ದೇಶದಲ್ಲೇ ಅತ್ಯಂತ ಸ್ವಚ್ಛ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಧ್ಯಪ್ರದೇಶದ ಇಂದೋರ್‌ನಲ್ಲಿ ಕುಡಿಯುವ ನೀರಿನ ಪೈಪ್‌ಲೈನ್‌ಗೆ ಕೊಳಚೆ ನೀರು ಬೆರೆತ ಕಾರಣ ಎಂಟು ಮಂದಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ.
ಇಂದೋರ್ ನಗರದ ಭಗೀರಥಪುರ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದ್ದು ನಗರದ ಮೇಯರ್ ಪುಷ್ಯಮಿತ್ರ ಭಾರ್ಗವ ಅವರು ನೀಡಿರುವ ಮಾಹಿತಿಯ ಪ್ರಕಾರ ಕಲುಷಿತ ನೀರು ಸೇವಿಸಿ ಸುಮಾರು 150ಕ್ಕೂ ಹೆಚ್ಚು ಜನರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಡಿಸೆಂಬರ್ 25ರ ಸುಮಾರಿಗೆ ಸ್ಥಳೀಯರು ಕುಡಿಯುವ ನೀರು ದುರ್ವಾಸನೆಯಿಂದ ಕೂಡಿರುವುದನ್ನು ಗಮನಿಸಿದ್ದರು ಮತ್ತು ಅಂದಿನಿಂದ ಆ ನೀರನ್ನು ಸೇವಿಸಿದ ಸಾವಿರಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದರು.
ಪೈಪ್‌ಲೈನ್ ಸೋರಿಕೆಯಾಗಿ ಚರಂಡಿ ನೀರು ಕುಡಿಯುವ ನೀರಿನ ಪೈಪ್‌ಲೈನ್‌ಗೆ ಸೇರಿದುದೇ ಈ ಅನಾಹುತಕ್ಕೆ ಕಾರಣ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಈ ಘಟನೆಗೆ ತೀವ್ರ ದಿಗ್ಭ್ರಮೆ ವ್ಯಕ್ತಪಡಿಸಿದ್ದು ಮೃತಪಟ್ಟವರ ಕುಟುಂಬಗಳಿಗೆ ತಲಾ ಎರಡು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಇಬ್ಬರು ಮುನ್ಸಿಪಲ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಮತ್ತು ಒಬ್ಬ ಸಾರ್ವಜನಿಕ ಆರೋಗ್ಯ ಇಂಜಿನಿಯರ್ ಅನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಅಸ್ವಸ್ಥರಾದ ಎಲ್ಲರ ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸಲಿದ್ದು ಈ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ.
ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿ ಅವರು ಕೇವಲ ಕೊಳಚೆ ನೀರು ಬೆರೆತರೆ ಇಷ್ಟು ಸಾವುಗಳು ಸಂಭವಿಸುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದು ನೀರಿನ ಪೈಪ್‌ಲೈನ್‌ನಲ್ಲಿ ಯಾವುದೋ ವಿಷಕಾರಿ ಪದಾರ್ಥ ಬೆರೆತಿರುವ ಸಾಧ್ಯತೆಯಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಸತತ ಎಂಟು ವರ್ಷಗಳಿಂದ ಸ್ವಚ್ಛತಾ ಪ್ರಶಸ್ತಿ ಪಡೆಯುತ್ತಿರುವ ಇಂದೋರ್ ನಗರಕ್ಕೆ ಈ ಘಟನೆಯು ದೊಡ್ಡ ಕಳಂಕವಾಗಿ ಪರಿಣಮಿಸಿದೆ. ಮನೆಯಿಂದಲೇ ಕಸ ಸಂಗ್ರಹಣೆ ಮತ್ತು ಬೃಹತ್ ಬಯೋ-ಸಿಎನ್‌ಜಿ ಪ್ಲಾಂಟ್‌ನಂತಹ ಯೋಜನೆಗಳಿಂದ ಜಾಗತಿಕವಾಗಿ ಸುದ್ದಿಯಾಗಿದ್ದ ಇಂದೋರ್‌ನಲ್ಲಿ ನಡೆದ ಈ ದುರಂತವು ಮೂಲಸೌಕರ್ಯ ನಿರ್ವಹಣೆಯಲ್ಲಿನ ಲೋಪವನ್ನು ಎತ್ತಿ ತೋರಿಸಿದೆ.
