Monday, January 26, 2026

ಸತ್ಯ | ನ್ಯಾಯ |ಧರ್ಮ

ಗಣರಾಜ್ಯೋತ್ಸವದ ಭದ್ರತಾ ಹಿನ್ನೆಲೆ: ರಾಜಸ್ಥಾನದಲ್ಲಿ 9,550 ಕೆಜಿ ಸ್ಫೋಟಕ ವಶ, ಓರ್ವನ ಬಂಧನ

ನವದೆಹಲಿ: ಗಣರಾಜ್ಯೋತ್ಸವದ ಹಿನ್ನೆಲೆ ಕಳೆದ ಒಂದು ವಾರಕ್ಕೂ ಹೆಚ್ಚು ದಿನಗಳಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಜಾರಿಯಲ್ಲಿತ್ತು. ಈ ನಡುವೆ ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿ ಭಾರಿ ಪ್ರಮಾಣದ ಸ್ಫೋಟಕಗಳು ಪತ್ತೆಯಾಗಿರುವುದು ಭದ್ರತಾ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ.

ಸೋಮವಾರ ಕೆಂಪುಕೋಟೆಯಲ್ಲಿ ಗಣರಾಜ್ಯೋತ್ಸವ ಆಚರಣೆಗೆ ಸಿದ್ಧತೆಗಳು ನಡೆಯುತ್ತಿರುವಾಗಲೇ, ನಾಗೌರ್ ಜಿಲ್ಲೆಯ ಹರ್ಸೌರ್ ಗ್ರಾಮದಲ್ಲಿನ ಜಮೀನೊಂದರ ಮೇಲೆ ದಾಳಿ ನಡೆಸಿದ ರಾಜಸ್ಥಾನ ಪೊಲೀಸರು ಸುಮಾರು 9,550 ಕೆಜಿ ಅಮೋನಿಯಂ ನೈಟ್ರೇಟ್ ಹಾಗೂ ಡೆಟೋನೇಟರ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ಹಳೆಯ ಘಟನೆಗಳ ಹಿನ್ನೆಲೆ
ಕಳೆದ ಕೆಲ ತಿಂಗಳ ಹಿಂದೆ ಕೆಂಪುಕೋಟೆ ಸಮೀಪದ ಮೆಟ್ರೋ ನಿಲ್ದಾಣದ ಬಳಿ ಕಾರೊಂದು ಸ್ಫೋಟಗೊಂಡ ಘಟನೆ ನಡೆದಿತ್ತು. ಜೊತೆಗೆ ಪಾಕಿಸ್ತಾನವು ಕಳೆದ ಏಳು ತಿಂಗಳಲ್ಲಿ ಸುಮಾರು 800 ಬಾರಿ ಡ್ರೋನ್ ದಾಳಿಗೆ ಯತ್ನಿಸಿರುವ ವರದಿಗಳೂ ಬಂದಿದ್ದವು. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಭದ್ರತಾ ಪಡೆಗಳು ಉಗ್ರ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದವು.

ದಾಳಿ ವೇಳೆ ಏನು ಸಿಕ್ಕಿದೆ?
ಖಚಿತ ಮಾಹಿತಿ ಆಧಾರದಲ್ಲಿ ಹರ್ಸೌರ್ ಗ್ರಾಮದ ಜಮೀನಿನ ಮೇಲೆ ದಾಳಿ ನಡೆಸಿದಾಗ,
* 187 ಚೀಲಗಳಲ್ಲಿ ತುಂಬಿದ್ದ 9,550 ಕೆಜಿ ಅಮೋನಿಯಂ ನೈಟ್ರೇಟ್,
* 9 ಕಾರ್ಟನ್ ಡೆಟೋನೇಟರ್‌ಗಳು,
* 12 ಕಾರ್ಟನ್ ಹಾಗೂ 15 ಬಂಡಲ್ ನೀಲಿ ಫ್ಯೂಸ್ ತಂತಿ,
* 12 ಕಾರ್ಟನ್ ಹಾಗೂ 5 ಬಂಡಲ್ ಕೆಂಪು ಫ್ಯೂಸ್ ತಂತಿ,
ಸಹಿತ ಅನೇಕ ಸ್ಫೋಟಕ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಓರ್ವನ ಅರೆಸ್ಟ್
ಈ ಪ್ರಕರಣದಲ್ಲಿ 58 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಆರೋಪಿಗೆ ವಿರುದ್ಧ ಈಗಾಗಲೇ ಮೂರು ಕ್ರಿಮಿನಲ್ ಪ್ರಕರಣಗಳಿದ್ದು, ಸ್ಫೋಟಕ ಕಾಯ್ದೆ 1884, ಸ್ಫೋಟಕ ವಸ್ತುಗಳ ಕಾಯ್ದೆ 1908 ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ನಾಗೌರ್ ಪೊಲೀಸ್ ವರಿಷ್ಠಾಧಿಕಾರಿ ಮೃದುಲ್ ಕಚ್ಛವಾ ತಿಳಿಸಿದ್ದಾರೆ.

ಕೇಂದ್ರ ತನಿಖಾ ಸಂಸ್ಥೆಗಳಿಗೂ ಮಾಹಿತಿ
ಪ್ರಾಥಮಿಕ ತನಿಖೆಯಲ್ಲಿ ಆರೋಪಿ ಅಕ್ರಮ ಗಣಿಗಾರಿಕೆ ಚಟುವಟಿಕೆಗಳಿಗೆ ಸ್ಫೋಟಕ ಸರಬರಾಜು ಮಾಡುತ್ತಿದ್ದ ಎನ್ನಲಾಗಿದೆ. ಆದರೆ 2025ರ ನವೆಂಬರ್‌ನಲ್ಲಿ ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಸ್ಫೋಟದಲ್ಲೂ ಅಮೋನಿಯಂ ನೈಟ್ರೇಟ್ ಬಳಕೆಯಾಗಿದ್ದ ಹಿನ್ನೆಲೆಯಲ್ಲಿ, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಕೇಂದ್ರ ತನಿಖಾ ಸಂಸ್ಥೆಗಳಿಗೆ ಮಾಹಿತಿ ನೀಡಲಾಗಿದೆ.

ಈ ಸ್ಫೋಟಕಗಳ ಹಿಂದೆ ಯಾವುದೇ ಉಗ್ರ ಸಂಘಟನೆಗಳ ಕೈವಾಡವಿದೆಯೇ ಅಥವಾ ದೊಡ್ಡ ಸಂಚು ರೂಪಿಸಲಾಗಿತ್ತೇ ಎಂಬ ಬಗ್ಗೆ ಇನ್ನಷ್ಟು ತನಿಖೆ ನಡೆಯುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page