Friday, January 9, 2026

ಸತ್ಯ | ನ್ಯಾಯ |ಧರ್ಮ

ಭಾರತದ ಮೇಲೆ 500% ಸುಂಕ? ರಷ್ಯಾ ತೈಲ ಖರೀದಿಗೆ ಕಡಿವಾಣ ಹಾಕಲು ಟ್ರಂಪ್ ಹೊಸ ಅಸ್ತ್ರ

ರಷ್ಯಾದಿಂದ ಪೆಟ್ರೋಲಿಯಂ ಉತ್ಪನ್ನಗಳನ್ನು ಖರೀದಿಸುತ್ತಿರುವ ದೇಶಗಳ ಮೇಲೆ ಶೇಕಡಾ 500 ರಷ್ಟು ಭಾರಿ ಸುಂಕ ವಿಧಿಸಲು ಅನುಮತಿ ನೀಡುವ ಹೊಸ ಬಿಲ್‌ಗೆ ಅಮೆರಿಕ ಅಧ್ಯಕ್ಷ ಡೊನಾನ್ಡ್ ಟ್ರಂಪ್ ಒಪ್ಪಿಗೆ ನೀಡಿದ್ದಾರೆ. ಮುಂದಿನ ವಾರ ಸೆನೆಟ್‌ನಲ್ಲಿ ಮತದಾನಕ್ಕೆ ಬರಲಿರುವ ಈ ‘ಶ್ಯಾಂಕ್ಷನಿಂಗ್ ರಷ್ಯಾ ಆಕ್ಟ್ ಆಫ್ 2025’ ಮಸೂದೆಯು ಭಾರತ ಮತ್ತು ಚೀನಾ ದೇಶಗಳ ಮೇಲೆ ದೊಡ್ಡ ಮಟ್ಟದ ಪ್ರಭಾವ ಬೀರಲಿದೆ.

ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧಕ್ಕೆ ಪರೋಕ್ಷವಾಗಿ ಆರ್ಥಿಕ ನೆರವು ನೀಡುತ್ತಿರುವ ದೇಶಗಳನ್ನು ಕಟ್ಟಿಹಾಕಲು ಈ ಮಸೂದೆಯನ್ನು ಬಳಸಿಕೊಳ್ಳಲಾಗುತ್ತಿದೆ. ರಷ್ಯಾದಿಂದ ತೈಲ ಖರೀದಿಸುವ ಭಾರತ, ಚೀನಾ ಮತ್ತು ಬ್ರೆಜಿಲ್‌ನಂತಹ ದೇಶಗಳಿಗೆ ಶಿಕ್ಷೆಯ ರೂಪದಲ್ಲಿ ಈ ಬೃಹತ್ ಸುಂಕ ವಿಧಿಸಲು ಟ್ರಂಪ್ ಅವರಿಗೆ ಈಗ ಅಧಿಕಾರ ಸಿಗಲಿದೆ. ಮುಂದಿನ ವಾರದ ಆರಂಭದಲ್ಲಿ ಈ ಮಸೂದೆ ಸೆನೆಟ್‌ನಲ್ಲಿ ಮತದಾನಕ್ಕೆ ಬರಲಿದೆ ಎಂದು ರಿಪಬ್ಲಿಕನ್ ಸೆನೆಟರ್ ಲಿಂಡ್ಸೆ ಗ್ರಾಹಮ್ ತಿಳಿಸಿದ್ದಾರೆ.

ಪ್ರತಿಕಾರ ಸುಂಕಗಳ ಭೀತಿ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ದೇಶಗಳಲ್ಲಿ ಚೀನಾ ನಂತರ ಭಾರತ ಎರಡನೇ ದೊಡ್ಡ ದೇಶವಾಗಿದೆ. ಈಗಾಗಲೇ ಭಾರತದ ಉತ್ಪನ್ನಗಳ ಮೇಲೆ ಟ್ರಂಪ್ ಸರ್ಕಾರ ಶೇ. 50 ರಷ್ಟು ಸುಂಕ ವಿಧಿಸಿದ್ದರಿಂದ ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿತ್ತು.

ಇತ್ತೀಚೆಗೆ ವಿಮಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಟ್ರಂಪ್, “ಪ್ರಧಾನಿ ಮೋದಿ ಅವರು ಬಹಳ ಒಳ್ಳೆಯ ವ್ಯಕ್ತಿ, ಆದರೆ ರಷ್ಯಾ ಜೊತೆಗಿನ ತೈಲ ವ್ಯಾಪಾರದ ವಿಷಯದಲ್ಲಿ ನಾನು ಸಂತೋಷವಾಗಿಲ್ಲ ಎಂಬುದು ಅವರಿಗೂ ತಿಳಿದಿದೆ. ನನ್ನನ್ನು ಸಂತೋಷಪಡಿಸುವುದು ಮುಖ್ಯ, ಇಲ್ಲದಿದ್ದರೆ ನಾವು ಭಾರತದ ಮೇಲೆ ಅತಿ ವೇಗವಾಗಿ ಸುಂಕಗಳನ್ನು ಹೆಚ್ಚಿಸುತ್ತೇವೆ” ಎಂದು ಎಚ್ಚರಿಕೆ ನೀಡಿದ್ದರು.

ಭಾರತದ ಹತ್ತಿ ಉತ್ಪನ್ನಗಳಿಗೆ ಬಾಂಗ್ಲಾದೇಶದ ಬರೆ ಇನ್ನೊಂದೆಡೆ, ಭಾರತದ ಮೇಲೆ ಅಸಮಾಧಾನಗೊಂಡಿರುವ ಬಾಂಗ್ಲಾದೇಶವು ಭಾರತದ ಹತ್ತಿ ನೂಲು ಮತ್ತು ದಾರದ ಮೇಲೆ ಹೊಸ ಟಾರಿಫ್ (ಸುಂಕ) ವಿಧಿಸಲು ಸಜ್ಜಾಗಿದೆ.

ಕಳೆದ ವರ್ಷ ಆಗಸ್ಟ್‌ನಿಂದ ಜಾರಿಯಲ್ಲಿದ್ದ ‘ಡ್ಯೂಟಿ ಫ್ರೀ’ (ತೆರಿಗೆ ರಹಿತ) ಸೌಲಭ್ಯವನ್ನು ರದ್ದುಗೊಳಿಸಿ, ಶೇ. 10 ರಿಂದ 20 ರಷ್ಟು ಸುಂಕ ವಿಧಿಸಲು ಬಾಂಗ್ಲಾದೇಶದ ವಾಣಿಜ್ಯ ಮತ್ತು ಟಾರಿಫ್ ಕಮಿಷನ್ ಚಿಂತನೆ ನಡೆಸಿದೆ.

ಬಾಂಗ್ಲಾದೇಶಕ್ಕೆ ಅತಿ ಹೆಚ್ಚು ಹತ್ತಿ ಪೂರೈಸುವ ದೇಶಗಳಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದು, ಈ ಹೊಸ ನಿರ್ಧಾರವು ಭಾರತೀಯ ನೂಲು ಉದ್ಯಮಕ್ಕೆ ಹೊರೆಯಾಗುವ ಸಾಧ್ಯತೆಯಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page