Friday, June 14, 2024

ಸತ್ಯ | ನ್ಯಾಯ |ಧರ್ಮ

TET ಪ್ರವೇಶ ಪತ್ರದಲ್ಲಿ ಸನ್ನಿ ಲಿಯೋನ್ ಚಿತ್ರ ಪ್ರಕರಣ; ಸಂತ್ರಸ್ತ ಅಭ್ಯರ್ಥಿಯಿಂದ ದೂರು ಸಲ್ಲಿಕೆ

ಶಿವಮೊಗ್ಗ:  ಕುವೆಂಪು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ನಡೆದ TET ಪರೀಕ್ಷೆ ಪ್ರವೇಶ ಪತ್ರದಲ್ಲಿ ಸನ್ನಿ ಲಿಯೋನ್ ಭಾವಚಿತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಸಂತ್ರಸ್ತೆ ಅಭ್ಯರ್ಥಿಯು ಶಿವಮೊಗ್ಗ ನಗರದಲ್ಲಿರುವ ಸೈಬರ್ ಕ್ರೈಂ ಠಾಣೆಗೆ ಹೋಗಿ ಪರೀಕ್ಷೆ ಸಮಯದಲ್ಲಿ ತನಗಾದ ಅನ್ಯಾಯದ ಬಗ್ಗೆ ಕೂಲಂಕಷವಾಗಿ ದೂರು ದಾಖಲು ಮಾಡಿದ್ದಾರೆ.

ಪೀಪಲ್‌ ಮೀಡಿಯಾ ವರದಿಯನ್ನು ಅನುಸರಿಸಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಿವಮೊಗ್ಗದಸೈಬರ್‌ ಕ್ರೈಂ ವಿಭಾಗವನ್ನು ಸಂಪರ್ಕಿಸಿ ಪ್ರಕರಣವನ್ನು ತನಿಖೆ ನಡೆಸುವಂತೆ ಆದೇಶಿಸಿದ್ದ ಹಿನ್ನೆಲೆಯಲ್ಲಿ ಈ ತನಿಖೆ ಜಾರಿಯಲ್ಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ NES ರುದ್ರಪ್ಪ ಕಾಲೇಜಿನ ಪ್ರಾಂಶುಪಾಲರಾದ ಚನ್ನಪ್ಪ ಅವರು ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಸಂಪರ್ಕಿಸಿ ಇಲಾಖೆ ಮತ್ತು ಕಾಲೇಜು ವತಿಯಿಂದ ದೂರು ದಾಖಲಿಸಿದ್ದಾರೆ. ಈ ದೂರಿಗೆ ಸಂಬಂಧಿಸಿದಂತೆ FIR ದಾಖಲಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ಜಯನಗರ ಪೊಲೀಸ್‌ ಠಾಣೆಯಲ್ಲಿರುವ ಸಿಇಎನ್‌ ಸೈಬರ್‌ ಕ್ರೈಂ ವಿಭಾಗವು ಪ್ರಕರಣದ ತನಿಖೆ ನಡೆಸುತ್ತಿದೆ.

ಸಂತ್ರಸ್ತ ಯುವತಿಯ ದೂರಿನ ಹಿನ್ನೆಲೆಯಲ್ಲಿ ಸಂತ್ರಸ್ತೆ ಮತ್ತು ಮೂವರು ಮಹಿಳಾ ಅಭ್ಯರ್ಥಿಗಳ ಅರ್ಜಿಯನ್ನು ಶಿಕ್ಷಣ ಇಲಾಖೆ ವೆಬ್ಸೈಟ್ ಗೆ ಅಪ್ಲೋಡ್ ಮಾಡಿದ ಲೋಕೇಶ್ ಎಂಬುವವರನ್ನು ಪೊಲೀಸರು ಮೌಖಿಕ ತನಿಖೆಗೆ ಒಳಗಪಡಿಸಿದ್ದಾರೆ. ಲೋಕೇಶ್ ಯಾವ ಲೊಕೇಷನ್ ನಿಂದ ಅರ್ಜಿಯನ್ನು ಅಪ್ಲೋಡ್ ಮಾಡಿದ್ದಾರೆ, ಅಪ್ಲೋಡ್ ಗೆ ಬಳಸಿದ ಡಿವೈಸ್ (ಮೊಬೈಲ್ ಫೋನ್, ಲ್ಯಾಪ್ಟಾಪ್, ಕಂಪ್ಯೂಟರ್) ಯಾವುದು, ಎಂಬ ಎಲ್ಲಾ ರೀತಿಯ ಮೌಖಿಕ ಪರಿಶೀಲನೆಯನ್ನು ಪೊಲೀಸರು ನಡೆಸುತ್ತಿದ್ದಾರೆ. ತನಿಖೆಯ ಸಂದರ್ಭದಲ್ಲಿ ಲೋಕೇಶ್ ಅವರ ಫೋನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರಲ್ಲದೆ  ನಾಳೆ ಅವರು ದಾಖಲೆಗಳನ್ನು ಅಪ್ಲೋಡ್‌ ಮಾಡಿದ್ದ ಕಂಪ್ಯೂಟರ್ ಪರಿಶೀಲನೆಗೆ ಚನ್ನಗಿರಿಗೆ ಪೊಲೀಸ್ ತೆರಳಲಿದ್ದಾರೆ ಎಂದು ತಿಳಿದುಬಂದಿದೆ. ಪೀಪಲ್‌ಮೀಡಿಯಾ ಜೊತೆಯಲ್ಲಿ ಮಾತನಾಡಿದ ಲೋಕೇಶ್‌, ʼನಾನು ಅಪ್ಲಿಕೇಶನ್‌ಗಳನ್ನು ಕಂಪ್ಯೂಟರ್‌ ಮೂಲಕವೇ ಅಪ್ಲೋಡ್‌ ಮಾಡಿದ್ದು ನನ್ನ ಸಿಸ್ಟಂ ಮೂಲಕ ಅಶ್ಲೀಲ ಚಿತ್ರಗಳು ಅಪ್ಲೋಡ್‌ ಆಗಿರಲು ಸಾಧ್ಯವೇ ಇಲ್ಲ. ಈ ಕೆಲಸ ಯಾರಿಂದ ನಡೆದಿದೆ ಎಂದು ಸೂಕ್ತ ತನಿಖೆ ಮೂಲಕ ಸಾರ್ವಜನಿಕರಿಗೆ ತಿಳಿಯಲಿʼ ಎಂದು ಹೇಳಿದ್ದಾರೆ.

ಈಗಾಗಲೇ ಸಂತ್ರಸ್ತೆ ಪರೀಕ್ಷೆಪ್ರವೇಶ ಪತ್ರದಲ್ಲಿ (ಹಾಲ್‌ಟಿಕೆಟ್)  ಅಶ್ಲೀಲ ಚಿತ್ರ ಕಂಡ ಹಿನ್ನೆಲೆಯಲ್ಲಿ ತನಗಾಗಿರುವ ಮಾನಸಿಕ ಒತ್ತಡದ ಬಗ್ಗೆ ಪೊಲೀಸರಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದರ ಮುಂದಿನ ಹಂತವಾಗಿ ಶಿಕ್ಷಣ ಇಲಾಖೆಯ ಬೇರೆ ದಾಖಲೆಯಲ್ಲಿ ಅದೇ ಅಶ್ಲೀಲ ಚಿತ್ರ ಮುಂದುವರೆಸದಿರುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದಾರೆ. ಅಗತ್ಯ ಬಿದ್ದರೆ ಬೆಂಗಳೂರಿನಲ್ಲಿರುವ ಶಿಕ್ಷಣ ಇಲಾಖೆಯ ಕಛೇರಿಗೂ ತೆರಳಿ ತನಗಾಗದ ಮಾನಸಿಕ ಒತ್ತಡದ ಬಗ್ಗೆ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸುತ್ತೇನೆ ಎಂದು ಪೀಪಲ್ ಮೀಡಿಯಾ ಜೊತೆಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಮೌಖಿಕ ಪರಿಶೀಲನೆಯಲ್ಲಿ ಯಾವುದೇ ಸಾಕ್ಷ್ಯಗಳು ಸಿಗದೇ ಹೋದರೆ ಸೈಬರ್ ಇಲಾಖೆಯ ತಾಂತ್ರಿಕ ಪರಿಶೀಲನೆಗೂ ಮುಂದಾಗಲೂ ಪೊಲೀಸ್ ಇಲಾಖೆ ಚಿಂತನೆ ನಡೆಸಿದೆ.

ಪೀಪಲ್‌ ಮೀಡಿಯಾ ಬೆಳಕಿಗೆ ತಂದ ಪ್ರಕರಣ ಬೇರೆ ಬೇರೆ ಭಾಷೆಗಳ ಪತ್ರಿಕೆಗಳಲ್ಲಿ ವರದಿಯಾಗಿದೆ

ಈಗಾಗಲೇ ದೂರು ದಾಖಲಾಗುವ ಮತ್ತು ತನಿಖೆಗೆ ಆದೇಶ ಬರುವ ಮುಂಚೆಯೇ ಶಿಕ್ಷಣ ಇಲಾಖೆ ತನ್ನ ಕಡೆಯಿಂದ ಏನೂ ತಪ್ಪಾಗಿಲ್ಲ ಎಂದು ತನಗೆ ತಾನೇ ಕ್ಲೀನ್ ಚಿಟ್ ತಗೆದುಕೊಂಡಿರುವ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ನಡೆದಿದೆ. ಪ್ರಾಥಮಿಕ ಹಂತದಲ್ಲಿ ನೋಡಿದರೂ ಶಿಕ್ಷಣ ಇಲಾಖೆಯ ವೆಬ್ಸೈಟ್ ನಲ್ಲಿ ಯಾವುದೇ ಭದ್ರತೆ ಹೊಂದಿಲ್ಲ. ಅಭ್ಯರ್ಥಿ ಐಡಿ ಮತ್ತು ಪಾಸ್ವರ್ಡ್ ಪಡೆದು ಯಾರೇ ಲಾಗಿನ್ (Login) ಆದರೂ ಅಭ್ಯರ್ಥಿಗೆ ಯಾವ ರೀತಿಯಲ್ಲೂ ಮಾಹಿತಿ ಸಿಗುವುದಿಲ್ಲ. ಜೊತೆಗೆ ಎಂತಹ ಸಂಬಂಧಪಡದ ಫೋಟೋಗಳು ಅಪ್ಲೋಡ್ ಆದರೂ ಇಲಾಖೆ ಕಡೆಯಿಂದ ಪರಿಶೀಲನೆಗೆ ಒಳಪಡುವುದಿಲ್ಲ. ಇಷ್ಟಾದರೂ ಇಲಾಖೆ ಅದು ಹೇಗೆ ತನಗೆ ತಾನೇ ಕ್ಲೀನ್ ಚಿಟ್ ಪಡೆದುಕೊಂಡಿದೆ ಎಂಬುದು ಪ್ರಶ್ನಾರ್ಹ.

ಸಧ್ಯ ಈ ಒಂದು ಪ್ರಕರಣ ರಾಷ್ಟ್ರಮಟ್ಟದಲ್ಲಿ ವೈರಲ್ ಆಗಿದ್ದು ಹೆಚ್ಚು ಗಮನ ಸೆಳೆದಿದೆ. ಸೂಕ್ತ ದಾಖಲೆಗಳನ್ನು ಪರಿಶೀಲಿಸಿಕೊಂಡು ಪೀಪಲ್ ಮೀಡಿಯಾದ ಮಾಡಿದ ವರದಿ ಮೂಲಕ ಮೂಲಕ ಬಯಲಾದ ಈ ಪ್ರಕರಣದ  ಹಿನ್ನೆಲೆಯಲ್ಲಿ ಶಿವಮೊಗ್ಗದ ಸೈಬರ್‌ ಕ್ರೈಂ ಪೊಲೀಸರು ಆಸಕ್ತಿ ವಹಿಸಿ ತನಿಖೆ ನಡೆಸುತ್ತಿದ್ದಾರೆ. ತಪ್ಪಿತಸ್ಥರು ಯಾರು ಅಥವಾ ಇಲಾಖೆಯ ಲೋಪದೋಷಗಳಿಂದ ಈ ಸಮಸ್ಯೆ ಎದುರಾಗಿದೆಯೇ ಎಂಬುದೆಲ್ಲವೂ ತನಿಖೆ ನಂತರ ತಿಳಿಯಬೇಕಿದೆ.

ಇದನ್ನೂ ಓದಿ: TET ಪ್ರವೇಶಾತಿ ಪತ್ರದಲ್ಲಿ ಅಶ್ಲೀಲ ಚಿತ್ರ ; ಹೊಣೆಗೇಡಿತನ ಪ್ರದರ್ಶಿಸಿದ ಶಿಕ್ಷಣ ಇಲಾಖೆ. ಇದು Peepal Media Exclusive

Related Articles

ಇತ್ತೀಚಿನ ಸುದ್ದಿಗಳು