Home ಬ್ರೇಕಿಂಗ್ ಸುದ್ದಿ ಹಾಸನ ಮಹಿಳಾ ದಿನಾಚರಣೆ ಅಂಗವಾಗಿ ಮಾರ್ಚ್ 7, 8 ಎರಡು ದಿನಗಳ ಬೃಹತ್‌ ಸಮಾವೇಶ – ಡಾ....

ಮಹಿಳಾ ದಿನಾಚರಣೆ ಅಂಗವಾಗಿ ಮಾರ್ಚ್ 7, 8 ಎರಡು ದಿನಗಳ ಬೃಹತ್‌ ಸಮಾವೇಶ – ಡಾ. ಸಾವಿತ್ರಿ

ಹಾಸನ: ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಆಶ್ರಯದಲ್ಲಿ ‘ಸಮತೆಯೆಡೆಗೆ ನಮ್ಮ ನಡಿಗೆ’ ಎಂಬ ಘೋಷಣೆಯೊಂದಿಗೆ ಹಾಸನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಾರ್ಚ್ 7 ಹಾಗೂ 8, 2026 ರಂದು ಎರಡು ದಿನಗಳ ಹಕ್ಕೊತ್ತಾಯ ಜಾಥಾ, ಬೃಹತ್ ಸಾರ್ವಜನಿಕ ಸಮಾವೇಶ, ಮೌನ ಜಾಗೃತಿ ಕಾರ್ಯಕ್ರಮ ಮತ್ತು ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಡಾ. ಸಾವಿತ್ರಿ ಅವರು ತಿಳಿಸಿದರು.

ಮಾರ್ಚ್ 7ರಂದು ಬೆಳಿಗ್ಗೆ 9.30ಕ್ಕೆ ಹಾಸನದ ಮಹಾರಾಜ ಉದ್ಯಾನವನದ ಬಯಲು ರಂಗ ಮಂದಿರದ ದ್ಯಾವಮ್ಮ–ಮಂಜಪ್ಪ ವೇದಿಕೆಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಕಲಾತಂಡಗಳಿಂದ ಹೋರಾಟದ ಹಾಡುಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮವನ್ನು ಸಾಮಾಜಿಕ ಹೋರಾಟಗಾರ್ತಿ, ಲೇಖಕಿ ಹಾಗೂ ನ್ಯಾಯವಾದಿ ತೀಸ್ತಾ ಸೆಟಲ್ವಾಡ್ ಉದ್ಘಾಟಿಸಲಿದ್ದು, ಅ. ಪದ್ಮಶಾಲಿ ಅವರು ಲೈಂಗಿಕ ಹಾಗೂ ಸಾಮಾಜಿಕ ಅಲ್ಪಸಂಖ್ಯಾತರ ಹಕ್ಕುಗಳ ಕುರಿತು ಮಾತನಾಡಲಿದ್ದಾರೆ ಎಂದರು. ನಂತರ ಮಹಾರಾಜ ಉದ್ಯಾನವನದಿಂದ ಹಾಸನಾಂಬ ಕಲಾಕ್ಷೇತ್ರದವರೆಗೆ ಹಕ್ಕೊತ್ತಾಯ ಜಾಥಾ ನಡೆಯಲಿದ್ದು, ಸಂಜೆ 11.30ರಿಂದ ಹಾಸನಾಂಬ ಕಲಾಕ್ಷೇತ್ರದಲ್ಲಿ ಬೃಹತ್ ಸಾರ್ವಜನಿಕ ಸಮಾವೇಶ ಆಯೋಜಿಸಲಾಗಿದೆ. ಸಮಾವೇಶದಲ್ಲಿ ‘ಹಾಸನ ಮಣ್ಣಿನ ಹೆಣ್ಣು ದನಿಗಳು’ ಎಂಬ ಸಾಂದರ್ಭಿಕ ಗ್ರಂಥ ಬಿಡುಗಡೆ, ವಿವಿಧ ಜಿಲ್ಲೆಗಳ ಮಹಿಳಾ ಪ್ರತಿನಿಧಿಗಳ ಸಹಮತದ ನುಡಿಗಳು ಹಾಗೂ ಹಕ್ಕೊತ್ತಾಯ ಮಂಡನೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಅದೇ ದಿನ ಸಂಜೆ 6 ಗಂಟೆಗೆ ಮಹಾವೀರ ವೃತ್ತದಲ್ಲಿ ಕಪ್ಪು ಉಡುಪಿನಲ್ಲಿ ಮಹಿಳೆಯರ ಮೌನ ಜಾಗೃತಿ ಕಾರ್ಯಕ್ರಮ ನಡೆಯಲಿದ್ದು, ‘ಸರ್ವ ಜನಾಂಗದ ಶಾಂತಿಯ ದೇಶ’ ಎಂಬ ಸಂದೇಶ ಸಾರಲಿದೆ.

ಮಾರ್ಚ್ 8ರಂದು ಬೆಳಿಗ್ಗೆ 9.30ರಿಂದ ಹಾಸನಾಂಬ ಕಲಾಕ್ಷೇತ್ರದಲ್ಲಿ ‘ಮಹಿಳಾ ದೌರ್ಜನ್ಯ: ಸವಾಲುಗಳು ಮತ್ತು ಬಿಡುಗಡೆ ಸಾಧ್ಯತೆಗಳು’ ಎಂಬ ವಿಷಯದ ಕುರಿತು ವಿಚಾರ ಸಂಕಿರಣ ನಡೆಯಲಿದೆ. ದೇಹ ರಾಜಕಾರಣ, ಲೈಂಗಿಕ ದೌರ್ಜನ್ಯ, ಹೆಣ್ಣುಮಕ್ಕಳ ಕಣ್ಮರೆ, ಜಾತಿ ಹಾಗೂ ಲಿಂಗ ಆಧಾರಿತ ಹಿಂಸಾಚಾರ ಕುರಿತ ಗೋಷ್ಠಿಗಳು, ತಜ್ಞರ ಉಪನ್ಯಾಸಗಳು ಮತ್ತು ಪ್ರತಿಕ್ರಿಯೆಗಳು ನಡೆಯಲಿವೆ. ದಿನವಿಡೀ ಸಾಂಸ್ಕೃತಿಕ ಕಾರ್ಯಕ್ರಮಗಳು, ಜಾಗೃತಿ ಗೀತೆಗಳು, ಕೋಲಾಟ, ಜಾನಪದ ನೃತ್ಯ, ರೂಪಕ ಪ್ರದರ್ಶನಗಳೂ ಆಯೋಜಿಸಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಮಮತ ಶಿವು, ಡಾ. ಸಾವಿತ್ರಿ, ಡಾ. ಧನಲಕ್ಷ್ಮೀ, ಗೀತಾ, ನಿರ್ಮಲಾ, ತಾರಸ್ವಾಮಿ, ಪುಷ್ಪಾ ಸೇರಿದಂತೆ ಹಲವರು ಉಪಸ್ಥಿತರಿದ್ದು, ಮಹಿಳೆಯರು ಹಾಗೂ ಸಮಾನತೆಯ ಪರ ಮನಸುಳ್ಳ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

You cannot copy content of this page

Exit mobile version