Friday, June 14, 2024

ಸತ್ಯ | ನ್ಯಾಯ |ಧರ್ಮ

ಮಹಾರಾಷ್ಟ್ರ: ಪನ್ವೇಲ್‌ನಲ್ಲಿ ನಾಲ್ವರು ಪಿಎಫ್‌ಐ ಸದಸ್ಯರನ್ನು ಬಂಧಿಸಿದ ಎಟಿಎಸ್

ಮುಂಬೈ: ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಗುರುವಾರ ಮುಂಬೈ ಸಮೀಪದ ಪನ್ವೇಲ್ ಪ್ರದೇಶದಲ್ಲಿ ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ(ಪಿಎಫ್‌ಐ) ನಾಲ್ವರು ಸದಸ್ಯರನ್ನು ಬಂಧಿಸಿದೆ.

ಎಟಿಎಸ್ ನೀಡಿರುವ ಮಾಹಿತಿ ಪ್ರಕಾರ, ಬಂಧಿತರು ಪಿಎಫ್‌ಐ ಸದಸ್ಯರುಗಳಾದ ಮೊಯಿಜ್ ಮತೀನ್ ಪಟೇಲ್, ಮೊಹಮ್ಮದ್ ಆಸಿಫ್ ಖಾನ್ ಮತ್ತು ತನ್ವಿರ್ ಹಮೀದ್ ಖಾನ್ ಹಾಗೂ ಪಿಎಫ್‌ಐ ಪನ್ವೇಲ್ ಘಟಕದ ಕಾರ್ಯದರ್ಶಿ ಅಬ್ದುಲ್ ರಹೀಮ್ ಯಾಕೂಬ್ ಸಯ್ಯದ್ ಎಂದು ತಿಳಿದು ಬಂದಿದೆ.

ಮುಂಬೈನ ಕಲಾಚೌಕಿ ಪೊಲೀಸ್ ಠಾಣೆಯಲ್ಲಿ, ಬಂಧಿತ ವ್ಯಕ್ತಿಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ 1967 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಎಟಿಎಸ್‌ ತಿಳಿಸಿದೆ.

ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸಿದ ಆರೋಪದಲ್ಲಿ ಪಿಎಫ್‌ಐಗೆ ಸಂಬಂಧಿಸಿದಂತೆ ನಡೆಯುತ್ತಿರುವ ಪ್ರಕರಣವೊಂದರಲ್ಲಿ ಮಹಾರಾಷ್ಟ್ರ ಎಟಿಎಸ್ ಈ ಹಿಂದೆ ಪಿಎಫ್‌ಐನ 22 ಜನ ಸದಸ್ಯರನ್ನು ಬಂಧಿಸಿತ್ತು.

ಕೇಂದ್ರ ಸರ್ಕಾರವು ಇತ್ತೀಚೆಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮೇಲೆ ಐದು ವರ್ಷಗಳ ನಿಷೇಧವನ್ನು ವಿಧಿಸಿದೆ.ಈ ಹಿನ್ನಲೆಯಲ್ಲಿ ಮಹರಾಷ್ಟ್ರ ಗೃಹ ವ್ಯವಹಾರಗಳ ಸಚಿವಾಲಯವು (MHA) ಇತ್ತೀಚೆಗೆ ಹೊರಡಿಸಿದ ಅಧಿಸೂಚನೆಯ ಮೂಲಕ ಪಿಎಫ್‌ಐ ಮತ್ತು ಅದರ ಸಹವರ್ತಿ ಅಂಗಸಂಸ್ಥೆಗಳನ್ನು  ಕಾನೂನುಬಾಹಿರ ಸಂಘಗಳು ಎಂದು ಘೋಷಿಸಿತು.

PFI ಜೊತೆಗೆ, ರಿಹಬ್ ಇಂಡಿಯಾ ಫೌಂಡೇಶನ್ (RIF) ಸೇರಿದಂತೆ, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (CFI), ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ (AIIC), ನ್ಯಾಷನಲ್ ಕಾನ್ಫೆಡರೇಶನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಶನ್ (NCHRO), ನ್ಯಾಷನಲ್ ವುಮೆನ್ಸ್ ಫ್ರಂಟ್, ಜೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಶನ್ ಮತ್ತು ರಿಹಬ್ ಫೌಂಡೇಶನ್‌ ಸಂಘ ಸಂಸ್ಥೆಗಳನ್ನು ಕೂಡ ಕಾನೂನು ಬಾಹಿರ ಸಂಘಗಳು ಎಂದು ಘೋಷಿಸಲಾಯಿತು.

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ಎರಡಕ್ಕೂ ಬಂದಿರುವ ಮಾಹಿತಿಯ ಪ್ರಕಾರ, ಪಿಎಫ್‌ಐ ವಿದೇಶದಿಂದ ಉತ್ತಮ ಸಂಘಟಿತ ಮತ್ತು ರಚನಾತ್ಮಕ ರೀತಿಯಲ್ಲಿ ಸಾಕಷ್ಟು ಹಣವನ್ನು ಸಂಗ್ರಹಿಸುತ್ತಿದ್ದು, ವಿದೇಶದಲ್ಲಿ ನಿಧಿ ಸಂಗ್ರಹಿಸುತ್ತಿದೆ ಮತ್ತು ಅವುಗಳನ್ನು ರಹಸ್ಯ ಮತ್ತು ಅಕ್ರಮ ಮಾರ್ಗಗಳ ಮೂಲಕ ಭಾರತಕ್ಕೆ ವರ್ಗಾಯಿಸುತ್ತಿದೆ ಎಂದು ಕೇಂದ್ರ ಏಜೆನ್ಸಿಗಳ ಗಮನಕ್ಕೆ ಬಂದಿತ್ತು ಎಂದು ಎಎನ್‌ಐ ವರದಿ ಮಾಡಿದೆ.

Related Articles

ಇತ್ತೀಚಿನ ಸುದ್ದಿಗಳು