Friday, June 14, 2024

ಸತ್ಯ | ನ್ಯಾಯ |ಧರ್ಮ

ಆರು ರಾಜ್ಯ ಸರ್ಕಾರಗಳಿಗೆ ದೇವದಾಸಿ ಮಹಿಳೆಯರ ಬಗ್ಗೆ ವರದಿ ಕೇಳಿದ NHRC

ದೇವದಾಸಿ ಪದ್ಧತಿಯಂತಹ ಅನಿಷ್ಟ ಪದ್ಧತಿಯನ್ನು ತಡೆಯಲು ಕಾನೂನಿನ ಅಡಿಯಲ್ಲೇ ಈ ಹಿಂದೆ ವಿವಿಧ ಕಾನೂನುಗಳನ್ನು ಜಾರಿಗೊಳಿಸಲಾಗಿದೆ. ಆದರೆ ಅದು ಇನ್ನೂ ಸಹ ಚಾಲ್ತಿಯಲ್ಲಿ ಇರುವುದನ್ನು ಆಯೋಗ ಗಮನಿಸಿದೆ.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಮಾಧ್ಯಮಗಳ ತನಿಖಾ ವರದಿಗಳನ್ನು ಗಂಭೀರವಾಗಿ ಪರಿಗಣಿಸಿ ದೇವದಾಸಿ ಪದ್ಧತಿಯ ಬಗ್ಗೆ ಇನ್ನು 6 ವಾರಗಳಲ್ಲಿ ವರದಿ ಸಲ್ಲಿಸುವಂತೆ ದಕ್ಷಿಣ ಭಾರತದ 6 ರಾಜ್ಯಗಳ ಸರ್ಕಾರಗಳಿಗೆ ಸ್ವಯಂಪ್ರೇರಿತ ನೋಟಿಸ್ ಜಾರಿ ಮಾಡಿದೆ. ದಕ್ಷಿಣ ಭಾರತದ ವಿವಿಧ ದೇವಾಲಯಗಳಲ್ಲಿ ದೇವದಾಸಿ ಪದ್ಧತಿಯ ಹಾವಳಿಯ ಬಗ್ಗೆ ವಿವರವಾದ ಕ್ರಮ ಕೈಗೊಂಡ ವರದಿಗಾಗಿ ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ.

“ದೇವದಾಸಿ ಪದ್ಧತಿಯಂತಹ ಅನಿಷ್ಟ ಪದ್ಧತಿಯನ್ನು ತಡೆಯಲು ಕಾನೂನಿನ ಅಡಿಯಲ್ಲೇ ಈ ಹಿಂದೆ ವಿವಿಧ ಕಾನೂನುಗಳನ್ನು ಜಾರಿಗೊಳಿಸಲಾಗಿದೆ. ಆದರೆ ಅದು ಇನ್ನೂ ಸಹ ಚಾಲ್ತಿಯಲ್ಲಿ ಇರುವುದನ್ನು ಆಯೋಗ ಗಮನಿಸಿದೆ. ಆಡಿ ಕಲಿಯಬೇಕಾದ ಹಂತದಲ್ಲಿ ಪುಟ್ಟ ಮಕ್ಕಳಿಂದಲೇ ಹೆಣ್ಣು ಮಕ್ಕಳನ್ನು ದೇವದಾಸಿಯರನ್ನಾಗಿಸುವ ದುಷ್ಕೃತ್ಯವನ್ನು ಖಂಡಿಸುವಲ್ಲಿ ಸುಪ್ರೀಂ ಕೋರ್ಟ್ ಸಹ ಕಠಿಣ ನಿಲುವು ತೆಗೆದುಕೊಂಡಿದೆ” ಎಂದು ಆಯೋಗ ತಿಳಿಸಿದೆ..

“ಮಹಿಳೆಯರನ್ನು ಲೈಂಗಿಕ ಶೋಷಣೆ ಮತ್ತು ವೇಶ್ಯಾವಾಟಿಕೆಗೆ ಒಳಪಡಿಸುವ ಮೂಲಕ ಮಾಡುವ ಅನಿಷ್ಟ ಪದ್ಧತಿಯನ್ನು ವಿವರಿಸಿದ ಸುಪ್ರೀಂ ಕೋರ್ಟ್, ಇದು ಮಹಿಳೆಯರ ಜೀವನದ ಹಕ್ಕು, ಘನತೆ ಮತ್ತು ಸಮಾನತೆಯ ಉಲ್ಲಂಘನೆಯ ಗಂಭೀರ ಸಮಸ್ಯೆ ಎಂದು ಪರಿಗಣಿಸಿದೆ. ಬಲಿಪಶುಗಳಲ್ಲಿ ಹೆಚ್ಚಿನವರು ಬಡ ಕುಟುಂಬಗಳು ಮತ್ತು ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದವರು” ಎಂದು NHRC ಗಂಭೀರವಾಗಿ ಉಲ್ಲೇಖಿಸಿ ಹೇಳಲಾದ ಮಾಧ್ಯಮ ವರದಿಯಲ್ಲಿ ತಿಳಿಸಿದೆ.

”ಒಬ್ಬ ಹೆಣ್ಣುಮಗುವನ್ನು ದೇವದಾಸಿಯನ್ನಾಗಿ ಮಾಡುವ ಪ್ರಕ್ರಿಯೆಯಲ್ಲಿ ಆಕೆಯನ್ನು ಯಾವುದಾದರೂ ದೇವಸ್ಥಾನದ ದೇವರಿಗೆ ಮದುವೆ ಮಾಡಿಕೊಟ್ಟು ಆಕೆ ತನ್ನ ಉಳಿದ ಜೀವನವನ್ನು ಅರ್ಚಕ ಮತ್ತು ದೇವಸ್ಥಾನದ ನಿತ್ಯಕರ್ಮಗಳನ್ನು ನೋಡಿಕೊಳ್ಳುವುದರಲ್ಲೇ ಕಳೆಯುತ್ತಾಳೆ. ಹಿಂದೂ ಧರ್ಮದಲ್ಲಿ ಇಂದಿಗೂ ಈ ದುಷ್ಕೃತ್ಯ ದೇವರು ಮತ್ತು ಧರ್ಮದ ಹೆಸರಿನಲ್ಲಿ ನಡೆಯುತ್ತಿದೆ. ಈ ದುಷ್ಕೃತ್ಯದ ಬಲಿಪಶುಗಳಲ್ಲಿ ಹೆಚ್ಚಿನವರು ಲೈಂಗಿಕ ನಿಂದನೆಗೆ ಒಳಗಾಗುತ್ತಿದ್ದಾರೆ. ಅವರು ಪುರುಷರಿಂದ ಲೈಂಗಿಕವಾಗಿ ಶೋಷಣೆಗೆ ಒಳಗಾಗುತ್ತಾರೆ, ಗರ್ಭಿಣಿಯಾಗುತ್ತಾರೆ. ಆ ನಂತರದ ಅವರ ಮಕ್ಕಳ ಪರಿಸ್ಥಿತಿಯೂ ಇದೇ ಮಾದರಿಯಲ್ಲಿ ಮುಂದುವರೆಯುತ್ತಿದೆ” ಎಂದು ಶೋಷಣೆಗೊಳಗಾದ ದೇವದಾಸಿ ಮಹಿಳೆಯರ ಬಗ್ಗೆ ಉಲ್ಲೇಖಿಸಿ ಸುಪ್ರೀಂಕೋರ್ಟ್ ಹೇಳಿದೆ.

ಕರ್ನಾಟಕ ಮತ್ತು ಆಂಧ್ರಪ್ರದೇಶ ಸರ್ಕಾರಗಳು ಕ್ರಮವಾಗಿ 1982 ಮತ್ತು 1988 ರಲ್ಲಿ ಈ ವ್ಯವಸ್ಥೆಯನ್ನು ಕಾನೂನುಬಾಹಿರವೆಂದು ಘೋಷಿಸಿವೆ ಎಂದು ಸಮಿತಿ ಹೇಳಿದೆ. “ಆದಾಗ್ಯೂ, ವರದಿಯ ಪ್ರಕಾರ, ಕರ್ನಾಟಕವೊಂದರಲ್ಲೇ 70,000 ಕ್ಕೂ ಹೆಚ್ಚು ಮಹಿಳೆಯರು ದೇವದಾಸಿಯರಾಗಿ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ.” ನ್ಯಾಯಮೂರ್ತಿ ರಘುನಾಥ್ ರಾವ್ ಅವರ ಅಧ್ಯಕ್ಷತೆಯಲ್ಲಿ ರಚಿಸಲಾದ ಆಯೋಗವು “ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಒಟ್ಟಾರೆ 80,000 ದೇವದಾಸಿಯರಿದ್ದಾರೆ” ಎಂದು ಗಂಭೀರವಾಗಿ ಹೇಳಿದೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಮತ್ತು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಕಾರ್ಯದರ್ಶಿಗಳು ಮತ್ತು ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರ ಸೇರಿದಂತೆ ಒಟ್ಟು ದಕ್ಷಿಣ ಭಾರತದ 6 ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ NHRC ನೋಟಿಸ್ ಜಾರಿ ಮಾಡಿದೆ. ಇನ್ನು ಆರು ವಾರಗಳಲ್ಲಿ ವಿವರವಾದ ವರದಿಯನ್ನು ಸಲ್ಲಿಸುವಂತೆ ತಿಳಿಸಲಾಗಿದೆ. ಇದರ ಜೊತೆಗೆ ದೇವದಾಸಿ ಪದ್ಧತಿಯನ್ನು ತಡೆಗಟ್ಟಲು ಮತ್ತು ಮಹಿಳೆಯರಿಗೆ ಪುನರ್ವಸತಿ ಕಲ್ಪಿಸಲು ಅಧಿಕಾರಿಗಳು ಕೈಗೊಂಡಿರುವ ಅಥವಾ ಕೈಗೊಳ್ಳಲು ಉದ್ದೇಶಿಸಿರುವ ಕ್ರಮಗಳ ಮಾಹಿತಿಯನ್ನು ವರದಿಯಲ್ಲಿ ಸೇರಿಸಲು ಸರ್ಕಾರಗಳನ್ನು ಕೇಳಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು