Monday, June 17, 2024

ಸತ್ಯ | ನ್ಯಾಯ |ಧರ್ಮ

ಗುಜರಾತ್ ನಲ್ಲಿ ಪಕ್ಷಾಂತರ ಪರ್ವ ; ಹಿರಿಯ ಬಿಜೆಪಿ ನಾಯಕ ರಾಜೀನಾಮೆ

ಗುಜರಾತ್ ರಾಜ್ಯದಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಯ ಬೆನ್ನಲ್ಲೇ ಪ್ರಮುಖ ಪಕ್ಷಗಳಿಂದ ರಾಜಕೀಯ ನಾಯಕರ ವಲಸೆ ಪ್ರಾರಂಭವಾಗಿದೆ. ಪ್ರಬಲ ಸಂಘಟನೆ ಮೂಲಕ ಆಡಳಿತ ಪಕ್ಷಕ್ಕೆ ಸಣ್ಣದಾಗಿ ಚುರುಕು ಮುಟ್ಟಿಸಲು ಹೊರಟಿರುವ ಎಎಪಿ ಕೂಡಾ ಈ ಪಕ್ಷಾಂತರ ಪರ್ವದಿಂದ ಹೊರತಾಗಿಲ್ಲ ಎಂಬುದು ವಿಶೇಷ.

ಇನ್ನು ಬಿಜೆಪಿ ಹಿರಿಯ ಮತ್ತು ಪ್ರಬಲ ನಾಯಕ ಜಯನಾರಾಯಣ ವ್ಯಾಸ್ ಶುಕ್ರವಾರ ತಡರಾತ್ರಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಆ ಮೂಲಕ ಗುಜರಾತ್ ರಾಜ್ಯ ಚುನಾವಣಾ ಹೊಸ್ತಿಲಲ್ಲಿ ಬಿಜೆಪಿ ಪಕ್ಷಕ್ಕೆ ಹೊಡೆತ ನೀಡಿದ್ದಾರೆ.

ಬಿಜೆಪಿ ಪಕ್ಷದಲ್ಲಿದ್ದರೂ ಅತ್ಯಂತ ಪ್ರಬುದ್ಧ ರಾಜಕೀಯ ನಾಯಕರೆಂದು ಪರಿಗಣಿಸಲ್ಪಟ್ಟಿರುವ ಮತ್ತು ಅರ್ಥಶಾಸ್ತ್ರ ನೀತಿ ವಿಷಯಗಳ ಬಗ್ಗೆ, ತಳಮಟ್ಟದ ರಾಜಕೀಯ ವಿಚಾರಗಳ ಬಗ್ಗೆ ಅಪಾರ ಅನುಭವ ಹೊಂದಿರುವ ಜಯನಾರಾಯಣ ವ್ಯಾಸ್ ಬೇರೆ ಯಾವ ಪಕ್ಷ ಸೇರಬಹುದು ಎಂಬ ಬಗ್ಗೆಯೂ ಸದ್ಯದ ಚರ್ಚೆ ನಡೆಯುತ್ತಿದೆ.

ರಾಜೀನಾಮೆಗೂ ಮುನ್ನ ಜಯನಾರಾಯಣ ವ್ಯಾಸ್ ಕಾಂಗ್ರೆಸ್ ಪಕ್ಷ ಸೇರಬಹುದು ಎಂಬ ಅನುಮಾನ ಬಿಜೆಪಿ ವಲಯದಲ್ಲಿತ್ತು. ಈ ಊಹಾಪೋಹಕ್ಕೆ ಇಂಬು ಕೊಡುವಂತೆ ವ್ಯಾಸ್ ಅವರು ಇತ್ತೀಚೆಗೆ ಅಹಮದಾಬಾದ್ ನ ಸರ್ಕಾರಿ ಪ್ರವಾಸಿ ಮಂದಿರದಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿದ್ದರು. ಆ ನಂತರ ವ್ಯಾಸ್ ರಾಜೀನಾಮೆ ಬಗ್ಗೆ ಬಿಜೆಪಿ ವಲಯದಲ್ಲಿ ಅನುಮಾನ ದಟ್ಟವಾಗಿತ್ತು.

ಜಯನಾರಾಯಣ ವ್ಯಾಸ್ ಅವರು ಗುಜರಾತಿನ ಸಿದ್ದಾಪುರ ಕ್ಷೇತ್ರದಿಂದ ಈ ಬಾರಿಯ ಚುನಾವಣೆ ಎದುರಿಸಲು ತಯಾರಿ ನಡೆಸಿದ್ದಾರೆ. ಬಿಜೆಪಿಗೆ ರಾಜೀನಾಮೆ ಬೆನ್ನಲ್ಲೇ ವ್ಯಾಸ್ ಅವರು ಯಾವ ಪಕ್ಷ ಆಯ್ದುಕೊಳ್ಳಬಹುದು ಎಂಬ ಬಗ್ಗೆಯೂ ಚರ್ಚೆ ನಡೆದಿದೆ. ಸಧ್ಯ ತಮ್ಮ ಬೆಂಬಲಿಗ ನಾಯಕರ ಜೊತೆಗೆ ಚರ್ಚಿಸಿ ಕಾಂಗ್ರೆಸ್ ಅಥವಾ ಎಎಪಿ ಸೇರುವ ಬಗ್ಗೆ ನಿರ್ಧಾರ ತಗೆದುಕೊಳ್ಳುವ ಉತ್ಸುಕತೆ ತೋರಿದ್ದಾರೆ.

ಇನ್ನು ಕಾಂಗ್ರೆಸ್ ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ಪಕ್ಷ ತೊರೆದು ಎಎಪಿ ಸೇರಿದ್ದ ಇಂದ್ರನೀಲ್ ರಾಜಗುರು ಅವರು ಈಗ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಮರಳಿದ್ದಾರೆ. ಎಎಪಿ ಪಕ್ಷದಲ್ಲಿ ಪ್ರಬಲ ಮುಖ್ಯಮಂತ್ರಿ ಆಕಾಂಕ್ಷಿ ಎಂದೇ ಬಿಂಬಿತರಾಗಿದ್ದ ರಾಜಗುರು ಯಾವಾಗ ಎಎಪಿಯಿಂದ ಹೊಸ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆಯಾಯಿತೋ ಆ ನಂತರ ಎಎಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು