Home ಕ್ರೀಡೆ ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥನಾಗಿ – ಪ್ರಗ್ಯಾನ್ ಓಝಾ ನೇಮಕ

ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥನಾಗಿ – ಪ್ರಗ್ಯಾನ್ ಓಝಾ ನೇಮಕ

ಮುಂಬೈ: ಭಾರತದ ಪುರುಷರ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ನೂತನ ಅಧ್ಯಕ್ಷರಾಗಿ ಮಾಜಿ ಸ್ಪಿನ್ನರ್ ಪ್ರಗ್ಯಾನ್ ಓಜಾ ಅವರನ್ನು ಹಾಗೂ ಸದಸ್ಯರಾಗಿ ರಮೇಶ್ ಪವಾರ್ ಅವರನ್ನು ನೇಮಕ ಮಾಡಿರುವುದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI) ಸೋಮವಾರ ತಿಳಿಸಿದೆ.

ಆಯ್ಕೆ ಸಮಿತಿ ಅಧ್ಯಕ್ಷರಾಗಿದ್ದ ಅಜಿತ್ ಅಗರ್ಕರ್ ಅವರ ಅಧಿಕಾರವಧಿ ಮುಕ್ತಾಯದೊಂದಿಗೆ ಖಾಲಿಯಾಗಿದ್ದ ಪುರುಷರ ತಂಡದ ಆಯ್ಕೆ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಓಜಾ ಅವರನ್ನು ನೇಮಕ ಮಾಡಲಾಗಿದೆ. ಓಜಾ ಅವರಿಗೆ ಹಿರಿತನದ ಆಧಾರದ ಮೇಲೆ ಸಮಿತಿಯ ಅಧ್ಯಕ್ಷತೆ ಅಧಿಕಾರ ನೀಡಲಾಗಿದೆ.

ಅಶೋಕ್ ಮಲ್ಹೋತ್ರಾ ಮತ್ತು ಜತಿನ್ ಪರಾಂಜಪೆ ಅವರನ್ನು ಒಳಗೊಂಡ ಕ್ರಿಕೆಟ್ ಸಲಹಾ ಸಮಿತಿಯು (CAC), ಪುರುಷರ ಆಯ್ಕೆ ಸಮಿತಿಯ ನೇಮಕಾತಿ ಪ್ರಕ್ರಿಯೆಯನ್ನು ನಡೆಸಿದ್ದು, ಈ ಸಮಿತಿಯ ಹೊಸ ಸದಸ್ಯರಾಗಿ ರಮೇಶ್ ಪವಾರ್ ಅವರನ್ನು ಆಯ್ಕೆ ಮಾಡಲಾಗಿದೆ.

ಬಿಸಿಸಿಐ ನಿಯಮಗಳ ಪ್ರಕಾರ, ಆಯ್ಕೆ ಸಮಿತಿಯ ಸದಸ್ಯರಲ್ಲಿ ಯಾರು ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿರುತ್ತಾರೋ ಅವರಿಗೆ ಅಧ್ಯಕ್ಷ ಸ್ಥಾನ ನೀಡಲಾಗುತ್ತದೆ. ಆ ಕಾರಣಕ್ಕಾಗಿಯೇ ಪ್ರಗ್ಯಾನ್ ಓಜಾ ಅವರಿಗೆ ಈ ಜವಾಬ್ದಾರಿ ನೀಡಲಾಗಿದೆ.

5 ಸದಸ್ಯರ ಸಮಿತಿ

ಪ್ರಗ್ಯಾನ್ ಓಜಾ ಅವರ ನೇತೃತ್ವದ ಈ ಪುರುಷರ ಆಯ್ಕೆ ಸಮಿತಿಯು ಈಗ ಒಟ್ಟು ಐದು ಸದಸ್ಯರನ್ನು ಒಳಗೊಂಡಿದೆ. ಪ್ರಗ್ಯಾನ್ ಓಜಾ (ಅಧ್ಯಕ್ಷರು), ಶಿವ ಸುಂದರ್ ದಾಸ್, ಆರ್. ಪಿ. ಸಿಂಗ್, ಅಜಯ್ ರಾತ್ರಾ ಮತ್ತು ರಮೇಶ್ ಪವಾರ್ ಅವರನ್ನು ಈ ಸಮಿತಿ ಒಳಗೊಂಡಿದೆ.

You cannot copy content of this page

Exit mobile version