ಸುಮಾರು 71% ಭಾರತೀಯರು ಧಾರ್ಮಿಕ ತಾರತಮ್ಯವನ್ನು ಅತೀ ದೊಡ್ಡ ಸಮಸ್ಯೆಯಾಗಿ ನೋಡಿದರೆ, 69% ಜನರು ಜಾತಿ ಮತ್ತು ಜನಾಂಗೀಯ ತಾರತಮ್ಯವನ್ನು ಒಂದು ಸಮಸ್ಯೆ ಎಂದು ನಂಬಿದ್ದರು
ಬೆಂಗಳೂರು: ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ತುಂಬಾ ಹೆಚ್ಚಿದೆ ಎಂದು ಬಹುಪಾಲು ಭಾರತೀಯರು ನಂಬಿದ್ದಾರೆ ಎಂದು ಪ್ಯೂ ಸಂಶೋಧನಾ ಕೇಂದ್ರದ (Pew Research Center) ಇತ್ತೀಚಿನ ಸಮೀಕ್ಷೆ ಬಹಿರಂಗಪಡಿಸಿದೆ. ಸರಿಸುಮಾರು 81% ಪ್ರತಿಕ್ರಿಯಿಸಿದವರು ಆರ್ಥಿಕ ಅಸಮಾನತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ, 64% ಜನರು ಇದನ್ನು “ಬಹಳ ದೊಡ್ಡ ಸಮಸ್ಯೆ” ಎಂದು ಪರಿಗಣಿಸಿದ್ದಾರೆ.
ಜನವರಿ 9, ಗುರುವಾರ , ಏಷ್ಯಾ-ಪೆಸಿಫಿಕ್ ಪ್ರದೇಶ, ಯುರೋಪ್, ಲ್ಯಾಟಿನ್ ಅಮೇರಿಕಾ, ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ, ಉತ್ತರ ಅಮೇರಿಕಾ ಮತ್ತು ಸಬ್-ಸಹಾರನ್ ಆಫ್ರಿಕಾದಲ್ಲಿ ನಡೆಸಿರುವ ಸಮೀಕ್ಷೆಯ ಆಧಾರದ ಮೇಲೆ ಪ್ಯೂ ಸಂಶೋಧನಾ ಕೇಂದ್ರವು ತನ್ನ ವರದಿಯನ್ನು ಪ್ರಕಟಿಸಿ, “ವಿಶ್ವದಾದ್ಯಂತ ಆರ್ಥಿಕ ಅಸಮಾನತೆ ಪ್ರಮುಖ ಸವಾಲಾಗಿ ಕಂಡುಬರುತ್ತಿದೆ,” ಎಂದು ಹೇಳಿದೆ.
ಭಾರತದಲ್ಲಿ, ಶ್ರೀಮಂತರು ಮತ್ತು ಬಡವರ ನಡುವಿನ ಅಂತರವು ದೇಶದಲ್ಲಿರುವ ಒಂದು ಸಮಸ್ಯೆಯಾಗಿದೆ ಎಂದು 81% ರಷ್ಟು ಜನರು ಒತ್ತಿಹೇಳಿದರೆ, ಸಮೀಕ್ಷೆಯಲ್ಲಿ ಭಾಗವಹಿಸಿದ 39% ಜನರು ಆರ್ಥಿಕ ವ್ಯವಸ್ಥೆಯಲ್ಲಿ ಸಂಪೂರ್ಣ ಸುಧಾರಣೆ ತರುವ ಅಗತ್ಯವಿದೆ ಎಂದು ಒತ್ತಿಹೇಳಿದ್ದಾರೆ ಮತ್ತು 34% ಜನರು ಪ್ರಮುಖ ಬದಲಾವಣೆಗಳನ್ನು ಸೂಚಿಸಿದ್ದಾರೆ.
ಈ ಅಸಮಾನತೆಗೆ ಕಾರಣವೇನು ಎಂದು ಕೇಳಿದಾಗ, ಪ್ರಪಂಚದಾದ್ಯಂತ ಸಮೀಕ್ಷೆ ನಡೆಸಿದ ಹೆಚ್ಚಿನ ಜನರು ಸಂಪತ್ತು ಮತ್ತು ರಾಜಕೀಯ ಪರಸ್ಪರ ಒಂದಾಗುವುದು ಎಂದು ಸೂಚಿಸಿದ್ದಾರೆ.
ವರದಿ ಓದಲು: Economic Inequality Seen as Major Challenge Around the World
“ಸಮೀಕ್ಷೆಗೆ ಒಳಗಾದ ರಾಷ್ಟ್ರಗಳಾದ್ಯಂತ 54% ವಯಸ್ಕರ ಸರಾಸರಿಯು ಶ್ರೀಮಂತರು ಮತ್ತು ಬಡವರ ನಡುವಿನ ಅಂತರವು ತಮ್ಮ ದೇಶದಲ್ಲಿ ಬಹಳ ದೊಡ್ಡ ಸಮಸ್ಯೆಯಾಗಿದೆ ಎಂದು ಹೇಳುತ್ತಾರೆ. ಉಳಿದ 30% ಇದು ಮಧ್ಯಮ ದೊಡ್ಡ ಸಮಸ್ಯೆ ಎಂದು ಹೇಳುತ್ತಾರೆ,” ಎಂದು ವರದಿ ಹೇಳುತ್ತದೆ.
“ಹೆಚ್ಚು ರಾಜಕೀಯ ಪ್ರಭಾವವನ್ನು ಹೊಂದಿರುವ ಶ್ರೀಮಂತರು ಆರ್ಥಿಕ ಅಸಮಾನತೆಗೆ ದೊಡ್ಡ ಕಾರಣ ಎಂದು ಸರಾಸರಿ 60% ರ ನಂಬುತ್ತಾರೆ,” ಎಂದು ವರದಿ ಹೇಳಿದೆ.
ಆರ್ಥಿಕ ಅಸಮಾನತೆಯ ವಿಷಯದಲ್ಲಿ, ಶ್ರೀಮಂತರ ರಾಜಕೀಯ ಪ್ರಭಾವ (79%), ಯಾಂತ್ರೀಕರಣ (73%), ಶಿಕ್ಷಣ ವ್ಯವಸ್ಥೆ (72%) ಮತ್ತು ಜನಾಂಗೀಯ ಅಥವಾ ಜಾತಿ ತಾರತಮ್ಯ (56%) ಸೇರಿದಂತೆ ವಿವಿಧ ಅಂಶಗಳು ಸಂಪತ್ತಿನ ಅಸಮಾನ ಹಂಚಿಕೆಗೆ ಕಾರಣವೆಂದು ಭಾರತೀಯರು ಹೇಳಿದ್ದಾರೆ. ಇದಲ್ಲದೆ, ಹುಟ್ಟುವಾಗ ಸಿಗುವ ವಿಭಿನ್ನ ಅವಕಾಶಗಳು ಆರ್ಥಿಕ ಅಸಮಾನತೆಗೆ ಕಾರಣವಾಗುತ್ತವೆ ಎಂದು 65% ಒಪ್ಪಿಕೊಂಡಿದ್ದಾರೆ.
71% ಭಾರತೀಯರು ಧಾರ್ಮಿಕ ತಾರತಮ್ಯವನ್ನು ಗಂಭೀರ ಸಮಸ್ಯೆಯಾಗಿ ನೋಡುತ್ತಾರೆ
ಅಮೇರಿಕಾದಲ್ಲಿ 3,600 ಸೇರಿದಂತೆ 36 ದೇಶಗಳಲ್ಲಿ 41,503 ಜನರನ್ನು ಸಮೀಕ್ಷೆಗೆ ಒಳಪಡಿಸಿದ ಸಮೀಕ್ಷೆಯು ಭಾರತೀಯರು ಧಾರ್ಮಿಕ ಮತ್ತು ಜಾತಿ ತಾರತಮ್ಯದಿಂದ ತೀವ್ರವಾಗಿ ತೊಂದರೆಗೀಡಾಗಿದ್ದಾರೆ ಎಂದು ಕಂಡುಹಿಡಿದಿದೆ.
ಸಮೀಕ್ಷೆಗೆ ಪ್ರತಿಕ್ರಿಯಿಸಿದ ಸುಮಾರು 71% ಭಾರತೀಯ ಧಾರ್ಮಿಕ ತಾರತಮ್ಯವನ್ನು ಮಹತ್ವದ ವಿಷಯವೆಂದು ಪರಿಗಣಿಸಿದ್ದಾರೆ (57% ಇದನ್ನು ಬಹಳ ದೊಡ್ಡದಾಗಿದೆ ಮತ್ತು 14% ಮಧ್ಯಮ ದೊಡ್ಡ ಸಮಸ್ಯೆ ಎಂದು ಪರಿಗಣಿಸಿದ್ದಾರೆ), ಆದರೆ 69% ಜನರು ಜಾತಿ ಮತ್ತು ಜನಾಂಗೀಯ ತಾರತಮ್ಯ ಒಂದು ಸಮಸ್ಯೆಯಾಗಿತ್ತು ಎಂದು ನಂಬಿದ್ದಾರೆ.
ಸಮೀಕ್ಷೆ ನಡೆದ ದೇಶಗಳಾದ್ಯಂತ ಸರಾಸರಿ 29% ವಯಸ್ಕರು ಧಾರ್ಮಿಕ ತಾರತಮ್ಯವು “ಬಹಳ ದೊಡ್ಡ ಸಮಸ್ಯೆ” ಹೇಳಿದ್ದಾರೆ.