Monday, June 17, 2024

ಸತ್ಯ | ನ್ಯಾಯ |ಧರ್ಮ

ಪೊಲೀಸ್‌ ಕಾನ್ಸ್ಟೇಬಲ್ ಉದ್ಯೋಗಾಕಾಂಕ್ಷಿಗಳ ಬೇಡಿಕೆಗೆ ಕೊನೆಗೂ ಸ್ಪಂದಿಸಿದ ಸರ್ಕಾರ

‌ಕರ್ನಾಟಕ ರಾಜ್ಯ ಪೊಲೀಸ್‌ ಡಿಪಾರ್ಟ್‌ಮೆಂಟಿನ ಪೊಲೀಸ್‌ ಕಾನ್ಸ್‌ಟೇಬಲ್‌ (ಸಿವಿಲ್‌, ಸಿಎಆರ್‌ ಹಾಗೂ ಡಿಎಆರ್‌) ಹುದ್ದೆಗಳಿಗೆ ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯನ್ನು ಒಂದು ಬಾರಿಗೆ ಮಾತ್ರವೇ ಅನ್ವಯಿಸುವಂತೆ ಎರಡು ವರ್ಷಗಳ ಕಾಲ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.

ಕೊರೋನಾ ಮತ್ತು ಅದರ ಕಾರಣದಿಂದ ಹೇರಲ್ಪಟ್ಟ ಲಾಕ್‌ಡೌನ್‌ ಸಾಕಷ್ಟು ಕೆಲಸದ ಕನಸನ್ನು ಹೊತ್ತಿದ್ದ ಯುವಕರು ಮನೆಯಲ್ಲೇ ಕುಳಿತು ಕಂಗಾಲಾಗಿದ್ದರು. ಆ ಸಮಯದಲ್ಲಿ ಸರಕಾರಿ ಮತ್ತು ಖಾಸಗಿ ವಲಯದಲ್ಲಿ ಬಹುತೇಕ ನೇಮಕಾತಿಗಳು ನಿಂತು ಹೋಗಿದ್ದವು. ಬಹುಪಾಲು ಯುವಕರೇ ಇರುವ ದೇಶದಲ್ಲಿ ಹಲವು ವರ್ಷಗಳ ಕಾಲ ಹೊಸ ಉದ್ಯೋಗವಕಾಶಗಳು ನಿಂತು ಹೋಗುವುದೆಂದರೆ ದೇಶದ ಯುವಶಕ್ತಿಯ ವ್ಯರ್ಥ ಮತ್ತು ಆರ್ಥಿಕತೆ ಸ್ಥಗಿತಗೊಳ್ಳುವುದೆಂದೇ ಅರ್ಥ.

ಸನ್ನಿವೇಶ ಹೀಗಿರುವಾಗ, ಕೊನೆಗೂ ಕೊವಿಡ್‌ ಎನ್ನುವ ಕೆಟ್ಟ ಕನಸು ಕಳೆದು ಯುವಕರು ಹೊಸ ನಾಳೆಗಳಿಗೆ ಕಣ್ಣು ತೆರೆಯುತ್ತಿರುವ ವೇಳೆ ಅವರಲ್ಲಿ ಕೆಲವರು ಆಗಲೇ ಸರಕಾರಿ ಕೆಲಸಗಳನ್ನು ಪಡೆಯಲು ಇರುವ ವಯೋಮಿತಿಯನ್ನು ಮೀರಿದ್ದರು. ಅವರ ಪಾಲಿಗೆ ಅವರ ಕನಸಿನ ಕೆಲಸವೆನ್ನುವುದು ಪಡೆಯಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಸೃಷ್ಟಿಯಾಗಿತ್ತು.

ಅಂತಹ ಕೆಲಸಗಳಲ್ಲಿ ಈಗ ಕರ್ನಾಟಕ ಸರ್ಕಾರ ಅರ್ಜಿ ಆಹ್ವಾನಿಸಿರುವ ಕಾನ್ಸ್ಟೇಬಲ್‌ ಹುದ್ದೆಯೂ ಒಂದು. ಸರಕಾರಿ ಕೆಲಸಗಳೇ ಅತ್ಯಲ್ಪವಾಗಿರುವ ಈ ಸಮಯದಲ್ಲಿ ಈ ಹುದ್ದೆ ಎನ್ನುವುದು ಬಹಳಷ್ಟು ಯುವ ಜನರ ಪಾಲಿಗೆ ಬಹಳ ಪ್ರಾಮುಖ್ಯತೆಯನ್ನು ಹೊಂದಿದೆ. ಈ ಆಕಾಂಕ್ಷಿಗಳು ತಮಗೆ ಅವಕಾಶ ಸಿಕ್ಕಲ್ಲೆಲ್ಲ ವಯೋಮಿತಿಯನ್ನು ವಿಸ್ತರಿಸುವಂತೆ ಅಂಗಲಾಚುತ್ತಿದ್ದರು. ಸೋಷಿಯಲ್‌ ಮೀಡಿಯಾಗಳಲ್ಲಿ ಹೆಚ್ಚೂ ಕಡಿಮೆ ಆಂದೋಲನವೇ ಈ ಕುರಿತಾಗಿ ಸೃಷ್ಟಿಯಾಗಿತ್ತು.

ಆದರೆ ಸರ್ಕಾರ ಈ ಕುರಿತು ಬಹುತೇಕ ಕಿವುಡಾಗಿಯೇ ಉಳಿದಿತ್ತು. ಈಗ ಕೊನೆಗೂ ಸರಕಾರ ಎಚ್ಚೆತ್ತು ಈ ಯುವಜನರ ಕೂಗಿಗೆ ಕಿವಿಕೊಟ್ಟು ವಯೋಮಿತಿಯನ್ನು ಒಂದು ಬಾರಿಗೆನ್ನುವಂತೆ ವಿಸ್ತರಿಸಿದೆ. ವಯೋಮಿತಿ ವಿಸ್ತರಣೆಯ ವಿವರಗಳು ಈ ಕೆಳಗಿನಂತಿವೆ:

ಸಿವಿಲ್‌ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಎಸ್ಸಿ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 29 ವರ್ಷ, ಇತರೆ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 27 ವರ್ಷ, ಬುಡಕಟ್ಟು ಅಭ್ಯರ್ಥಿಗಳಿಗೆ 32 ವರ್ಷ ನಿಗದಿಗೊಳಿಸಲಾಗಿದೆ. ಸಿಎಆರ್‌ ಮತ್ತು ಡಿಎಆರ್‌ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಗರಿಷ್ಠ ವಯೋಮಿತಿ ಪರಿಶಿಷ್ಟಜಾತಿ ಮತ್ತು ಇತರೆ ಹಿಂದುಳಿದ ವರ್ಗ ಅಭ್ಯರ್ಥಿಗಳಿಗೆ 29 ವರ್ಷ, ಇತರೆ ಅಭ್ಯರ್ಥಿಗಳಿಗೆ 27 ವರ್ಷ ಹಾಗೂ ಬುಡಕಟ್ಟು ಜನಾಂಗದ ಅಭ್ಯರ್ಥಿಗಳಿಗೆ 32 ವರ್ಷ ನಿಗದಿಗೊಳಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು