Friday, June 14, 2024

ಸತ್ಯ | ನ್ಯಾಯ |ಧರ್ಮ

T20 ವಿಶ್ವಕಪ್‌ನಿಂದ ಹೊರಗುಳಿದ ದೀಪಕ್ ಚಹಾರ್: ತಂಡಕ್ಕೆ ಹೊಸದಾಗಿ ಸೇರ್ಪಡೆಗೊಂಡ ಮೂವರು ವೇಗಿ ಬೌಲರ್‌ಗಳು

ನವದೆಹಲಿ: ಬೆನ್ನುನೋವಿನ ಕಾರಣ ದೀಪಕ್ ಚಹಾರ್ ಮುಂಬರುವ ಟಿ20 ವಿಶ್ವಕಪ್‌ನಿಂದ ಹೊರಗುಳಿದಿದ್ದು, ಅಕ್ಟೋಬರ್ 23 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ತಂಡದ ಮೊದಲ ಪಂದ್ಯಕ್ಕೆ ಮುಂಚಿತವಾಗಿ, ಭಾರತದ ವೇಗಿ ಬೌಲರ್‌ಗಳಾದ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ತಂಡದಲ್ಲಿ ಸೇರ್ಪಡೆಗೊಳ್ಳಲಿದ್ದಾರೆ.

ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿದ್ದ ಕಾರಣ ಆ ಸ್ಥಾನ ತುಂಬವಲ್ಲಿ ದೀಪಕ್‌ ಚಹಾರ್‌ ಯಶಸ್ವಿಯಾಗುತ್ತಾರೆ ಎನ್ನುವ ನಿರೀಕ್ಷೆ ಇತ್ತು. ಆದರೆ ಅವರು ಕೂಡ ಬೆನ್ನುನೋವಿನಿಂದ ಬಳಲುತ್ತಿದ್ದು, ಬೆನ್ನುನೋವು ಗುಣವಾಗಲು ಸಮಯ ತೆಗೆದುಕೊಳ್ಳುತ್ತದೆ ಎಂದು ತಿಳಿದು ಬಿಸಿಸಿಐ ಚಹಾರ್‌ ಅವರನ್ನು T20 ವಿಶ್ವಕಪ್‌ನಿಂದ ಹೊರಗಿಡುವ ನಿರ್ಧಾರ ಮಾಡಿದೆ.

ಈ ಹಿನ್ನಲೆಯಲ್ಲಿ ಜಸ್ಪ್ರೀತ್ ಬುಮ್ರಾ ಅವರ ಬದಲಿ ಆಟಗಾರನನ್ನು ಘೋಷಿಸಲು ತಂಡಕ್ಕೆ ಅಕ್ಟೋಬರ್ 15 ರವರೆಗೆ ಕಾಲಾವಕಾಶ ಇರುವುದರಿಂದ, ಎಲ್ಲಾ ಮೂರು ವೇಗಿ ಬೌಲರ್‌ಗಳ ಫಾರ್ಮ್ ಮತ್ತು ಫಿಟ್‌ನೆಸ್ ಅನ್ನು ಪರಿಶೀಲಿಸಲು ತಂಡದ ನಿರ್ವಹಣೆಗೆ ಸಮಯವಿದೆ ಎಂದು ತಿಳಿದುಬಂದಿದೆ.

ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ-20 ವಿಶ್ವಕಪ್‌ನಲ್ಲಿ ವೇಗಿ ಬೌಲರ್‌ಗಳ ಅವಶ್ಯಕತೆ ಇದ್ದು, ಮೂವರು ಆಟಗಾರರಿಗೆ ತಂಡದ ಪರಿಸ್ಥಿತಿಗಳಿಗೆ ಒಗ್ಗಿಕೊಳ್ಳಲು ಸಾಕಷ್ಟು ಸಮಯವನ್ನು ನೀಡುತ್ತದೆ. ಹೀಗಾಗಿ ತಂಡದಲ್ಲಿ ಆಟವಾಡಲು ಯಾರು ಹೆಚ್ಚು ಸಮರ್ಥರೋ, ಅವರೇ ಸ್ಪರ್ಧೆಗೆ ಸಿದ್ಧರಾಗುತ್ತಾರೆ ಎಂದು ಬಿಸಿಸಿಐ ಅಭಿಪ್ರಾಯಪಟ್ಟಿದೆ.

ಶಮಿ ಅವರು ತಮ್ಮ ಉತ್ತಮ ಅನುಭವದೊಂದಿಗೆ ಆಟವಾಡುತ್ತಾರೆ ಹೀಗಾಗಿ ಮುಂಬರುವ ಪಂದ್ಯಗಳಲ್ಲಿ ಶಮಿ ಕಣಕ್ಕಿಳಿಯುತ್ತಾರೆ ಎನ್ನುವ ಸೂಚನೆ ತಿಳಿದುಬಂದಿದೆ. ಆದರೆ ಇತ್ತೀಚೆಗೆ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ ODI ಸರಣಿಯಲ್ಲಿ ಸಿರಾಜ್ ಅತ್ಯುತ್ತಮ ಪ್ರದರ್ಶನ ನೀಡಿದ್ದು, ರಾಂಚಿ ಏಕದಿನ ಸರಣಿಯ ಮೂರು ಪಂದ್ಯಗಳಲ್ಲಿ ಐದು ವಿಕೆಟ್ ಪಡೆದು ಉತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ಮುಂಬರುವ ಟಿ- 20 ವಿಶ್ವಕಪ್‌ನಲ್ಲಿ ಯಾರು ಕಣಕ್ಕಿಳಿಯಲಿದ್ದಾರೆ ಎನ್ನವುದು ಭಾರತೀಯ ಕ್ರಿಕೆಟ್‌ ಅಭಿಮಾನಿಗಳ ಗೊಂದಲಕ್ಕೆ ಕಾರಣವಾಗಿದೆ.   

Related Articles

ಇತ್ತೀಚಿನ ಸುದ್ದಿಗಳು