Home ದೇಶ 10 ರೂಪಾಯಿಯ ಸ್ಟಾಂಪ್ ಪೇಪರ್ ಮೇಲೆ 500 ರೂಪಾಯಿ ನೋಟು ಪ್ರಿಂಟ್: ಯೂಟ್ಯೂಬ್‌ ನೋಡಿ...

10 ರೂಪಾಯಿಯ ಸ್ಟಾಂಪ್ ಪೇಪರ್ ಮೇಲೆ 500 ರೂಪಾಯಿ ನೋಟು ಪ್ರಿಂಟ್: ಯೂಟ್ಯೂಬ್‌ ನೋಡಿ ನೋಟು ಮಾಡುವುದನ್ನು ಕಲಿತ ಖದೀಮರು!

0

ಲಕ್ನೋ: ಇಬ್ಬರು ವ್ಯಕ್ತಿಗಳು ಸೇರಿ 10 ರೂಪಾಯಿಯ ಸ್ಟಾಂಪ್‌ ಪೇಪರ್‌ ಬಳಸಿ 500 ರೂಪಾಯಿಯ ನೋಟುಗಳನ್ನು ಮುದ್ರಿಸಿ, ಅದನ್ನು ಚಲಾವಣೆ ಮಾಡಲು ಹೊರಟು ಈಗ ಪೊಲೀಸ್‌ ಅತಿಥಿಯಾಗಿದ್ದಾರೆ.

ನಕಲಿ ನೋಟು ದಂಧೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಸೋನಭದ್ರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಮಿನರಲ್ ವಾಟರ್ ಜಾಹೀರಾತುಗಳನ್ನು ಮುದ್ರಿಸುವ ಇಬ್ಬರು ಯೂಟ್ಯೂಬ್ ಮೂಲಕ ನಕಲಿ ನೋಟು ತಯಾರಿಸುವುದು ಹೇಗೆಂಬುದನ್ನು ಮೊದಲಿಗೆ ತಿಳಿದುಕೊಂಡರು. ನಂತರ ಮಿರ್ಜಾಪುರದಿಂದ ಹತ್ತು ರೂಪಾಯಿ ಮೌಲ್ಯದ ಸ್ಟಾಂಪ್ ಪೇಪರ್ ಖರೀದಿಸಿ ಅದರ ಮೇಲೆ ಕಂಪ್ಯೂಟರ್ ಮತ್ತು ಪ್ರಿಂಟರ್ ಮೂಲಕ 500 ರೂ.ನ ನಕಲಿ ನೋಟುಗಳನ್ನು ಮುದ್ರಿಸಲಾಗಿದೆ.

ಮೊದಲಿಗೆ ಮಾರುಕಟ್ಟೆಯಲ್ಲಿ ರೂ.30,000 ಮೌಲ್ಯದ ನೋಟುಗಳನ್ನು ಚಲಾವಣೆ ಮಾಡಿದ್ದರು. 10,000 ಮೌಲ್ಯದ ಇನ್ನೂ 20 ನಕಲಿ ರೂ.500 ನೋಟುಗಳನ್ನು ಸೋನಭದ್ರದ ರಾಮಗಢ ಮಾರುಕಟ್ಟೆಯಲ್ಲಿ ಚಲಾವಣೆ ಮಾಡಲು ಪ್ರಯತ್ನಿಸಲಾಗಿದೆ. ಆದರೆ ಎಲ್ಲಾ ನೋಟುಗಳು ಒಂದೇ ಸರಣಿ ಸಂಖ್ಯೆಯನ್ನು ಹೊಂದಿದ್ದರಿಂದ ಕಳ್ಳರು ಸಿಕ್ಕಿಬಿದ್ದಿದ್ದಾರೆ.

ಇದೇ ವೇಳೆ ಬಂಧಿತ ಆರೋಪಿಗಳನ್ನು ಸತೀಶ್ ರಾಯ್ ಮತ್ತು ಪ್ರಮೋದ್ ಮಿಶ್ರಾ ಎಂದು ಪೊಲೀಸರು ಗುರುತಿಸಿದ್ದಾರೆ. ನಕಲಿ ನೋಟುಗಳನ್ನು ತಯಾರಿಸಲು ಸ್ಟಾಂಪ್ ಪೇಪರ್‌ಗಳನ್ನು ಬಳಸಲಾಗುತ್ತಿತ್ತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ ಎಂದು NDTV ವರದಿ ಮಾಡಿದೆ.

ಎಚ್ಚರಿಕೆಯಿಂದ ಪರಿಶೀಲಿಸದ ಹೊರತು ಆ ನೋಟುಗಳನ್ನು ನಕಲಿ ಎಂದು ಗುರುತಿಸುವುದು ಕಷ್ಟ ಎಂದು ಅವರು ಹೇಳಿದರು. 500ರ 20 ನಕಲಿ ನೋಟುಗಳು, ಮುದ್ರಣಕ್ಕೆ ಬಳಸುತ್ತಿದ್ದ ಉಪಕರಣಗಳು, ಲ್ಯಾಪ್ ಟಾಪ್, ಪ್ರಿಂಟರ್, 27 ಸ್ಟಾಂಪ್ ಪೇಪರ್ ಗಳು ಹಾಗೂ ಆಲ್ಟೊ ಕಾರನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ.

You cannot copy content of this page

Exit mobile version