Saturday, June 15, 2024

ಸತ್ಯ | ನ್ಯಾಯ |ಧರ್ಮ

ಆರರಲ್ಲಿ ಐದು ವಿಕೆಟ್ ರಿಟೈರ್ಡ್ ಹರ್ಟ್….

ನಾಕು ಹೆಜ್ಜೆ ಹಾಕೋ ಹೊತ್ತಿಗೆ ನನ್ನ ಶ್ರೀಮತಿ ತೇಲುಗಣ್ಣು ಮೇಲುಗಣ್ಣು ಮಾಡಿ ಸಿಕ್ಕ ನೆಲ ಹಿಡಿದು ಕುಳಿತೇ ಬಿಡೋದೆ.ಅಪಾಯ ಅರಿತ ನಾನು ಸ್ನೇಹಿತರಿಗೆ ಟ್ಯಾಕ್ಸಿ ಬುಕ್ ಮಾಡಲು ಹೇಳಿ, ಪರಿಚಯದ ಡಾಕ್ಟರಿಗೆ ಫೋನ್ ಹಚ್ಚಿದೆ…ಮುಂದೇನಾಯ್ತು ಓದಿ-ಲೇಖಕ ರೋಹಿತ್‌ ಅಗಸರಹಳ್ಳಿಯವರ ಪ್ರವಾಸ ಕಥನ.

ರಾಜಘಾಟ್ ನೋಡಲು ನಾವು ಹೋದ ಸಮಯದಲ್ಲಿ ಉಷ್ಣಾಂಶದ ಮುಳ್ಳು ಮೂವತ್ತಾರು ಮುಟ್ಟಿತ್ತು. ಕಳೆದ ಏಪ್ರಿಲ್ ತಿಂಗಳಿನಿಂದ ನಮ್ಮೂರಲ್ಲಿ ಇದು ೨೪ ದಾಟಿರಲಿಲ್ಲ. ಒಂದೂವರೆ ದಿನಗಳ ಎಸಿ ಪ್ರಯಾಣ, ದೇಹಕ್ಕೆ ಒಗ್ಗದ ಊಟ ಎಲ್ಲವೂ ಸೇರಿ ಗುಂಪಿನ ಇಬ್ಬರೂ ಹೆಣ್ಣು ಮಕ್ಕಳು ಹೈರಾಣು. ಮಕ್ಕಳೂ ಸಹ ಲವಲವಿಕೆ ನಟಿಸುತ್ತಿದ್ದರು. ಮೊದಲು ಒಬ್ಬರು ಉಲ್ಟೀ ಹೊಡೆದರಂತೆ.( ವಾಂತಿ) ಅದು ಲಾನಿಗೆ ನೀರು ಚಿಮ್ಮಿಸುವ ಸ್ಪ್ರಿಂಕ್ಲರಿನಂತೆ ಭಾಸವಾಯ್ತೆಂದೂ, ಅಕ್ಕಪಕ್ಕ ಇದ್ದವರೂ ಕೊಂಚ ದೂರ ಓಡಿದರೆಂದೂ ಅವರೇ ಅರುಹಿದರು.

ಬಿಸಿಲು, ಶೆಖೆ ಸೋಲಿಸಲು ಎಲ್ಲರೂ ನಿಂಬೂ ಪಾನಿ, ನೀರು, ಐಸ್ಕ್ರೀಮು, ಉಪ್ಪಿನ ನೀರು, ಸಕ್ಕರೆ ನೀರು ಅಂತ ಹುಯ್ಕೊಂಡು ಅಂತೂ ಕೊಂಚ ಹೊತ್ತಿನಲ್ಲಿ ಒಂದಷ್ಟು ಶಕ್ತಿಯನ್ನು ಸೋಸಿ ಪೇರಿಸಿ ಆಟೋ ಹತ್ತೋ ಹೊತ್ತಿಗೆ ಎರಡನೇ ಕ್ಯಾಂಡಿಡೇಟು ಕಿವಿಯ ಬಳಿ ಮೆಲ್ಲನುಸಿರಿತು. “ಯಾಕೋ ಆಗ್ತಾ ಇಲ್ಲ “. ಅಪಾಯದ ವಾಸನೆ ಬಂದರೂ ಎಲ್ಲ ಸರಿಹೋಗುವುದೆಂದೆ. ಗೆಳೆಯ ದಿನೇಶ್ ಅಂತೂ ಚಾಂದಿನಿ ಚೌಕ, ಜುಮ್ಮಾ ಮಸ್ಜಿದ್ ಬಳಿಯ ರೋಡ್ ಸೈಡ್ ಡಿಶ್ಗಳನ್ನೆಲ್ಲಾ ವಿಧವಿಧವಾಗಿ ವರ್ಣಿಸುತ್ತಿದ್ದರು. ಕೆಂಪು ಕೋಟೆ, ಜುಮ್ಮಾ ಮಸೀದಿ ಸಂಧಿಸುವ ಜನಜಂಗುಳಿಯ ಸ್ಥಳ ಬಂತು. ಇಳಿದು ನಾಕು ಹೆಜ್ಜೆ ಹಾಕೋ ಹೊತ್ತಿಗೆ ನನ್ನ ಶ್ರೀಮತಿ ತೇಲುಗಣ್ಣು ಮೇಲುಗಣ್ಣು ಮಾಡಿ ಸಿಕ್ಕ ನೆಲ ಹಿಡಿದು ಕುಳಿತೇಬಿಡೋದೆ. ಅಪಾಯ ಅರಿತ ನಾನು ಸ್ನೇಹಿತರಿಗೆ ಟ್ಯಾಕ್ಸಿ ಬುಕ್ ಮಾಡಲು ಹೇಳಿ, ಪರಿಚಯದ ಡಾಕ್ಟರಿಗೆ ಫೋನ್ ಹಚ್ಚಿದೆ. ಅವರೂ ಧೈರ್ಯದ ಮಾತು ಹೇಳಿ ಮುಗಿಸೋ ಹೊತ್ತಿಗೆ ಟ್ಯಾಕ್ಸಿ ಬಂತು. ದಿನೇಶ್ ಒಬ್ಬರನ್ನುಳಿದು ಉಳಿದ ಐವರೂ ಕಾರು ಏರಿದೆವು. ತಿರುಗಾಟಕ್ಕೆ ಒಂದೇ ಮತವೂ, ರೆಸ್ಟಿಗೆ ಐದು ಮತವೂ ಬಿದ್ದವು!


ಟ್ಯಾಕ್ಸಿ ಕಿಲೋಮೀಟರ್ ಮುಂದೋಗೋ ಹೊತ್ತಿಗೆ ಮೊದಲು ಮುಂದಿನ ಸೀಟಿನಲ್ಲಿ ವ್ಯಾಕ್ ಸದ್ದು ಹೊರಟಿತು. ಅವರದಾಗಲೇ ಎರಡನೇ ಇನ್ನಿಂಗ್ಸ್ ಆದ್ದರಿಂದ ಕೇವಲ ನಿಂಬೂ ಪಾನಿ. ಅದಾದ ಮೂರೇ ಕ್ಷಣಕ್ಕೆ ಹಿಂದಿನ ಸೀಟಿನಲ್ಲಿ ಕೂಡ ಅದೇ ಶಬ್ದದ ಅನುರಣನ. ಇಲ್ಲಿ ಮಾತ್ರ ಆಲೂ, ಮೈದಾ, ಬಾಳೆಹಣ್ಣು, ನೀರು, ನಿಂಬೂ, ಉಪ್ಪು, ಸಕ್ಕರೆ ಇತ್ಯಾದಿ ಇತ್ಯಾದಿ. ಟ್ಯಾಕ್ಸಿಯ ಅಣ್ಣ ತಲ್ಲಣಿಸಿ ಹೋದ. ಕಾರು ಕ್ಲೀನ್ ಮಾಡಿಸಲು ರೊಕ್ಕ ಪೀಕುವೆನು ಎಂದ ಮೇಲೆ ಸಮಾಧಾನಿಯಾದ. ಅಂತೂ ವಸತಿ ತಲುಪಿ ಟ್ಯಾಕ್ಸಿ ಬಾಡಿಗೆಯ ಎರಡು ಪಟ್ಟು ಕ್ಲೀನಿಂಗ್ ಚಾರ್ಜು ಕೊಟ್ಟು ಕಳುಹಿಸಿದೆವು. ಅಲ್ಲಿಗೆ ಮೊದಲ ದಿನದ ಎಕ್ಸಪ್ಲೋರಿಂಗ್ ಐದು ಪ್ಲೇಯರ್ ಗಳ ರಿಟೈರ್ಡ್ ಹರ್ಟ್ ನೊಂದಿಗೆ ಸಂಪನ್ನವಾಗಿತ್ತು.

ಬಾರ್ಬರ್ ಟಾಂಬ್
ಹುಮಾಯೂನ್ ಟಾಂಬ್ ನ ಪಕ್ಷಿನೋಟ ( ಏರಿಯಲ್ ಶಾಟ್- ಕೃಪೆ ಗೂಗಲ್)

ಪ್ರಥಮ ಚುಂಬನವಂತೂ ದಂತ ಭಗ್ನವಾಗುವುದರೊಂದಿಗೆ ಮುಗಿದಿತ್ತು. ಸ್ನೇಹಿತರ ಮಗ ಆರುಶ್ ಮತ್ತು ನಮ್ಮ ಮಗಳು ಪ್ರಣತಿ‌ ಇಬ್ಬರೂ ಬಿಸಿಲಿನ ಹೊಡೆತಕ್ಕೆ ಹೈರಾಣಾಗಿದ್ದರು. ತಂದಿದ್ದ ಬಿರಿಯಾನಿ ಖರ್ಚಾಗದೆ; ಎಸೆಯಲೂ ಮನಸಾಗದೆ ದಿನೇಶ್ ಮೈಲು ದೂರ ನಡೆದು ಹೋಗಿ ಫಲಾನುಭವಿಯೊಬ್ಬರಿಗೆ ಮುಟ್ಟಿಸುವ ಹೊತ್ತಿಗೆ ಊರೆಲ್ಲ ಮಲಗಿತ್ತು. ಅಲ್ಲಿಗೆ ದಿನೇಶ್ ಅವರ ಎಕ್ಸಪ್ಲೋರಿಂಗ್ ವೇಗಕ್ಕೆ ನಾವು ಉಳಿದೈವರೂ ಒಗ್ಗುವುದಿಲ್ಲ ಎನ್ನುವುದು ಖಾತ್ರಿಯಾಗಿ ಅವರೇ ವೇಗ ತಗ್ಗಿಸಿಕೊಂಡು ನಮ್ಮೆಲ್ಲರಿಗೆ ಒಗ್ಗಿಕೊಂಡರು.
ಎರಡನೇ ದಿನ ಮುಂಜಾನೆಯೇ ಗೆಸ್ಟ್ ಹೌಸು ಬಿಟ್ಟು ಹನ್ನೊಂದರ ಹೊತ್ತಿಗೆ ವಾಪಾಸು ಬರುವುದೂ ಮತ್ತೆ ಸಂಜೆ ನಾಕಕ್ಕೆ ತಿರುಗಾಟಕ್ಕೆ ಹೋಗುವುದು ಎಂದು ನಿಶ್ಚಿಯಿಸಿದೆವು. ಬೆಳಗ್ಗೆ ಎಬ್ಬಿಸಲು ಅಲಾರ್ಮ್ ಅಗತ್ಯವಿರಲಿಲ್ಲ. ಏಕೆಂದರೆ ಆ ಡ್ಯೂಟಿಗೆ ಮಚ್ಚರ್ ಗಳು ಮಚ್ಚನ್ನೂ ನಾಚಿಸುವ ಮೂತಿಯೊಂದಿಗೆ ತಯಾರಾಗಿಯೇ ಇದ್ದವು. ರಾಜಘಾಟ್ ಬಿಟ್ಟು ಬೇರೇನೂ ನೋಡದ ಕಾರಣ ಜಾಗಗಳು ದಂಡಿಯಾಗಿದ್ದವು.  ಫೇಸ್ಬುಕ್ಕಲ್ಲಿ ಪಯಣದ ಬಗೆಗಿನ ನನ್ನ ಕಿರುಟಿಪ್ಪಣಿ ನೋಡಿದ್ದ  ಇತಿಹಾಸದ ಪ್ರೊಫೆಸರ್ ಗೆಳೆಯ ಸ್ವಾಮಿ ಬೆಳ್ತಂಗಡಿಯಿಂದ ಮೆಸೇಜು ಮಾಡಿದ್ದರು. ಹುಮಾಯೂನ್ ಟಾಂಬ್ ಮಿಸ್ ಮಾಡದೆ ನೋಡಿ ಎಂದು. ಬಹುತೇಕ ಪ್ರವಾಸಿ ಸ್ಥಳಗಳು ಮುಂಜಾನೆ ಆರಕ್ಕೇ ತೆರೆಯುವುದರಿಂದ ಅಲ್ಲಿಗೇ ಹೊರಟೆವು. ಹುಮಾಯೂನ್ ಟಾಂಬ್ ನಿಜವಾಗಿಯೂ ತುಂಬಾ ಸುಂದರವಾದ ರಚನೆ. ಕೆಂಪು ಕೋಟೆ, ಜಾಮಾ ಮಸೀದಿ, ಇಂಡಿಯಾ ಗೇಟ್ ಗಳಿಗೆ ಹೋಲಿಸಿದರೆ ಕೊಂಚ ದೂರವೇನೊ. ಅಥವಾ ಬೆಳ್ಳಂಬೆಳಗ್ಗೆ ಹೋಗಿದ್ದ ಕಾರಣಕ್ಕೋ ಏನೊ ಜನ ವಿರಳವಾಗಿದ್ದರು. ವಿಶ್ವ ಪರಂಪರೆಯ ಪಟ್ಟಿಯಲ್ಲಿರುವ ಈ ಆವರಣದಲ್ಲಿ ಮೂರ್ನಾಕು ಸ್ಮಾರಕಗಳಿವೆ. ಮೊದಲೇ ಸಿಗೋದು ಇಸಾಖಾನ್ ಟಾಂಬ್. ಈತ  ದೆಹಲಿಯಿಂದ ಆಳಿದ ಸೂರ್ ಮನೆತನದ ಶೇರ್ ಸಹ ಸೂರ್ ನ‌ ಬಳಿ ಅಧಿಕಾರಿಯಾಗಿದ್ದನಂತೆ. ಈ ಇಸಾಖಾನ್ ಸ್ಮಾರಕ ಸಣ್ಣಗಾತ್ರದ್ದಾದರೂ ಬಹಳ ಕಲಾತ್ಮಕವಾಗಿದೆ. ಸದ್ಯ ಅದರ ಪುನರುಜ್ಜೀವನದ ಕೆಲಸ ಕೂಡ ಪ್ರಗತಿಯಲ್ಲಿತ್ತು. ಅದು ಸಂಪೂರ್ಣಗೊಂಡಮೇಲೆ ಈಗಿರುವುದಕ್ಕಿಂತ ಚೆಂದ ಕಾಣುತ್ತದೆಂದು ಕೊಂಡೆವು.

 ಮೇನ್ ಗೇಟಿನಿಂದ ಸುಮಾರು ನೂರೈವತ್ತು ಮೀಟರ್ ನಂತರ ಟಾಂಬ್ ನ ಮುಖ್ಯ ಪ್ರವೇಶ ದ್ವಾರವಿದೆ. ಇದು ಕೆಂಪು ಮರಳು ಶಿಲೆ ಮತ್ತು ಬಿಳಿ ಅಮೃತ ಶಿಲೆಗಳಿಂದ ನಿರ್ಮಿತವಾದ ಮೊದಲ ಸ್ಮಾರಕವೆಂತಲೂ ಹೇಳಲಾಗುತ್ತದೆ. ಕಟ್ಟಡದ ಸುತ್ತ ಚಚ್ಚೌಕವಾಗಿ ನಿರ್ಮಿತವಾದ ನೀರ ದಾರಿಯೂ ಮತ್ತು ಕಾರಂಜಿಗಳೂ ಇವೆ.( ಬಹುತೇಕ ಕಡೆ ನೀರು ಹರಿಯುತ್ತಿರಲಿಲ್ಲ!) ಈ ನಾಲ್ಕೂ ದಿಕ್ಕಿನ ನೀರ ದಾರಿ ಇಸ್ಲಾಮಿಕ್ ಮೈಥಾಲಜಿಯಲ್ಲಿ ಬರುವ ಜನ್ನತ್ ಯಾನೆ ಸ್ವರ್ಗದ ಚಿತ್ರಣವಂತೆ. ಬಹುಶಃ ತಾಜ್ ಮಹಲ್ ಹೊರತುಪಡಿಸಿ ತುಂಬಾ ಕಡೆ ಇದೇ ಮಾದರಿಯ ಕಟ್ಟೋಣಿಕೆ ಇವೆ.  ಕಟ್ಟಡ ಎತ್ತರದ ಜಗತಿಯ ಮೇಲಿದೆ. ಸುಮಾರು ಇಪ್ಪತ್ತಕ್ಕೂ ಹೆಚ್ಚಿನ ಕಡಿದಾದ ಮೆಟ್ಟಿಲೇರಿದ ಮೇಲೆ  ಕಟ್ಟಡವಿದೆ. ಮೆಟ್ಟಿಲುಗಳೂ ಸಹ ನಾಕೂ ಬದಿಯಲ್ಲಿವೆ.

ಹುಮಾಯೂನ್ ಟಾಂಬ್ ಆವರಣದ ಒಳಗೇ ಒಂದು ಪ್ರತ್ಯೇಕ ಆದರೂ ವಿಶೇಷ ರಚನೆ ಇದೆ. ಇದನ್ನು ಬಾರ್ಬರ್ ಟಾಂಬ್ ಎಂದು ಕರೆಯಲಾಗುತ್ತದೆ. ಈತ ಹುಮಾಯೂನನಿಗೆ ಮೆಚ್ಚಿನ ಕ್ಷೌರಿಕನಂತೆ. ಅವನಿಗೆ ರಾಜಪರಿವಾರಕ್ಕೆ ಇಲ್ಲದ ವಿಶೇಷ ಅವಕಾಶ ಸಿಕ್ಕಿದೆ. ಈ ರಚನೆ ಅಕ್ಬರನ ಕಾಲದಲ್ಲಿ ಆಗಿದ್ದೆಂದೂ ಹೇಳಲಾಗುತ್ತದೆ. ಅಂದ ಹಾಗೆ ಮುಘಲರಲ್ಲಿ ಹುಮಾಯೂನ್ ಅಷ್ಟೇನೂ ಜನಪ್ರಿಯ ದೊರೆಯಲ್ಲ; ಆದರೆ ಆತ ಜೊತೆಯಲ್ಲಿ ಒಂದು ಗ್ರಂಥಾಲಯವನ್ನೇ ಹೊತ್ತೊಯ್ಯುವಷ್ಟು ಪುಸ್ತಕ ಪ್ರೇಮಿಯಾಗಿದ್ದನಂತೆ.

ಹಿಂದಿನ ದಿನದ ಅಸೌಖ್ಯದ ಕಾರಣಕ್ಕೋ ಏನೊ ದಿನೇಶ್ ಒಬ್ಬರನ್ನು ಹೊರತುಪಡಿಸಿ ಉಳಿದೆಲ್ಲರೂ ರಾತ್ರಿ ಸರಿಯಾಗಿ ಊಟ ಮಾಡದ ಕಾರಣ ನಾನು, ದಿನೇಶ್ ಮತ್ತು ಆರುಶ್ ಮಾತ್ರ ಕೊಂಚ ಸುತ್ತಾಡಿ ನೋಡಿದೆವು. ಉಳಿದವರು ತಿಂಡಿ ಏನು ತಿನ್ನೋದು, ಎಲ್ಲಿ ಹೋಗೋದು ಅನ್ನೋದರ ಬಗ್ಗೆಯೇ ತಲೆ ಕೆಡಿಸಿಕೊಂಡಂತಿತ್ತು. 

ಹುಮಾಯೂನ್ ಟಾಂಬ್ ಮತ್ತು ಬಾರ್ಬರ್ ಸ್ಮಾರಕದ ಹಳೆಯ ಚಿತ್ರ- ಕೃಪೆ ಗೂಗಲ್

 ಹೊರಡೋ ಹವಣಿಕೆಯಲ್ಲಿದ್ದ ನನಗೆ ಯಾರೋ ಕನ್ನಡದಲ್ಲಿ ಮಾತಾಡುತ್ತಿರುವಂತೆ ಕೇಳಿತು. ಕನ್ನಡ ಕನ್ನಡ ಹಾ ಸವಿಗನ್ನಡ… ಗಮನವಿಟ್ಟು‌ ಕೇಳಿದರೆ ಅದು ಕನ್ನಡವಾಗಿರಲಿಲ್ಲ; ತುಳು. ಮಾತಿನ ನಡುವೆ ಆಪ್ತಮಿತ್ರ ಸಿನೆಮಾ ಹೆಸರು ಪ್ರಸ್ತಾಪಿಸಿದ ಕೂಡಲೆ ಕನ್ನಡದವರಾ ಎಂದು ಕೇಳಿಯೇ ಬಿಟ್ಟೆ. ಅದು ಮಂಗಳೂರಿನ ಒಂದು ಗುಂಪಾಗಿತ್ತು. ಅವರಿಗೂ ಖುಶಿ. ನಾಕಾರು ಫೋಟೋ ಸೆರೆಹಿಡಿಯೋ ಹೊತ್ತಿಗೆ ಎಲ್ಲರೂ ಹಸಿವಿನಿಂದ ಕಂಗಾಲಾಗಿದ್ದರು. ಹತ್ತಿರದಲ್ಲಿಯೇ ಇದ್ದ ನಿಜಾಮುದ್ದೀನ್ ದರ್ಗಾದ ಬಳಿ ಹೋಗಿ ಅಲ್ಲಿಯೇ ಉಪಹಾರಕ್ಕೆ ಏನಾದರೂ ಹುಡುಕುವುದು ಎಂದುಕೊಂಡರೂ ನಮಗೆ ಸಿಕ್ಕಿದ ಟ್ಯಾಕ್ಸಿಯವ ಇಲ್ಲಿಂದ ಮೂರು ಕಿ.ಮೀ. ದೂರದಲ್ಲಿ ಸೌತ್ ಇಂಡಿಯನ್ ರೆಸ್ಟುರಾ ಸಿಗುವುದೆಂದು ಆಸೆ ಹುಟ್ಟಿಸಿದ. ನಮ್ಮಿಡೀ ಪ್ರವಾಸವನ್ನು ಸಹ್ಯಗೊಳಿಸಿದ ಪುಣ್ಯಾತ್ಮರು ಯಾರಾದರೂ ಇದ್ದರೆಂದರೆ ಅವರು ಆಟೋ ಮತ್ತು ಟ್ಯಾಕ್ಸಿ ಡ್ರೈವರುಗಳು. ಸೌತ್ ಮೀಲ್ ಅನ್ನೋ ಪದಪುಂಜವೇ ನಾಲಗೆಯಲ್ಲಿ ನೀರೂರಲು ಇನ್ನೂ ಒಂದು ಕಾರಣ ಹಿಂದಿನ ರಾತ್ರಿ ಹೋಲ್ ಸೇಲ್ ಆಗಿ ಎಲ್ಲರಿಂದ ಬಹಿಷ್ಕೃತವಾಗಿದ್ದ ನಾರ್ತ್ ಬಿರಿಯಾನಿ.

ಅದೊಂದು ತಮಿಳುನಾಡಿನ ಮೂಲದವರ ರೆಸ್ಟುರಾ. ಹೆಸರು ಹೋಟೆಲ್ ಚಿದಂಬರಂ. ತಟ್ಟೆ ಇಡ್ಲಿ, ದೋಸೆ, ವಡೆ, ಫಿಲ್ಟರ್ ಕಾಫಿ ಎಲ್ಲವೂ ಹೊಟ್ಟೆ ಸೇರಿದ ಮೇಲೆ ಸಮಾಧಾನವಾಗಿದ್ದೂ ಅಲ್ಲದೆ; ಹನ್ನೊಂದು ಗಂಟೆಗೆ ರೂಮು ಸೇರಿ ನಿದ್ರಿಸುವ ಪ್ರತಿಜ್ಞೆ ಕೂಡ ಮರವೆಗೆ ಸಂದು ಓಡಾಟ ಮುಂದುವರಿಸಿದೆವು.

 ಮುಂದಿನ ಸ್ಥಳ ಕರ್ತವ್ಯಪಥ. ಹಿಂದೆ ರಾಜಪಥವಾಗಿತ್ತು. ಈಗ ಪಥವೇ ಮಾಯವಾಗಿ ಕೇವಲ ಪಾರ್ಕ್ ಆಗಿದೆ‌. ದಶಕದ ಹಿಂದೆ ವಿಶಾಲವಾಗಿದ್ದರೂ ವಿರಳ ವಾಹನಗಳಿಂದ ಕೂಡಿದ್ದ ಈ ರಸ್ತೆಗುಂಟ ನಡೆದು ಜಂತರ್ ಮಂತರ್, ಪಾಲಿಕಾ ಬಝಾರ್, ಸಂಸದ್ ಭವನ, ಸೆಂಟ್ರಲ್ ಸೆಕ್ರೆಟ್ರಿಯೇಟ್ ಮತ್ತು ರಾಷ್ಟ್ರಪತಿ ಭವನದ ಗೇಟ್ವರೆಗೆ ಕಾಲ್ನಡಿಗೆಯಲ್ಲಿ ನಾನು- ಸುಜಾತ  ಸುತ್ತಾಡಿದ್ದೆವು. ಸದ್ಯ ರಸ್ತೆಯ ಹೆಸರು ಮಾತ್ರವಲ್ಲದೆ ಅದರ ಸ್ವರೂಪವನ್ನೂ ಸಹ ಬದಲಿಸಿರುವ ಸರ್ಕಾರ ಸೆಂಟ್ರಲ್ ವಿಸ್ತಾದ ನಿರ್ಮಾಣದಲ್ಲಿ ನಿರತವಾಗಿದೆ. ಇಂಡಿಯಾ ಗೇಟಿನ ಒಂದು ಬದಿಯಲ್ಲಿ ಸುಭಾಶ್ಚಂದ್ರ ಬೋಸ್ ಅವರ ಪ್ರತಿಮೆ ಅನಾವರಣಗೊಂಡಿದೆ. 

ಇಸಾಖಾನ್ ಟಾಂಬ್ ಬಳಿ- ಆರುಶ್, ರೋಹಿಣಿ ಮತ್ತು ಸುಜಾತ.

ಇನ್ನಷ್ಟು ವರ್ಷಗಳು ಹೋದರೆ ಇನ್ನೂ ಏನೆನರ ಹೆಸರುಗಳು ಬದಲಿಯಾಗುತ್ತವೋ ಕಾಣೆ. ಹೊಸದೆಹಲಿ ನಿರ್ಮಿಸಿದ ಬ್ರಿಟಿಷರು ವಿಶಾಲವಾದ ರಸ್ತೆಗಳನ್ನು ನಿರ್ಮಿಸಿ ದೆಹಲಿ‌ ಮೂಲಕ ದೇಶ ಆಳಿದ ಬಹುತೇಕ ಎಲ್ಲ ಅರಸರ ಹೆಸರುಗಳನ್ನು ಇರಿಸಿದ್ದಾರೆ. ರಾಜಪಥದಂತೆ ಈ ಹೆಸರುಗಳೂ ಮುಸುಳಿಸಬಹುದು. ರಾತ್ರೋರಾತ್ರಿ ರೈಲಿನ ಹೆಸರು ಟೀಪು ಬದಲಿಗೆ ಒಡೆಯರ್ ಆಗೋದಾದ್ರೆ ಏನೂ ಅಗಬಹುದು. 

ದೋಸೆ ಇಡ್ಲಿ ತಿಂದ ಖುಶಿಯಲ್ಲಿ ಎರಡು ಆಟೋ ಬುಕ್ ಮಾಡಿಕೊಂಡು ಇಂಡಿಯಾ ಗೇಟ್ ಕಡೆ ಹೊರಟೆವು. ಒಬ್ಬೊಬ್ಬ ಆಟೋಕಾರನೂ ಬೇರೆ ಬೇರೆ ಗೇಟ್ ಕಡೆ ಡ್ರಾಪಿಸಿದ್ದರಿಂದ ಮತ್ತೆ ನಾವೆಲ್ಲ ಒಟ್ಟು ಸೇರಲು ಅರ್ಧ ತಾಸೇ ಹಿಡಿಯಿತು. 

 ದೆಹಲಿ ಪ್ರವಾಸಕ್ಕೆ ಬರುವ ಬಹುತೇಕರು ನೋಡಿಯೇ ತೀರುವ ಸ್ಮಾರಕವೆಂದರೆ ಇಂಡಿಯಾ ಗೇಟ್. ೪೨ ಮೀಟರ್ ಎತ್ತರದ ಈ ಸ್ಮಾರಕ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದದ್ದು. ಹಲವರು ಬಾಂಬೆಯ ಗೇಟ್ ವೇ ಆಫ್ ಇಂಡಿಯಾ ಮತ್ತು ದೆಹಲಿಯ ಇಂಡಿಯಾ ಗೇಟ್ ಗಳನ್ನು ಅದಲಿ ಬದಲಿ ಮಾಡಿ ಹೇಳುವುದಿದೆ. ೧೯೧೪ ರ ಮೊದಲ ಜಾಗತಿಕ ಯುದ್ಧ ಮತ್ತು ೧೯೧೯ ರ ಆಫಘನ್ ಯುದ್ಧದಲ್ಲಿ ಮಡಿದ ಸುಮಾರು ೭೦ ಸಾವಿರ ಬ್ರಿಟಿಷ್ ಮತ್ತು ಭಾರತೀಯ ಸೈನಿಕರ ನೆನಪಿನ ಸ್ಮಾರಕವೇ ಇಂಡಿಯಾ ಗೇಟ್. ನೋಡಲು ಬಹಳ ಸರಳವಿದ್ದರೂ‌ ತನ್ನ ಬೃಹತ್ ಗಾತ್ರ ಮತ್ತು ಕಲಾತ್ಮಕತೆಯಿಂದ ಗಮನ ಸೆಳೆಯುತ್ತದೆ. ಕಳೆದ ಶತಮಾನದ ಆರಂಭಕ್ಕೆ ೭೦ ಸಾವಿರ ಅಂದರೆ ಕಡಮೆ ಸಂಖ್ಯೆಯಲ್ಲ. ಇಡಿಯಾಗಿ ಜಗತ್ತು ಸಾವಿರಾರು ವರ್ಷಗಳಿಂದ ನಡೆದಿರುವ ನಿರಂತರ ಯುದ್ಧಗಳಲ್ಲಿ ಎಷ್ಟು ಸೈನಿಕರು, ಮಂದಿ ಮಡಿರಬಹುದು ಎಂಬುದು ಊಹೆಗೂ ನಿಲುಕದ ಸಂಗತಿ. ಲೇಖಕ ನಾಗೇಶ ಹೆಗಡೆಯವರು ತಮ್ಮ ʼಗಗನಸಖಿಯರ ಸೆರಗು ಹಿಡಿದುʼ ಕೃತಿಯಲ್ಲಿ ಅಮೇರಿಕಾದಲ್ಲಿ ವಿಯೆಟ್ನಾಂ ಯುದ್ಧದಲ್ಲಿ ಪ್ರಾಣತೆತ್ತ ೫೨ ಸಾವಿರ ಸೈನಿಕರ ಸ್ಮಾರಕವನ್ನು ಕಂಡು ಈ ಸ್ಮಾರಕದಲ್ಲಿ ನಮ್ಮ ಚಾಮರಾಜನಗರದ ಕೆಲವು ಹೆಸರು ಬಿಟ್ಟು ಹೋಗಿವೆ ಎನ್ನುತ್ತಾರೆ! ಅವು ಯಾರ ಹೆಸರೆಂದರೆ; ಆ ಸ್ಮಾರಕಕ್ಕೆ ಬಳಸಿದ ನುಣುಪು ಶಿಲೆ ನಮ್ಮ ಚಾಮರಾಜನಗರದ ಬಳಿ ಮೈನಿಂಗ್ ಮಾಡಿ ರಫ್ತು ಮಾಡಿದ್ದಂತೆ. ಮೈನಿಂಗ್ ಮದ್ದಿನ ಸಿಡಿತಕ್ಕೆ ಸಿಕ್ಕಿ ಸತ್ತ‌ ಕಾರ್ಮಿಕರ ಹೆಸರೂ ಸ್ಮಾರಕದ ಮೇಲೆ ಕೆತ್ತಲ್ಪಡಬೇಕಿತ್ತಲ್ಲವೆ?

ಹುಮಾಯೂನ್ ಟಾಂಬ್ ಮುಂದೊಂದು ಸೆಲ್ಫಿ.

ಬಹುತೇಕ ಪ್ರವಾಸಿ ಸ್ಥಳಗಳಲ್ಲಿ ಇತ್ತೀಚಿನ ಬೆಳವಣಿಗೆ (ಅನಪೇಕ್ಷಿತವೆನ್ನಿ) ಒಂದೋ ಪ್ರೀ ವೆಡ್ಡಿಂಗ್ ಶೂಟ್ ಮಾಡಿಸುತ್ತಿರುವ ಜೋಡಿಗಳು ಇಲ್ಲವೇ ಟಿಕ್ ಟಾಕ್ ಮಾದರಿಯ ವಿಡಿಯೋ ಶೂಟ್ ಮಾಡುವ ಯುವಸಮೂಹ ಕಣ್ಣಿಗೆ ಬಿದ್ದೇ ತೀರುತ್ತದೆ. ಇಂಡಿಯಾ ಗೇಟ್ ಬಳಿಯೂ ಇಂಥವರು ಠಳಾಯಿಸಿದ್ದರೆನ್ನಿ. ಇತ್ತೀಚೆಗೆ ಇಂಡಿಯಾ ಗೇಟಿಗೆ ಕೇವಲ ೫೦ ಮೀಟರ್ ಅಂತರದಲ್ಲಿ ಸುಭಾಶ್ ಚಂದ್ರ ಬೋಸರ ಪ್ರತಿಮೆ ಅನಾವರಣವಾಗಿದೆ. ಸರ್ದಾರ್ ಪಟೇಲ್ ಮತ್ತು ಸುಭಾಶ್ಚಂದ್ರ ಬೋಸರನ್ನು ಗಾಂಧಿ – ನೆಹರೂಗೆ ಪ್ರತಿಸ್ಫರ್ಧಿಗಳಂತೆ ಬಿಂಬಿಸುವ ಕೆಲಸ ಇತ್ತೀಚಿನ ದಿನಗಳಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದೆ. ಚರಿತ್ರೆ ಹೇಳುವ ಸತ್ಯವೆಂದರೆ ಸುಭಾಶರ ನಂತರ ಬ್ರಿಟಿಷ್ ಸರ್ಕಾರ ಐ ಎನ್ ಎ ಸೈನಿಕರನ್ನು ಶಿಕ್ಷೆಗೆ ಗುರಿಮಾಡಲು ಹೊರಟಾಗ ಅವರ ಪರ ವಕಾಲತ್ತು ಹಾಕಿದ ವಕೀಲ ಪಂಡಿತ್ ನೆಹರೂ. ಹಾಗೇ ಪಟ್ಟಾಭಿ‌ಸೀತಾರಾಮಯ್ಯ ವಿರುದ್ಧ ಅಧ್ಯಕ್ಷ ಸ್ಥಾನಕ್ಕೆ ಸ್ಫರ್ಧಿಸಿ ನಂತರ ವಿಚಾರ ಭಿನ್ನತೆಯಿಂದ ಸ್ಥಾನ ತೊರೆದು ಹೋರಾಟದ ಹಾದಿ ಬದಲಿಸಿದ ಸುಭಾಶರು ಜಪಾನ್ ಜರ್ಮನಿ ಗಳ ಸಹಾಯದಿಂದ ಕಟ್ಟಿದ ಸೈನ್ಯದ ರೆಜಿಮೆಂಟಿಗೆ ಗಾಂಧಿಯ ಹೆಸರಿಟ್ಟಿದ್ದರು ಎಂಬುದು ಈ ವ್ಯಕ್ತಿತ್ವಗಳನ್ನು ಎದುರಾ ಬದುರಾ ನಿಲ್ಲಿಸುವವರಿಗೆ ಕಾಣುವುದಿಲ್ಲ.

ರೋಹಿತ್‌ ಅಗಸರಹಳ್ಳಿ

ಹಾಸನದ ನಿವಾಸಿಯಾದ ರೋಹಿತ್‌ ಅಗಸರಹಳ್ಳಿ ವೃತ್ತಿಯಿಂದ ಕನ್ನಡ ಉಪನ್ಯಾಸಕರು. ಪ್ರವೃತ್ತಿ ಓದು, ಸಿನೆಮಾ ಮತ್ತು ತಿರುಗಾಟ.

Related Articles

ಇತ್ತೀಚಿನ ಸುದ್ದಿಗಳು