Wednesday, August 28, 2024

ಸತ್ಯ | ನ್ಯಾಯ |ಧರ್ಮ

ಗುಜರಾತ್: ಭಾರೀ ಮಳೆಗೆ 8 ಮಂದಿ ಸಾವು

ಅಹಮದಾಬಾದ್: ಗುಜರಾತಿನಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಮಂಗಳವಾರವೂ ರಾಜ್ಯ ಪ್ರವಾಹಕ್ಕೆ ಒಳಗಾಗಿದೆ. ಭಾರೀ ಮಳೆಯಿಂದಾಗಿ ರಾಜ್ಯದ 96 ಜಲಾಶಯಗಳು ಅಪಾಯಕಾರಿ ಮಟ್ಟ ತಲುಪಿದ್ದು, ಸರ್ಕಾರ ಹೈ ಅಲರ್ಟ್ ಘೋಷಿಸಿದೆ.

ಇನ್ನೂ 19 ಜಲಾಶಯಗಳು ಅಪಾಯದ ಮಟ್ಟ ತಲುಪಿವೆ. ಭಾರೀ ಮಳೆಗೆ ಸೋಮವಾರ 8 ಮಂದಿ ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಸರ್ಕಾರ ಮಂಗಳವಾರ ಪ್ರಕಟಿಸಿದೆ. ತಗ್ಗು ಪ್ರದೇಶಗಳಿಂದ 23,871 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅದು ಹೇಳಿದೆ. ಪ್ರವಾಹದಲ್ಲಿ ಸಿಲುಕಿದ್ದ ಸುಮಾರು 1,700 ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಅದು ಪ್ರಕಟಿಸಿದೆ.
ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರವು ಪ್ರಕಟಿಸಿದ ಮಾಹಿತಿಯ ಪ್ರಕಾರ, ರಾಜ್ಯಕ್ಕೆ ಈಗಾಗಲೇ ವಾರ್ಷಿಕ ಸರಾಸರಿಯ100 ಪ್ರತಿಶತ ಮಳೆ ಸುರಿದಿದೆ. ನರ್ಮದಾ ನದಿಯ ಮೇಲ್ದಂಡೆಯಿಂದ ಭಾರೀ ಪ್ರಮಾಣದ ಹರಿವು ಇರುವುದರಿಂದ ಸರ್ದಾರ್ ಸರೋವರ ಅಣೆಕಟ್ಟಿನ 30 ಗೇಟ್‌ಗಳಲ್ಲಿ 23 ಗೇಟ್‌ಗಳನ್ನು ತೆರೆಯಲಾಗಿದೆ. ಇದರಿಂದ ಭರೂಚ್ ನಲ್ಲಿ ನರ್ಮದಾ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ವಿಶ್ವಾಮಿತ್ರ ನದಿಯೂ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದಾಗಿ ಬರೋಡದ ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. 3 ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಭಾರೀ ಮಳೆಯಿಂದಾಗಿ ಪಶ್ಚಿಮ ರೈಲ್ವೆ ಮಂಗಳವಾರ 30 ರೈಲುಗಳನ್ನು ರದ್ದುಗೊಳಿಸಿದೆ. 13 ರೈಲುಗಳನ್ನು ಸ್ವಲ್ಪ ದೂರಕ್ಕೆ ಸೀಮಿತಗೊಳಿಸಲಾಗಿದೆ. ಇನ್ನೂ 36 ರೈಲುಗಳ ಮಾರ್ಗ ಬದಲಿಸಲಾಗಿದೆ.

ಹಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ

ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಂಗಳವಾರ ಗುಜರಾತ್‌ನ ಹಲವು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ. ಸೌರಾಷ್ಟ್ರ ಪ್ರದೇಶ, ಕಚ್, ಖೇಡಾ, ಆನಂದ್, ಪಂಚಮಹಲ್, ದಾಹೋದ್, ತಾಪಿ, ನವಸಾರಿ ಮತ್ತು ವಲ್ಸಾದ್ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಮುಂದಿನ ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ಭಾರೀ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಿದೆ. ಎಲ್ಲಾ ಜಿಲ್ಲೆಗಳಲ್ಲಿ ವಿಪತ್ತು ಸಂದರ್ಭಗಳನ್ನು ಎದುರಿಸಲು ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಪಡೆಗಳನ್ನು ನಿಯೋಜಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page