Wednesday, June 19, 2024

ಸತ್ಯ | ನ್ಯಾಯ |ಧರ್ಮ

ಏರ್ಪೋರ್ಟ್ ಖಾಸಗೀಕರಣ ; ಕೇರಳ ಹೈಕೋರ್ಟ್ ನಿರ್ಧಾರ ಎತ್ತಿ ಹಿಡಿದ ಸು.ಕೋರ್ಟ್

ಕೇರಳದ ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಗೌತಮ್ ಅದಾನಿ ಒಡೆತನದ ಅದಾನಿ ಗ್ರೂಪ್ಸ್  ಸ್ವಾಧೀನಪಡಿಸಿಕೊಳ್ಳುವುದರ ವಿರುದ್ಧ ಕೇರಳ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಕಂಪನಿಯು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (AAI) ಯೊಂದಿಗೆ ಮಾಡಿಕೊಂಡ 50 ವರ್ಷಗಳ ಒಪ್ಪಂದದ ಕರಾರನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದು ಕೇರಳ ಸರ್ಕಾರದ ಅರ್ಜಿ ವಜಾಗೊಳಿಸಿದೆ.

ಗೌತಮ್ ಅದಾನಿ ಒಡೆತನದ ಖಾಸಗಿ ಘಟಕವು ಅಕ್ಟೋಬರ್ 2021 ರಿಂದ ಕಾರ್ಯನಿರ್ವಹಿಸುತ್ತಿದೆ ಎಂಬ ಅಂಶವನ್ನು ಪರಿಗಣಿಸಿ, ಕೇರಳ ಸರ್ಕಾರ ಸಲ್ಲಿಸಿದ್ದ ಪಿಟಿಷನ್ ಅರ್ಜಿಯನ್ನು ಪರಿಗಣಿಸಲು ಸಾಧ್ಯವಿಲ್ಲ. ಹೀಗಾಗಿ ಮೇಲ್ಮನವಿಯನ್ನು ವಜಾಗೊಳಿಸಲಾಗಿದೆ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ ಮತ್ತು ನ್ಯಾ.ಬೇಲಾ ಎಂ.ತ್ರಿವೇದಿ ಅವರಿದ್ದ ದ್ವಿಸದಸ್ಯ ಪೀಠವು ಅಕ್ಟೋಬರ್ 2020 ರ ಕೇರಳ ಹೈಕೋರ್ಟ್ ತೀರ್ಪಿನ ವಿರುದ್ಧ ರಾಜ್ಯದ ಮೇಲ್ಮನವಿಯನ್ನು ತಿರಸ್ಕರಿಸಿತು.

ಆದಾಗ್ಯೂ, ವಿಮಾನ ನಿಲ್ದಾಣವು ನೆಲೆಗೊಂಡಿರುವ ಭೂಮಿಯ ಮಾಲೀಕತ್ವದ ಪ್ರಶ್ನೆಯು ಮುಕ್ತವಾಗಿರುತ್ತದೆ ಎಂದು ನ್ಯಾಯಾಲಯವು ತನ್ನ ಸಂಕ್ಷಿಪ್ತ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ತಿರುವನಂತಪುರಂ ವಿಮಾನ ನಿಲ್ದಾಣದ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ರಾಜ್ಯ ಸರ್ಕಾರದ, ಕೇರಳ ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮಕ್ಕಿಂತ ಅದಾನಿ ಒಡೆತನದ ಖಾಸಗಿ ಸಂಸ್ಥೆಗೆ ಹೆಚ್ಚು ಆದ್ಯತೆ ನೀಡಿರುವ AAI ಕ್ರಮವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ತನ್ನ ಮೇಲ್ಮನವಿಯಲ್ಲಿ ಸಲ್ಲಿಸಿತ್ತು.

‘ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾದ ಈ ನಿರ್ಧಾರವು ಸಾರ್ವಜನಿಕ ಹಿತಾಸಕ್ತಿ ಅಡಿಯಲ್ಲಿ ಇಲ್ಲ. ಜೊತೆಗೆ ಅದಾನಿ ಒಡೆತನದ ಸಂಸ್ಥೆ ಕೂಡಾ ವಿಮಾನ ನಿಲ್ದಾಣಗಳ ನಿರ್ವಹಣೆಯಲ್ಲಿ ಅನುಭವವೇ ಹೊಂದಿಲ್ಲದ ಕಾರಣ 1994 ರ ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಆಕ್ಟ್‌ನ ನಿಬಂಧನೆಗಳ ಉಲ್ಲಂಘನೆಯಾಗಿದೆ ಮತ್ತು ಟೆಂಡರ್ ಪ್ರಕ್ರಿಯೆ ಸೇರಿದಂತೆ ಸಂಪೂರ್ಣ ಪ್ರಕ್ರಿಯೆಯು ದುರುಪಯೋಗವಾಗಿದೆ ಎಂದು ಕೇರಳ ಸರ್ಕಾರದ ಮೇಲ್ಮನವಿಯಲ್ಲಿ ಉಲ್ಲೇಖಿಸಲಾಗಿತ್ತು. ಜೊತೆಗೆ ಒಪ್ಪಂದದಲ್ಲಿ ತಿರುವನಂತಪುರಂ ವಿಮಾನ ನಿಲ್ದಾಣ ಇರುವ ಭೂಮಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಹಕ್ಕು ಸ್ವಾಮ್ಯದ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ಸೇರಿಸಲಾಗಿದೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ವಿಮಾನ ನಿಲ್ದಾಣವನ್ನು ಅದಾನಿ ಗ್ರೂಪ್‌ಗೆ ಹಸ್ತಾಂತರಿಸಲಾಯಿತು; ಕಂಪನಿಯು 2019 ರಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ AAI ಗೆ ಪಾವತಿಸಬೇಕಾದ ಪ್ರತಿ ಪ್ರಯಾಣಿಕರ ಶುಲ್ಕವಾಗಿ ರೂ.168 ರನ್ನು ಪಾವತಿಸಿ ಹರಾಜು ಪ್ರಕ್ರಿಯೆಯಲ್ಲಿ ಗೆದ್ದಿದೆ.

ಅಕ್ಟೋಬರ್ 2020 ರಲ್ಲಿ, ತಿರುವನಂತಪುರಂ ವಿಮಾನ ನಿಲ್ದಾಣವನ್ನು ಅದಾನಿಗೆ ಗುತ್ತಿಗೆ ನೀಡುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ರಾಜ್ಯದ ಆಕ್ಷೇಪಣೆಯನ್ನು ಕೇರಳ ಹೈಕೋರ್ಟ್ ತಿರಸ್ಕರಿಸಿತ್ತು.

ಜೊತೆಗೆ ಈ ಪ್ರಸ್ತಾವನೆ ಅರ್ಜಿಯಲ್ಲಿನ ಹಲವು ಷರತ್ತುಗಳನ್ನು ಖಾಸಗಿ ಸಂಸ್ಥೆಗಳಿಗೆ ತಕ್ಕಂತೆ ರೂಪಿಸಲಾಗಿದೆ ಎಂದು ಕೇರಳ ಸರ್ಕಾರ ಹೈಕೋರ್ಟ್ ಗೆ ಸಲ್ಲಿಸಿದ ತನ್ನ ಆಕ್ಷೇಪಣಾ ಅರ್ಜಿಯಲ್ಲಿ ತಿಳಿಸಿತ್ತು. ಆದರೆ ಟೆಂಡರ್ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಲಾಗಿದೆ ಎಂದು ಕೇಂದ್ರವು ಹೈಕೋರ್ಟ್‌ಗೆ ತಿಳಿಸಿತ್ತು. ಕೇಂದ್ರದ ಸಮರ್ಥನೆಗಳಿಂದ ತೃಪ್ತರಾದ ಹೈಕೋರ್ಟ್, AAI ಮತ್ತು ಅದಾನಿ ನಡುವಿನ ಒಪ್ಪಂದವನ್ನು ಸ್ಪಷ್ಟಪಡಿಸಿತ್ತು.

Related Articles

ಇತ್ತೀಚಿನ ಸುದ್ದಿಗಳು