Friday, June 14, 2024

ಸತ್ಯ | ನ್ಯಾಯ |ಧರ್ಮ

ನಿಜವಾಗಿ ಯೋಗ, ಧ್ಯಾನದ ಅಗತ್ಯ ಶಿಕ್ಷಣ ಸಚಿವರಿಗಿದೆ : ಸಿದ್ಧರಾಮಯ್ಯ

ಬೆಂಗಳೂರು: ಕರ್ನಾಟಕದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು ರಾಜ್ಯದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಲ್ಲಿ ದೃಡತೆ, ಏಕಾಗ್ರತೆ, ದೈಹಿಕ ಮತ್ತು ಮಾನಸಿಕ ಒತ್ತಡ ಕಡಿಮೆಯಾಗಲು ಸಹಕಾರಿಯಾಗುವಂತೆ ಶಾಲೆಗಳಲ್ಲಿ ಪ್ರತಿದಿನ ಧ್ಯಾನವನ್ನು ಮಾಡಿಸುವುದು ಅಗತ್ಯವಾಗಿದೆ ಎಂಬ ಸುತ್ತೋಲೆಯನ್ನು ಹೊರಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ಸರ್ಕಾರವನ್ನು ಟೀಕಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಸಿದ್ದರಾಮಯ್ಯನವರು, ʼಯೋಗ-ಧ್ಯಾನ ಯಾವುದಕ್ಕೂ ನನ್ನ ವಿರೋಧ ಇಲ್ಲ. ಆದರೆ ಶಾಲೆಗಳಲ್ಲಿ ಯಾವುದು ಮುಖ್ಯ, ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ ಯಾವುದಕ್ಕೆ ಆದ್ಯತೆ ನೀಡಬೇಕೆನ್ನುವುದಷ್ಟೇ ಪ್ರಶ್ನೆ. ಒಂದೆಡೆ ಶಾಲೆ ನಡೆಸಲು ಸಾರ್ವಜನಿಕರಿಂದ ಭಿಕ್ಷೆ ಬೇಡುತ್ತಿರುವ ಬಿಜೆಪಿ ಸರ್ಕಾರ ಇನ್ನೊಂದೆಡೆ ದಿನಕ್ಕೊಂದರಂತೆ ಗಿಮಿಕ್ ಗಳನ್ನು ಮಾಡುತ್ತಿರುವುದು ಖಂಡನೀಯʼ ಎಂದು ಕಿಡಿಕಾರಿದ್ದಾರೆ.

ʼರಾಜ್ಯದಲ್ಲಿ ಬಿ.ಸಿ ನಾಗೇಶ್‌ ಅವರು ಶಿಕ್ಷಣ ಸಚಿವರಾದ ದಿನದಿಂದ ಪಠ್ಯಪುಸ್ತಕ ವಿವಾದದಿಂದ ಹಿಡಿದು ಶಾಲಾ ಶಿಕ್ಷಕರ ನೇಮಕದ ವರೆಗೆ ಬರೀ ಹಗರಣಗಳಲ್ಲೇ ಈಜಾಡುತ್ತಿದ್ದಾರೆ. ಅವರ ಮನಸ್ಸು ಸ್ಥಿಮಿತದಲ್ಲಿದ್ದ ಹಾಗಿಲ್ಲ, ನಿಜವಾಗಿ ಯೋಗ ಮತ್ತು ಧ್ಯಾನದ ಅಗತ್ಯ ಎಲ್ಲರಿಗಿಂತ ಹೆಚ್ಚಾಗಿ ಶಿಕ್ಷಣ ಸಚಿವರಿಗಿದೆʼ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ಕೊರೊನಾವನ್ನು ಸರಿಯಾಗಿ ನಿಯಂತ್ರಿಸಲಾಗದೆ ಶಾಲೆಗಳನ್ನು ಮುಚ್ಚಿ, ಆನ್ ಲೈನ್ ತರಗತಿಗಳ ಮೂಲಕ ವಿದ್ಯಾರ್ಥಿಗಳಲ್ಲಿ ಮೊಬೈಲ್ ಹುಚ್ಚು ಹತ್ತಿಸಿರುವ ಬಿಜೆಪಿ ಸರ್ಕಾರ, ಈಗ ಆ ಹುಚ್ಚು ಬಿಡಿಸಲು ಧ್ಯಾನ ನಡೆಸಲು ಮುಂದಾಗಿರುವುದು ಹುಚ್ಚುತನವಲ್ಲದೆ ಮತ್ತೇನು? ಎಂದು ಪ್ರಶ್ನಿಸಿ

ಎಳೆಯ ಮಕ್ಕಳು ಆಡುತ್ತಾ, ಕುಣಿಯುತ್ತಾ ಪಾಠ ಓದಬೇಕು. ಇದರ ಬದಲಿಗೆ ಅವರನ್ನು ಕೋಣೆಯಲ್ಲಿ ಕೂಡಿ ಹಾಕಿ ಬಲಾತ್ಕಾರವಾಗಿ ಯೋಗ-ಧ್ಯಾನಗಳ ಕಸರತ್ತು ಮಾಡಿಸಿದರೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಅವರು ಇನ್ನಷ್ಟು ಕುಗ್ಗಿಹೋಗುತ್ತಾರೆ ಎಂದು ಹೇಳಿದ್ದಾರೆ.

ಮೊದಲು ಶಾಲೆಗಳಲ್ಲಿ ಅಗತ್ಯ ಸಂಖ್ಯೆಯಲ್ಲಿ ಶಿಕ್ಷಕರನ್ನು ನೇಮಿಸಿ ಅವಶ್ಯಕವಾದ ಬೋದನಾ ಸಲಕರಣೆಗಳನ್ನು ಬಿಜೆಪಿ ಸರ್ಕಾರ ಒದಗಿಸಬೇಕು. ಪ್ರತಿಶಾಲೆಯಲ್ಲಿ ಕಲೆ, ಸಂಗೀತ ಮತ್ತು ಕ್ರೀಡೆಗಳಲ್ಲಿ ತರಬೇತಿ ನೀಡುವ ಶಿಕ್ಷಕರನ್ನು ನೇಮಿಸಬೇಕು. ಇದನ್ನು ಬಿಟ್ಟು ತಮ್ಮ ರಾಜಕೀಯ ಅಜೆಂಡಾಕ್ಕಾಗಿ ಮಕ್ಕಳ ಬದುಕಿನಲ್ಲಿ ಚೆಲ್ಲಾಟವಾಡಬಾರದು ಎಂದು ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು