ಕೊಲಂಬಿಯಾದಲ್ಲಿ ಪತನಗೊಂಡ ಮಿಲಿಟರಿ ವಿಮಾನ: 90 ಸೈನಿಕರ ಸಾವು

ಕೊಲಂಬಿಯಾದ ಪೆರೂ ಗಡಿ ಸಮೀಪವಿರುವ ಪೋರ್ಟೊ ಲೆಗುಯಿಜಾಮೊ ಪಟ್ಟಣದಲ್ಲಿ ಸೋಮವಾರ ಭೀಕರ ಮಿಲಿಟರಿ ವಿಮಾನ ದುರಂತ ಸಂಭವಿಸಿದೆ. ಕೊಲಂಬಿಯಾ ವಾಯುಪಡೆಗೆ ಸೇರಿದ ಹೆರ್ಕ್ಯುಲಸ್ ಸಿ-130 (Hercules C-130) ವಿಮಾನವು ಟೇಕ್-ಆಫ್ ಆಗುತ್ತಿದ್ದ ಸಂದರ್ಭದಲ್ಲಿ ತಾಂತ್ರಿಕ ದೋಷದಿಂದಾಗಿ ರನ್‌ವೇ ಸಮೀಪವೇ ಪತನಗೊಂಡಿದೆ. ಈ ವಿಮಾನದಲ್ಲಿ ಒಟ್ಟು 110 ಸೈನಿಕರು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದ್ದು, ಅಪಘಾತದ ತೀವ್ರತೆಗೆ ಸುಮಾರು 90 ಮಂದಿ ಸೈನಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

ರಕ್ಷಣಾ ಸಚಿವ ಪೆಡ್ರೊ ಸ್ಯಾಂಚೆಜ್ ಅವರು ಈ ಘಟನೆಯನ್ನು ಖಚಿತಪಡಿಸಿದ್ದು, ಅಪಘಾತ ಸಂಭವಿಸಿದ ಕೂಡಲೇ ತುರ್ತು ರಕ್ಷಣಾ ತಂಡಗಳನ್ನು ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ಸ್ಥಳಕ್ಕೆ ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ. ವಿಮಾನವು ನೆಲಕ್ಕೆ ಅಪ್ಪಳಿಸಿದ ಕೂಡಲೇ ಬೆಂಕಿ ಹೊತ್ತಿಕೊಂಡಿದ್ದರಿಂದ ರಕ್ಷಣಾ ಕಾರ್ಯಕ್ಕೆ ಅಡಚಣೆಯಾಗಿತ್ತು. ಗಾಯಗೊಂಡಿರುವ ಉಳಿದ ಸೈನಿಕರನ್ನು ಸಮೀಪದ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ರಕ್ಷಣಾ ಇಲಾಖೆ ಮಾಹಿತಿ ನೀಡಿದೆ.

ಈ ಭೀಕರ ದುರಂತದ ಬಗ್ಗೆ ಕೊಲಂಬಿಯಾ ಅಧ್ಯಕ್ಷ ಗುಸ್ಟಾವೊ ಪೆಟ್ರೋ ತೀವ್ರ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ದೇಶ ಸೇವೆಗೆ ಸಿದ್ಧರಾಗಿದ್ದ ಇಷ್ಟೊಂದು ದೊಡ್ಡ ಸಂಖ್ಯೆಯ ಜವಾನ್ರನ್ನು ಕಳೆದುಕೊಂಡಿರುವುದು ದೇಶಕ್ಕೆ ತುಂಬಲಾರದ ನಷ್ಟ ಎಂದು ಅವರು ಶೋಕ ವ್ಯಕ್ತಪಡಿಸಿದ್ದಾರೆ. ಸೈನಿಕರ ಸುರಕ್ಷತೆಯೇ ತಮ್ಮ ಸರ್ಕಾರದ ಮೊದಲ ಆದ್ಯತೆಯಾಗಿದ್ದು, ಭವಿಷ್ಯದಲ್ಲಿ ಇಂತಹ ತಾಂತ್ರಿಕ ವೈಫಲ್ಯಗಳು ಮರುಕಳಿಸದಂತೆ ಮಿಲಿಟರಿ ಸಾರಿಗೆ ಸೌಲಭ್ಯಗಳನ್ನು ಆಧುನೀಕರಿಸುವುದಾಗಿ ಮತ್ತು ತನಿಖೆಗೆ ಆದೇಶಿಸುವುದಾಗಿ ಅವರು ಭರವಸೆ ನೀಡಿದ್ದಾರೆ.

ಅಪಘಾತಕ್ಕೀಡಾದ ಹೆರ್ಕ್ಯುಲಸ್ ಸಿ-130 ವಿಮಾನವು ಜಗತ್ತಿನಾದ್ಯಂತ ಮಿಲಿಟರಿ ಕಾರ್ಯಾಚರಣೆಗಳಿಗೆ ಅತ್ಯಂತ ವಿಶ್ವಾಸಾರ್ಹ ಸಾರಿಗೆ ವಿಮಾನ ಎಂದು ಹೆಸರುವಾಸಿಯಾಗಿದೆ. ಸೈನಿಕರು, ಭಾರಿ ಶಸ್ತ್ರಾಸ್ತ್ರಗಳು ಮತ್ತು ಯುದ್ಧೋಪಕರಣಗಳನ್ನು ಸಾಗಿಸಲು ಇದನ್ನು ಬಳಸಲಾಗುತ್ತದೆ. ಅಲ್ಲದೆ, ಪ್ರಕೃತಿ ವಿಕೋಪದ ಸಂದರ್ಭದಲ್ಲಿ ರಕ್ಷಣಾ ಕಾರ್ಯಗಳಿಗೆ ಮತ್ತು ವೈದ್ಯಕೀಯ ತುರ್ತು ಸೇವೆಗಳಿಗೂ ಈ ವಿಮಾನವನ್ನು ಬಳಸಲಾಗುತ್ತಿತ್ತು. ಇಂತಹ ಬಲಿಷ್ಠ ವಿಮಾನ ಪತನಗೊಂಡಿರುವುದು ಈಗ ರಕ್ಷಣಾ ವಲಯದಲ್ಲಿ ಆತಂಕ ಮೂಡಿಸಿದೆ.

ಸದ್ಯಕ್ಕೆ ವಿಮಾನ ಪತನಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲವಾದರೂ, ತಾಂತ್ರಿಕ ದೋಷ ಅಥವಾ ಇಂಜಿನ್ ವೈಫಲ್ಯದ ಸಾಧ್ಯತೆಗಳ ಬಗ್ಗೆ ತಜ್ಞರು ಪರಿಶೀಲಿಸುತ್ತಿದ್ದಾರೆ. ಈ ಘಟನೆಯು ಕೊಲಂಬಿಯಾದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮಿಲಿಟರಿ ವೈಮಾನಿಕ ದುರಂತಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಮೃತಪಟ್ಟ ಸೈನಿಕರ ಕುಟುಂಬಗಳಿಗೆ ಸರ್ಕಾರವು ಎಲ್ಲಾ ರೀತಿಯ ನೆರವು ನೀಡುವುದಾಗಿ ಘೋಷಿಸಿದೆ.

Related Articles

ಇತ್ತೀಚಿನ ಸುದ್ದಿಗಳು