Sunday, June 16, 2024

ಸತ್ಯ | ನ್ಯಾಯ |ಧರ್ಮ

ಅಂದಾಜು ಸಮಿತಿ ಆಕ್ಷೇಪ: ವಿಶೇಷ ಅಭಿವೃದ್ಧಿ ಯೋಜನೆ ಆದೇಶ ವಾಪಾಸ್‌

ಬೆಂಗಳೂರು: ವಿಧಾನಸಭೆಯ ಅಂದಾಜು ಸಮಿತಿ ಆಕ್ಷೇಪದ ಹಿನ್ನೆಲೆಯಲ್ಲಿ, ಶೈಕ್ಷಣಿಕ, ಆರೋಗ್ಯ ಮತ್ತು ಅಪೌಷ್ಠಿಕತೆ ನಿವಾರಣೆ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳೆಂದು ಗುರುತಿಸಿ ವಿಶೇಷ ಅಭಿವೃದ್ಧಿ ಯೋಜನಯಡಿಯಲ್ಲಿ ಹೊರಡಿಸಿರುವ ಆದೇಶವನ್ನು ಹಿಂದಕ್ಕೆ ಪಡೆಯಲಾಗಿದೆ.

ರಾಜ್ಯ ಸರ್ಕಾರದ ಪರವಾಗಿ ಪ್ರದೇಶಾಭಿವೃದ್ಧಿ ಮಂಡಳಿ ವಿಭಾಗದ ನಿರ್ದೇಶಕರು ಹಾಗು ಸರ್ಕಾರದ ಪದನಿಮಿತ್ತ ಉಪಕಾರ್ಯದರ್ಶಿ (ಯೋಜನೆ, ಕಾರ್ಯಕ್ರಮ, ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ) ಡಿ.ಚಂದ್ರಶೇಖರಯ್ಯ ಆದೇಶ ಹೊರಡಿಸಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶವನ್ನು ಹಿಂಪಡೆಯಲಾಗಿದೆ.

ವಿಶೇಷ ಅಭಿವೃದ್ಧಿ ಯೋಜನೆಯಡಿ ಅತಿಹಿಂದುಳಿದ ತಾಲ್ಲೂಕುಗಳಿಗೆ ರಾಜ್ಯ ಸರ್ಕಾರವು ವಿವಿಧ ಅಭಿವೃದ್ಧಿ ಸೂಚಕಗಳಲ್ಲಿ ರಾಜ್ಯ ಸರಾಸರಿಗಿಂತ ಕಡಿಮೆ ಸಾಧನೆ ಮಾಡುತ್ತಿರುವ ತಾಲ್ಲೂಕುಗಳನ್ನು ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳೆಂದು ವಿವಿಧ ಮಾನದಂಡಗಳನ್ವಯ ಗುರುತಿಸಿ, ಈ ತಾಲ್ಲೂಕುಗಳ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ 93 ತಾಲ್ಲೂಕುಗಳಲ್ಲಿ ಶಿಕ್ಷಣ ಗುಣಮಟ್ಟ ವೃದ್ಧಿಸಲು, 100 ತಾಲ್ಲೂಕುಗಳಲ್ಲಿ ಆರೋಗ್ಯ ಸೇವೆ ಬಲಪಡಿಸಲು, 102 ತಾಲ್ಲೂಕುಗಳಲ್ಲಿ ಮಕ್ಕಳ ಅಪೌಷ್ಠಿಕತೆ ನಿವಾರಣೆಗಾಗಿ 3000 ಕೋಟಿ ರೂ ವೆಚ್ಚದಲ್ಲಿ ಫಲಿತಾಂಶ ಕೇಂದ್ರೀಕೃತ ಪ್ರಯತ್ನಗಳನ್ನು ಮಾಡಲಾಗುವುದೆಂದು ಆದೇಶದಲ್ಲಿ ತಿಳಿಸಲಾಗಿತ್ತು. ಈಗ ಈ ಆದೇಶವನ್ನು ಹಿಂದಕ್ಕೆ ಪಡೆಯಲಾಗಿದೆ.

ಈ ಆದೇಶದ ಅನ್ವಯ ವಿಶೇಷ ಅಭಿವೃದ್ಧಿ ಯೋಜನೆಯಡಿ, ಅತಿಹಿಂದುಳಿದ ತಾಲ್ಲೂಕುಗಳೆಂದು ಗುರುತಿಸಿರುವ ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳ ಬಗ್ಗೆ 2022ರ ನವೆಂಬರ್‌ 3ರಂದು ಅಂದಾಜು ಸಮಿತಿ ಸಭೆ ನಡೆಸಿ, ಆಕ್ಷೇಪಣೆ ವ್ಯಕ್ತಪಡಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು