ಹಾಸನ: ನಗರದ ಜಿಲ್ಲಾ ನ್ಯಾಯಾಲಯಕ್ಕೆ ಮತ್ತೆ ಹುಸಿ ಬಾಂಬ್ ಬೆದರಿಕೆ ಇಮೇಲ್ ಬಂದಿರುವ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.
ಜಿಲ್ಲಾ ನ್ಯಾಯಾಲಯದ ಅಧಿಕೃತ ಇಮೇಲ್ ಐಡಿಗೆ ಮಾ. 3ರಂದು ಬೆಳಗಿನ ಜಾವ 5.40ರ ಸುಮಾರಿಗೆ ಅಪರಿಚಿತ ವ್ಯಕ್ತಿಯಿಂದ ಬೆದರಿಕೆ ಸಂದೇಶ ಕಳುಹಿಸಲಾಗಿದೆ. pdjadmnhassan@gmail.com ವಿಳಾಸಕ್ಕೆ Rameeza Hussain (rameeza-hussain@hotmail.com) ಎಂಬ ಇಮೇಲ್ ಐಡಿಯಿಂದ ಸಂದೇಶ ರವಾನೆಯಾಗಿದ್ದು, ಬೆಳಿಗ್ಗೆ 11.50ಕ್ಕೆ ನ್ಯಾಯಾಲಯ ಹಾಗೂ ನ್ಯಾಯಾಧೀಶರ ಕೊಠಡಿಯಲ್ಲಿ ಸೈನೈಡ್ ವಿಷಾನಿಲ ತುಂಬಿದ ಆರ್‌ಡಿಎಕ್ಸ್ ಬಾಂಬ್ ಸ್ಫೋಟಗೊಳ್ಳಲಿದೆ ಎಂದು ಬೆದರಿಕೆ ಹಾಕಲಾಗಿತ್ತು. ಇದಲ್ಲದೆ, ಬೆಳಿಗ್ಗೆ 11 ಗಂಟೆಯೊಳಗೆ ನ್ಯಾಯಾಧೀಶರು ನಿರಪರಾಧಿ ನಾಗರಿಕನನ್ನು ಸ್ಥಳಾಂತರಿಸಬೇಕು ಎಂದು ಸಂದೇಶದಲ್ಲಿ ಉಲ್ಲೇಖಿಸಲಾಗಿದ್ದು, 26/11 ಮುಂಬೈ ಭಯೋತ್ಪಾದಕ ದಾಳಿ ಹಾಗೂ ಅಜ್ಮಲ್ ಕಸಬ್ ಪ್ರಕರಣಕ್ಕೂ ಉಲ್ಲೇಖ ಮಾಡಲಾಗಿದೆ.
ಘಟನೆಯ ಮಾಹಿತಿ ಸಿಕ್ಕ ತಕ್ಷಣ DAR ಡಿವೈಎಸ್‌ಪಿ ಪಾಲಾಕ್ಷ ಅವರ ನೇತೃತ್ವದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಜಿಲ್ಲಾ ನ್ಯಾಯಾಲಯಕ್ಕೆ ಭೇಟಿ ನೀಡಿ ಕಟ್ಟಡವನ್ನು ಭದ್ರತಾ ವಲಯಕ್ಕೆ ತೆಗೆದುಕೊಂಡರು.
ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಹಾಯದಿಂದ ನ್ಯಾಯಾಲಯ ಆವರಣದ ಸಂಪೂರ್ಣ ತಪಾಸಣೆ ನಡೆಸಲಾಯಿತು.
ವಿಸ್ತೃತ ಪರಿಶೀಲನೆಯ ಬಳಿಕ ಯಾವುದೇ ಬಾಂಬ್ ಅಥವಾ ಅನುಮಾನಾಸ್ಪದ ಸ್ಫೋಟಕ ವಸ್ತುಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಇದು ಹುಸಿ ಬೆದರಿಕೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
