ಮೈಸೂರು : ಅರಣ್ಯ ಭೂಮಿ ಹಕ್ಕುಪತ್ರಕ್ಕೆ ಆಗ್ರಹಿಸಿ ಪಿರಿಯಾಪಟ್ಟಣದಲ್ಲಿ ಬುಡಕಟ್ಟು ಸಮುದಾಯದವರ ನಿರಂತರ ಅಹೋರಾತ್ರಿ ಧರಣಿ ಸತ್ಯಾಗ್ರಹವು 46ನೇ ದಿನವೂ ಮುಂದುವರಿದೆ. ಈ ಹಿನ್ನಲೆಯಲ್ಲಿ ಬುಡಕಟ್ಟು ಸಮುದಾಯಗಳ ಒಕ್ಕೂಟದ ಅನೇಕ ಜಿಲ್ಲೆಗಳ ರಾಜ್ಯ ಪ್ರತಿನಿಧಿಗಳು ನೆನ್ನೆ ಪ್ರತಿಭಟನೆಯಲ್ಲಿ ಭಾಗವಹಿಸಿ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ.
ಅರಣ್ಯ ಹಕ್ಕು ಕಾಯ್ದೆ 2006 ರಂತೆ ಅರಣ್ಯ ಭೂಮಿ ಹಕ್ಕುಪತ್ರಕ್ಕೆ ಆಗ್ರಹಿಸಿ ಪಿರಿಯಾಪಟ್ಟಣ ತಾಲೂಕಿನ ಅಲ್ಲೂರು ಅರಣ್ಯ ಇಲಾಖೆ ಕಛೇರಿ ಎದುರು ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟದ ವತಿಯಿಂದ ನಡೆಯುತ್ತಿರುವ ಆಹೋರಾತ್ರಿ ನಿರಂತರ ಧರಣಿ ಸತ್ಯಾಗ್ರಹವು 46ನೇ ದಿನವೂ ಮುಂದುವರಿದಿದೆ.

ನಿನ್ನೆ ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟದ ರಾಜ್ಯ ಪ್ರತಿನಿಧಿಗಳಾದ ಶಿವಮೊಗ್ಗದ ರಾಮಣ್ಣ ಹಸಲರು, ಉಡುಪಿ ಜಿಲ್ಲೆಯ ಪುತ್ರನ್ ಕೊರಗ, ಕೊಡಗು ಜಿಲ್ಲೆಯ ಪುಷ್ಪ ಹಾಗೂ ಸವಿತಾ, ದಕ್ಷಿಣ ಕನ್ನಡ ಜಿಲ್ಲೆಯ ಸಂಜೀವ ಕೊರಗ, ಪುಟ್ಟ ಬಸವಯ್ಯ ಹಾಗೂ ಶೈಲೇಂದ್ರ ಮೈಸೂರು ಮುಂತಾದವರು ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಬುಡಕಟ್ಟು ಸಮುದಾಯದವರ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ.
ಪಿರಿಯಾಪಟ್ಟಣ ಪತ್ರಿಕಾ ಭವನದಲ್ಲಿ ಮಾತನಾಡುತ್ತಾ ಸಮಸ್ಯೆಯನ್ನು ಶೀಘ್ರ ಬಗೆಹರಿಸದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟವನ್ನು ತೀವ್ರಗೊಳಿಸುವುದಾಗಿ ತಿಳಿಸಿದರು.