Monday, June 17, 2024

ಸತ್ಯ | ನ್ಯಾಯ |ಧರ್ಮ

ತನಗೆ ಬೇಕಾದ ಉಡುಪನ್ನು ಧರಿಸುವುದು ಪ್ರತಿ ವ್ಯಕ್ತಿಯ ಹಕ್ಕು: ಕೇರಳ ಹೈಕೋರ್ಟ್

ಕೇರಳ: ದೇಶದಲ್ಲಿನ ಪ್ರತಿಯೊಬ್ಬ ವ್ಯಕ್ತಿಯೂ ತನಗೆ ಬೇಕಾದ ಉಡುಪನ್ನು ಧರಿಸುವ ಸ್ವಾತಂತ್ರ್ಯವಿದೆ, ಅದು ಅವರ ಹಕ್ಕು ಎಂದು ಕೇರಳ ಹೈಕೋರ್ಟ್‌ ತಿಳಿಸಿದೆ.

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ನೀರೀಕ್ಷಣಾ ಜಾಮೀನು ನೀಡುವ ಸಂದರ್ಭದಲ್ಲಿ ಕೋಝಿಕ್ಕೋಡ್‌ ಸೆಷನ್‌ ನ್ಯಾಯಾಧೀಶರು ನೀಡಿದ ಆದೇಶದಿಂದ ʼಲೈಂಗಿಕ ಪ್ರಚೋದನಕಾರಿ ಉಡುಗೆʼ ಟೀಕೆಗಳನ್ನು ತೆಗೆದುಹಾಕುವ ವೇಳೆ ಕೇರಳ ಹೈಕೋರ್ಟ್‌ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಮಹಿಳೆಯರನ್ನು, ಅವರು ಧರಿಸುವ ಬಟ್ಟೆಯ ಆಧಾರದ ಮೇಲೆ ವಿರೋಧಿಸುವುದನ್ನು ಸಮರ್ಥಿಸಲಾಗುವುದಿಲ್ಲ ಮತ್ತು ಮಹಿಳೆಯರನ್ನು ಅವರ ಉಡುಪಿನ ಆಯ್ಕೆಯ ಆಧಾರದ ಮೇಲೆ ವರ್ಗೀಕರಿಸುವ ಮಾನದಂಡಗಳನ್ನು ಸಹಿಸಲಾಗುವುದಿಲ್ಲ ಎಂದು ಕೇರಳ ಹೈಕೋರ್ಟ್‌ ಗುರುವಾರ ತಿಳಿಸಿದೆ.

ನ್ಯಾಯಾಧೀಶರು ನೀಡಿದ ಆದೇಶದಿಂದ ʼಲೈಂಗಿಕ ಪ್ರಚೋದನಕಾರಿ ಉಡುಗೆʼಯ ಟೀಕೆಗಳನ್ನು ಹೊರಹಾಕುವ ಸಂದರ್ಭದಲ್ಲಿ ನ್ಯಾಯಾಲಯವು ಈ ಅವಲೋಕನಗಳನ್ನು ಮಾಡಿದ್ದು, ʼಮಹಿಳೆ ಲೈಂಗಿಕ ಪ್ರಚೋದನಕಾರಿ ಉಡುಪನ್ನು ಧರಿಸಿದ್ದರೂ ಸಹ, ಅದು ತನ್ನ ನಮ್ರತೆಯನ್ನು ಅತಿರೇಕಗೊಳಿಸಲು ಪುರುಷನಿಗೆ ಪರವಾನಗಿ ನೀಡುವುದಿಲ್ಲʼ ಎಂದು ಹೈಕೋರ್ಟ್‌ ಆದೇಶಿಸಿದೆ.

ʼಮಹಿಳೆಯರು ಪುರುಷರ ಗಮನ ಸೆಳೆಯಲು ಮಾತ್ರ ಉಡುಗೆ ಧರಿಸುತ್ತಾರೆʼ ಎಂಬ ಯಾವುದೇ ಆಲೋಚನೆ ಇರಬಾರದು. ಪ್ರಚೋದನಕಾರಿ ಬಟ್ಟೆ ತೊಟ್ಟಿದ್ದಕ್ಕೆ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಹೇಳುವುದು ತಪ್ಪು. ಸಂತ್ರಸ್ತೆಯ ಲೈಂಗಿಕ ಪ್ರಚೋದನಕಾರಿ ಉಡುಗೆಯ ಆಧಾರದ ಮೇಲೆ, ಮಹಿಳೆಯ ಘನತೆಗೆ ಅವಮಾನ ಮಾಡಿದ ಆರೋಪದಿಂದ ಆರೋಪಿಯನ್ನು ಮುಕ್ತಗೊಳಿಸಲು ಕಾನೂನು ಸಹಮತ ನೀಡುವುದಿಲ್ಲ. ಭಾರತದ ಸಂವಿಧಾನವು ನೀಡಿರುವ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕಿನಡಿ, ವ್ಯಕ್ತಿಯು ಯಾವುದೇ ಉಡುಪನ್ನು ಧರಿಸುವ ಸ್ವಾತಂತ್ರ್ಯವು ವಿಸ್ತರಿಸಲ್ಪಟ್ಟಿದೆ. ಹೀಗಾಗಿ ಮಹಿಳೆ ಲೈಂಗಿಕ ಪ್ರಚೋದನಕಾರಿ ಉಡುಗೆಯನ್ನು ಧರಿಸಿದ್ದರೂ ಸಹ, ಅದು ಪುರುಷನಿಗೆ ಆಕೆಯ ಘನತೆಯನ್ನು ಅವಮಾನಿಸುವ ಪರವಾನಗಿ ನೀಡುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 A(2) & 341 ಮತ್ತು 354 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳನ್ನು ಮಾಡಿದ ಆರೋಪ ಹೊತ್ತಿರುವ ಕಾರ್ಯಕರ್ತ ಸಿವಿಕ್ ಚಂದ್ರನ್‌ ಅವರಿಗೆ ಜಾಮೀನು ಮಂಜೂರು ಮಾಡುವ ಆದೇಶವನ್ನು ಪ್ರಶ್ನಿಸಿ, ಕೇರಳ ಸರ್ಕಾರ ಸಲ್ಲಿಸಿದ ಮೇಲ್ಮನವಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಈ ಅವಲೋಕನಗಳನ್ನು ಮಾಡಿದೆ.

ಸಂತ್ರಸ್ತೆ “ಲೈಂಗಿಕ ಪ್ರಚೋದನಕಾರಿ ಉಡುಗೆ” ಧರಿಸಿದ್ದಾರೆ ಎನ್ನುವ ಕಾರಣಕ್ಕೆ ಲೈಂಗಿಕ ಕಿರುಕುಳ ಪ್ರಕರಣವು ಪ್ರಾಥಮಿಕ ಹಂತದಲ್ಲಿ ನಿಲ್ಲುವುದಿಲ್ಲ ಎಂದು ನ್ಯಾಯಾಧೀಶ ಎಸ್ ಕೃಷ್ಣ ಕುಮಾರ್ ಅವರು ನೀಡಿದ ತೀರ್ಪನ್ನು  ಸೆಷನ್ಸ್  ನ್ಯಾಯಾಲಯ ಆದೇಶಿಸಿದೆ.

ತೀರ್ಪಿನ ಪ್ರಕಾರ, ಪ್ರಾಥಮಿಕ ಹಂತದಲ್ಲಿ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಾಲಾಗಬೇಕೆಂದರೆ ದೈಹಿಕ ಸಂಪರ್ಕ ಮತ್ತು ದೈಹಿಕ ಸಂಪರ್ಕಕ್ಕೆ ಇಷ್ವವಿಲ್ಲದ ಕಾರಣಗಳು, ಬೇಡಿಕೆಗಳು, ಒತ್ತಾಯಗಳು ಇರಬೇಕು. ಇಲ್ಲವಾದಲ್ಲಿ ಕೇವಲ ಲೈಂಗಿಕ ಪ್ರಚೋದನಕಾರಿ ಉಡುಗೆ ಧರಿಸಿದ್ದಾರೆ ಎನ್ನುವ ಕಾರಣಕ್ಕೆ ದೌರ್ಜನ್ಯದ ಪ್ರಕರಣ ದಾಖಾಲಾಗಿದ್ದರೆ, ಅಂತಹ ಪ್ರಕರಣಗಳು ಪ್ರಾಥಮಿಕ ಹಂತದಲ್ಲಿ ನಿಲ್ಲುವುದಿಲ್ಲ ಎಂದು ನ್ಯಾಯಲಯ ತಿಳಿಸಿದೆ.

Related Articles

ಇತ್ತೀಚಿನ ಸುದ್ದಿಗಳು