Friday, June 14, 2024

ಸತ್ಯ | ನ್ಯಾಯ |ಧರ್ಮ

ಸುಳ್ಳು ಪ್ರಕರಣ ದಾಖಲಿಸಿ ನನ್ನನ್ನು ಬಂಧಿಸಲು ಮುಂದಾಗಿದ್ದಾರೆ: ಮನೀಶ್ ಸಿಸೋಡಿಯಾ

ನವದೆಹಲಿ: ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಸೋಮವಾರ ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಪ್ರಶ್ನಿಸುವ ಮುನ್ನವೇ ʼನನ್ನನ್ನು ಸುಳ್ಳು ಪ್ರಕರಣಗಳಲ್ಲಿ ಬಂಧಿಸಲಾಗಿದೆʼ ಎಂದು ಆರೋಪಿಸಿದ್ದಾರೆ.

ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಭಾನುವಾರ ಮನೀಶ್ ಸಿಸೋಡಿಯಾ ಅವರನ್ನು ವಿಚಾರಣೆಗೆ ಕರೆಸಿತ್ತು, ಆದರೆ ವಿಚಾರಣೆಯನ್ನು ಮುಂದೂಡಿ ಅಕ್ಟೋಬರ್ 16, ಸೋಮವಾರ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಬರುವಂತೆ ತಿಳಿಸಿತ್ತು.

ಈ ಕುರಿತು ಟ್ವಿಟರ್‌ನಲ್ಲಿ ಹೇಳಿಕೆ ನೀಡಿರುವ ಮನೀಶ್ ಸಿಸೋಡಿಯಾ ಅವರು, ನನ್ನ ವಿರುದ್ಧ ಸಂಪೂರ್ಣ ನಕಲಿ ಪ್ರಕರಣ ದಾಖಲಿಸಿ ಬಂಧಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಚುನಾವಣಾ ಪ್ರಚಾರಕ್ಕಾಗಿ ನಾನು ಗುಜರಾತ್‌ಗೆ ಹೋಗಬೇಕಿತ್ತು. ಈ ಜನರು ಗುಜರಾತ್ ಅನ್ನು ಹೀನಾಯವಾಗಿ ಕಳೆದುಕೊಳ್ಳುತ್ತಿದ್ದಾರೆ. ನಾನು ಗುಜರಾತ್ ಚುನಾವಣಾ ಪ್ರಚಾರಕ್ಕೆ ಹೋಗದಂತೆ ತಡೆಯುವುದು ಅವರ ಉದ್ದೇಶವಾಗಿದೆ ಎಂದು ಆರೋಪಿಸಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ, ಸಿಸೋಡಿಯಾ ಅವರು, ʼನಾನು ಗುಜರಾತ್‌ಗೆ ಹೋದಾಗ, ಅಲ್ಲಿನ ಜನರಿಗೆ ದೆಹಲಿಯಂತಹ ಅದ್ಭುತ ಶಾಲೆಗಳನ್ನು ರಾಜ್ಯದಲ್ಲಿಯೂ ನಿರ್ಮಿಸುತ್ತೇವೆ ಎಂದು ಹೇಳಿದ್ದೆ. ಈ ವಿಚಾರ ಕೇಳಿ ಜನ ತುಂಬಾ ಖುಷಿಯಾಗಿದ್ದರು. ಆದರೆ ಈಗಿನ ಸರ್ಕಾರದಲ್ಲಿನ ನಾಯಕರುಗಳು ಗುಜರಾತ್‌ನಲ್ಲಿ ಉತ್ತಮ ಶಾಲೆಗಳನ್ನು ನಿರ್ಮಿಸಲು ಮತ್ತು ಅಲ್ಲಿನ ಜನರು ಪ್ರಗತಿ ಸಾಧಿಸಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.

ಸೋಮವಾರ ಸಿಬಿಐ ವಿಚಾರಣೆಗೆ ಮುನ್ನ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೂ ಕೂಡ ಮನೀಶ್ ಸಿಸೋಡಿಯಾ ವಿರುದ್ಧದ ಪ್ರಕರಣ ʼಸುಳ್ಳುʼ ಎಂದು ಹೇಳಿದ್ದಾರೆ.

ʼಮನೀಶ್ ಅವರ ಮನೆ ಸಿಬಿಐ ದಾಳಿ ನಡಸಿದಾಗ ಅವರ ಮನೆಯಲ್ಲಿ, ಬ್ಯಾಂಕ್ ಲಾಕರ್‌ನಲ್ಲಿ ಏನೂ ಪತ್ತೆಯಾಗಿಲ್ಲ. ಹೀಗಾಗಿ ಅವರ ಮೇಲಿನ ಪ್ರಕರಣ ಸಂಪೂರ್ಣ ಸುಳ್ಳು. ಚುನಾವಣಾ ಪ್ರಚಾರಕ್ಕಾಗಿ ಅವರು ಗುಜರಾತ್‌ಗೆ ಹೋಗಬೇಕಿತ್ತು. ಆದರೆ ಉದ್ದೇಶಪೂರ್ವಕವಾಗಿ ಚುನಾವಣಾ ಪ್ರಚಾರಮಾಡದಂತೆ ತಡೆಯಲು ಅವರನ್ನು ಬಂಧಿಸಲಾಗುತ್ತಿದೆ ಆದರೆ ಚುನಾವಣಾ ಪ್ರಚಾರ ನಿಲ್ಲಿಸುವುದಿಲ್ಲ. ಗುಜರಾತಿನ ಪ್ರತಿಯೊಬ್ಬ ವ್ಯಕ್ತಿಯೂ ಇಂದು ‘ಎಎಪಿ’ ಅನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಕೇಜ್ರಿವಾಲ್ ಇಂದು ಟ್ವೀಟ್ ಮಾಡಿದ್ದಾರೆ.

ಸೋಮವಾರ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯ ಅಬಕಾರಿ ನೀತಿ ಪ್ರಕರಣದಲ್ಲಿನ ವಿಚಾರಣೆಗಾಗಿ  ಮನೀಶ್ ಸಿಸೋಡಿಯಾ ಅವರಿಗೆ ಕೇಂದ್ರೀಯ ತನಿಖಾ ದಳ (ಸಿಬಿಐ) ನೀಡಿರುವ ಸಮನ್ಸ್ ಅನ್ನು ʼಸ್ವಾತಂತ್ರ್ಯಕ್ಕಾಗಿ ಎರಡನೇ ಹೋರಾಟʼ ಎಂದು ಕರೆದಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು