ಮೆಟ್ರೋ ಕಾಮಗಾರಿಗೆ 6 ಸಾವಿರ ಮರಗಳ ಬಲಿ – ನೆಟ್ಟ ಸಸಿಗಳ ದಾಖಲೆಗಳೇ ಇಲ್ಲ

ಬೆಂಗಳೂರು : ನಮ್ಮ ಮೆಟ್ರೋ(namma metro) ಕಾಮಗಾರಿಗಾಗಿ ಸಾವಿರಾರು ಮರಗಳನ್ನು ಕಡಿದು ಹಾಕಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (bmrcl) ನಿಯಮದಂತೆ ಸಸಿಗಳನ್ನು ನೆಟ್ಟು ಪೋಷಣೆ ಮಾಡುವಲ್ಲಿ ವಿಫಲವಾಗಿದೆ ಎಂಬ ಗಂಭೀರ ವಿಚಾರ ಬಹಿರಂಗಗೊಂಡಿದೆ. ಮರಗಳ ತೆರವಿಗೆ ಬದಲಾಗಿ ಸಸಿಗಳನ್ನು ನೆಟ್ಟು ಬೆಳೆಸಿರುವ ಕುರಿತು ಯಾವುದೇ ಅಧಿಕೃತ ದಾಖಲೆಗಳಿಲ್ಲ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳೇ ಭಾರತದ ಲೆಕ್ಕಪರಿಶೋಧಕ ಮತ್ತು ಮಹಾಲೆಕ್ಕಪರಿಶೋಧಕರ (CAG) ಮುಂದೆ ಒಪ್ಪಿಕೊಂಡಿದ್ದಾರೆ ಎಂಬುದು ತಿಳಿದುಬಂದಿದೆ.

6 ಸಾವಿರಕ್ಕೂ ಅಧಿಕ ಮರಗಳ ಬಲಿ
ನಮ್ಮ ಮೆಟ್ರೋ ಮೊದಲ ಮತ್ತು ಎರಡನೇ ಹಂತದ ಕಾಮಗಾರಿಗಳಿಗಾಗಿ ಒಟ್ಟು 6,169 ಮರಗಳನ್ನು ತೆರವುಗೊಳಿಸಲಾಗಿದೆ ಎಂದು ಸ್ವತಃ ಬಿಎಂಆರ್‌ಸಿಎಲ್ ಮಾಹಿತಿಯಿಂದಲೇ ಬಹಿರಂಗವಾಗಿದೆ. ಮೊದಲ ಹಂತದ ಮೆಟ್ರೋ ಕಾಮಗಾರಿಗೆ 2,106 ಮರಗಳನ್ನು ಕಡಿಯಲಾಗಿದ್ದರೆ, ಎರಡನೇ ಹಂತದಲ್ಲಿ ಬರೋಬ್ಬರಿ 4,063 ಮರಗಳನ್ನು ತೆರವುಗೊಳಿಸಲಾಗಿದೆ.

ಅರಣ್ಯ ಇಲಾಖೆಯ ಕಠಿಣ ನಿಯಮದ ಪ್ರಕಾರ, ತೆರವುಗೊಳಿಸಿದ ಅಥವಾ ಸ್ಥಳಾಂತರಿಸಿದ ಪ್ರತಿ ಒಂದು ಮರಕ್ಕೆ ಬದಲಾಗಿ 10ರಂತೆ ಒಟ್ಟು 61 ಸಾವಿರಕ್ಕೂ ಅಧಿಕ ಎತ್ತರದ ಸಸಿಗಳನ್ನು ನೆಟ್ಟು, ಮೂರು ವರ್ಷಗಳ ಕಾಲ ಅವುಗಳ ಆರೈಕೆ ಮತ್ತು ನಿರ್ವಹಣೆ ಮಾಡುವುದು ಕಡ್ಡಾಯವಾಗಿತ್ತು. ಯೋಜನೆಯ ಆರಂಭದಲ್ಲಿ ಬಿಎಂಆರ್‌ಸಿಎಲ್ ಅರಣ್ಯ ಇಲಾಖೆಯೊಂದಿಗೆ ಒಪ್ಪಂದವನ್ನೂ ಮಾಡಿಕೊಂಡಿತ್ತು. ಆದರೆ, ಸಸಿಗಳನ್ನು ನೆಟ್ಟಿರುವ ಬಗ್ಗೆ ಹಾಗೂ ಅವುಗಳ ನಿರ್ವಹಣೆಗೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಒದಗಿಸಲು ನಿಗಮವು ವಿಫಲವಾಗಿದೆ.

ಪರಿಸರ ಹೋರಾಟಗಾರರ ಆಕ್ರೋಶ ಹಾಗೂ ತನಿಖೆಗೆ ಆಗ್ರಹ
ಅಭಿವೃದ್ಧಿಯ ಹೆಸರಿನಲ್ಲಿ ಬೆಂಗಳೂರಿನ ಹಸಿರನ್ನು ನಾಶ ಮಾಡುತ್ತಿರುವ ಬಿಎಂಆರ್‌ಸಿಎಲ್, ಕಡಿದ ಮರಗಳಿಗೆ ಪ್ರತಿಯಾಗಿ ಸಸಿ ನೆಡುವ ನಿಯಮವನ್ನು ಗಾಳಿಗೆ ತೂರಿದೆ ಎಂದು ಪರಿಸರ ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇವಲ ಮರಗಳನ್ನು ಕಡಿದು ಕಣ್ಮರೆಯಾಗಿರುವ ಮೆಟ್ರೋ ಅಧಿಕಾರಿಗಳು, ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದೆ. ಈ ಸಂಪೂರ್ಣ ವಂಚನೆ ಹಾಗೂ ನಿಯಮ ಉಲ್ಲಂಘನೆ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕು ಮತ್ತು ಜವಾಬ್ದಾರರಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ

Related Articles

ಇತ್ತೀಚಿನ ಸುದ್ದಿಗಳು