Home ಬ್ರೇಕಿಂಗ್ ಸುದ್ದಿ ಪ್ರಾಮಾಣಿಕ ಅಧಿಕಾರಿಗೆ ಅನಗತ್ಯ ಕಿರುಕುಳ – ವಿಚಾರಣೆಗೆ ಆಗ್ರಹ

ಪ್ರಾಮಾಣಿಕ ಅಧಿಕಾರಿಗೆ ಅನಗತ್ಯ ಕಿರುಕುಳ – ವಿಚಾರಣೆಗೆ ಆಗ್ರಹ

ಹಾಸನ: ಹಾಸನ ಮಹಾನಗರ ಪಾಲಿಕೆಯಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಕವಿತಾ ಕೆ.ಆರ್ ಅವರು ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತಿರುವುದು ಸಾರ್ವಜನಿಕರಿಗೆ ತಿಳಿದ ವಿಷಯವಾಗಿದೆ. ಆದರೆ ಇತ್ತೀಚಿನ ಬೆಳವಣಿಗೆಯಲ್ಲಿ ಮಹಾನಗರ ಪಾಲಿಕೆಯಂತಹ ಸಾರ್ವಜನಿಕ ಸಂಸ್ಥೆಯಲ್ಲಿ ಪ್ರಾಮಾಣಿಕ ಅಧಿಕಾರಿಗೆ ಅನಗತ್ಯ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ ಎಂದು ಇಂದು ಸುದ್ದಿಗೋಷ್ಠಿಯಲ್ಲಿ ಡಾ. ಸಾವಿತ್ರಿ ಅವರು ತಿಳಿಸಿದರು.

ಕಳೆದ ಹತ್ತು–ಹದಿನೈದು ವರ್ಷಗಳಿಂದ ಅರಕಲಗೂಡು, ಸಕಲೇಶಪುರ, ಆಲೂರು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಯಾವುದೇ ಒತ್ತಡಕ್ಕೂ ಒಳಗಾಗದೆ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸಿರುವ ಕವಿತಾ ಅವರು, ಭ್ರಷ್ಟಾಚಾರದ ವಿರುದ್ಧ ಧೈರ್ಯವಾಗಿ ನಿಂತ ಅಧಿಕಾರಿಯಾಗಿ ಹೆಸರು ಮಾಡಿದ್ದಾರೆ. ಇದೇ ಕಾರಣಕ್ಕೆ ಕೆಲವೆಡೆ ಭ್ರಷ್ಟ ವಲಯಗಳಿಂದ ಅವರಿಗೆ ತೊಂದರೆಗಳು ಎದುರಾಗಿದ್ದವು ಎನ್ನಲಾಗುತ್ತಿದೆ ಎಂದು ತಿಳಿಸಿದರು. ಪ್ರಸ್ತುತ ಹಾಸನ ನಗರದಲ್ಲಿಯೂ ಅವರ ಕಾರ್ಯಕ್ಷಮತೆಯನ್ನು ವೈಯಕ್ತಿಕ ವಿಷಯಗಳ ಹೆಸರಿನಲ್ಲಿ ಪ್ರಶ್ನಿಸುವ ಪ್ರಯತ್ನಗಳು ನಡೆಯುತ್ತಿದ್ದು, ಒಬ್ಬ ದಕ್ಷ ಮಹಿಳಾ ಅಧಿಕಾರಿಯ ಮೇಲಿನ ದರ್ಪದ ವರ್ತನೆ ಅವರ ಕೆಲಸಕ್ಕೆ ಅಡ್ಡಿಯಾಗುತ್ತಿದೆ ಎಂಬ ಆತಂಕ ನಾಗರಿಕ ವಲಯದಲ್ಲಿ ವ್ಯಕ್ತವಾಗಿದೆ. ಇದರ ಹಿಂದೆ ಮಹಾನಗರ ಪಾಲಿಕೆಯ ಕೆಲವು ಭ್ರಷ್ಟ ಅಧಿಕಾರಿಗಳು ಮತ್ತು ಮಧ್ಯವರ್ತಿಗಳು ಇರುವ ಅನುಮಾನವೂ ವ್ಯಕ್ತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕವಿತಾ ಅವರ ವಿರುದ್ಧ ಸಿಸಿ ಕ್ಯಾಮರಾ ಅಕ್ರಮ ಅಳವಡಿಕೆ ಅಥವಾ ಇತರೆ ಆರೋಪಗಳಿದ್ದಲ್ಲಿ, ಸೂಕ್ತ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಿ ನಂತರವೇ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯ. ಆದರೆ ಆಧಾರವಿಲ್ಲದ ಆರೋಪಗಳ ಮೂಲಕ ಶಿಕ್ಷೆ ವಿಧಿಸುವುದು ದಕ್ಷ ಅಧಿಕಾರಿಗಳ ಮನೋಬಲ ಕುಗ್ಗಿಸುವುದರ ಜೊತೆಗೆ ಭ್ರಷ್ಟಾಚಾರಕ್ಕೆ ಪರೋಕ್ಷ ಬೆಂಬಲ ನೀಡಿದಂತಾಗುತ್ತದೆ ಎಂದು ಎಚ್ಚರಿಸಿದರು. ಹೀಗಾಗಿ ಕವಿತಾ ಕೆ.ಆರ್ ಅವರ ವಿಚಾರದಲ್ಲಿ ಅತ್ಯಂತ ಸೂಕ್ಷ್ಮತೆಯಿಂದ ನಡೆದು, ನ್ಯಾಯಸಮ್ಮತ ತನಿಖೆ ಮೂಲಕ ಸತ್ಯಾಂಶ ಹೊರಬರಲಿ ಎಂದು ಸ್ಥಳೀಯರು ಮತ್ತು ಸಾರ್ವಜನಿಕ ಸಂಘಟನೆಗಳು ಸಂಬಂಧಪಟ್ಟ ಅಧಿಕಾರಿಗಳನ್ನು ವಿನಂತಿಸಿವೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಡಾ. ಭಾರತೀ, ಡಾ. ಧನಲಕ್ಷ್ಮೀ, ಜಯಶ್ರೀ, ಗಿರಿಜಾಂಬಿಕ, ಕಿಶೋರ್ ಹಾಗೂ ಇತರರು ಉಪಸ್ಥಿತರಿದ್ದರು.

You cannot copy content of this page

Exit mobile version