ಬೆಳ್ತಂಗಡಿ: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಪಾಂಗಳ ಕ್ರಾಸ್‌ನಲ್ಲಿ ಬುಧವಾರ ನಡೆದ ಯುಟ್ಯೂಬರ್‌ಗಳ ಮೇಲಿನ ಹಲ್ಲೆ, ಘರ್ಷಣೆ ಹಾಗೂ ವಾಹನಗಳನ್ನು ಜಖಂಗೊಳಿಸಿದ ಘಟನೆಗಳ ಬೆನ್ನಲ್ಲೇ, ಉಜಿರೆಯಲ್ಲಿ ನಡೆದ ಘಟನೆಗಳಿಗೆ ಸಂಬಂಧಿಸಿದಂತೆ ಒಟ್ಟು ಏಳು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಮಾಹಿತಿ ನೀಡಿದ್ದಾರೆ. ಧರ್ಮಸ್ಥಳ ಠಾಣೆಯಲ್ಲಿ ನಾಲ್ಕು ಪ್ರಕರಣಗಳು ಹಾಗೂ ಬೆಳ್ತಂಗಡಿ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ.
ಯುಟ್ಯೂಬರ್‌ಗಳ ಮೇಲಿನ ಹಲ್ಲೆ ಮತ್ತು ವಾಹನ ಹಾನಿ: ಕುಡ್ಲ ರ್ಯಾಂಪೇಜ್‌ನ ಅಜಯ್ ಎಂಬವರು ನೀಡಿದ ದೂರಿನಂತೆ, ಬುಧವಾರ ಸಂಜೆ ಧರ್ಮಸ್ಥಳ ಪಾಂಗಳ ಕ್ರಾಸ್‌ನಲ್ಲಿ ವಿಡಿಯೋ ಬೈಟ್ ಪಡೆಯುತ್ತಿದ್ದಾಗ, ಸುಮಾರು 15 ರಿಂದ 50 ಮಂದಿಯ ಗುಂಪೊಂದು ತಮ್ಮ ಮೇಲೆ ಹಾಗೂ ಕ್ಯಾಮರಾಮನ್ ಸುಹಾಸ್, ಸಂಚಾರಿ ಸ್ಟುಡಿಯೋ ಸಂತೋಷ್ ಮತ್ತು ಯುನೈಟೆಡ್ ಮೀಡಿಯಾ ಅಭಿಷೇಕ್ ಎಂಬವರ ಮೇಲೆ ಹಲ್ಲೆ ನಡೆಸಿದೆ. ಅಲ್ಲದೆ, ಕ್ಯಾಮರಾವನ್ನು ರಸ್ತೆಗೆಸೆದು ಹಾನಿಗೊಳಿಸಿ, ಮೆಮೊರಿ ಕಾರ್ಡ್ ಕಳವು ಮಾಡಿ ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಧರ್ಮಸ್ಥಳ ಠಾಣೆಯಲ್ಲಿ ಅ.ಕ್ರ: 46/2025 ಕಲಂ: 189(2), 191(2), 115(2), 324(5), 352, 307 ಜೊತೆಗೆ 190 ಬಿ.ಎನ್.ಎಸ್- 2023 ರಂತೆ ಪ್ರಕರಣ ದಾಖಲಾಗಿದೆ.
ಗುಂಪು ಘರ್ಷಣೆ ಮತ್ತು ಪೊಲೀಸರ ಕರ್ತವ್ಯಕ್ಕೆ ಅಡ್ಡಿ: ಬುಧವಾರ ಸಂಜೆ, ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಪಾಂಗಳ ಕ್ರಾಸ್‌ನಲ್ಲಿ ಸುಮಾರು 25 ರಿಂದ 50 ಜನರು ಎರಡು ಪ್ರತ್ಯೇಕ ಗುಂಪುಗಳಾಗಿ ಸೇರಿ ಘರ್ಷಣೆ ನಡೆಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸ್ ಅಧಿಕಾರಿಗಳ ಸೂಚನೆಯನ್ನೂ ಮೀರಿ ಗಲಾಟೆ ಮುಂದುವರಿಸಿ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಅ.ಕ್ರ: 47/2025 ಕಲಂ: 189(2), 191(2), 132, 324(6) ಜೊತೆಗೆ 190 ಬಿ.ಎನ್.ಎಸ್ ಅಡಿಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ.
ಪೊಲೀಸ್ ಠಾಣೆ ಆವರಣದಲ್ಲಿ ಅಕ್ರಮ ಧರಣಿ: ಧರ್ಮಸ್ಥಳ ಪೊಲೀಸ್ ಠಾಣೆಯ ಆವರಣದಲ್ಲಿ ಯಾವುದೇ ಅನುಮತಿ ಪಡೆಯದೆ ಅಕ್ರಮವಾಗಿ ಗುಂಪು ಸೇರಿ ಧರಣಿ ನಡೆಸಿದ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ: 48/2025 ಕಲಂ: 189(2) ಜೊತೆಗೆ 190 ಬಿ.ಎನ್.ಎಸ್ ನಂತೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ವಾಹನ ಜಖಂ ಮತ್ತು ಪ್ರಮೋದ್ ಕುಮಾರ್ ಶೆಟ್ಟಿ ಮೇಲೆ ಹಲ್ಲೆ: ಬುಧವಾರ ಸಂಜೆ ಧರ್ಮಸ್ಥಳ ಪಾಂಗಳ ಕ್ರಾಸ್‌ನಲ್ಲಿ ವಾಹನಗಳನ್ನು ಜಖಂಗೊಳಿಸಿ ಪ್ರಮೋದ್ ಕುಮಾರ್ ಶೆಟ್ಟಿ ಎಂಬವರ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಯುಟ್ಯೂಬರ್‌ಗಳಿಗೆ ಹಲ್ಲೆ ನಡೆದಿರುವ ವಿಚಾರ ತಿಳಿದು ಸ್ಥಳಕ್ಕೆ ಬಂದ ಬೆಳ್ತಂಗಡಿ ನಿವಾಸಿ ಪ್ರಮೋದ್ ಕುಮಾರ್ ಶೆಟ್ಟಿ (42) ಎಂಬವರಿಗೆ, ಅಲ್ಲಿ ಸೇರಿದ್ದ ಸುಮಾರು 30 ರಿಂದ 40 ಜನರ ಗುಂಪು ಅವಾಚ್ಯವಾಗಿ ಬೈದು, ಹಲ್ಲೆ ನಡೆಸಿರುವುದಾಗಿ ಹಾಗೂ ಸ್ಥಳದಲ್ಲಿದ್ದ ಎರಡು ವಾಹನಗಳಿಗೆ ಮತ್ತು ಕ್ಯಾಮರಾಕ್ಕೆ ಹಾನಿಗೊಳಿಸಿರುವುದಾಗಿ ಪೊಲೀಸರಿಗೆ ದೂರಿನಲ್ಲಿ ತಿಳಿಸಲಾಗಿದೆ. ಅದರಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ: 49/2025 ಕಲಂ: 189(2), 191(2), 115(2), 110, 324(3), 352, 351(2) ಜೊತೆಗೆ 190 ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ಠಾಣೆಯಲ್ಲಿ ದಾಖಲಾದ ಪ್ರಕರಣಗಳು
ಆಸ್ಪತ್ರೆ ಸಮೀಪ ಘರ್ಷಣೆ ಮತ್ತು ಪೊಲೀಸರ ಕರ್ತವ್ಯಕ್ಕೆ ಅಡ್ಡಿ: ಧರ್ಮಸ್ಥಳ ಹಲ್ಲೆ ಘಟನೆಯ ಬೆನ್ನಲ್ಲೇ, ಹಲ್ಲೆಗೆ ಒಳಗಾದವರು ದಾಖಲಾಗಿದ್ದ ಆಸ್ಪತ್ರೆಯ ಸಮೀಪ ಗುಂಪು ಸೇರಿ ಘರ್ಷಣೆಗೆ ಕಾರಣವಾದ ಬಗ್ಗೆ ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಬೆಳ್ತಂಗಡಿ ಠಾಣೆಯ ಪೊಲೀಸರು ಅ.ಕ್ರ: 77/2025 ಕಲಂ: Sec 189(2) r/w 190 ಬಿ.ಎನ್.ಎಸ್-2023 ರಂತೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸುವರ್ಣ ಸುದ್ದಿವಾಹಿನಿ ವರದಿಗಾರರ ದೂರು: ಸುವರ್ಣ ಸುದ್ದಿವಾಹಿನಿಯ ವರದಿಗಾರ ಹರೀಶ್ ನೀಡಿರುವ ದೂರಿನಂತೆ, ಸೌಜನ್ಯಾ ಪರ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಗಣೇಶ್ ಶೆಟ್ಟಿ ದೂರು: ಇದೇ ಘಟನೆಗೆ ಸಂಬಂಧಿಸಿದಂತೆ ಗಣೇಶ್ ಶೆಟ್ಟಿ ಎಂಬವರು ನೀಡಿದ ದೂರಿನಂತೆ, ಸುವರ್ಣ ಸುದ್ದಿವಾಹಿನಿಯ ವರದಿಗಾರನ ವಿರುದ್ಧ ಹಾಗೂ ಸುವರ್ಣ ಚಾನೆಲ್ ವಿರುದ್ಧ ಅ.ಕ್ರ: 76/2025 ಕಲಂ: 126(2), 296, 351 ಜೊತೆಗೆ 3(5) ಬಿ.ಎನ್.ಎಸ್-2023 ರಂತೆ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಮಾಹಿತಿ ನೀಡಿದ್ದಾರೆ.
ಈ ಎಲ್ಲಾ ಪ್ರಕರಣಗಳ ಕುರಿತು ತನಿಖೆ ಮುಂದುವರಿದಿದ್ದು, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.