Friday, June 14, 2024

ಸತ್ಯ | ನ್ಯಾಯ |ಧರ್ಮ

ಪತ್ರಕರ್ತರಿಗೆ ಭಕ್ಷೀಸು: ʻಪ್ರಜಾವಾಣಿʼ ಪಾಲಿಸಿಕೊಂಡುಬಂದ ನೀತಿ ಸಂಹಿತೆ ಮುಂದುವರಿಸೀತೆ?

ಬೆಂಗಳೂರು: ದೀಪಾವಳಿಯ ಉಡುಗೊರೆಯಾಗಿ ಸಿಹಿತಿಂಡಿಯೊಂದಿಗೆ ಲಕ್ಷಗಟ್ಟಲೆ ಹಣ ನೀಡಿದ ಪ್ರಕರಣವನ್ನು ʻಪೀಪಲ್‌ ಮೀಡಿಯಾʼ ಬಹಿರಂಗಪಡಿಸಿದಾಗಿನಿಂದ ಈ ಸಂಬಂಧ ವ್ಯಾಪಕ ಚರ್ಚೆಗಳು ನಡೆಯುತ್ತಿದ್ದು, ಇಂಥ ಪ್ರಕರಣಗಳು ನಡೆದಾಗ ಮಾಧ್ಯಮ ಸಂಸ್ಥೆಗಳು ಅನುಸರಿಸುತ್ತ ಬಂದ ನೀತಿ ಸಂಹಿತೆಯ ನಡಾವಳಿಗಳು ಚರ್ಚೆಯ ಕೇಂದ್ರಬಿಂದುಗಳಾಗಿವೆ.

ಕರ್ನಾಟಕದ ವಿಶ್ವಾಸಾರ್ಹ ಪತ್ರಿಕೆಯಾದ ʻಪ್ರಜಾವಾಣಿʼ ಪತ್ರಕರ್ತರು ಮಾಡುವ ಭ್ರಷ್ಟಾಚಾರದ ವಿಷಯದಲ್ಲಿ ʻಶೂನ್ಯ ಸಹನೆʼ (ಜೀರೋ ಟಾಲರೆನ್ಸ್) ಕಾಪಾಡಿಕೊಂಡು ಬಂದಿದೆ. ಇದಕ್ಕೆ ಒಂದು ತಾಜಾ ಉದಾಹರಣೆ, ಕಳೆದ ಜೂನ್‌ ತಿಂಗಳಿನಲ್ಲಿ ನಡೆದ ಘಟನೆ. ಪಶ್ಚಿಮ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್‌ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ, ಕರ್ನಾಟಕದ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರಾದ ಬಸವರಾಜ ಹೊರಟ್ಟಿ ಪರವಾಗಿ ವ್ಯಕ್ತಿಯೋರ್ವರು ಪ್ರಜಾವಾಣಿ ವರದಿಗಾರರೊಬ್ಬರಿಗೆ ಹಣ ನೀಡಲು ಮುಂದಾದಾಗ, ಹಣವನ್ನು ತಿರಸ್ಕರಿಸಿದ್ದೇ ಅಲ್ಲದೆ, ಪತ್ರಿಕೆಯಲ್ಲಿ ಈ ಸಂಬಂಧ ವರದಿಯನ್ನೂ ಪ್ರಕಟಿಸಿತ್ತು.

ವರದಿಯ ಕೊಂಡಿಯನ್ನು ಗಮನಿಸಿ:

ಪತ್ರಕರ್ತರಿಗೆ ಯಾವುದೇ ರೂಪದಲ್ಲಿ ಹಣ ನೀಡುವುದು, ದುಬಾರಿ ಗಿಫ್ಟ್‌ ನೀಡುವುದು ಖಾಸಗಿಯಾದ ವಿದ್ಯಮಾನವಲ್ಲ, ಅದು ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಒಂದು ಘಟನೆಯೇ ಆಗಿರುತ್ತದೆ. ಈ ಕಾರಣಕ್ಕಾಗಿ ʻಪ್ರಜಾವಾಣಿʼ ತನ್ನದೇ ಪತ್ರಿಕೆಯ ವರದಿಗಾರರಿಗೆ ಹಣ ನೀಡಲು ಮುಂದಾದ ಘಟನೆಯನ್ನೂ ವರದಿಯನ್ನು ಮಾಡಿತ್ತು. ಪ್ರಜಾವಾಣಿ ಮಾತ್ರವಲ್ಲದೆ, ಹಿಂದೆಯೂ ಹಲವು ಪತ್ರಿಕಾ ಸಂಸ್ಥೆಗಳು ಈ ರೀತಿಯ ಘಟನೆಗಳು ನಡೆದಾಗ, ಹಣವನ್ನು ತಿರಸ್ಕರಿಸಿದ್ದು ಮಾತ್ರವಲ್ಲದೆ ಈ ಕುರಿತು ವರದಿಯನ್ನೂ ಸಹ ಪ್ರಕಟಿಸಿದ ಉದಾಹರಣೆಗಳು ಇವೆ.

ಪತ್ರಕರ್ತರಿಗೆ ʻದೀಪಾವಳಿ ಭಕ್ಷೀಸುʼ ಹಗರಣದ ಕುರಿತು ಈಗಾಗಲೇ ಜನಾಧಿಕಾರ ಸಂಘರ್ಷ ಪರಿಷತ್ತು ಲೋಕಾಯುಕ್ತರಿಗೆ ದೂರು ನೀಡಿದೆ. ದೂರಿನಲ್ಲಿ ಪ್ರಜಾವಾಣಿ ಮತ್ತು ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆಯ ಮುಖ್ಯವರದಿಗಾರರಿಗೆ ಮುಖ್ಯಮಂತ್ರಿ ಕಚೇರಿಯಿಂದ ನೀಡಲಾದ ಸಿಹಿತಿಂಡಿಯ ಗಿಫ್ಟ್‌ ಬಾಕ್ಸ್‌ ಗಳಲ್ಲಿ ಹಣ ಇರುವುದನ್ನು ಗಮನಿಸಿ ಅದನ್ನು ಹಿಂದಿರುಗಿಸಿರುವ ಕುರಿತು ಉಲ್ಲೇಖಿಸಲಾಗಿದೆ. ಹೀಗಾಗಿ ಪ್ರಜಾವಾಣಿ ಮತ್ತು ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆಗಳು ಈ ಘಟನೆಯನ್ನು ಒಂದು ಭ್ರಷ್ಟಾಚಾರದ ಪ್ರಕರಣ ಎಂದು ಪರಿಗಣಿಸಿ ಸುದ್ದಿ ಮಾಡಬೇಕು ಎಂಬುದು ಹಿರಿಯ ಪತ್ರಕರ್ತರನೇಕರ ವಾದವಾಗಿದೆ.

ಪ್ರಜಾವಾಣಿ ಪತ್ರಿಕೆ ಹಿಂದಿನಿಂದಲೂ ಪತ್ರಿಕಾ ವೃತ್ತಿಯ ಘನತೆಯನ್ನು ಕಾಪಾಡಿಕೊಂಡು ಬಂದಿದೆ. ಚುನಾವಣಾ ಖರ್ಚಿನಲ್ಲಿ ಜಾಹೀರಾತು ಹಣವನ್ನೂ ಸೇರಿಸಿದ ಸಂದರ್ಭದಲ್ಲಿ ರಾಜಕಾರಣಿಗಳು ʻಕಾಸಿಗಾಗಿ ಸುದ್ದಿʼಯ ಮೊರೆ ಹೋಗಿದ್ದರು. ಈ ಸಂದರ್ಭದಲ್ಲಿ ಪ್ರಜಾವಾಣಿ ದಿಟ್ಟತನ ತೋರಿ, ಯಾವುದೇ ಕಾರಣಕ್ಕೂ ಕಾಸಿಗಾಗಿ ಸುದ್ದಿ ಪ್ರಕಟಿಸುವುದಿಲ್ಲ ಎಂದು ತನ್ನ ಮುಖಪುಟದಲ್ಲೇ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ವಾಸ್ತವವಾಗಿ ಪೊಲೀಸ್‌ ಪೇದೆಯೊಬ್ಬ ಬೀದಿ ಬದಿ ವ್ಯಾಪಾರಿಯಿಂದ ಹಣ ಪಡೆದರೆ ಹೇಗೆ ಅದು ಭ್ರಷ್ಟಾಚಾರವಾಗುತ್ತದೋ, ಅದೇ ರೀತಿ ಪತ್ರಕರ್ತರೊಬ್ಬರು ಸರ್ಕಾರವನ್ನು ನಡೆಸುತ್ತಿರುವವರಿಂದ ಹಣ ಪಡೆದರೂ ಅದೂ ಕೂಡ ಭ್ರಷ್ಟಾಚಾರವಾಗುತ್ತದೆ. ಹೀಗಾಗಿ ಪ್ರಜಾವಾಣಿ, ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆಗಳು ತಡವಾಗಿಯಾದರೂ ದೀಪಾವಳಿ ಗಿಫ್ಟ್‌ ವಿಷಯವನ್ನು ಒಂದು ʻಭ್ರಷ್ಟಾಚಾರದ ಘಟನೆʼಯನ್ನಾಗಿ ಪರಿಗಣಿಸಿ, ವರದಿ ಮಾಡಲಿವೆಯೇ ಕಾದು ನೋಡಬೇಕು.

Related Articles

ಇತ್ತೀಚಿನ ಸುದ್ದಿಗಳು