಂದೆಯೇ ಉತ್ತರಾಖಂಡದ ಧರಾಲಿ ಗ್ರಾಮವು ಮೇಘಸ್ಫೋಟದಿಂದ ನಾಶವಾಗಿತ್ತು. ಈಗ ಮತ್ತೊಮ್ಮೆ ಅದೇ ರೀತಿಯ ದುರಂತ ಚಶೋತಿಯಲ್ಲಿ ಸಂಭವಿಸಿದೆ. ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆಗಳು ಭರದಿಂದ ಸಾಗುತ್ತಿವೆ. ಚಶೋತಿ ದುರಂತದ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ನಡೆಯಬೇಕಿದ್ದ ‘ಅಟ್ ಹೋಮ್’ ಟೀ ಪಾರ್ಟಿಯನ್ನು ರದ್ದುಗೊಳಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಘೋಷಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.