Sunday, June 16, 2024

ಸತ್ಯ | ನ್ಯಾಯ |ಧರ್ಮ

ಸತೀಶಣ್ಣನ ಶವ ಪುರಾಣ

ಸ್ಮಶಾನ ಎಂದಾಕ್ಷಣ ಎದೆ ಝಲ್ಲೆನಿಸುವ ಪರಿಸ್ಥಿತಿಯಲ್ಲಿ, ಆರಾಮವಾಗಿ ಸ್ಮಶಾನದೊಳಗೊಂದು ಸುತ್ತು ಹೊಡೆದು ತನ್ನ ಅನುಭವಕ್ಕೆ  ದಕ್ಕಿದ್ದನ್ನು ಅಕ್ಷರ ರೂಪಕ್ಕೆ ಇಳಿಸಿದ್ದಾಳೆ ಪುತ್ತೂರಿನ ಪ್ರಥಮ ಬಿ.ಕಾಂ ವಿದ್ಯಾರ್ಥಿನಿ ವೈಷ್ಣವಿ ಜಿ.ಕೆ.

ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯ ಕೊನೆಯಲ್ಲಿರುವ ಹಿಂದೂ ರುದ್ರಭೂಮಿಯನ್ನು ಪ್ರವೇಶಿಸುವಾಗ ಸ್ವಾಗತ ಕೋರಲು ನಿಂತಿರುವುದು ಸೊಂಪಾಗಿ ಬೆಳೆದಿರುವ, ಶಿವನಿಗೆ ಪ್ರಿಯವಾದ ಎಕ್ಕದ ಹೂವಿನ ಗಿಡ. ನಂತರ ಕಣ್ಣಿದುರಿಗೆ ಕಾಣುವುದು ಹರಿಶ್ಚಂದ್ರ ಘಾಟ್ ಮತ್ತು ಅದರ ಮುಂದಿರುವ ಶ್ರೀಮಹಾಲಿಂಗೇಶ್ವರ ಹಾಗೂ ಸ್ಮಶಾನ ಕಾಳಿಯ ಮಂಟಪ. ನಂತರ ಕಣ್ಣೆದುರಿಗೆ ಸಣ್ಣ ಸಣ್ಣ ರೈಲು ಭೋಗಿಗಳಂತೆ ಇರುವ ಆಯತಾಕಾರದ ಕಬ್ಬಿಣದ ಪೆಟ್ಟಿಗೆ. ಅವುಗಳಲ್ಲಿ ಶವದಹನದ ಕ್ರಿಯೆ ನಡೆಯುತ್ತದೆ. ಇವೆಲ್ಲವುಗಳ ಉಸ್ತುವಾರಿ ಹೊತ್ತಿರುವವರು ಸತೀಶ್.

ಇವರು ಸತೀಶಣ್ಣ…

ಇಂದಿಗೂ ಹಿಂದೂ ಸಂಪ್ರದಾಯದ ಪ್ರಕಾರ ಶವ ದಹನ ಕ್ರಿಯೆ ಮಾಡುತ್ತಿರುವ ಸತೀಶಣ್ಣ ಮೂಲತ: ಚಿಕ್ಕ ಪುತ್ತೂರಿನ ನಿವಾಸಿ. ಇವರು ದಿವಂಗತ ಪಿ ವಿ ಭಾಸ್ಕರ ಇವರ ಮಗ. ವೃತ್ತಿಜೀವನದಲ್ಲಿ ಕೋರ್ಟಿನ ದಫೇದಾರರಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ ನಂತರ ಸ್ಮಶಾನ ಕಾರ್ಯಕ್ಕೆ ಮುಂದಾದರು. ಆಗಿನ ರೋಟರಿ ಕ್ಲಬ್ ನ ಅಧ್ಯಕ್ಷರಾಗಿದ್ದ ದರ್ಬೆ ವಾಮನ ಪೈ ಅವರ ಮುಂದಾಳತ್ವದಲ್ಲಿ ರುದ್ರಭೂಮಿಯು ನವೀಕರಣಗೊಂಡು ಒಂಬತ್ತು ವರ್ಷಗಳ ಕಾಲ ಪಿ ವಿ ಭಾಸ್ಕರರವರು ಶವದಹನದ ಕಾರ್ಯ ಮಾಡುತ್ತ ಬಂದರು. ನಂತರ ಅನಾರೋಗ್ಯದ ಕಾರಣದಿಂದ ಈ ಕಾರ್ಯವನ್ನು ನಾನು ಮಾಡುತ್ತೇನೆ ಎಂದು ಮುಂದೆ ಬಂದವರು ಸತೀಶಣ್ಣ. ಇವರು ಸುಮಾರು ಹದಿನೈದು ವರ್ಷಗಳಿಂದ ನಿರಂತರ ಶವದಹನದ ಕೆಲಸದಲ್ಲಿ ನಿರತರಾಗಿದ್ದಾರೆ.

ಸತೀಶಣ್ಣ

ಸತೀಶಣ್ಣ ಹೇಳುತ್ತಾರೆ…

ಶವಗಳು ಸಂಸ್ಕಾರಕ್ಕೆ ಬಂದಾಗ ಹಿಂದೂ ಸಂಪ್ರದಾಯದಂತೆ ದಹಿಸಲಾಗುತ್ತದೆ. ವೃತ್ತಿ ಬದುಕಿನಲ್ಲಿ ಸಾಮಾನ್ಯವಾಗಿ ದಿನಕ್ಕೆ ಸುಮಾರು ಏಳು ಹೆಣಗಳನ್ನು ಸುಡುವ ಅನಿವಾರ್ಯತೆ ಇವರಿಗೆ ಎದುರಾಗಿದೆ. ಅದಕ್ಕಿಂತ ಹೆಚ್ಚಾದುದೂ ಇದೆ ಎಂದು ಇವರು ಹೇಳುತ್ತಾರೆ. ದಹನ ಕ್ರಿಯೆಗೆ ಬೇಕಾಗುವ ಸಾಮಗ್ರಿಗಳು ಇವರಲ್ಲಿ ಲಭ್ಯವಿದ್ದು ಒಂದು ಶವಕ್ಕೆ ಸುಮಾರು ಮೂರೂವರೆ ಸಾವಿರ ರೂಪಾಯಿ ವೆಚ್ಚವಾಗುತ್ತಿದ್ದು ಇದನ್ನು ರುದ್ರಭೂಮಿಯನ್ನು ನಿಭಾಯಿಸುತ್ತಿರುವ ರೋಟರಿ ಕ್ಲಬ್ ನಿರ್ವಹಿಸುತ್ತದೆ ಎನ್ನುತ್ತಾರೆ.

ಸತೀಶಣ್ಣನ ಚಿತಾಭಸ್ಮ ವ್ಯಾಖ್ಯಾನ..

ʼರುದ್ರಭೂಮಿಗೆ ಆಧುನಿಕವಾಗಿ ಯಾವ ತಂತ್ರಜ್ಞಾನದ ಅಳವಡಿಕೆಯೂ ಆಗಿಲ್ಲ. ನಾನು ವಿದ್ಯುತ್ ತಂತ್ರಜ್ಞಾನದಿಂದ ಶವದಹನ ಮಾಡುವುದನ್ನು ವಿರೋಧಿಸುತ್ತೇನೆ. ಏಕೆಂದರೆ ಅದರಲ್ಲಿ ಶವವನ್ನು ಚಿತ್ರಹಿಂಸೆ ಮಾಡಿ ದಹಿಸಲಾಗುತ್ತದೆ ಮತ್ತು ಹಿಂದೂ ಸಂಪ್ರದಾಯದ ಕಾರ್ಯಕ್ಕೆ ಬೇಕಾದ ಚಿತಾಭಸ್ಮ, ಎಲುಬುಗಳು ದೊರಕುವುದಿಲ್ಲʼ ಎನ್ನುವುದು ಸತೀಶಣ್ಣನ  ಅಂಬೋಣ. ಹಿಂದೂ ಸಂಪ್ರದಾಯದ ಪ್ರಕಾರ ಶವ ದಹನದ ನಂತರ ಒಂಬತ್ತು ಭಾಗಗಳ ಎಲುಬು ಮತ್ತು ಚಿತಾಭಸ್ಮವನ್ನು ತೆಗೆಯಲಾಗುವುದು. ಏಕೆಂದರೆ ಮಗುವು ತಾಯಿಯ ಗರ್ಭದಲ್ಲಿ ಒಂಬತ್ತು ತಿಂಗಳುಗಳ ಕಾಲ ಬೆಳೆಯುತ್ತದೆ. ಒಂದನೇ ತಿಂಗಳಿನಿಂದಲೇ ಮಗುವಿನ ಶರೀರದ ಬೆಳವಣಿಗೆ ನಿಧಾನವಾಗಿ ಶುರುವಾಗುತ್ತದೆ. ತಲೆಯಿಂದ ಹಿಡಿದು ಪಾದದ ವರೆಗಿನ ಭಾಗಗಳು ಒಂಬತ್ತು ತಿಂಗಳುಗಳಲ್ಲಿ ಒಂದೊಂದಾಗಿ ಬೆಳೆದು ತಾಯಿಯ ಗರ್ಭದಿಂದ ಮಗುವಿನ ರೂಪದಲ್ಲಿ ಹೊರಬಂದು ಜಗತ್ತನ್ನು ನೋಡುತ್ತದೆ. ಆದ್ದರಿಂದ ಜೀವನದ ಅಂತಿಮ ಹೋಮದ ಬಳಿಕ ಒಂಬತ್ತು ಭಾಗದ ಭಸ್ಮವನ್ನು ತೆಗೆದು ಚಿತಾಭಸ್ಮವೆಂಬ ಹೆಸರಿನಲ್ಲಿ ಅಂತಿಮ ಕಾರ್ಯಗಳಲ್ಲಿ ಬಳಕೆಯಾಗುತ್ತದೆ.

ಚಿತಾ ಭಸ್ಮ

ಜೀವನದ ಅಂತಿಮ ಹೋಮ!

ಗಣಹೋಮ, ಮೃತ್ಯುಂಜಯ ಹೋಮಗಳಂತೆಯೇ ಶ್ರೇಷ್ಠವಾದ ಹೋಮ ಜೀವನದ ಅಂತಿಮ ಹೋಮ. ಉಳಿದ ಹೋಮಗಳಂತೆಯೇ ಇದರಲ್ಲೂ ಸಹ ಪಂಚದ್ರವ್ಯಗಳಾದ ಹಾಲು,  ತುಪ್ಪ,  ಮೊಸರು, ಸೆಗಣಿ, ಗೋಮೂತ್ರವನ್ನು ಬಳಸಲಾಗುತ್ತದೆ. ಅಂತೆಯೇ ಅದರ ಜೊತೆಗೆ ಹಲಸಿನ ಮರದ ಕೆತ್ತೆ, ಮಾವಿನ ಮರದ ಕೆತ್ತೆ, ಗಂಧ, ಚಂದನ, ಅಕ್ಕಿ, ಎಳ್ಳುಗಳನ್ನು ಬಳಸಿ ಹೋಮವನ್ನು ಮಾಡುತ್ತಾರೆ. ಪಂಚದ್ರವ್ಯಗಳೊಂದಿಗೆ ಬೆರೆತು ದಹಿಸಿದ ನಂತರವೇ ಸಿಗುವುದು ಪವಿತ್ರವಾದ “ಚಿತಾಭಸ್ಮ”. ಈ ಚಿತಾಭಸ್ಮವನ್ನು ನಾನು ಕೂಡ ಜಪದ ಸಮಯದಲ್ಲಿ ಯಾವುದೇ ಹಿಂಜರಿಕೆಯಿಲ್ಲದೆ ಬಳಸುತ್ತೇನೆಂದು  ಹೇಳುತ್ತಾರೆ ಸತೀಶಣ್ಣ.

ತಲೆ ಬುರುಡೆ ಮುರಿತ

ಶವದಲ್ಲಿ ಲೋಹದ ಅವಶೇಷಗಳು!

ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಸಮಸ್ಯೆಯಿಂದ ಮೃತಪಡುವವರ ಸಂಖ್ಯೆ ಏರುತ್ತಾ ಇದೆ. ಅದರಲ್ಲೂ ರಸ್ತೆ ಅಪಘಾತಗಳಿಂದ ಮೃತಪಡುವವರ ಸಂಖ್ಯೆ ಗಗನಕ್ಕೇರುತ್ತಿದೆ, ಇಂತಹ ಅಪಘಾತಗಳಲ್ಲಿ ಮೂಳೆ ಮುರಿತ ಸಾಮಾನ್ಯವಾಗಿದ್ದು ಕೃತಕ ಮೂಳೆ ಜೋಡಣೆಯಾಗಿರುವ ಶವವನ್ನು ದಹಿಸಿದ ನಂತರವೂ ಆ ಲೋಹಗಳು ಕರಗದೆ ಹಾಗೆಯೇ ಬೂದಿಯೊಂದಿಗೆ ಇರುತ್ತವೆ. ಕೃತಕ ಮೂಳೆಗಳನ್ನು ಸಾಮಾನ್ಯವಾಗಿ ಸೊಂಟದ ಮೂಳೆ, ಮಣಿಕಟ್ಟಿನ ಮೂಳೆ, ಪಾದದ ಮೂಳೆ, ಮೊಣಕಾಲು ಮತ್ತು ಹೆಗಲಿನ  ಮೂಳೆಗಳಿಗೆ ಜೋಡಿಸುತ್ತಾರೆ. ಹೀಗೆ, ಸತೀಶಣ್ಣ ಶವ ಪುರಾಣ ಹೇಳುತ್ತಾ ಲೋಹದ ಅವಶೇಷಗಳ ಸಂಗ್ರಹವನ್ನು ನನ್ನ ಮುಂದಿಟ್ಟಾಗ ಬೆರಗಾಗುವ ಸರದಿ ನನ್ನದಾಗಿತ್ತು!

ಬೆನ್ನು ಮೂಳೆ ಮುರಿತ

ಲೋಹದ ತುಂಡುಗಳನ್ನು ನೋಡುತ್ತಿದ್ದ ಹಾಗೆ ನನಗೆ ಈ ಮೂಳೆ ಮುರಿತದ ಬಗ್ಗೆ ಹೆಚ್ಚು ಆಸಕ್ತಿ ಮೂಡಿ ಬೇರೆ ಬೇರೆ ಮಾಹಿತಿ ಮೂಲಗಳ ಒಳಹೋಗಿ ಬಂದೆ. ಮಣಿಕಟ್ಟು ಮುರಿತ, ಕಾಲರ್ ಬೋನ್ ಮುರಿತ, ಪಾದದ ಮೂಳೆಯ ಮುರಿತ, ಬೆನ್ನು ಮೂಳೆಯ ಮುರಿತ, ಸೊಂಟದ ಮೂಳೆ ಮುರಿತ, ಮುಂದೋಳಿನ ಮುರಿತ, ಮೊಣಕಾಲು ಮೂಳೆಯ ಮುರಿತ, ತಲೆಬುರುಡೆಯ ಮುರಿತ ಹೀಗೆ… ಬಗೆ ಬಗೆಯ ಮುರಿತಗಳಿರುವುದನ್ನು ಗಮನಿಸಿಕೊಂಡೆ.

ಸತೀಶಣ್ಣನ ಹೃದಯದ ಮಾತು…

ಮಣಿಕಟ್ಟು ಮುರಿತ

ಸಾಮಾನ್ಯವಾಗಿ ಸ್ಮಶಾನವೆಂದರೆ ಎಲ್ಲರ ಮನಸ್ಸಿನಲ್ಲಿ ಮೂಡುವ ಚಿತ್ರವೆಂದರೆ ಬರಡಾದ ಭೂಮಿ, ಅಲ್ಲಲ್ಲಿ ಬೂದಿ ಹರಡಿ ಕೆಂಡದಿಂದ ಹೊಗೆ ಹೊರಡುವ ದೃಶ್ಯ. ಆದರೆ ಪುತ್ತೂರಿನ ಹಿಂದೂ ರುದ್ರಭೂಮಿಯು ಇದಕ್ಕೆ ತದ್ವಿರುದ್ಧವಾಗಿದೆ. ರುದ್ರಭೂಮಿಯನ್ನು ಪ್ರವೇಶಿಸುವಾಗಲೇ ಸ್ವಾಗತ ಕೋರುವಂತಿರುವ ಎಕ್ಕದ ಹೂವಿನ ಗಿಡ, ಸಾಲು ನಿಂತಿರುವ ತೆಂಗಿನಮರಗಳು, ಪ್ರವೇಶದ್ವಾರದಲ್ಲೇ  ಸಣ್ಣ ಸಣ್ಣ ವಿವಿಧ ರೀತಿಯ ಹೂವಿನ ಗಿಡಗಳು.. ಇಷ್ಟೆಲ್ಲ ಆಕರ್ಷಣೆ  ರುದ್ರಭೂಮಿಗೆ ಬೇಕೇ  ಎಂದರೆ “ಕುಟುಂಬದಲ್ಲಿ ಮಗು ಜನಿಸಿದರೆ ಎಲ್ಲೆಡೆ ಸಂತೋಷ, ಸಂಭ್ರಮ, ನಗೆಯ ಸುರಿಮಳೆ. ಆದರೆ ಯಾರಾದರೂ ಮರಣ ಹೊಂದಿದರೆ ದುಃಖ,  ಅಸಮಾಧಾನದ ವಾತಾವರಣವನ್ನು ಕಾಣುತ್ತೇವೆ. ಇದು ತಪ್ಪು. ತೀರಿಹೋದವರು ಯಾರೇ ಆಗಿರಲಿ ಅವರನ್ನು ಪವಿತ್ರ ಸ್ಥಾನಕ್ಕೆ ಕಳಿಸುತ್ತಿದ್ದೇವಲ್ಲಾ ಎಂಬ ತೃಪ್ತಿಯಿಂದ ಕಳಿಸಿಕೊಡಬೇಕು ಮತ್ತು ಸುಂದರವಾದ ಪರಿಸರದಲ್ಲಿ ಕಳಿಸಿ ಕೊಡಬೇಕು ಎಂದು ಹೃದಯದಿಂದ ಮಾತಾಡುವ ಸತೀಶಣ್ಣ  ನನಗೊಂದು ಬೆರಗು!

ವೈಷ್ಣವಿ ಜಿ ಕೆ
ಪುತ್ತೂರಿನ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಥಮ ಬಿ.ಕಾಂ ವಿದ್ಯಾರ್ಥಿನಿ. ಶಾಸ್ತ್ರೀಯ ಸಂಗೀತದಲ್ಲಿ ವಿಶೇಷ ಆಸಕ್ತಿ. 

Related Articles

ಇತ್ತೀಚಿನ ಸುದ್ದಿಗಳು