Wednesday, June 19, 2024

ಸತ್ಯ | ನ್ಯಾಯ |ಧರ್ಮ

ಚರ್ಮಗಂಟು ಕಾಯಿಲೆ: ಸುಳ್ಳು ಸುದ್ದಿಗಳನ್ನು ಹರಡದಿರಿ, ಸುಳ್ಳು ಸುದ್ದಿಗಳನ್ನು ನಂಬದಿರಿ

ಇತ್ತೀಚೆಗೆ ಭಾರತದಲ್ಲಿ ಯಾವುದೇ ಹೊಸ ಸಂಗತಿಗಳು ಕಂಡು ಬಂದರೂ ಅದರ ಸುತ್ತ-ಮುತ್ತ ಊಹಾಪೋಹಗಳು ಹುಟ್ಟಿಕೊಳ್ಳುವುದು ಬಹಳ ಸಾಮಾನ್ಯವಾಗಿಬಿಟ್ಟಿದೆ. ಅಂತಹದ್ದೇ ಒಂದು ಊಹಾಪೋಹ ಅಥವಾ ಸುಳ್ಳು ಸುದ್ದಿ ಈಗ ಚರ್ಮಗಂಟು ಕಾಯಿಲೆ ಅಥವಾ Lumpy skin disease (LSD) ಕುರಿತು ಹರಡತೊಡಗಿದೆ. ಪರಸ್ಪರ ಸಂಬಂಧವೇ ಇರದ ವಿಡೀಯೋ ಮತ್ತು ಫೋಟೊಗಳನ್ನು ಒಟ್ಟುಗೂಡಿಸಿ ವಾಟ್ಸಾಪ್‌ನಂತಹ ಸಾಮಾಜಿಕ ಮಾಧ್ಯಮತಾಣಗಳಲ್ಲಿ ಹರಿಬಿಡಲಾಗುತ್ತಿದೆ.

ಅಂತಹ ಸುಳ್ಳು ಸುದ್ದಿಗಳಲ್ಲಿ ಒಂದು ಎಂದರೆ ಈ ಚರ್ಮಗಂಟು ಕಾಯಿಲೆ ಮನುಷ್ಯರಿಗೆ ಹರಡುತ್ತದೆ ಎನ್ನುವುದು. ಆದರೆ ಹಾಗೆ ಹರಡಲು ಸಾಧ್ಯವೇ ಇಲ್ಲ‌ ಎನ್ನುತ್ತಿದ್ದಾರೆ ತಜ್ಞರು. ಆ ಕುರಿತು ತಿಳಿದುಕೊಳ್ಳುವ ಮೊದಲು ಚರ್ಮಗಂಟು ಕಾಯಿಲೆ ಅಥವಾ Lumpy skin disease (LSD) ಎಂದರೇನು ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ.

ಲಂಪಿ ಸ್ಕಿನ್ ಡಿಸೀಸ್ (ಎಲ್‌ಎಸ್‌ಡಿ) ಎಂಬುದು ಜಾನುವಾರುಗಳಲ್ಲಿ ಬರುವ ಸಾಂಕ್ರಾಮಿಕ ರೋಗವಾಗಿದ್ದು, ಇದು ಪೋಕ್ಸ್‌ವಿರಿಡೆ ಕುಟುಂಬದ ವೈರಸ್‌ ಮೂಲಕ ಉಂಟಾಗುತ್ತದೆ, ಇದನ್ನು ನೀತ್ಲಿಂಗ್ ವೈರಸ್ (Neethling virus) ಎಂದೂ ಕರೆಯುತ್ತಾರೆ. ರೋಗವು ಜ್ವರ, ದೊಡ್ಡದಾದ ಸ್ಥಿತಿಯ ಬಾಹ್ಯ ದುಗ್ಧರಸ ಗ್ರಂಥಿಗಳು ಮತ್ತು ಚರ್ಮ ಮತ್ತು ಲೋಳೆಯ ಪೊರೆಗಳ ಮೇಲೆ (ಉಸಿರಾಟ ಮತ್ತು ಜಠರಗರುಳಿನ ಪ್ರದೇಶಗಳನ್ನು ಒಳಗೊಂಡಂತೆ) ಬಹಳಷ್ಟು ಗಂಟುಗಳು (2-5 ಸೆಂಟಿಮೀಟರ್ (1-2 ಇಂಚು) ವ್ಯಾಸದಷ್ಟು) ಕಾಣಿಸಿಕೊಳ್ಳುತ್ತವೆ. ಸೋಂಕಿತ ಜಾನುವಾರುಗಳು ತಮ್ಮ ಕೈಕಾಲುಗಳಲ್ಲಿ ಊತ ಕಾಣಿಸಬಹುದು ಮತ್ತು ಕುಂಟಲು ಆರಂಭಿಸಬಹುದು. ವೈರಸ್ ಪ್ರಮುಖ ಆರ್ಥಿಕ ಪರಿಣಾಮಗಳನ್ನು ಹೊಂದಿದೆ ಏಕೆಂದರೆ ಪೀಡಿತ ಜಾನುವಾರುಗಳು ಸಾಮಾನ್ಯವಾಗಿ ದೀರ್ಘಕಾಲದ ದೌರ್ಬಲ್ಯ, ಕಡಿಮೆ ಹಾಲು ಉತ್ಪಾದನೆ, ಕಳಪೆ ಬೆಳವಣಿಗೆ, ಬಂಜೆತನ, ಗರ್ಭಪಾತಕ್ಕೆ ಒಳಗಾಗುತ್ತವೆ. ಕೆಲವೊಮ್ಮೆ ಸಾವಿಗೂ ಈಡಾಗುತ್ತವೆ.

ಇದರ ಹರಡುವಿಕೆಯು ಕ್ಯುಲೆಕ್ಸ್‌, ಈಡೀಸ್‌ ಸೊಳ್ಳೆ, ಸೊಮಾಕ್ಸಿಸ್‌, ಕುದುರೆ ನೊಣ (ಸ್ಟೆಬಲ್‌ ಫ್ಲೈ) ಬಯೊಮಿಯಾ – ಕಚ್ಚುವ ನೊಣಗಳ ಮೂಲಕ ಆಗುತ್ತದೆ. ಕೆಲವೊಮ್ಮೆ ಉಣ್ಣೆಗಳಿಂದಲೂ ಈ ಕಾಯಿಲೆ ಹರಡುತ್ತದೆ. ಸಿಂಬಳ ಮತ್ತು ದನಗಳು ಜೊತೆಯಲ್ಲಿರುವುದರಿಂದ ಈ ಕಾಯಿಲೆ ಅಷ್ಟಾಗಿ ಹರಡುವುದಿಲ್ಲ. ಕಡಿಯುವ ನೊಣಗಳು ಒಂದು ಜಾನುವಾರಿನ ರಕ್ತ ಹೀರಿ ಇನ್ನೊಂದರ ಮೇಲೆ ಕುಳಿತಾಗ ಕಾಯಿಲೆ ಹರಡುತ್ತದೆ.

ಇದೆಲ್ಲ ತಾಂತ್ರಿಕ ವಿಷಯಗಳು ಏನೇ ಇದ್ದರೂ ವಾಟ್ಸಾಪ್‌ ಮಾಹಿತಿಗಳಂತೆ ಈ ಕಾಯಿಲೆ ಮನುಷ್ಯರಿಗೆ ಹರಡುವುದಿಲ್ಲ ಎನ್ನುವುದು ಇಲ್ಲಿ ನಾವು ತಿಳಿದುಕೊಳ್ಳಬೇಕಾದ ವಿಷಯವಾಗಿದೆ.

ವಾಟ್ಸಾಪ್‌ ವಿಡೀಯೋಗಳಲ್ಲಿ ಒಬ್ಬ ಸಿಡುಬಿನಂತಹ ಗಂಟುಗಳೆದ್ದಿರುವ ಮನುಷ್ಯನ ಚಿತ್ರ, ಕ್ಯಾನುಗಳಿಂದ ಹಾಲನ್ನು ಸುರಿಯುತ್ತಿರುವುದು ಮತ್ತು ಪ್ಯಾಕೆಟ್‌ ಹಾಲುಗಳನ್ನು ಸೇತುವೆ ಮೇಲಿನಿಂದ ಹೊಳೆಗೆ ಸುರಿಯುತ್ತಿರುವುದನ್ನು ಕಾಣಬಹುದು. ಆದರೆ ಆ ವಿಡೀಯೊ ಮತ್ತು ಫೋಟೊಗಳಿಗೆ ಪರಸ್ಪರ ಸಂಬಂಧವಿಲ್ಲ ಮತ್ತು ಚರ್ಮಗಂಟು ಕಾಯಿಲೆಯೊಂದಿಗಂತೂ ಯಾವುದೇ ಸಂಬಂಧವೂ ಇಲ್ಲ ಎನ್ನುವುದನ್ನು ನಾವು ಅರಿಯಬೇಕಿದೆ.

ಶಿವಮೊಗ್ಗದ ಪಶುವೈದ್ಯಕೀಯ ಮಹಾವಿದ್ಯಾಲಯದ ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಆಗಿರುವ ಡಾ: ಎನ್ ಬಿ.ಶ್ರೀಧರ ಅವರು ತಮ್ಮ ಫೇಸ್ಬುಕ್‌ ಖಾತೆಯಲ್ಲಿ ಹಂಚಿಕೊಂಡಿರುವ ಮಾಹಿತಿ ಹೀಗಿದೆ.

  1. ಚರ್ಮ ಗಂಟು ಕಾಯಿಲೆ ಪಶುಗಳಿಂದ ಮನುಷ್ಯನಿಗೆ ಹರಡುತ್ತದೆ.

ಇದು ವ್ಯಾಪಕವಾಗಿ ಪ್ರಚಾರವಾಗುತ್ತಿರುವ ಅಪ್ಪಟ ಸುಳ್ಳು ಸುದ್ದಿ. ಈ ವರೆಗೆ ಇದಕ್ಕೆ ಆಧಾರಗಳು ಯಾವುದೂ ದೊರೆತಿಲ್ಲ. ಕೆಲವೊಮ್ಮೆ ಚರ್ಮ ಗಂಟು ರೋಗ ಉಂಟು ಮಾಡುವ ವೈರಾಣು ಪಶುಗಳಲ್ಲಿ ಉಂಟುಮಾಡುವ ಚರ್ಮಗಂಟಿಗೂ ಮತ್ತು ಹರ್ಪಿಸ್ ಸಿಂಪ್ಲಿಕ್ಸ್ ವೈರಾಣುಗಳು ಮನುಷ್ಯನಲ್ಲಿ ಉಂಟು ಮಾಡುವ ಚರ್ಮದ ಕಾಯಿಲೆಯನ್ನು ಚರ್ಮಗಂಟು ರೋಗದಿಂದ ಬಂದಿರಬಹುದೆAದು ಊಹಿಸಿ ಅದರ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಅಲ್ಲದೇ ಭಾರತದ ವಿವಿಧ ಪಶುವೈದ್ಯಕೀಯ ವಿಶ್ವವಿದ್ಯಾಲಯದ ವಿಜ್ಞಾನಿಗಳು ಇದೊಂದು ಸುಳ್ಳು ಸುದ್ಧಿ ಎಂದು ಅಲ್ಲಗಳೆದಿದ್ದಾರೆ. ಅಲ್ಲದೇ ವಿಶ್ವಸಂಸ್ಥೆಯ ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆಯ ಇತ್ತೀಚಿನ ವರದಿಗಳಲ್ಲಿಯೂ ಈ ವೈರಾಣು ಮನುಷ್ಯನಿಗೆ ಹರಡದೆಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

  1. ಚರ್ಮ ಗಂಟು ಪೀಡಿತ ಆಕಳಿನ ಹಾಲು ಕುಡಿದರೆ ಮನುಷ್ಯನಿಗೂ ಸಹ ಚರ್ಮಗಂಟು ಕಾಯಿಲೆ ಬರುತ್ತದೆ.

ಇದು ಸಹ ಶುದ್ಧ ಸುಳ್ಳು ಮತ್ತು ಆಧಾರ ರಹಿತ ಆಪಾದನೆ. ರೋಗ ಪೀಡಿತ ಪಶುವಿನ ಹಾಲಿನಲ್ಲಿ ವೈರಾಣು ವಿಸರ್ಜನೆಯಾಗುವುದು ನಿಜ. ಆದರೆ ಇದನ್ನು ಸೇವಿಸಿದರೆ ಮನುಷ್ಯರಿಗೆ ಕಾಯಿಲೆ ಬರುವ ಬಗ್ಗೆ ಯಾವುದೇ ದಾಖಲೆಗಳಿಲ್ಲ. ಅಲ್ಲದೇ ಭಾರತ ದೇಶದಲ್ಲಿ ಬಹುತೇಕ ಜನರು ಕಾಯಿಸಿಯೇ ಕುಡಿಯುವುದರಿಂದ ಈ ತಾಪಮಾನದಲ್ಲಿ ವೈರಾಣು ಬದುಕಿ ಉಳಿಯುವ ಯಾವುದೇ ಸಾಧ್ಯತೆ ಇಲ್ಲ. ಸಾಮಾಜಿಕ ಜಾಲತಾಣದಲ್ಲಿ ಹಾಲನ್ನು ಚೆಲ್ಲುವ ದೃಶ್ಯ ವೈರಲ್ ಆಗಿದೆ. ಇದು ಯಾವುದೋ ಬೇರೆ ಸಂದರ್ಭದ ದೃಶ್ಯ.

ಇದನ್ನು ಈಗ ಬಳಸಿಕೊಳ್ಳಲಾಗಿದೆ. ಕೆಲವೊಂದು ಸ್ವಯಂ ಘೋಷಿತ ಪ್ರಾಣಿ ಚಟುವಟಿಕೆಗಾರರು ಸಹ ಈ ರೀತಿಯ ಸುಳ್ಳು ಸುದ್ಧಿಗೆ ಪ್ರಚಾರ ನೀಡುತ್ತಿರುವುದು ದುರದೃಷ್ಟಕರ. ಸಹ ಇದನ್ನು ಕಾರಣ ಮನುಷ್ಯನಿಗೆ ಈ ಕಾಯಿಲೆ ಹಾಲಿನಿಂದ ಬರುವ ಸಾಧ್ಯತೆಯೇ ಇಲ್ಲ. ಇದೊಂದು ಶುದ್ಧ ಸುಳ್ಳು ಸುದ್ಧಿ.

ಹೇಗೆ ಕೋವಿಡ್ ಸಂದರ್ಭದಲ್ಲಿ ತರಹೆವಾರಿ ಊಹಾಪೋಹಗಳು ಹರಿದಾಡುತ್ತಿದ್ದವೋ ಹಾಗೆಯೇ ಈಗ ಚರ್ಮಗಂಟು ಕಾಯಿಲೆಯಲ್ಲೂ ಸಹ ತಪುö್ಪ ಸಂದೇಶಗಳು ಮತ್ತು ಸುದ್ಧಿಗಳು ಹರಿದಾಡುತ್ತಿವೆ. ಈ ಸಂದರ್ಭವನ್ನು ದುರುಪಯೋಗ ಮಾಡಿಕೊಂಡು ಚರ್ಮಗಂಟು ಕಾಯಿಲೆಯನ್ನು ವಾಸಿ ಮಾಡುವೆನೆಂದು ಅನೇಕ ಹೊಸ ಹೊಸ ಉತ್ಪನ್ನಗಳು ಮಾರುಕಟ್ಟೆಗೆ ಬರುತ್ತಿದ್ದು ಇವುಗಳ ಬಳಕೆಯ ಬಗ್ಗೆ ಯಾವುದೇ ವೈಜ್ಞಾನಿಕ ತಳಹದಿ ಇರದೇ ಇರುವುದರಿಂದ ಅವುಗಳನ್ನು ಬಳಸುವ ಮೊದಲು ತಜ್ಞರ ಸಲಹೆ ಪಡೆಯುವುದು ಬಹಳ ಮುಖ್ಯ.
ಕಾರಣ ಸಾರ್ವಜನಿಕರು ಕೇವಲ ಪಶುವೈದ್ಯಕೀಯ ತಜ್ಞರು ನೀಡುವ ಸಲಹೆ ಸೂಚನೆಗಳಿಗೆ ಮಾತ್ರ ಕಿವಿಗೊಡಬೇಕೇ ವಿನ: ಅವೈಜ್ಞಾನಿಕ ವದಂತಿಗಳಿಗೆ ಕಿವಿಗೊಡಲೇ ಬೇಡಿ.

ದಯವಿಟ್ಟು ಯಾವುದೇ ಮಾಹಿತಿಯನ್ನು ಇನ್ನೊಬ್ಬರಿಗೆ ಪಾಸ್‌ ಮಾಡುವ ಮೊದಲು, ಅಥವಾ ಫಾರ್ವರ್ಡ್‌ ಮಾಡುವ ಮೊದಲು ನಮ್ಮಲ್ಲೇ ಒಂದಿಷ್ಟು ಪ್ರಶ್ನೆಗಳನ್ನು ಕೇಳಿಕೊಳ್ಳೋಣ. ಅವುಗಳೆಂದರೆ;

  1. ಈ ಸುದ್ದಿ ನಿಜವೇ?
  2. ಈ ಸುದ್ದಿಯ ಮೂಲ ಯಾವುದು?
  3. ಈ ಸುದ್ದಿಯನ್ನು ನಮಗೆ ಕಳುಹಿಸಿದ ವ್ಯಕ್ತಿಗೆ ಈ ಕುರಿತು ಮಾಹಿತಿ ಇದೆಯೇ?
  4. ಈ ಸುದ್ದಿಯನ್ನು ನಾನು ಮುಂದಕ್ಕೆ ಕಳುಹಿಸಿದರೆ ಅದರಿಂದ ಆಗುವ ಪರಿಣಾಮಗಳೇನು?
  5. ಈ ಸುದ್ದಿಯನ್ನು ಪ್ರಕಟಿಸಿದವರು ಯಾರು? ಅವರ ಹಿತಾಸಕ್ತಿಗಳೇನು?

ಇಷ್ಟಲ್ಲದೆ ಇನ್ನೂ ಅನೇಕ ಸಂಗತಿಗಳನ್ನು ನಾವು ಗಮನದಲ್ಲಿಟ್ಟುಕೊಂಡು ನಂತರ ಸುದ್ದಿಯನ್ನು ಶೇರ್‌ ಮಾಡಬೇಕು. ಒಮ್ಮೆ ಒಂದು ತಪ್ಪಾದ ಸುದ್ದಿಯನ್ನು ಫಾರ್ವರ್ಡ್‌ ಮಾಡಿದೆವೆಂದರೆ ಅದನ್ನು ಸರಿಪಡಿಸುವ ಮೊದಲೇ ಅದು ಊರು ಸುತ್ತಿರುತ್ತದೆ. ಹೀಗಾಗಿ ಸುದ್ದಿಗಳನ್ನು ಫಾರ್ವರ್ಡ್‌ ಮಾಡುವ ಮೊದಲು ನಾವು ಎಚ್ಚರದಿಂದಿರಬೇಕು. ಇಂದು ಟರ್ಕಿ ದೇಶ ಸುಳ್ಳು ಸುದ್ದಿ ಹರಡುವವರಿಗೆ ಜೈಲು ಶಿಕ್ಷೆ ವಿಧಿಸುವ ಕಾನೂನು ತಂದಿದೆಯೆಂದರೆ ಈ ಸುಳ್ಳು ಸುದ್ದಿಗಳು ಬೀರುವ ಪರಿಣಾಮ ಎಂತಹದ್ದೆಂದು ನಿಮಗೂ ಅರ್ಥವಾಗಿರಬಹುದು.

Related Articles

ಇತ್ತೀಚಿನ ಸುದ್ದಿಗಳು