Sunday, June 16, 2024

ಸತ್ಯ | ನ್ಯಾಯ |ಧರ್ಮ

ಮಕ್ಕಳು ಅವರವರ ಆಯ್ಕೆಯಾಗಿರಲಿ- ಒಂದು ಪ್ರೇಮಮಯ ಬೇಡಿಕೆ

ಭಾರತೀಯ ಸಮಾಜ ಬದಲಾವಣೆಯ ಹಾದಿಯಲ್ಲಿದೆ. ಯುವ ಜನತೆ ಸ್ವಯಂ ತೀರ್ಮಾನಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಅವರ ಮನದ ಕಿಟಕಿಗಳು ಹೊಸ ಗಾಳಿಗೆ ತೆರೆದಿವೆ. ʼಮಕ್ಕಳು ಬೇಡʼ ಅಂತಿದೆ ಹೊಸ ಜನರೇಶನ್‌. ಮಕ್ಕಳನ್ನು ಹುಟ್ಟಿಸುವುದೋ ಬೇಡವೋ ಎಂಬುದು ಆಯ್ಕೆಯಾಗಿರಲಿ ಎಂಬ ಪ್ರೇಮಮಯ ಬೇಡಿಕೆ ಈ ವಾರದ ಗುರು ಸುಳ್ಯ ಅವರ ಯುವನೋಟ ಅಂಕಣದಲ್ಲಿ.

ಒಲವಿಗೆ ಪೋಷಕಾಂಶಗಳನ್ನು ಒದಗಿಸುವ ವಿಧವಿಧವಾದ ಆಕರ್ಷಣೆಗಳ ರಸಾಯನಕ್ಕೆ ನಾವು ಕಟ್ಟಿಕೊಂಡ  ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಯಾವುದೇ ಇರಾದೆಗಳಿರುವುದಿಲ್ಲ. ಅಂತದ್ದರಲ್ಲಿ ಬೇಕೋ, ಬೇಡವೋ ಎಂಬಂತೆ ಬದುಕುವುದು ಅಭ್ಯಾಸವಾದ ನಾವು ಜನ್ಮಾಂತರಗಳ ಪೇಲವತೆಯನ್ನು ಲೇಪಿಸಿ ಪ್ರೇಮಕತೆಗಳನ್ನು ಕಟ್ಟುತ್ತಲೇ ಕಟ್ಟುಕತೆಗಳಿಗೆ ಬಲಿಯಾಗುತ್ತೇವೆ. ನಿತ್ಯ ಅಪಘಾತಗಳಾಗುವ ದಾರಿಯಲ್ಲೇ ಪ್ರೇಮಿಗಳು ರಸ್ತೆ ದಾಟುವಾಗ, ಸಾಯುವ ಬಂಧಗಳ ಬಗೆಗಿನ ಭಯವೆಲ್ಲಿಯದು? ಭಯವೇ ಮೂಲವಾಗಿರುವ ಸಮಾಜವನ್ನು ಕಟ್ಟಿಕೊಂಡಿರುವವರು ನಾವು. ಸಾರ್ವಕಾಲಿಕತೆಯೆಂಬ ಒತ್ತಾಯಕ್ಕೆ ಗಂಟುಬಿದ್ದು ಅಲಾರಮಿನ ಸದ್ದಿಗೆ ಕಿವಿಗೊಡುವುದರಲ್ಲೇ ಆಯುಷ್ಯವೊಂದು ಕಳೆದಿರುತ್ತದೆ. ಪ್ರಾಣಿಗಳನ್ನು, ಮರಗಳನ್ನು, ಬೆಟ್ಟ-ಗುಡ್ಡಗಳನ್ನು ನುಂಗಿ ನೀರು ಕುಡಿದು ಜಲಾಶಯಗಳನ್ನೆಲ್ಲ ಇಂಗಿಸಿದ ಮೇಲೂ, ಮಕ್ಕಳನ್ನು ಹುಟ್ಟಿಸಲು ಮರೆಯುವುದಿಲ್ಲ. ಮನುಷ್ಯರು ಹೆಚ್ಚುತ್ತಲೇ ಅವರ ಅಗತ್ಯಗಳು ಹೆಚ್ಚಾಗುತ್ತವೆ. ಆ ಅಗತ್ಯಗಳಿಗೆ ಭೂಮಿ ಸಾಲೋದಿಲ್ಲ. ಬಂಡವಾಳಶಾಹಿಯನ್ನು ಬಯ್ಯುವುದು, ಅದರೊಳಗೊಂದಾಗಿ ಅಗತ್ಯಗಳನ್ನು ಪೂರೈಸುವ ದಾರಿಯಲ್ಲಿ ಮೆದುಳಿಗೆ ಮಂಕುಬಡಿಯುವುದು ಗೊತ್ತಾಗುವುದೇ ಇಲ್ಲ. 

ಕುಲ ಉಳಿಸುವ ತೆವಲಿನಿಂದ ಹೊರಬರುವ ದಾರಿ ಕಂಡಿದೆಯೇ? 

ಎಷ್ಟೇ ನಿಯಮಗಳಿದ್ದರು ನಗರಗಳಲ್ಲಿ ಹೆಚ್ಚಾಗುತ್ತಲೇ ಹೋಗುವ ಟ್ರಾಫಿಕ್ ನೋಡ್ತಾ ಇದ್ದೀವಿ. ಏರುತ್ತಲೇ ಹೋಗುವ ಜನದಟ್ಟಣೆಯಲ್ಲಿ ಮುಳುಗಿ ಹೋಗುತ್ತಿದ್ದೇವೆ. ರಸ್ತೆ ಅಗಲೀಕರಣ, ಓವರ್ ಬ್ರಿಡ್ಜ್-ಅಂಡರ್ ಬ್ರಿಡ್ಜ್ ಗಳನ್ನು ಕಟ್ಟುವುದೆಂಬ ತಾತ್ಕಾಲಿಕ ಪರಿಹಾರದಾಚೆಗೆ ನಾವು ಯೋಚಿಸುವುದಿಲ್ಲ. ಯೋಚಿಸಿದರೂ, ಅವು ಕಾರ್ಯಗತವಾಗುವುದಿಲ್ಲ. ಕಾಡನ್ನು ಬರಿದುಗೊಳಿಸಿದ ಮನುಷ್ಯರಿಗೆ ಬ್ರಿಡ್ಜುಗಳನ್ನು ತುಂಬುವುದು ಯಾವ ಲೆಕ್ಕ! ಬ್ರಿಡ್ಜ್ ಗಳ ಅಡಿಯಲ್ಲೇ ಸಂಸಾರ ನಡೆಸುತ್ತಿರುವವರಿಗೆ ಅನುಕಂಪ ತೋರಿಸುವುದಷ್ಟೇ ಸಾಧ್ಯವಾಗಿರುತ್ತೆ. ಜನಸಂಖ್ಯಾ ಸ್ಪೋಟ ಎಂಬುದು, ಯಂತ್ರಗಳಾಗಿ ಬದಲಾದ ಮನುಷ್ಯರು ನಿಜ ಅರ್ಥದಲ್ಲಿ ಬಾಂಬುಗಳಾಗಿ ಪರಿವರ್ತನೆಗೊಳ್ಳುತ್ತಾ, ಭೂಮಿಗೆ ಭಾರವಾಗಿರುವುದೇ ಆಗಿದೆ. ಅತಿ ಬುದ್ಧಿವಂತರು ಅನ್ನಿಸಿಕೊಂಡರೂ ತಮ್ಮ ಕುಲ ಉಳಿಸುವ ತೆವಲಿನಿಂದ ಹೊರಬರುವ, ಬದುಕಿನ ಭಯದಿಂದ ಮುಕ್ತರಾಗುವ ದಾರಿಯಿನ್ನೂ  ಮನುಷ್ಯರಿಗೆ ಗೋಚರಿಸಿಲ್ಲ. ‘ಜಾಗತಿಕ ತಾಪಮಾನ’ ವೆಂಬುದು ವಾರ್ತೆಗಳಲ್ಲಿನ ಆಕರ್ಷಕ ಪದವಾಗಿ ಕೇಳಿ ಕೇಳಿ ಅಭ್ಯಾಸವಾಗಿ ಬಿಟ್ಟಿದೆ ಅಷ್ಟೇ. ಪ್ರೇಮವೆನ್ನುತ್ತೇವೆ, ಸಂಬಂಧಗಳ ಮಹತ್ವ ಸಾರುತ್ತೇವೆ, ಹುಟ್ಟನ್ನು ಸಂಭ್ರಮಿಸುತ್ತೇವೆ, ಬದುಕು ಕಟ್ಟಿಕೊಳ್ಳಲು ನಮ್ಮನ್ನು ನಾವೇ ಕೊಂದು ಕೊಳ್ಳತ್ತಾ ಕಾಯಕ ಮಾಡುತ್ತೇವೆ. ‘ಸಮೂಹ ಸನ್ನಿ’, ‘ಹೆಮ್ಮೆಯ ಭಾವ’ ಗಳೆಂಬ ಖಾಯಿಲೆಗಳಿಗೆ ಬಲಿಬಿದ್ದು ರೋಗ ಹರಡುತ್ತೇವೆ. ಕೊನೆಗೆ, ಸತ್ತಾಗ ಅಳಲು ಯಾರಾದರು ಬೇಕೆಂದು ಗೋಳಾಡುತ್ತೇವೆ

ಮನುಷ್ಯ ಕುಲ ಬೆಳೆದಂತೆಲ್ಲ ನರಳುವಿಕೆ ಹೆಚ್ಚಾಗುತ್ತಿದೆ

ಮೂರ್ನಾಲ್ಕು ವರ್ಷಗಳ ಹಿಂದೆ ‘ಹ್ವಾನ್ ರುಲ್ಫೋ’ ಬರೆದಿರೋ, ‘ಓ ಎಲ್ ನಾಗಭೂಷಣ ಸ್ವಾಮಿ’ ಅನುವಾದಿಸಿರುವ ‘ಬೆಂಕಿ ಬಿದ್ದ ಬಯಲು ಮತ್ತು ಪೆದ್ರೋ ಪರಾಮೋ’ ಪುಸ್ತಕ ಓದಿದ್ದೆ. ಅದರಲ್ಲಿ ಬದುಕಿರುವವರಿಗಿಂತ ಸತ್ತವರೇ ಹೆಚ್ಚಾಗಿ ಪಾತ್ರಗಳಾಗಿ ಬರ್ತಾರೆ. ಅದರಲ್ಲಿ ಬರುವ ಬಹುತೇಕ ಹೆಣ್ಣು ಪಾತ್ರಗಳು ಹುಚ್ಚಿಯರು. ಅದು ನಮ್ಮ ಸುತ್ತಲಿನ ವಾಸ್ತವದೊಂದಿಗೆ ಹೊಂದಾಣಿಕೆಯಾಗುತ್ತಾ ನನ್ನನ್ನು ಅಲೋಚನೆಗೆ ಹಚ್ಚಿದ ಕಾದಂಬರಿ. ಅಮ್ಮಂದಿರ ಮೇಲೆ ನಡೆದ ಮಾನಸಿಕ ಹಿಂಸೆಯ ಪ್ರತಿನಿಧಿಗಳಾಗಿ, ಹುಚ್ಚಿಯರಾಗಿ ಹೋದ ತಲೆಮಾರೊಂದನ್ನು ಗಮನಿಸಿದ್ದೀರಾ ? ಇಲ್ಲವಾದರೆ, ಅವರ ಮಕ್ಕಳಾಗಿ ರೋಗಗ್ರಸ್ಥ ಸಮಾಜದೊಳಗೆ ಖಿನ್ನತೆಗೊಳಗಾಗಿ, ಅದನ್ನೇ ಬದುಕೆನ್ನುತ ಸಾಯುವುದನ್ನೇ ನಿತ್ಯದ ಹಾಡಾಗಿಸಿ ಗುನುಗುವುದನ್ನಾದರು ಕಲಿತಿರುತ್ತೀರಿ. ಗರ್ಭಧಾರಣೆ, ಮಗುವನ್ನು ಹೆರುವುದು ಮತ್ತು ಅಡಿಯಾಳಾಗಿ ಬದುಕುವುದರ ನಡುವೆ ಹುಚ್ಚಿಯರಾಗಿ ಅಳಿದು ಹೋದ ಹೆಣ್ಣುಗಳದೆಷ್ಟೋ! ಹಾಗಂತ ಮಾನಸಿಕವಾಗಿ ನರಳುವುದು ಹೆಣ್ಣಷ್ಟೇ ಎಂದು ಅರ್ಥವಲ್ಲ. ಮನುಷ್ಯ ಕುಲ ಬೆಳೆದಂತೆಲ್ಲ ನರಳುವಿಕೆ ಹೆಚ್ಚಾಗುತ್ತಲೇ ಹೋಗಿದೆ. ಪ್ರೇಮ, ಜೊತೆ ಬಾಳುವಿಕೆ, ಮಕ್ಕಳನ್ನು ಹುಟ್ಟಿಸುವುದು – ಇವೆಲ್ಲಾ ನಿಮ್ಮ ಮೇಲೆ ಹೇರಿಕೆಯಾಗಿದೆಯೇ ಅಥವಾ ನಿಮಗೆ ನಿಜವಾಗಿಯೂ ಬೇಕಾಗಿದೆಯೇ ಎಂಬುದನ್ನು ಅರಿಯಿರಿ ಎಂದಷ್ಟೇ ವಿನಂತಿ. ಬದುಕು ಸ್ಪರ್ಧಾತ್ಮಕ ಪರೀಕ್ಷೆಗಳದೊಂದು ಓಟದಂತಾಗಿದ್ದು, ಆ ಜೀವ ಹಿಂಡುವ ಓಟದ ನಡುವಿಗೆ ಎಳೆಯ ಜೀವವೊಂದನ್ನು ಬಿಡುವಾಗ ‘ಒಂದು ಹಿಡಿ ಅನ್ನ, ಒಂದಿಷ್ಟು ಸಮಾಧಾನ, ಸ್ವಸ್ಥವಾದ ಗಾಳಿ, ಚೂರು ಪ್ರೀತಿ, ಇರಲೊಂದು ಸೂರು’ ಇಷ್ಟಾದರು ಸಿಗುವ ವಾತಾವರಣ ಇಲ್ಲುಂಟಾ ಗಮನಿಸಿರಿ.

ಮಗು ಹೆರುವುದು ಆಯ್ಕೆಯಾಗಲಿ…

ಗರ್ಭ ಧರಿಸಿದಾಗ ಮತ್ತು ಹೆತ್ತ ಮೇಲೆ, ಹುಟ್ಟಿದ ಮಗು ಹಾಗೂ ತಾಯಿಯ ನಡುವಿನ ಜೈವಿಕ ಬಂಧದ ಆಳವನ್ನು ವಿವರಿಸುವುದು ಕಷ್ಟ ಸಾಧ್ಯ. ಹೆತ್ತಾದ ಮೇಲೆ ಅತ್ಯಂತ ಖುಷಿಯನ್ನು ಅನುಭವಿಸುವವರಿರುವಂತೆ, ತೀವ್ರ ತರದ ಆತಂಕ, ಒತ್ತಡಗಳಿಗೆ ಈಡಾಗುವವರೂ ಇದ್ದಾರೆ. ಅಮ್ಮ ಅನ್ನುವ ಪದವನ್ನು ರೊಮ್ಯಾಂಟಿಸೈಸ್ ಮಾಡಿದಷ್ಟು, ಇನ್ಯಾವುದನ್ನು ಮಾಡಿರಲಾರರು. ಅಮ್ಮನ ಪ್ರೀತಿ, ಅಮ್ಮನ ಕೈಯಡುಗೆ, ದೇವತೆಯಂತಾ ಅಮ್ಮ …ಹೀಗೇ ಅಮ್ಮ ಅನ್ನುವುದೊಂದು ಆಸೆಗಳಿಲ್ಲದ ತ್ಯಾಗಮಯಿ ಜೀವಿಯೆಂಬಂತೆ ಬಿಂಬಿಸಿದವರೇ ನಾವೆಲ್ಲಾ. ಪ್ರತಿಯೊಂದು ಮನುಷ್ಯ ಜೀವಿಯು ಭಿನ್ನ ಅನ್ನೋದು ನಮಗೆ ಗೊತ್ತಿದೆ, ಆದರೂ ಮಕ್ಕಳನ್ನೇ ಇಷ್ಟ ಪಡದ ಹೆಣ್ಣುಗಳಿದ್ದಾರೆ ಎಂಬುದನ್ನು ಒಪ್ಪಲು ನಾವು ತಯಾರಿರುವುದಿಲ್ಲ ಯಾಕೆ? ಸಂತಾನೋತ್ಪತಿಯೆಂಬುದು ಜೀವ ವಿಕಾಸದ ಅತಿಮುಖ್ಯ ಭಾಗವಾಗಿ ಪರಿಣಮಿಸಿದ್ದು ಹೌದು. ಹಾಗೆಯೇ, ಮನುಷ್ಯರು ಸಹಜ-ಅಸಹಜವೆಂಬುದಿಲ್ಲದ ಜೀವ ವಿಕಾಸದ ಕೊಂಡಿಯಲ್ಲಿ ಎಲ್ಲವನ್ನು ನಿರ್ಧರಿಸಿ ಬದಲಾಯಿಸುವಷ್ಟರ ಮಟ್ಟಿಗೆ ಬದಲಾಗಿರುವುದು ಕೂಡಾ ನಿಜವೇ. ಶತಮಾನಗಳಿಂದ ಅನಿವಾರ್ಯ ಕ್ರಿಯೆಯಾಗಿಯೇ ನೋಡಲ್ಪಟ್ಟಿರುವ ಗರ್ಭಧಾರಣೆ, ಇವತ್ತು ಹಾಗೆಯೇ ಉಳಿದಿಲ್ಲ. ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಮಕ್ಕಳು ಮಾಡಿಕೊಳ್ಳಲು ಹಲವು ವಿಧಾನಗಳಿರುವಂತೆಯೇ, ಮಕ್ಕಳನ್ನು ಮಾಡಿಕೊಳ್ಳದೆ ಇರುವುದು ಸಹಜವಾದ ಜೀವನ ವಿಧಾನ ಎಂಬುದನ್ನು ಒಪ್ಪಬೇಕಿದೆ.

ರಕ್ತಸಂಬಂಧ, ಕುಟುಂಬ ಗೌರವದೊಳಗೇ ಬದುಕುವುದೆಂದರೆ…

ಲೆಬನಾನಿನ ಸೂಕ್ಷ್ಮ ಸಂವೇದನೆಗಳಿರುವ ಸೃಜನಶೀಲ ನಿರ್ದೇಶಕಿ ‘ನಡೈನ್ ಲಬಾಕಿ’  ‘ಕ್ಯಾಪರ್ನಮ್’ ಎಂಬ ಸಿನಿಮಾ ಮಾಡಿದ್ದಾಳೆ. ತಂದೆ, ತಾಯಿ, ತಂಗಿ ಜೊತೆಗಿದ್ದರೂ ಛಿದ್ರವಾದ ಕುಟುಂಬದ ಪುಟ್ಟ ಹುಡುಗ ಮನೆ ಬಿಟ್ಟು ಹೊರಟು ಪಡುವ ಕಷ್ಟಗಳು ಮತ್ತು ಕೊನೆಗೆ ತನ್ನನ್ನು ಹುಟ್ಟಿಸಿದ್ದಕ್ಕಾಗಿ ಪೋಷಕರ ವಿರುದ್ಧ ಕೋರ್ಟಿಗೆ ಹೋಗುವುದು ಸಿನಿಮಾದ ಕಥೆ. “ಮಕ್ಕಳು ಹೆತ್ತವರನ್ನು ನೋಡಿಕೊಳ್ಳಬೇಕು ಅಂತ ಸಮಾಜ ತೀರ್ಪು ನೀಡುವಾಗ, ನನ್ನನ್ನು ಹುಟ್ಟಿಸುವಾಗ ನನ್ನ ಅನುಮತಿ ಪಡೆದಿದ್ದೀಯಾ ಅಂತ ಮಗು ಪ್ರಶ್ನಿಸಿದರೆ” ಏನಾಗುತ್ತದೆ ಎಂಬುದನ್ನು ಚಿತ್ರ ತಾರ್ಕಿಕವಾಗಿ ಪರಿಶೋಧಿಸುತ್ತದೆ. ಇದನ್ನು ತೆರೆಗೆ ತಂದಿರುವ ರೀತಿ ಕಲೆಯ ಶಕ್ತಿಯನ್ನು ಎತ್ತಿ ತೋರಿಸುವಂತಿದೆ. ಟರ್ಕಿಯ ಕಡಲ ತಡಿಗೆ ಬಂದು ಬಿದ್ದ ಮೂರು ವರ್ಷದ ಸಿರಿಯನ್ ನಿರಾಶ್ರಿತ ಮಗುವಿನ ಮನಕಲಕುವ ಚಿತ್ರ ನೀವೆಲ್ಲರೂ ನೋಡಿರುತ್ತೀರಿ. ಆ ಮಗು ದಡಕ್ಕೆ ಬಂದು ಮಲಗಿದ್ದು ಮತ್ತು ಅದಕ್ಕಿಂತ ಮುಂಚೆ ಕಡಲಿನಲ್ಲಿ ಮಗುವಿನ ಮನಸ್ಥಿತಿಯನ್ನು ಊಹಿಸುತ್ತಾ, ಸಂಕಟ ಪಡುತ್ತಲೇ ನಡೈನ್ ಈ ಸಿನಿಮಾಕ್ಕಾಗಿ ಸಂಶೋಧನೆ ನಡೆಸುತ್ತಾಳೆ. ಮುಂದೆ ಈ ಸಿನಿಮಾ ಮಾಡಬೇಕಾಗಿ ಬಂದ ಕಾರಣಗಳನ್ನು ಹೇಳುತ್ತಾ – ತಮ್ಮ ಕುಟುಂಬಗಳನ್ನು ನೋಡಲು ಎಳೆ ವಯಸ್ಸಿನಲ್ಲಿ ಕೆಲಸ ಮಾಡುತ್ತಿರುವ, ಭಿಕ್ಷೆ ಬೇಡುತ್ತಿರುವ, ಮದುವೆ / ವೇಶ್ಯಾವಾಟಿಕೆಗಳಿಗೆ ತಳ್ಳಲ್ಪಡುತ್ತಿರುವ ಲಕ್ಷಗಟ್ಟಲೆ ಮಕ್ಕಳ ಬಗ್ಗೆ ವಿವರಿಸುತ್ತಾಳೆ. ಇದು ಪ್ರಪಂಚದೆಲ್ಲೆಡೆ ನಡೆಯುತ್ತಿರುವುದೇ ಆಗಿದ್ದರೂ, ನಾವಿನ್ನೂ ರಕ್ತಸಂಬಂಧ, ಕುಟುಂಬ ಗೌರವಗಳ ಬಗ್ಗೆ ಅದೆಷ್ಟು ಅಮಾನವೀಯವಾಗಿ ಯೋಚಿಸುತ್ತಾ, ಹಾಗಿರುವುದು ಮಾತ್ರ ಸಹಜವೆನ್ನುತ್ತಾ ಬದುಕುತ್ತಿದ್ದೇವೆ. ಯಾಕೆ ? 

ಮಕ್ಕಳನ್ನು ಹುಟ್ಟಿಸದಿರಿ ಅನ್ನುವ ಬೇಡಿಕೆಯ ಅಂತರಾಳ ಪ್ರೇಮಮಯವಾದದ್ದು…

ಗಂಟೆಗೆ 3,300 ಕ್ಕಿಂತ ಅಧಿಕ ಮಕ್ಕಳು ಹುಟ್ಟುವ ಮತ್ತು ಗಂಟೆಗೆ 1,100 ರಷ್ಟು ಮನುಷ್ಯರು ಸಾಯುವ ದೇಶವಾದ ಭಾರತದಲ್ಲಿ ನಾವು ವಾಸಿಸುತ್ತಿದ್ದೇವೆ. ವೈಯಕ್ತಿಕವಾಗಿ ಮಕ್ಕಳು ಮತ್ತು ಪ್ರಾಣಿಗಳನ್ನು ತುಂಬಾ ಇಷ್ಟ ಪಡುತ್ತೇನಾದರು, ನನ್ನ ಮುಂದುವರಿಕೆಯಾಗಿ ಜೀವವೊಂದನ್ನು ಬಿಟ್ಟು ಹೋಗುವ ಯಾವ ಅಲೋಚನೆಯು ನನಗಿಲ್ಲ. ಮದುವೆ, ಮಕ್ಕಳು ಅನ್ನುವ ಗೋಜಿಗೆ ಹೋಗದೆ ಬದುಕುವವರ ಸಂಖ್ಯೆ ಅತಿ ವಿರಳ ಎಂಬುದು ಗೊತ್ತಿರುವಂತದ್ದೆ. ಸರಿಯಾದ ಸೆಕ್ಸ್ ಎಜ್ಯುಕೇಶನ್ ಹಾಗೂ ಅದನ್ನು ಕೊಡಬೇಕಾದ ತಿಳುವಳಿಕೆಯಿರೋ ಟೀಚರುಗಳೋ ನಮ್ಮಲ್ಲಿ ಇಲ್ಲ. ಇವೆಲ್ಲವುಗಳಿಂದಾಗಿ, ಮಕ್ಕಳನ್ನು ಹುಟ್ಟಿಸದಿರಿ ಅನ್ನುವ ಬೇಡಿಕೆಯ ಅಂತರಾಳ ಪ್ರೇಮಮಯವಾದದ್ದು ಅಂತ ವಿವರಿಸಲು ಕಷ್ಟವಾಗುತ್ತಿದೆ. ಆದ್ದರಿಂದ ಇಷ್ಟೆಲ್ಲಾ ಸುತ್ತಿ ಬಳಸಿ, ಸಾವಿನಿಂದ ಉದ್ರೇಕದೆಡೆಗೆ ಎಂಬಂತೆ ಬರೆಯುತ್ತಿದ್ದೇನೆ. ಮೋಸ, ಜವಾಬ್ದಾರಿ, ಸ್ಥಿರತೆ, ನಿರಂತರ ಎಂಬ ಪದಗಳಿಗೆಲ್ಲ ಅರ್ಥವಿಲ್ಲದ ಪ್ರೇಮಕೋಶ ನಮ್ಮದಾಗಿರುವಾಗಲೂ, ನಾವು ಅರ್ಥ ಹುಡುಕುವ ನಿರರ್ಥಕ ಪ್ರಯತ್ನ ಮಾಡುತ್ತೇವೆ. ಪ್ರೇಮ ಪಾಲಿಸಬೇಕಾದ ಒಂದು ನಿಯಮವಲ್ಲವಾದ್ದರಿಂದ, ಇನ್ನೊಬ್ಬರನ್ನು ಬಲಿ ಕೊಡುವುದರ ಹೊರತಾದ ಎಲ್ಲಾ ಭಾವನೆಗಳನ್ನು ತಮ್ಮಷ್ಟಕ್ಕೆ ಹರಿಯಲು ಬಿಟ್ಟು, ಸಂಸ್ಕೃತಿ ಹೇರಿದ ನಿಯಮಗಳನ್ನು ಮರೆತುಬಿಡಬಹುದಲ್ಲವೆ ?

ಮಗುವನ್ನು ಭೂಮಿಗೆ ತರುವುದು ಅವರವರ ಆಯ್ಕೆಯಾಗಲಿ…

ಹೆಣ್ಣನ್ನು ವಸ್ತುವಾಗಿ, ಹೆರುವ ಯಂತ್ರವಾಗಿ ಉಪಯೋಗಿಸಿಕೊಂಡಿದ್ದೇವೆ. ನಗರಗಳಲ್ಲಿ ಸ್ವತಂತ್ರವಾಗಿ ಜೀವಿಸುತ್ತಾರೆ ಅಂತನ್ನಿಸುವವರ ಗುಲಾಮಗಿರಿಯಂಥ ಕೆಲಸ, ಕ್ಷಣಿಕ ಸುಖ ಮತ್ತು ಅದರ ನೂರರಷ್ಟಿದ್ದು ದಿನಪೂರ್ತಿ ಕಾಡುವ ನೋವು ಎಲ್ಲೆಡೆಗೂ ಹರಡುತ್ತಿವೆ. ಮಕ್ಕಳನ್ನು ಹುಟ್ಟಿಸಿ – ಮನುಷ್ಯರ ಹೇರಿಕೆಯ, ಗುಲಾಮಗಿರಿಯ, ಮನುಷ್ಯರಷ್ಟೇ ಮುಖ್ಯವೆನಿಸುವ ಲೋಕಕ್ಕೆ ಬಿಡುವ ಮುನ್ನ ಯೋಚಿಸಿ ಅನ್ನುವಾಗಲೂ ಅದು ಸಂಪೂರ್ಣವಾಗಿ ಹುಟ್ಟಿಸುವವರ ಆಯ್ಕೆ ಎಂಬುದನ್ನು ಮರೆಯುತ್ತಿಲ್ಲ. ಹುಟ್ಟಿಸುವುದು, ಬಿಡುವುದು ಹೆಣ್ಣಿನ ಅಥವಾ ಆ ನಿರ್ದಿಷ್ಟ ವ್ಯಕ್ತಿಗಳ ಆಯ್ಕೆಯಷ್ಟೇ ಆಗಬೇಕು. ಹಾಗಾದಾಗ ಆಗಬಹುದಾದ ಬದಲಾವಣೆ ಪುರುಷಾಧಿಪತ್ಯ ಸಮಾಜಕ್ಕೆ ಅರಗಿಸಿಕೊಳ್ಳಲು ಸಾಧ್ಯವಾಗಲಿ ಮತ್ತು ಆ ದಿನಗಳು ಬೇಗನೆ ಬರಲಿ.

ಗುರು ಸುಳ್ಯ
ಕವಿತೆ, ಕತೆ, ಲೇಖನ ಬರೆಯುವ ಹವ್ಯಾಸವಿರುವವರು.

Related Articles

ಇತ್ತೀಚಿನ ಸುದ್ದಿಗಳು