Friday, June 14, 2024

ಸತ್ಯ | ನ್ಯಾಯ |ಧರ್ಮ


ದೆಹಲಿಯಲ್ಲಿ ಸಿಕ್ಕ ʼಅಕ್ಕಲಕೋಟೆ ಸ್ವಾಮಿಗಳುʼ

ಅಕ್ಷರಧಾಮಕ್ಕೆ ಮಿಸ್ ಮಾಡದೆ ಹೋಗಿ ಬನ್ನಿ ಅಂದ ಪರಿಚಯಸ್ಥರ ಸಲಹೆಯಂತೆ ಮಿಸ್‌ ಮಾಡದೆ ಅಲ್ಲಿಗೆ ಹೋದ ರೋಹಿತ್‌ ಅಗಸರಹಳ್ಳಿಯವರ ತಿರುಗಾಟದ ತಂಡ ಅಲ್ಲಿ ನೋಡಿದ್ದಾದರೂ ಏನನ್ನು? ಓದಿ…

ಇಂಡಿಯಾ ಗೇಟ್ ಬಳಿ ತಿರುಗಾಡಿ ಮುಗಿಸೋ ಹೊತ್ತಿಗೆ ಬಿಸಿಲು‌ ನೆತ್ತಿಗೇರತೊಡಗಿತ್ತು; ಬೆನ್ನಿಗೆ ನಿನ್ನಿನ ಬಿಸಿಲ ಝಳದ ಹಳವಂಡದ ನೆನಪಿತ್ತು! ಹೀಗಾಗಿ ಉಳಿದೆರಡು ಮೂರು ಸ್ಥಳಗಳಲ್ಲಿ ಇನ್ ಡೋರ್ ಎಂಬ ಕಾರಣವೂ ಸೇರಿ NGMA ಆಯ್ಕೆ ಮಾಡಿದೆವು. ಹಿಂದಿನ ಸ್ವರೂಪದಲ್ಲಾಗಿದ್ದರೆ‌ ಇಂಡಿಯಾ ಗೇಟ್ ಹಾಯ್ದು ಬರುವ ರಸ್ತೆಯ ತುದಿಗೇ National gallery of modern art ಇದೆ. ಆದರೀಗ ಹೆಸರು ಬದಲಿಸಿಕೊಂಡ ರಾಜಪಥದಿಂದ ಒಂದು ರೌಂಡು ಹೊಡಕೊಂಡು NGMA ತಲುಪಿದೆವು. ದಿನೇಶ್ ತಮ್ಮ ಫೋನಿನಲ್ಲಿ ಕೇವಲ ಆರ್ಟ್ ಗ್ಯಾಲರಿ ಎಂದು ಹುಡುಕಿದ್ದರಿಂದ ಬೇರೆಲ್ಲೋ ತೋರಿಸಿತಂತೆ, ನಂತರ ಸರಿಯಾದ ವಿಳಾಸಕ್ಕೆ ತಲುಪಿದರು.


ಈ ಆರ್ಟ್ ಗ್ಯಾಲರಿ ಜೈಪುರ್ ಹೌಸ್ ಎಂದು ಕರೆಯಲ್ಪಡುವ ಕಟ್ಟಡ ಸಂಕೀರ್ಣದಲ್ಲಿ ದೆಹಲಿಯ ಹೃದಯ ಭಾಗದಲ್ಲಿದೆ. ಹಿಂದಿನ ದಿನದ ಓಡಾಟದ ಹಾದಿಯಲ್ಲೇ ಕಣ್ಣಿಗೆ ಬಿದ್ದ ಕಾರಣಕ್ಕೆ ನಮ್ಮ ಆಯ್ಕೆ ಪಟ್ಟಿಗೆ ಇದು ಸೇರ್ಪಡೆಯಾಗಿತ್ತು. ಇದರ ಸ್ಥಾಪನೆಯ ಕತೆ ಕಳೆದ ಶತಮಾನದ ಮೂವತ್ತರ‌ ದಶಕದವರೆಗೆ ಚಾಚಿಕೊಳ್ಳುತ್ತದೆ. ೧೯೨೯ ರಲ್ಲಿ ಅಬನೀಂದ್ರನಾಥ ಟಾಕೂರ್ ಅವರ ಶಿಷ್ಯರಿಬ್ಬರಿಂದ ಬೇರೊಂದು ಹೆಸರಿನಿಂದ ಆರಂಭವಾದ ಆಧುನಿಕ ಕಲಾಕೃತಿಗಳ ಎಕ್ಸಿಬಿಷನ್  ಸಾಂಸ್ಥಿಕ ರೂಪ ಧರಿಸಿ ಅಂದಿನ ರಾಷ್ಟ್ರಪತಿ ರಾಧಾಕೃಷ್ಣನ್ ಅವರಿಂದ, ನೆಹರೂ ಅವರ ಸಾಕ್ಷ್ಯದೊಟ್ಟಿಗೆ ಉದ್ಘಾಟನೆಗೊಂಡದ್ದು ೧೯೫೪ ರಲ್ಲಿ. ದೇಶದಲ್ಲಿ ಇದರ ಇನ್ನೆರಡು ಬ್ರಾಂಚುಗಳಿವೆ. ಅವೆರಡರಲ್ಲಿ ಒಂದು ನಮ್ಮ ಬೆಂಗಳೂರಿನಲ್ಲಿದೆ. ವಿಧಾನಸೌಧ, ರೇಸ್ ಕೋರ್ಸಿನಿಂದ ಕೂಗಳತೆ ದೂರದಲ್ಲಿ ಕಾರ್ಮೆಲ್ ಕಾಲೇಜಿನ ಪಕ್ಕದಲ್ಲಿದೆ. ಬಹಳ ವರ್ಷಗಳ ಹಿಂದೆ ಬೆಂಗಳೂರಿನ NGMA ಒಮ್ಮೆ  ನೋಡಿದ್ದೆ.


ಒಟ್ಟು ಇದರ ಸಂಕೀರ್ಣದಲ್ಲಿ ನಾಕಾರು ಕಟ್ಟಡಗಳಿದ್ದು ಪ್ರವೇಶ ದ್ವಾರದ ಹಿಂಭಾಗದಲ್ಲಿರುವ ನಾಕು ಅಂತಸ್ತಿನ ಕಟ್ಟಡದಲ್ಲಿ ಕಲಾಕೃತಿಗಳ ವ್ಯವಸ್ಥಿತ ಪ್ರದರ್ಶನ ಇದೆ. ಕಳೆದ ೧೫೦-೨೦೦ ವರ್ಷಗಳ ಹಿಂದಿನ ರಚನೆಗಳಿಂದ ನಿನ್ನೆ ಮೊನ್ನೆವರೆಗಿನ ಕಲಾಕೃತಿಗಳು, ಕಲಾವಿದರ ಮಾಹಿತಿ ಇಲ್ಲಿ ಪ್ರದರ್ಶಿಸಲ್ಪಟ್ಟಿವೆ. ಆರಂಭದಲ್ಲಿಯೇ ಮೈಸೂರು ಶೈಲಿಯ ಪೇಂಟಿಂಗ್ ಮತ್ತು ಟೀಪು ಸುಲ್ತಾನನ ಸುಂದರ ಚಿತ್ರ ಗಮನ ಸೆಳೆಯಿತು. ಯಾವುದೋ ಸ್ವಾಮಿಗಳೊಬ್ಬರ ಚಿತ್ರ ನೋಡಿ ನನ್ನಾಕೆ “ಓ ಅಕ್ಕಲಕೋಟೆ ಸ್ವಾಮಿಗಳು” ಅಂದಳು.‌ ಈ ಅಕ್ಕಲಕೋಟೆ, ಜತ್ತ, ಸೊಲ್ಲಾಪುರ ಎಲ್ಲವೂ ಅಚ್ಚಗನ್ನಡದ ಪ್ರದೇಶಗಳಾಗಿದ್ದರೂ ಮಹಾರಾಷ್ಟ್ರದಲ್ಲಿಯೇ ಉಳಿದುಬಿಟ್ಟ ಊರುಗಳಲ್ಲಿ ಕೆಲವು. ಉತ್ತರ ಕರ್ನಾಟಕದಲ್ಲಿ ಭಕ್ತಾದಿಗಳನ್ನು ಹೊಂದಿರುವ ಸ್ವಾಮಿ ಸಮರ್ಥರು ಉರುಫ್ ಅಕ್ಕಲಕೋಟೆ ಸ್ವಾಮಿಗಳ ಚಿತ್ರವೊಂದು (ಬಹುಶಃ ವಾಟರ್ ಕಲರ್) ಅಲ್ಲಿತ್ತು.


 ಕಳೆದ ಒಂದೂವರೆ ಶತಮಾನದಲ್ಲಿ ಭಾರತೀಯ ವರ್ಣಚಿತ್ರಕಲಾ ಕ್ಷೇತ್ರದಲ್ಲಿ ನಡೆದಿರಬಹುದಾದ ಎಲ್ಲ ರೀತಿಯ ಪ್ರಯೋಗಗಳು, ದೇಶದ ಬೇರೆ ಬೇರೆ ಭಾಗಗಳಿಗೆ ಸೇರಿದ ಕಲಾವಿದರ ಪ್ರಾತಿನಿಧಿಕ ಕಲಾಕೃತಿಗಳ ಮೇಳವೇ ಅಲ್ಲಿತ್ತು. ಹೆಚ್ಚಿನ ಪಾಲು ಚಿತ್ರಗಳು. ಅಲ್ಲಲ್ಲಿ ಇತರೆ ಮಾದರಿಯ ಕಲಾಕೃತಿಗಳನ್ನೂ ಪ್ರದರ್ಶಿಸಿದ್ದರು. ಇಲ್ಲಿನ ಸಂಪೂರ್ಣ ಓಡಾಟದಲ್ಲಿ ನನ್ನ ಜತೆಗಿದ್ದವ ಗೆಳೆಯ ದಿನೇಶ್ ಅವರ ೧೨ ರ ಪೋರ ಆರುಷ. ಒಂದೊಂದೂ ಪೇಟಿಂಗ್ ನೋಡುತ್ತಾ ತನಗನಿಸಿದ್ದನ್ನು ಹೇಳುತ್ತಿದ್ದ‌. ಒಂದು ಕಡೆಯಂತೂ ಕೇವಲ ಗೆರೆಗಳನ್ನೇ ಬಳಸಿ ಏನೋ ಸಂಕೀರ್ಣ ಭಾವ ಹೊಮ್ಮಿಸಲು ಪ್ರಯತ್ನಿಸಿರಬಹುದಾದ ಚಿತ್ರವೊಂದನ್ನು ನೋಡಿ
” ಇದೇನಂಕಲ್ ಸಣ್ಣ ಮಕ್ಳು ಬರ್ದಿರೋಂಗಿದೆ ಇದು” ಅಂದ!  ಅವನಿಗೆ ಏನು ಸಮಜಾಯಿಷಿ ಕೊಟ್ಟೆನೊ ಕಾಣೆ; ಆದರೆ ಕೆಲವರ್ಷಗಳ ಹಿಂದೆ ಆಧುನಿಕ ಕಲಾಕೃತಿಗಳನ್ನು ಅರ್ಥೈಸುವುದರ ಕುರಿತು ಮಯೂರದಲ್ಲಿ  ಪ್ರಕಟವಾಗುತ್ತಿದ್ದ ಕಲಾವಿದ ರವಿಕುಮಾರ್ ಕಾಶಿ ಅವರ ಬರೆಹಗಳೂ ಮತ್ತು ಆಗಾಗ ಫೇಸ್ಬುಕ್ಕಿನ ತಮ್ಮ ಪೇಜಿನಲ್ಲಿ ರಾಜಾರಾಂ ತಲ್ಲೂರ್ ಅವರು ಛಾಪಿಸುವ ಅವರ ಸೋದರರ ಕಲಾಕೃತಿಗಳೆಲ್ಲ ಕಣ್ಮುಂದೆ ಸುಳಿದು ಹೋದವು.


 ಒಬ್ಬ ಮುಸ್ಲಿಂ ಕಲಾವಿದ ಬರೆದ ರಾಧಾಕೃಷ್ಣರ ಅದ್ಭುತ‌ ರೇಖಾಚಿತ್ರವೂ, ಪ್ರವಾದಿಗಳ ಬಗ್ಗೆ ಮುಸ್ಲಿಮೇತರ ಕಲಾವಿದನೊಬ್ಬ ಚಿತ್ರಿಸಿದ ಸಂಕೀರ್ಣ ಮಾದರಿಯ ಉಬ್ಬುಚಿತ್ರವೂ ಗಮನ ಸೆಳೆದವು. ಆಗ ಕೂಡಲೆ ನೆನಪಾದದ್ದು ಕಡೆಗಾಲದಲ್ಲಿ ದೇಶಭ್ರಷ್ಟನಾಗಿ ಓಮನ್ ನಲ್ಲಿಯೋ, ಕತಾರ್ ನಲ್ಲಿಯೋ ಜೀವ ತೊರೆದ ಎಂ.ಎಫ್. ಹುಸೇನ್. ಎಂ.ಎಫ್. ಹುಸೇನ್ ಬಗ್ಗೆ ಅವರ ಜೀವನಪ್ರೀತಿ ಮತ್ತು ವಿಚಿತ್ರ ಪ್ರಯೋಗಶೀಲತೆ ಕುರಿತು ಕರ್ನಾಟಕದವರೊಬ್ಬರು ಪುಟ್ಟದಾದರೂ ಒಳ್ಳೆಯ ಕೃತಿಯೊಂದನ್ನು ರಚಿಸಿದ್ದಾರೆ. ಅದರಲ್ಲಿ ಹುಸೇನ್ ಅವರ ಬೆಂಗಳೂರಿನ / ಕನ್ನಡದ ನಂಟೂ ಇದೆ. ಅವರೊಮ್ಮೆ ಬೆಂಗಳೂರಿನಲ್ಲಿದ್ದಾಗ ರಚಿಸಿದ ತಮ್ಮ ಪೇಂಟಿಂಗಿಗೆ ಕನ್ನಡದಲ್ಲಿ ಸಹಿ ಮಾಡಿದ್ದಾರೆ. ಕಲಾವಿದನ ಮನೋಲೋಕವನ್ನು ಅವನ ಸೃಜನಶೀಲತೆಯ ಆಳ ಅಗಲಗಳನ್ನು ಕಲಾರಸಿಕರು ಜನ ಅರ್ಥ ಮಾಡಿಕೊಳ್ಳದೇ ಹೋದರೆ ಆತನನ್ನು ಲೌಕಿಕ ಜಾತಿ ಧರ್ಮಗಳ ಹುದಲಲ್ಲಿ ಸಿಕ್ಕಿಸಿ ನೋಡಲೆಳಸಿದರೆ ಅವನೆಂದಿಗೂ ನಿಜಾರ್ಥದಲ್ಲಿ ದಕ್ಕಲಾರ ಎಂದು ಯೋಚಿಸುವ ಹೊತ್ತಿಗೆ ಸಾಕ್ಷಾತ್ ಹುಸೇನರ ಚಿತ್ರಗಳೇ ನೋಡಲು ಸಿಕ್ಕವು.


ಅಚ್ಚಕನ್ನಡದ ಹೆಮ್ಮೆಯ ಕಲಾವಿದ ಕಟ್ಟಿಂಗೇರಿ ಕೃಷ್ಣ ಹೆಬ್ಬಾರರ ಹಲವು ಪೇಂಟಿಂಗ್ ಗಳು ಗಮನ ಸೆಳೆದವು. ನಾನು ಪ್ರೈಮರಿ ಓದುವಾಗ ಕೆ.ಕೆ. ಹೆಬ್ಬಾರರ ಬಗ್ಗೆ ಪಾಠವಿತ್ತು. ಬಹುಶಃ ಆಗ ಅದು ಬೋರ್ ಹೊಡೆಸಿರಬಹುದು. ಈಗ ಸುಮ್ಮನೆ ಗೆರೆ ಎಳೆದಂತೆ‌ ಮೇಲ್ನೋಟಕ್ಕೆ ಕಾಣುವ ಹೆಬ್ಬಾರರ ಕಲಾಕೃತಿಗಳು ನೋಡುಗರನ್ನು ಹಿಡಿದು ನಿಲ್ಲಿಸುತ್ತವೆ. NGMA ದಲ್ಲಿ ಕಲಾಕೃತಿಗಳ ಫೋಟೋ ಸೆರೆಹಿಡಿಯಲು‌‌ ನಿರ್ಬಂಧವಿದೆ. ಆದರೂ ಒಂದು ನಾಕೈದು ಚಿತ್ರಗಳನ್ನು ಕದ್ದು ಮುಚ್ಚಿ ಮೊಬೈಲಲ್ಲಿ ಬಂಧಿಸಿದೆ.
ಎಂಟ್ರೀ ಪಾಯಿಂಟ್ ಪಕ್ಕದಲ್ಲಿಯೇ ವ್ಯವಸ್ಥಿತವಾದ ಪುಸ್ತಕದ‌ ಮಳಿಗೆ, ಕಲಾಕೃತಿಗಳ ಫೋಟೋ ಗ್ರೀಟಿಂಗ್ ಮಾರಾಟ ಎಲ್ಲವಕ್ಕೂ ಅವಕಾಶವಿತ್ತು. ಅಲ್ಲಿಯೂ ಒಂದು ಸುತ್ತು ಹಾಕಿ ಹೊರಬರೋ ಹೊತ್ತಿಗೆ ಹೊಟ್ಟೆ ಚುರುಗುಟ್ಟುತ್ತಿತ್ತು.


ಜೀವಂತಿಕೆ ಇಲ್ಲದ ಧಾಮದ ಹೆಸರಿನ ವ್ಯಾಪಾರ ಕೇಂದ್ರವೂ… ಯಾಂತ್ರಿಕ ವ್ಯಾಪಾರದ ಸುಲಿಗೆಯ ಹೋಟೆಲೂ….
ಕಲಾಗ್ಯಾಲರಿಯಿಂದ ಹೊರಬಂದವರೇ ಊಟ ಮತ್ತು ಮುಂದಿನ ಜಾಗ ಯಾವುದೆಂದು ಚರ್ಚಿಸಿ ಒಂದು ತೀರ್ಮಾನಕ್ಕೆ ಬಂದೆವು. ಟ್ಯಾಕ್ಸಿ ಬುಕ್ ಮಾಡಿಕೊಂಡು ಅಕ್ಷರ‌ಧಾಮಕ್ಕೆ ಹೋಗುವ ದಾರಿಯಲ್ಲಿ ಎಲ್ಲಾದರೂ ಹೊಟ್ಟೆಪಾಡು ನೋಡಿಕೊಳ್ಳುವುದೆಂದು ಡ್ರೈವರಣ್ಣನಿಗೆ ಕೇಳಿದ್ದಕ್ಕೆ; ಅಕ್ಷರಧಾಮದ ಎಂಟ್ರೆನ್ಸ್ ಪಕ್ಕದಲ್ಲಿಯೇ ಹಳ್ದಿರಾಮ್ ಹೋಟೆಲ್ ಇದೆ ಎಂದು ಹೇಳಿದ. ಸರಿ ಎಂದು ಅಲ್ಲಿಗೆ ಡ್ರಾಪ್ ಪಡೆದೆವು. ಅಕ್ಷರಧಾಮ ಮೆಟ್ರೋ ಸ್ಟೇಷನ್ನಿನ ಕೆಳಗಿನ ಫ್ಲೋರೇ ಹಳ್ದೀ ರಾಮ್ ಹೋಟೆಲು. ನಿಮಿಷಕ್ಕೊಮ್ಮೆ ರೈಲಿನ ಜೂಂಯ್ ಶಬ್ದ ಕೇಳುತ್ತಿತ್ತು. ಅಲ್ಲೋ ವಿಚಿತ್ರ ವ್ಯಾಪಾರೀ ಪದ್ಧತಿ. ಪ್ರತೀ ಟೇಬಲಿನ ಮೂಲೆಯಲ್ಲಿ ಒಂದು ಕ್ಯೂ ಆರ್‌ ಕೋಡ್ ಅಂಟಿಸಿದ್ದಾರೆ. ಅದನ್ನು ನಮ್ಮ ನಮ್ಮ ಮೊಬೈಲಿನಲ್ಲಿ ಸ್ಕ್ಯಾನ್ ಮಾಡಿದರೆ ಅಲ್ಲಿಯೇ ಮೆನು ತೆರೆದುಕೊಳ್ಳುತ್ತದೆ. ಅಲ್ಲಿಯೇ ಆರ್ಡರ್‌ ಮಾಡುವುದಂತೆ, ಅದೂ ಮೊದಲೇ ಹಣ ಪೀಕಿ. ಆಮೇಲೆ ಅವರು ಯಾವ ಕೌಂಟರಿನಲ್ಲಿ ನೀವು ಕೇಳಿದ್ದ ಐಟಮ್ ಲಭ್ಯವೆಂದು ವಾಟ್ಸಾಪ್‌ ಮೆಸೇಜು ಕಳಿಸುತ್ತಾನೆ. ಅದನ್ನು ಹುಡುಕಿ ಗ್ರಾಹಕರೇ ಭಿಕ್ಷುಕರಂತೆ ತಟ್ಟೆ ಹಿಡ್ಕಂಡು ಸಾಲಿನಲ್ಲಿ ನಿಂತು ಪಡೆದು ಬೇಕಿದ್ದರೆ ತಿನ್ನಬಹುದು, ಇಲ್ಲವೇ ಹಾಗೇ ಬಿಡಬಹುದು! ಇಂಥದೊಂದು ವಿಚಿತ್ರ ಪದ್ಧತಿಯನ್ನು ನಾವಂತೂ ಯಾರೂ ಎಲ್ಲೂ ಕಂಡಿರಲಿಲ್ಲ. ಏನೊ ಏನಾದರೂ ತಿಂದು ಬದುಕಬೇಕಿತ್ತು. ಅಷ್ಟು ಪೂರೈಸಿದೆವು. ಇರಲಿ, ನಾವಲ್ಲಿ ಹೋಗಿದ್ದು ಅಕ್ಷರ‌ಧಾಮ ನೋಡಲು. ಈ ಐಟಮ್ಮು ನಮ್ಮ ನೋಡುವ ಲಿಸ್ಟಿಗೆ ಸೇರ್ಪಡೆಯಾಗಿರಲಿಲ್ಲ.

ಹಾಸನದಿಂದ ನಾವು ಹೊರಡೋ ಹಿಂದಿನ ದಿನ ಶಿವಮೊಗ್ಗದ ಗೆಳೆಯರೊಬ್ಬರು ಫೋನು ಮಾಡಿ, ತಾವು ಮೈಸೂರು ಕಡೆ ಹೊರಟಿರುವುದಾಗಿಯೂ ರಸ್ತೆ ಚೆನ್ನಾಗಿಲ್ಲವಂತೆ ಏನು ಮಾಡುವುದು ಅಂದರು. ಬಾಣಾವರದಿಂದ ಹಳೇಬೀಡು ಹಾಸನ ಹೊಳೆನರಸೀಪುರ ಮಾರ್ಗವಾಗಿ ಹೋಗಿ ಚೆನ್ನಾಗಿದೆ ಎಂದು ಹೇಳಿ, ಹಾಗೇ ಬರೋ ದಾರಿಯಲ್ಲೇ ನಮ್ಮ ಮನೆ ಬನ್ನಿ ಎಂದೆ. ಗೆಳೆಯರು ಅವರ ಸ್ನೇಹಿತರೊಟ್ಟಿಗೆ ಬಂದರು. ನಾವೂ ಹೊರಡೋ ತಯಾರಿಯಲ್ಲಿ ಅವರಿಗೆ ಊಟದ ವ್ಯವಸ್ಥೆ ಮಾಡಲಾಗಲಿಲ್ಲ, ಚಾ, ಹಣ್ಣು ಕೊಟ್ಟು ಅಥಿತಿ ಸತ್ಕಾರವನ್ನು ಪೂರೈಸಿದೆವು. ನಮ್ಮ ಡೆಲ್ಲಿ ಟೂರಿನ ವಿಷಯ ಕೇಳಿ, ಹಾಗಿದ್ದರೆ ಅಕ್ಷರಧಾಮಕ್ಕೆ ಮಿಸ್ ಮಾಡದೆ ಹೋಗಿ ಬನ್ನಿ, ಅಲ್ಲಿ ಒಂದು ಲೇಸರ್ ಶೋ ಇರ್ತದೆ. ಮಕ್ಕಳು ಖುಶಿ ಪಡ್ತಾರೆ ಅಂದರು‌‌. ಅವರು ಬಹಳ ಗಂಭೀರವಾಗಿಯೇ ಈ ಸಲಹೆ ಇತ್ತ ಕಾರಣಕ್ಕೆ ನಾನೂ ದಿನೇಶ್ ಅವರಿಗೆ ಈ ಧಾಮವನ್ನು ನೆನಪಿಸುತ್ತಲೇ ಇದ್ದೆ. ಈಗ ಅದರ ಗೇಟಿಗೆ ಬಂದು ನಿಂತಿದ್ದೆವು. ಪರ್ಸು, ನೀರಿನ ಬಾಟಲು ಬಿಟ್ಟು ಏನೂ ಒಳ ಒಯ್ಯುವಂತಿಲ್ಲ. ಬೆಲ್ಟ್ ಕೂಡ ಬಿಚ್ಚಿ ಕೊಟ್ಟು ನಂತರ ಪಡೆಯೋ ಸೆಕ್ಯುರಿಟಿ ವ್ಯವಸ್ಥೆಯೇ ಕಿರಿಕಿರಿ ಎನಿಸಿತು. ಒಳ ಹೋದರೆ ಭವ್ಯವಾದ ಶಾಪಿಂಗ್ ಕಾಂಪ್ಲೆಕ್ಸ್ ಮಾದರಿಯ ಏನೇನೊ‌ ಕಟ್ಟಡಗಳು, ಕಾರಂಜಿಗಳು, ಕೌಂಟರುಗಳು, ಆದರೆ ನೋಡಬಹುದಾದುದು ಏನೂ ಇಲ್ಲ ಅಂತ ತಿಳಿಯಲು ಬಹಳ ಹೊತ್ತೇನೂ ಹಿಡಿಯಲಿಲ್ಲ. ಆದರೂ ನನಗೆ ಲೇಸರ್ ಶೋ ಆಕರ್ಷಣೆ. ಗುಂಪಿನ ಬಹುಮತ ಕೂಡಲೆ ಹೊರ ಹೊರಡುವುದರಲ್ಲಿತ್ತು. ವಾಪಾಸು ಹೊರಟೆವು. ಬರೋ ದಾರಿಯಲ್ಲಿ ಹೋಟೆಲು, ಶಾಪಿಂಗು, ಅಮ್ಯೂಸ್ ಮೆಂಟ್ ಪಾರ್ಕು, ಎಲ್ಲಕ್ಕೂ ಟಿಕೇಟು, ಲೇಸರ್ ಶೋದ ಕಂಟೆಂಟು ನೋಡಿದ ಮೇಲೆ ಅದನ್ನೂ ನೋಡಬೇಕು ಅನ್ನೋ ಕುತೂಹಲ ಉಳಿಯಲಿಲ್ಲ. ವಾಸ್ತವ ಎಂದರೆ ಅಕ್ಷರಧಾಮ ಎಂದರೆ ದೇವಾಲಯ ಅಂತ ನಮಗಾರಿಗೂ ಕಲ್ಪನೆ ಇರಲಿಲ್ಲ. ನಾನೆಲ್ಲೋ ಥೀಮ್ ಪಾರ್ಕ್ ಎಂದು ಓದಿದ್ದ ನೆನಪಿತ್ತು. ಅಕ್ಷರ ಧಾಮಕ್ಕೆ ಹೋಗೋ ದಾರಿಯಲ್ಲಿ ಜಮುನಾ ನದಿಯನ್ನು ಕಂಡು ಪುಣ್ಯ ಕಟ್ಟಿಕೊಂಡೆವು ಅಷ್ಟೇ. ಇದೆಲ್ಲ ಆದ ಮೇಲೆ ಇನ್ನು ಮನೆಗೆ ಬರುವ ಅತಿಥಿಗಳಿಗೆ ಸರಿಯಾದ ಸತ್ಕಾರ ಮಾಡದಿದ್ದರೆ ಹೀಗೂ ಸೇಡು ತೀರಿಸಿಕೊಳ್ಳುತ್ತಾರೆ! ಎಂದುಕೊಂಡೆ.

ರೋಹಿತ್‌ ಅಗಸರಹಳ್ಳಿ

ಹಾಸನದ ನಿವಾಸಿಯಾದ ರೋಹಿತ್‌ ಅಗಸರಹಳ್ಳಿ ವೃತ್ತಿಯಿಂದ ಕನ್ನಡ ಉಪನ್ಯಾಸಕರು. ಪ್ರವೃತ್ತಿ ಓದು, ಸಿನೆಮಾ ಮತ್ತು ತಿರುಗಾಟ.

Related Articles

ಇತ್ತೀಚಿನ ಸುದ್ದಿಗಳು