Saturday, June 15, 2024

ಸತ್ಯ | ನ್ಯಾಯ |ಧರ್ಮ

ಬಡತನ ನಿರ್ಮೂಲನಾ ದಿನದಂದು ಸಾಕವ್ವನ ಮುಂಗೈಗೆ ಬೆಲ್ಲ!

ಬಡತನದ ಮೂಲ ಇರುವುದು ಸಂಪತ್ತಿನ, ಸಂಪನ್ಮೂಲಗಳ ಅಸಮಾನ ಹಂಚಿಕೆ ಮತ್ತು ಅನ್ಯಾಯದ ದೋಚುವಿಕೆ ಮತ್ತು ಒಡೆತನದಲ್ಲಿಯೇ. ಸಾಮಾಜಿಕ, ಸಾಂಸ್ಕೃತಿಕವಾದ ತಾರತಮ್ಯದಿಂದ ಕೂಡಿದ ಬಡತನ ಹಂಚಿಕೆಯನ್ನು ನಾವು ಗಮನಿಸಬೇಕು ಎನ್ನುತ್ತಾರೆ ಹಿರಿಯ ಪತ್ರಕರ್ತ ನಿಖಿಲ್‌ ಕೋಲ್ಪೆ

ಪ್ರತೀ ವರ್ಷದಂತೆ ಅಕ್ಟೋಬರ್ 17ನ್ನು ವಿಶ್ವ ಬಡತನ ನಿರ್ಮೂಲನಾ ದಿನವೆಂದು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯ ಅಡಿಯಲ್ಲಿ ಆಚರಿಸಲಾಗುವ ಇತರ ಹಲವಾರು ದಿನಗಳಂತೆ ಇದರ ಉದ್ದೇಶವು ನಿರ್ದಿಷ್ಟವಾಗಿ ಜಾಗತಿಕ ಬಡತನ ನಿರ್ಮೂಲನೆ ಕುರಿತು ಗಮನ ಕೇಂದ್ರೀಕರಿಸಿ, ಒಂದು ಸಂಕಲ್ಪ ಮಾಡುವುದು. ಈ ಸಂಕಲ್ಪವನ್ನು ಯಾರು ಮಾಡಬೇಕು? ಒಂದೊಂದು ರಾಷ್ಟ್ರ ಮತ್ತು ಒಟ್ಟಾಗಿ ಜಾಗತಿಕ ಸಮುದಾಯ ಮಾಡಬೇಕು. ಆದರೆ, ಸಂಕಲ್ಪ ಮಾತ್ರದಿಂದಲೇ ಬಡತನ ನಿರ್ಮೂಲನೆ ಸಾಧ್ಯವೆ? ಯಾಕೆಂದರೆ, ಬಡತನ ಎಂಬುದೇ ಮಾನವ ಜೀವನದ ಹಲವು ವಿಷಯಗಳಿಗೆ ಥಳಕು ಹಾಕಿಕೊಂಡಿರುವ ಬಹು ಆಯಾಮಗಳ ವಿಷಯ. ಈ ಆಯಾಮಗಳ ಕುರಿತು ಒಂದು ಲೇಖನ ಸರಣಿಯನ್ನೇ ಬರೆಯಬಹುದಾದುದರಿಂದ ಇಲ್ಲಿ ಈ ಸಮಸ್ಯೆಯ ಸ್ಥೂಲ ಪರಿಚಯವನ್ನಷ್ಟೇ ನೀಡಲಾಗಿದೆ.

ವಿಶ್ವಸಂಸ್ಥೆಯೇನೋ 2022ರ ಬಡತನ ನಿರ್ಮೂಲನಾ ದಿನಾಚರಣೆಯಲ್ಲಿ “ಆಚರಣೆಯಲ್ಲಿ ಎಲ್ಲರಿಗೂ ಘನತೆ” ಎಂಬ ವಿಷಯವನ್ನು ಇಟ್ಟುಕೊಂಡಿದೆ; ಮಾತ್ರವಲ್ಲದೆ, ಇದನ್ನು ಸಾಮಾಜಿಕ ನ್ಯಾಯ, ಶಾಂತಿ ಮತ್ತು ಈ ಭೂಮಿಗಾಗಿ ನಮ್ಮ ಬದ್ಧತೆಯ ಜೊತೆಗೆ ತಳಕುಹಾಕಿದೆ. ವಿಶ್ವಸಂಸ್ಥೆಯ ಪ್ರಕಾರ‌- “ಮಾನವ ಘನತೆ” ಎಂಬುದು ಕೇವಲ ಒಂದು ಮೂಲಭೂತ ಹಕ್ಕು ಮಾತ್ರವಲ್ಲ; ಅದು ಉಳಿದೆಲ್ಲಾ ಮೂಲಭೂತ ಹಕ್ಕುಗಳಿಗೆ ಅಡಿಪಾಯವಾಗಿದೆ. ಆದುದರಿಂದ “ಮಾನವ ಘನತೆ” ಎಂಬುದು ಒಂದು ಆಮೂರ್ತ ಕಲ್ಪನೆಯಲ್ಲ. ಅದು ಪ್ರತಿಯೊಬ್ಬ ಮಾನವ ಜೀವಿಗೂ ಸೇರಿದುದಾಗಿದೆ. ಆದರೇನು? ಇಂದು ಜಾಗತಿಕವಾಗಿ ಕೋಟ್ಯಂತರ ಜನರು ಕಿತ್ತು ತಿನ್ನುವ ಬಡತನದ ಕಾರಣದಿಂದ ಪ್ರತೀದಿನ, ಪ್ರತೀಕ್ಷಣ, ತಮ್ಮ, ಕುಟುಂಬದ, ಸಮುದಾಯದ ಮತ್ತು ದೇಶದ ಘನತೆ ಮಣ್ಣು ಪಾಲಾಗುವುದನ್ನು ನೋಡುತ್ತಿದ್ದಾರೆ.

ಈ ಹೊತ್ತಿನಲ್ಲಿ ವಿಶ್ವಸಂಸ್ಥೆಯ ಮೂಲಕ ವಿಶ್ವ ಸಮುದಾಯ ತೋರಿಸುತ್ತಿರುವ ಆಶಾವಾದವು ಮಾತ್ರ ಪ್ರಧಾನಿ ನರೇಂದ್ರ ಮೋದಿಯ “ಅಚ್ಛೇ ದಿನ್” ನಂತೆ ನಗೆಪಾಟಲಿನ ವಿಷಯವಾಗಿ ಕಾಣುತ್ತದೆ. ಇದಕ್ಕೆ ಕಾರಣವೇನೆಂದು ಮುಂದೆ ಓದುತ್ತಾ ಹೋದಂತೆ ಸ್ಪಷ್ಟವಾದೀತು. ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯ ಅಡಿಯಲ್ಲಿ ಬಡತನ ನಿರ್ಮೂಲನೆಗೆ, ಶಾಂತಿಗೆ ಮತ್ತು ನಮ್ಮ ಗ್ರಹದ ರಕ್ಷಣೆಗೆ 2030ರ ಗಡಿಯನ್ನು ನಿಗದಿಪಡಿಸಿದೆ. ವಿಶ್ವಸಂಸ್ಥೆಯ 2030 ಕಾರ್ಯಕ್ರಮವು (2030 ಅಜೆಂಡಾ) ಕೂಡಾ ಇದೇ ಗಡುವನ್ನು ನಿಗದಿ ಪಡಿಸಿದೆ. ಕಣ್ಣಿರುವ ಯಾರಾದರೂ ನಮ್ಮದೇ ಪರಿಸ್ಥಿತಿಯನ್ನು ಒಮ್ಮೆ ಗಮನವಿಟ್ಟು ನೋಡಿದರೆ ಇನ್ನು ಎಂಟೇ ವರ್ಷಗಳಲ್ಲಿ ಇದು ಸಾಧ್ಯವೇ ಇಲ್ಲ; ಬದಲಾಗಿ, ಬಡತನವು ಹೆಚ್ಚಲಿದೆ ಎಂಬುದು ಅರಿವಾಗುತ್ತದೆ. ಅಂದರೆ, ವಿಶ್ವಸಂಸ್ಥೆಯು ಪ್ರತಿನಿಧಿಸುವ ಜಗತ್ತಿನ ಶ್ರೀಮಂತ, ಬಡ ರಾಷ್ಟ್ರಗಳು ಅಷ್ಟೊಂದು ಕುರುಡಾಗಿವೆಯೇ? ಅಥವಾ ಬಡವರ ಮುಂಗೈಗೆ ಬೆಲ್ಲ ಹಚ್ಚುತ್ತಿವೆಯೆ? ಇದು ಸಿನಿಕತನದಂತೆ ಕಾಣಬಹುದು. ಆದರೆ, ಇಂಥಾ ದಿನಾಚರಣೆ ಮತ್ತು ಕಾರ್ಯಕ್ರಮಗಳ ಜಾತಕ ಮತ್ತು ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ, ಇದುವೇ ಕಹಿಯಾದ ವಾಸ್ತವ. ಅಧಿಕೃತ ಅಂಕಿ ಅಂಶಗಳ ಪ್ರಕಾರವೇ 130 ಕೋಟಿ ಜನರು, ಅಂದರೆ, ಹೆಚ್ಚು ಕಡಿಮೆ ಭಾರತದ ಜನಸಂಖ್ಯೆಯಷ್ಟೇ ಜನರು ಬಡತನದಿಂದ ಬಳಲುತ್ತಿದ್ದಾರೆ ಎಂಬುದೇ ಈ ವಾಸ್ತವ. ಯಾಕೆಂದರೆ, “ಕಡುಬಡತನ” ನಿವಾರಣಾ ದಿನಕ್ಕೆ 35 ವರ್ಷಗಳಾದವು. ಈಗ ಆಚರಿಸಲಾಗುತ್ತಿರುವ ದಿನಕ್ಕೆ 30 ವರ್ಷಗಳು. ಒಂದು ಬಡ ಮಗುವು ಯವ್ವನಾವಸ್ಥೆ ತಲಪುವಷ್ಟು ಸಮಯವಿದು.

ಬಡತನ ಎಂದರೆ ಹಸಿವು ಮಾತ್ರವಲ್ಲ…

ಹಾಗಾದರೆ, ಬಡತನ ಎಂದರೇನು? ಬಡತನವೆಂದರೆ ಬರೇ ಹಸಿವು ಮಾತ್ರವೆ? ಬಡತನದ ಮತ್ತದರ ಎಲ್ಲಾ ಆಯಾಮಗಳ ಅತ್ಯುತ್ತಮ ವಿವರಣೆಯು ಮೇಲೆ ಉಲ್ಲೇಖಿಸಿದ ಎರಡು ದಿನಾಚರಣೆಗಳು ಆರಂಭವಾಗುವುದಕ್ಕೆ ದಶಕಗಳ ಮೊದಲು, ನಿಖರವಾಗಿ 1978 ರಲ್ಲಿ ದೇವನೂರ ಮಹಾದೇವರು ಬರೆದ “ಒಡಲಾಳ” ಎಂಬ ಪುಟ್ಟ ಕಾದಂಬರಿಯಲ್ಲಿದೆ. ಅದು ಮುದುಕಿ, ಮನೆ ಯಜಮಾನಿ ಸಾಕವ್ವನ ಪ್ರೀತಿ, ಸಿಡುಕು, ಸ್ವಾರ್ಥ, ಹಳಹಳಿಕೆಯಲ್ಲಿದೆ. ಅದು ಅವಳ ಕುಸಿಯಲಿರುವ “ತೊಟ್ಟಿ ಮನೆ” ಎಂಬ ಹಟ್ಟಿ, ಮಳೆಯಿಲ್ಲದೇ ಪಾಳು ಬಿದ್ದ ಅವಳ ಹೊಲ, ಮನೆಯಲ್ಲಿ ನೇಣು ಹಾಕಿಕೊಂಡಿರುವ ಹಳೆಯ ಕಾಲದ ನೂಲುವ ರಾಟೆ, ಮದುವೆಯಾದರೂ ತವರು ಮನೆಗೆ ಮಕ್ಕಳೊಂದಿಗೆ ಬಂದು ಕುಂತಿರುವ ಗೌರಮ್ಮನ ಜೀವನದಲ್ಲಿದೆ. ಅದು ಅವಳ ಕೂಸು, ಮೂಲೆ ಹಿಡಿದಿರುವ “ದುಪ್ಟಿ ಕಮೀಸನರು” ತರ ಅಸಹಾಯಕವಾಗಿದೆ. ಅದು, ಕಾಳಣ್ಣ ಕದ್ದ ಕಡಲೆ ಬೀಜಗಳನ್ನು ಒಂದೂ ಕಾಳೂ ಬಿಡದೆ ತಿಂದು, ಟೀ ನೀರು ಕುಡಿದ ಭಯಾನಕ ಹಸಿವಿನಲ್ಲಿದೆ ಮತ್ತು ಹಿಟ್ಟಿಲ್ಲದ ಈ ಮನೆ ಬಾಗಿಲಿಗೂ ತಡರಾತ್ರಿ ಬಂದು ಒಲೆಯಲ್ಲಿ ನೀರಿಟ್ಟು ಅಳುತ್ತಿರುವ ಕೂಸಿಗಾಗಿ “ಅರೆ ಪಾವು ಹಸಿಟ್ಟು ಕೊಡವ್ವ” ಎಂದು ಅಂಗಲಾಚುವ ನೆರೆಮನೆ ತಾಯಿಯ ನೋವಿನಲ್ಲಿದೆ. ಶಿವುವಿನ ಓದಿಗೆ ಎಣ್ಣೆ ಇಲ್ಲದ ಬೆಳಕಿನ ಸೊಳ್ಳಿನಲ್ಲಿದೆ. ಎತ್ತಪ್ಪನವರ ಹಟ್ಟಿಯ ಗೋವುಗಳ ಸಮೃದ್ಧಿಯಲ್ಲಿದೆ. “ಅದ್ರಾಗ ಒಂದೆಮ್ಮೆ ಸಾಯಬಾರ್ದಾ” ಎಂಬ ಆಸೆಯಲ್ಲಿದೆ. “ಅಲ್ಲೊಂದು ಇಲ್ಲೊಂದು ಹೊಗೆಯಾಡುವ ಮನೆಗಳ ಹಿಟ್ಟಿನ ಮಡಕೆಗಳಲ್ಲಿವೆ”. ಅದು ಸಾಕವ್ವನ ಚಂದಗಾಣವಾಗಿ ಮನೆ ಬಿಟ್ಟ “ನನ್ನುಂಜ” ವನ್ನು ಹುಡುಕುವ ನೆಪದಲ್ಲಿ ಜತೆಗಾರ ಹುಂಜವನ್ನೂ ಜೀಪಿನಲ್ಲಿ ಎತ್ತೊಯ್ಯುವ ಪೊಲೀಸರ, ವ್ಯವಸ್ಥೆಯ ಭ್ರಷ್ಟತೆ, ಲಾಠಿ-ಕೋವಿ-ಜೈಲುಗಳ ಭಯದಲ್ಲಿದೆ. ಅದಕ್ಕಿಂತಲೂ ಹೆಚ್ಚಾಗಿ, ಶಿವುವಿನ ಬೆರಗು, ಗುರುಸಿದ್ದುವಿನ ಹೊಳೆಯುವ ವಾಚು, ಪುಟ್ಟಗೌರಿಯ ಕನಸಿನ “ಕಾಲಿನಿಂದ ತಲೆಗೆ ಬರೆದ” ನವಿಲಲ್ಲಿದೆ. ಅದು ಬಲಪಂಥೀಯ ಪ್ರಧಾನಿ ನರೇಂದ್ರ ಮೋದಿ ಫೋಟೋಶೂಟಿಗಾಗಿ ಸಾಕುವ ನವಿಲಲ್ಲಿ ಇಲ್ಲ. ಚೀತಾದಲ್ಲೂ ಇಲ್ಲ. ಮಾತೆಯಾಗಿಬಿಟ್ಟ ಗೋವಿನಲ್ಲಂತೂ ಇಲ್ಲವೇ ಇಲ್ಲ.

ಬಡವರ “ಮಹಾ ಭಾರತ”ವನ್ನೇ ಕಣ್ಣ ಮುಂದೆ ಇಡುವ ದೇವನೂರರ “ಒಡಲಾಳ”ವನ್ನು ಸಾಹಿತ್ಯವಾಗಿ ಮಾತ್ರವಲ್ಲ; ಬಡತನದ ಅರ್ಥಶಾಸ್ತ್ರವಾಗಿ, ನಿರ್ಜೀವ ಅಂಕಿ ಅಂಶಗಳ ಮಾಯಾಜಾಲದಲ್ಲೇ ತೊಳಲಾಡುವ, ತೊಳಲಾಡಿಸುವ, ಕನಸು ಬಿತ್ತಿ, ಓಟಿನ ಬೆಳೆ ತೆಗೆಯುವ ನಮ್ಮ ಆರ್ಥಿಕ ತಜ್ಞರ, ರಾಜಕಾರಣಿಗಳ ಪಠ್ಯವಾಗಿಸಬೇಕು. ವಿಶ್ವಸಂಸ್ಥೆಯ, (ಕೆಲವರ ಕ್ಷಮೆಕೋರಿ) ಭಾರೀ ಸಂಬಳ ಪಡೆಯುವ ವೃತ್ತಿಪರ ಸಮಾಜಸೇವಕರಿಗೂ ಇದು ಪಠ್ಯವಾಗಬೇಕು. ಯಾಕೆಂದರೆ, ಹಸಿವಿನ ಅನುಭವವಿಲ್ಲದ ಅರ್ಥಶಾಸ್ತ್ರ ಒಂದು ಆಳ-ಅಗಲ ಇರುವ ಮಾಯಾಜಾಲ. ಇಲ್ಲಿ ನಾನು ನಿರ್ಜೀವ ಅಂಕಿ ಅಂಶಗಳ ಬಗ್ಗೆ ಹೆಚ್ಚಿನ ಗಮನಕೊಡುತ್ತಿಲ್ಲ. ಆದರೂ, ಗಾಳಿಯಲ್ಲಿ ಬರೆದಂತಾಗಬಾರದು ಎಂಬ ಕಾರಣದಿಂದಾಗಿ ಮಾತ್ರವೇ, ವಿಶ್ವಸಂಸ್ಥೆಯೇ ನೀಡಿರುವ ಕೆಲವೇ ಅಂಕಿ ಅಂಶಗಳನ್ನು ಇಲ್ಲಿ ಉಲ್ಲೇಖಿಸುತ್ತೇನೆ.

ಅಂಕಿ ಅಂಶಗಳು ಹೇಳುತ್ತವೆ…

ಕೋವಿಡ್ ಪಿಡುಗು 14.3 ಕೋಟಿಯಿಂದ 16.3 ಕೋಟಿ ಜನರನ್ನು ಬಡತನದತ್ತ ತಳ್ಳಿರುವ ಸಾಧ್ಯತೆ ಇದೆ. ಈ “ಅಂದಾಜಿನ” ನಿಖರತೆಯನ್ನು ಎರಡು ಕೋಟಿ ಜನರ-ನೆನಪಿಡಿ, ಸಂಖ್ಯೆಗಳ ವ್ಯತ್ಯಾಸದಿಂದಲೇ ಗುರುತಿಸಬಹುದು. ನಮ್ಮಲ್ಲೇ “ನಮ್ಮ ಮೋದಿ” ಮಧ್ಯರಾತ್ರಿಯ ಅನಾಣ್ಯೀಕರಣ ಮತ್ತು ಲಾಕ್‌ಡೌನ್‌ಗಳಿಂದ ಹೊಸಕಿ ಹಾಕಿದ ಜೀವನಗಳೆಷ್ಟು? ಯಾವ ಲೆಕ್ಕವಿದೆ? ಈ ಪಿಡುಗಿನ ಮೇಲೆ, ಎಲ್ಲಾ ಸರಕಾರಗಳಂತೆಯೇ ಎಲ್ಲಾ ಭಾರ ಹೊರಿಸಿರುವ ವಿಶ್ವಸಂಸ್ಥೆಯೇ 2020ರಲ್ಲಿ ಬಡತನ 8.1 ಶೇಕಡಾ ಹೆಚ್ಚಾಯಿತು ಎಂದು ಹೇಳುತ್ತದೆ. ಅದು ತಿಣುಕಿ ತೀಡಿ ಎರಡು ವರ್ಷಗಳ ಹಿಂದಿನ ಅಂಕಿಅಂಶಗಳನ್ನಷ್ಟೇ ನೀಡುತ್ತದೆ. ಅಂತರರಾಷ್ಟ್ರೀಯ ಬಡತನದ ರೇಖೆ, ರಾಷ್ಟ್ರೀಯ ಬಡತನ ರೇಖೆ ಎಂಬ ಯಾರೂ ಘನತೆಯಿಂದ ಬದುಕಲಾಗದ ಮಾನದಂಡವನ್ನು ಮೇಲೆ ಕೆಳಗೆ ಮಾಡಿ, ಬಡವರ ಸಂಖ್ಯೆಯನ್ನು ಹೆಚ್ಚು ಕಡಿಮೆ ಮಾಡುವ ದೇವನೂರರು ಹೇಳುವ ಮಾಯಾವಿಗಳಿವರು. ಮುಖ್ಯವಾಗಿ ಆಫ್ರಿಕಾ, ಯುದ್ಧಗ್ರಸ್ತ ದೇಶಗಳಲ್ಲಿ ಬಡವರ ಸಂಖ್ಯೆ 2015ರ ನಂತರ ಈಗ ದ್ವಿಗುಣಗೊಂಡಿದೆ ಎಂದ ವಿಶ್ವಸಂಸ್ಥೆಯೇ ಯಾವ ಆಶಾವಾದ ಇಟ್ಟುಕೊಂಡು, ಹಸಿದ ಹೊಟ್ಟೆಗೆ ಕನಸು ಬಡಿಸುತ್ತಿದೆ? ಸಿರಿಯಾ ಸಹಿತ ನೂರಾರು ಅಂತರ್ಯುದ್ಧಗಳಿಂದ, ಉಕ್ರೇನ್ ಮೇಲೆ ರಷ್ಯಾ ನಡೆಸಿದಂತ ಯುದ್ಧಗಳಿಂದ ನಿರಾಶ್ರಿತರು ಮತ್ತು ಬಡತನ ಹೆಚ್ಚಾಗಿದೆ ಎಂದು ವಿಶ್ವಸಂಸ್ಥೆ ಹೇಳುತ್ತಿದೆ. ಈ ಹಲ್ಲಿಲ್ಲದ ಹುಲಿಯು ಸಂಪನ್ಮೂಲ ಇರುವ, ಪ್ರಜಾಪ್ರಭುತ್ವದ ಧ್ವಜಧಾರಿ ಬಂಡವಾಳಶಾಹಿ ದೇಶಗಳು ಮತ್ತು ಸಮೃದ್ಧ ರಾಜಾಡಳಿತಗಳು ಅಂತರ್ಯುದ್ಧಗಳನ್ನು ಪ್ರಚೋದಿಸಿ, ಹಣ ಶಸ್ತ್ರಾಸ್ತ್ರ ನೀಡಿ ಪ್ರೋತ್ಸಾಹಿಸುವ ಈ ಯುದ್ಧಗಳನ್ನು ನಿಲ್ಲಿಸಲು ತಾಕತ್ತಿಲ್ಲದ ಈ ವಿಶ್ವಸಂಸ್ಥೆಯು ಯಾರ ಮುಂಗೈಗೆ ಬೆಲ್ಲ ಮುಟ್ಟಿಸುತ್ತಿದೆ?

ಈ ಅಂಕಿ ಆಂಶಗಳ ಸಂಗ್ರಹವಾದರೂ ಹೇಗೆ? ವಿಶ್ವಾಸಕ್ಕೆ ಅರ್ಹವಲ್ಲದ ಕೊಳೆತ ಸರಕಾರಿ ಅಂಕಿ ಅಂಶಗಳ‌ ಸಂಗ್ರಹವೇ ಇದು. ಹಸಿವಿನಿಂದ ಬಳಲುತ್ತಿರುವವರ, ಮನೆ ಇಲ್ಲದವರ, ಅಪೌಷ್ಟಿಕತೆಯಿಂದ ನರಳುತ್ತಿರುವವರ, ಕೆಲಸ ಇಲ್ಲದವರ, ಅವಕಾಶ ವಂಚಿತರ; ಶಿಶು, ಗರ್ಭಿಣಿ, ಬಾಣಂತಿಯರಾಗಿರುವಾಗ ಸತ್ತವರ, ಅತ್ಯಾಚಾರ, ಕೊಲೆ, ದೌರ್ಜನ್ಯಕ್ಕೆ ಒಳಗಾದವರ ಅಂಕಿಅಂಶಗಳೂ ನೇರವಾಗಿ ಬಡತನಕ್ಕೆ ಸಂಬಂಧಿಸಿದವುಗಳೇ ಆಗಿವೆ. ಭಾರತದಂಥ “ವಿಶ್ವಗುರು” ದೇಶದಲ್ಲಿಯೇ, ಸಂಖ್ಯಾಶಾಸ್ತ್ರಕ್ಕೊಂದು ಸಚಿವಾಲಯ ಮತ್ತು ನಾಲಾಯಕ್ ಮಂತ್ರಿ ಇರುವ ಭಾರತದಲ್ಲಿಯೇ ಸುಳ್ಳುಗಳನ್ನು ಹೊಲಿಯುವ ನಿರ್ಮಲಾ ಸೀತಾರಾಮನ್ ಅಂಥಾ ಕಳಪೆ ದರ್ಜಿಗಳ ಅಂಕಿ ಅಂಶಗಳ ಮಾಯೆ ಮಾತ್ರವೇ ಸಿಗುವಾಗ ಈ ಅಂಕಿ ಅಂಶಗಳನ್ನು ನಂಬಲು ಹೇಗೆ ಸಾಧ್ಯ?

ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಏರುತ್ತಿದೆ…

ಇಡೀ ಪ್ರಪಂಚದಲ್ಲಿ ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಏರುತ್ತಿದೆ. ಬೆರಳೆಣಿಕೆ ಜನರು ಮಾತ್ರವೇ ತ್ವರಿತವಾಗಿ ಮೇಲಕ್ಕೆ ಏರಿದರೆ, ಬಹುಸಂಖ್ಯಾತರು ಅದೇ ವೇಗದಲ್ಲಿ ಬಡತನದತ್ತ ಜಾರುತ್ತಿದ್ದಾರೆ. ಇದನ್ನು ನೇರವಾಗಿ ಭಾರತದಲ್ಲಿ ಕಾಣಬಹುದು. ಬಡವರು ತಮ್ಮ ಸ್ವಂತ ಹಣ ತೆಗೆಯಲು ತೆರಿಗೆ ಕಕ್ಕುತ್ತಿರುವಾಗ, ತೆರಿಗೆಗಳ್ಳ ಶ್ರೀಮಂತರಿಗೆ ವಿನಾಯಿತಿಗಳನ್ನು, ಇನ್ನಷ್ಟು ಸಾಲಗಳನ್ನು ನೀಡಲಾಗುತ್ತಿದೆ. ಸಾಲ ತೆಗೆದು ಕಟ್ಟಲಾಗದ ರೈತಾದಿಗಳ ಆಸ್ತಿ ಹರಾಜಾಗುತ್ತಿರುವವರ ಪುಟಗಟ್ಟಲೆ ಜಾಹೀರಾತು ನೋಡುತ್ತಿರುವ ಹೊತ್ತಿನಲ್ಲಿ, ದೇಶಭಕ್ತ ಶ್ರೀಮಂತರ ಸಾಲ ಮನ್ನಾ, ಪರಾರಿ ಸುದ್ದಿಗಳನ್ನೂ ಕೇಳುತ್ತೇವೆ. ಎಲ್ಲಾ ಕಡೆ ಸರ್ವಾಧಿಕಾರ, ಬಲಪಂಥೀಯ ಸರಕಾರಗಳು ಗೊತ್ತೇ ಆಗದಂತೆ ಬರುತ್ತಿವೆ. ನವೋತ್ತರ ಬಂಡವಾಳವಾದ, ಬೌದ್ಧಿಕ ವಸಾಹತುಶಾಹಿ ಬಂದಾಗಿದೆ. ಕತ್ತಿಯಿಂದಲ್ಲ, ಕೂದಲಿನಿಂದ ಬೆಣ್ಣೆ ಕೊಯ್ದಂತೆ ಕತ್ತು ಕುಯ್ಯುತ್ತಾರೆ.

ಬಲಪಂಥೀಯರು ಎಂದರೆ ಯಾರು?

ಈ ಬಲಪಂಥೀಯರು ಎಂದರೆ ಯಾರು? ಬರೇ ಮತಾಂಧರು ಮಾತ್ರವೇ ಅಲ್ಲ. ಹಸಿದ, ವಂಚಿತ ಜನರಿಗೆ ಪಡಿತರ ಅಕ್ಕಿ ಬಿಡಿ, ಮಕ್ಕಳಿಗೆ ಮಧ್ಯಾಹ್ನದ ಊಟ, ಮೊಟ್ಟೆ ಕೊಡುವುದನ್ನೂ ವಿರೋಧಿಸುವ ಶೋಷಕ ಮತ್ತವರ ಗುಲಾಮಿ, ಅಜ್ಞಾನಿ ಬಾಲಬಡುಕ ವರ್ಗವೇ ಬಲಪಂಥೀಯರು. ನಾವಿಂದು ಮೀಸಲಾತಿ, ಉಚಿತ ಕೊಡುಗೆಗಳ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ. ಉಚಿತ ಕೊಡುಗೆ ಎಂಬುದಿಲ್ಲ. ಅದು ನಿಮ್ಮ ಸಂಪತ್ತು ದೋಚಿದವರು, ಇರಲಿ ಬಿಡು ಎಂದು ಕಿಂಚಿತ್ತನ್ನು ಕನಿಕರದಿಂದ ನಿಮಗೆ ಬಿಟ್ಟುಹೋದ ಅಥವಾ ಕೊಟ್ಟುಹೋದ ಭಿಕ್ಷೆಯೂ ಅಲ್ಲ. ಕುಂ. ವೀರಭದ್ರಪ್ಪರ “ಕತ್ತಲನು ತ್ರಿಶೂಲ ಹಿಡಿದ ಕತೆ” ಯಂತೆ ಕತ್ತಲನು ಹಸಿದು, ಕೆರಳಿ ತ್ರಿಶೂಲ ಹಿಡಿಯದಿರಲಿ ಎಂದು ಮಾಡಿರುವ ಉಪಾಯವಷ್ಟೇ. ಅದನ್ನೂ ವಿರೋಧಿಸುವ ಮೂರು ಪರ್ಸೆಂಟ್ ಮೂರ್ಖರು ಮುಂದೆ ಕತ್ತಲನ ಹಸಿದ ತ್ರಿಶೂಲ ಎದುರಿಸಬೇಕಾಗುತ್ತದೆ.

ಮಾಯಾಜಾಲದ ಆರ್ಥಿಕತೆಯಲ್ಲಿ ಬೆಳೆಯುತ್ತಿರುವ ಆರ್ಥಿಕತೆ, ಟ್ರಿಲಿಯನ್ ಡಾಲರ್ ಇಕಾನಮಿ, ಬೆಳೆಯುತ್ತಿರುವ ಜಿಡಿಪಿ ಇವೆಲ್ಲವೂ ನಿಮ್ಮನ್ನು ಇನ್ನಷ್ಟು ಬಡವರನ್ನಾಗಿ ಮಾಡಿ, ಅದಾನಿ, ಅಂಬಾನಿಯಂತವರನ್ನು ಇನ್ನಷ್ಟು ಕೊಬ್ಬಿಸುವುದನ್ನು, ಸರಕಾರದ ಅಂದರೆ, ನಿಮ್ಮ ಆಸ್ತಿಯನ್ನು ಅವರಿಗೆ ಮೂರುಕಾಸಿಗೆ ಮಾರುವುದನ್ನು ಮರೆಸುವ ಕಣ್ಕಟ್ಟು. ಕೋಮುವಾದ ಅವುಗಳಲ್ಲಿ ಒಂದು.

ಬಡತನದ ಹಂಚಿಕೆ..

ಕೊನೆಗೊಂದು ಮಾತು. ಪ್ರಭುತ್ವ ಹೇಳುವ ಪ್ರಗತಿಗೂ ಬಡತನಕ್ಕೂ ಯಾವ ಸಂಬಂಧವೂ ಇಲ್ಲ. ಯುಎಸ್‌ಎ‌ಯಂಥ ಮತ್ತು ಸಿರಿವಂತ ತೈಲ ದೇಶಗಳಲ್ಲೂ ಬೀದಿಪಾಲು ಭಿಕ್ಷುಕ ಬಡವರಿದ್ದಾರೆ. ಬಡತನದ ಮೂಲ ಇರುವುದು ಸಂಪತ್ತಿನ, ಸಂಪನ್ಮೂಲಗಳ ಅಸಮಾನ ಹಂಚಿಕೆ ಮತ್ತು ಅನ್ಯಾಯದ ದೋಚುವಿಕೆ ಮತ್ತು ಒಡೆತನದಲ್ಲಿಯೇ. ಸಾಮಾಜಿಕ, ಸಾಂಸ್ಕೃತಿಕವಾದ ತಾರತಮ್ಯದಿಂದ ಕೂಡಿದ ಬಡತನ ಹಂಚಿಕೆಯನ್ನು ನಾವು ಗಮನಿಸಬೇಕು. ಬಿಳಿಯರಲ್ಲಿ ಬಡವರಿದ್ದಾರೆ. ಆದರೆ, ಕರಿಯರಲ್ಲಿ ಆತ್ಯಂತ ಹೆಚ್ಚು. ಭಾರತದಲ್ಲಿ ಮೇಲ್ಜಾತಿಯಲ್ಲಿ ಅಪರೂಪಕ್ಕೆ ಬಡವರಿದ್ದಾರೆ. ಆದರೆ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳಲ್ಲೇ ಬಡವರು ಹೆಚ್ಚಾಗಿರುವುದು, ದಲಿತರಲ್ಲಿ ಬಹುತೇಕ ಎಲ್ಲರೂ ಬಡವರಾಗಿರುವುದು ಬರೇ ಕಾಕತಾಳೀಯವಲ್ಲ. ಆದು ನಿರಂತರ ಶೋಷಣೆಯ ಫಲ. ಆ ಕುರಿತಂತೆ ಯಾವುದೇ ಚಿಂತನೆ ಮಾಡದೆ, ಉಳಿದೆಲ್ಲಾ ದಿನಾಚರಣೆಗಳು, ಸಂಕಲ್ಪಗಳು, ಕಾರ್ಯಕ್ರಮಗಳು ಬರೇ ಮೋಸದ ಕಣ್ಕಟ್ಟು ಎಂದೇ ಹೇಳಬೇಕಾಗುತ್ತದೆ.

ಈ ವಿಷಯದ ಆಳ-ಆಗಲದ ಕಾರಣದಿಂದಲೇ ಇದನ್ನು ಒಂದು ಲೇಖನದ ಮಿತಿಯಲ್ಲಿ ವಿವರಿಸುವುದು ಕಷ್ಟ. ಜಾಗತಿಕವಾಗಿ ಮತ್ತು ದೇಶೀಯವಾಗಿ, ಮೇಲೆ ಹೇಳಿದ ಈ ಆಯಾಮಗಳ ಕುರಿತಾಗಿಯೇ ಮುಂದೆ ಅಂಕಿ ಅಂಶಗಳ ಆಧಾರದಲ್ಲಿಯೇ, ಇದೇ “ಪೀಪಲ್” ವೇದಿಕೆಯಲ್ಲಿ ಲೇಖನಗಳನ್ನು ಬರೆಯಲಿದ್ದೇನೆ. ಯಾಕೆಂದರೆ, ನಿರ್ಜೀವ ಅಂಕಿ ಅಂಶಗಳೂ ಮಾನವೀಯ ಕಾಳಜಿಯೊಂದಿಗೆ ಅಕ್ಕಪಕ್ಕದಲ್ಲಿ ಇಟ್ಟು ನೋಡಿದಾಗ ಜೀವ ತಳೆದು, ಹೊಸ ಒಳನೋಟಗಳನ್ನು ನೀಡಬಲ್ಲವು.

ನಿಖಿಲ್ ಕೋಲ್ಪೆ
ಹಿರಿಯ ಪತ್ರಕರ್ತರು, ವೃತ್ತಿಪರ ಅನುವಾದಕರು.


Related Articles

ಇತ್ತೀಚಿನ ಸುದ್ದಿಗಳು