Monday, June 17, 2024

ಸತ್ಯ | ನ್ಯಾಯ |ಧರ್ಮ

ಚುನಾವಣೆಗೂ ಮುನ್ನವೆ ರಾಜಕೀಯ ನಾಯಕರುಗಳ ʼಹೈ ಡ್ರಾಮʼ

ಬೆಂಗಳೂರು; 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಇವೆ. ಆದರೆ ಮುಂಬರುವ ಚುನಾವಣೆಯ ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ಏರಲು ಇಂದಿನಿಂದಲೇ ರಾಜಕೀಯ ನಾಯಕರುಗಳು ರೇಸ್ ನಡೆಸುತ್ತಿದ್ದಾರೆ.

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನು 10 ತಿಂಗಳುಗಳು ಬಾಕಿ ಇದ್ದು, ಅದರ ಸಲುವಾಗಿ ಈಗಾಗಲೇ ಕಾಂಗ್ರೆಸ್‌ ಪಕ್ಷದ ನಾಯಕರುಗಳಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಡುವೆ ಕಾದಾಟ ಶುರುವಾಗಿದೆ,
ಕಳೆದ ವಾರ ನಡೆದ ಒಕ್ಕಲಿಗರ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಾತನಾಡಿದ್ದು, ಎಸ್.ಎಂ. ಕೃಷ್ಣ ಬಳಿಕ ಒಕ್ಕಲಿಗರೊಬ್ಬರಿಗೆ ಸಿಎಂ ಆಗುವ ಅವಕಾಶವಿದೆ, ಹಾಗಾಗಿ ಒಕ್ಕಲಿಗ ಸಮಾಜ ಈ ಅವಕಾಶ ತಪ್ಪಿಸಿಕೊಳ್ಳಬಾರದು ಎಂದು ಹೇಳುವ ಮೂಲಕ ಒಕ್ಕಲಿಗ ಸಮಾಜದ ಬೆಂಬಲವನ್ನ ಚುನಾವಣೆಗೆ ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ.

ಅದೇ ರೀತಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯನವರೇ ಸಿಎಂ ಆಗಬೇಕು ಎಂಬುದು ಅವರ ಬೆಂಬಲಿಗರ ಅಭಿಪ್ರಾಯ.ಆಗಸ್ಟ್‌ 12ಕ್ಕೆ 75 ವರ್ಷಕ್ಕೆ ಕಾಲಿಡಲಿರುವ ಸಿದ್ದರಾಮಯ್ಯ ಅವರ ಜನುಮದಿನದ ಅಮೃತ ಮಹೋತ್ಸವವನ್ನು ಅವರ ಅಭಿಮಾನಿಗಳು ದಾವಣಗೆರೆಯಲ್ಲಿ ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಿದ್ದು, ಈ ಕಾರ್ಯಕ್ರಮಕ್ಕೆ ಲಕ್ಷಾಂತರ ಜನ ಸೇರುತಿದ್ದು ಇದರ ಮುಖ್ಯ ಉದ್ದೇಶವೇ ಸಿದ್ದರಾಮಯ್ಯನವರನ್ನು ಇನ್ನೊಮ್ಮೆ ಮುಖ್ಯಮಂತ್ರಿ ಮಾಡಬೇಕೆಂಬುದಾಗಿದೆ. ಹೀಗಾಗಿ ಚುನಾವಣೆಗೂ ಮನ್ನವೆ ಸಿದ್ದರಾಮಯ್ಯ ಮತ್ತುಡಿಕೆಶಿ ಅಭಿಮಾನಿಗಳ ನಡುವೆ ದಿನದಿಂದ ದಿನಕ್ಕೆ ಮಾತಿನ ಸಮರ ಹೆಚ್ಚಾಗುತ್ತಿದೆ.

ಹಾಗೆಯೇ 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಸಂಪೂರ್ಣ ಜನರ ಆರ್ಶೀವಾದದೊಂದಿಗೆ ಬಹುಮತದಿಂದ ಆಡಳಿತ ನಡೆಸುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವದ ಬಗ್ಗೆ ಬಿಜೆಪಿ ಟೀಕಿಸಿದ್ದುಇದು ಸಿದ್ದರಾಮೋತ್ಸವವಲ್ಲ, ಬಿದ್ದಿರುವ ಸಿದ್ದರಾಮಯ್ಯರನ್ನು ಮೇಲಕ್ಕೆತ್ತುವ ಉತ್ಸವ ಅಷ್ಟೇ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಯ್ಯ ವಿರುದ್ಧ ಬಿಜೆಪಿ ವ್ಯಂಗ್ಯದ ಟ್ವೀಟ್ ಮಾಡಿದೆ.

ಕಳೆದ ವಾರ ರಾಮನಗರದಲ್ಲಿ ಚಾಮುಂಡೇಶ್ವರಿ ಕರಗ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಜೆಡಿಎಸ್‌ ಮುಖಂಡ, ಮಾಜಿ ಮುಖ್ಯಮಂತ್ರಿ ಎಚ್‌.ಡಿ . ಕುಮಾರಸ್ವಾಮಿ, ನಾಡಿನಲ್ಲಿ ಬಹಳ ಜನ ಸಿಎಂ ಆಗಬೇಕೆಂದು ಆಸೆ ಪಟ್ಟಿದ್ದಾರೆ. ಆದರೆ ಅದರ ವಾಸ್ತವವೇ ಬೇರೆ ಇದೆ. ತಾಯಿ ಚಾಮುಂಡೇಶ್ವರಿ ಮತ್ತು ಜನರ ಆಶೀರ್ವಾದದಿಂದ ರಾಜ್ಯದಲ್ಲಿ ಮತ್ತೆ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲಿದೆ, ನಿಮ್ಮ ಆಶೀರ್ವಾದದಿಂದ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಬರುತ್ತೇನೆ ಎಂದಿದ್ದಾರೆ ಹೀಗೆ ದಿನದಿಂದ ದಿನಕ್ಕೆ ರಾಜಕೀಯ ನಾಯಕರುಗಳು ಮುಖ್ಯಮಂತ್ರಿ ಗಾದಿಯ ಮೇಲೆ ಕಣ್ಣಿಟ್ಟಿದ್ದು, ಮಗು ಹುಟ್ಟುವ ಮುನ್ನ ಕುಲಾಯಿ ಹೊಲೆಸುವ ಹಾಗೆ ಪರಿಸ್ಥಿತಿ ನಿರ್ಮಾಣವಾಗಿದೆ.

Related Articles

ಇತ್ತೀಚಿನ ಸುದ್ದಿಗಳು