Saturday, June 15, 2024

ಸತ್ಯ | ನ್ಯಾಯ |ಧರ್ಮ

ಮಕ್ಕಳ ಪಾಲಿಗೆ ಅಪರಾಧಿ ಭಾರತ!

ಮಕ್ಕಳ ದಿನಾಚರಣೆ ಮಕ್ಕಳಿಗೆ ಹಬ್ಬವಾಗಬೇಕಾದರೆ ಪ್ರತಿ ಮಗುವಿಗೆ ಅತ್ಯವಶ್ಯಕವಾದ ಕನಿಷ್ಠ ಕಾಳಜಿ, ಗಮನಿಸುವಿಕೆ ಮತ್ತು ಪ್ರೀತಿಯನ್ನು ಕಡು ಎಚ್ಚರಿಕೆಯಿಂದ ನಿರ್ಮಾಣ ಮಾಡುವ ಬಹು ದೊಡ್ಡ ಜವಾಬ್ದಾರಿಯನ್ನು ಪೋಷಕರು, ವ್ಯವಸ್ಥೆ ಮತ್ತು ಸರ್ಕಾರ ಹೊರಬೇಕಿದೆ ಎನ್ನುತ್ತಾ ಮಕ್ಕಳ ದಿನಾಚರಣೆಯ ದಿನದಂದು ಮಕ್ಕಳ ಪಾಲಿಗೆ ಅಪರಾಧಿ ಸ್ಥಾನದಲ್ಲಿ ನಿಂತ ಭಾರತವನ್ನು ವಿಶ್ಲೇಷಿಸಿದ್ದಾರೆ ಲೇಖಕಿ ಹಾಗೂ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ರೂಪ ಹಾಸನ. 

ಮಕ್ಕಳೊಂದಿಗೆ ಜವಾಹರಲಾಲ್‌ ನೆಹರು

ಇಂದು ಮತ್ತೊಂದು ಮಕ್ಕಳ ದಿನಾಚರಣೆ! ಆದರೆ ಇದೂ ಕೂಡ ಇತರ ದಿನಾಚರಣೆಗಳಂತೆ ಒಂದು ಕಾಟಾಚಾರದ ಆಚರಣೆಯಾಗಿಬಿಟ್ಟಿದೆ. ಅಥವಾ ಉಳ್ಳವರ ಮಕ್ಕಳಿಗಾಗಿ ನಡೆಯುವ ಅದ್ದೂರಿ ಆಡಂಬರದ ಒಂದು ದಿನದ ಆಚರಣೆ ಮಾತ್ರವಾಗಿ ಉಳಿದುಬಿಟ್ಟಿದೆ. ಇದಕ್ಕೆ ವಿರುದ್ಧವಾಗಿ, ಭಾರತದಲ್ಲಿ ದಿನದಿಂದ ದಿನಕ್ಕೆ ಮಕ್ಕಳ ಬದುಕು ಅಪಾಯಕಾರಿಯಾಗುತ್ತಾ ಸಾಗಿದೆ. ಭಾರತದಲ್ಲಿ ಸದ್ಯ ಎರಡೂವರೆ ಕೋಟಿ ಅನಾಥ ಮಕ್ಕಳಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಪ್ರತಿ ದಿನ ಅಂದಾಜು ಮೂರು ಸಾವಿರ ಮಕ್ಕಳು ಹಸಿವಿನಿಂದ ಸಾಯುತ್ತಿದ್ದಾರೆ. ಹಾಗೂ ನೂರಕ್ಕೆ ನಲವತ್ತೈದಕ್ಕೂ ಹೆಚ್ಚು ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆಂದು ‘ಯೂನಿಸೆಫ್’ ಇತ್ತೀಚೆಗೆ ವರದಿ ನೀಡಿದೆ. ಸದ್ಯ ದೇಶದಲ್ಲಿ ಅಪೌಷ್ಟಿಕತೆಯಿಂದ ನರಳುತ್ತಿರುವ 6 ಕೋಟಿ ಮಕ್ಕಳಿದ್ದು, ಕರ್ನಾಟಕದಲ್ಲಿ ಅಂದಾಜು ಅಂತಹ 12 ಲಕ್ಷ ಮಕ್ಕಳಿದ್ದಾರೆ. ಜನ್ಮ ನೀಡುವ ತಾಯಿ ಹಾಗೂ ನವಜಾತ ಶಿಶು ಇಬ್ಬರ ಪಾಲಿಗೂ ಭಾರತ ಜಗತ್ತಿನಲ್ಲೇ ಅತ್ಯಂತ ಅಪಾಯಕಾರಿ ರಾಷ್ಟ್ರವಾಗಿದೆ. ಭಾರತದಲ್ಲಿ ಹುಟ್ಟುವ ಪ್ರತಿ ಮೂರರಲ್ಲಿ ಒಂದು ಮಗು ಹುಟ್ಟಿದ ದಿನದಂದೇ ಅಸುನೀಗುತ್ತದೆಂದರೆ, ನಮ್ಮದು ಅದಿನ್ಯಾವ ಸೀಮೆ ಅಭಿವೃದ್ಧಿ? ಎಂದು ಸರ್ಕಾರಗಳನ್ನು ಗಟ್ಟಿಸಿ ಕೇಳಬೇಕಿದೆ. ನಮ್ಮ ರಾಷ್ಟ್ರದಲ್ಲಿ ಪ್ರತಿ ವರ್ಷ ಸರಾಸರಿ ಮೂರು ಲಕ್ಷದಷ್ಟು ಶಿಶುಗಳು ಹುಟ್ಟಿದ ದಿನದಂದೇ ಸಾವಿಗೀಡಾಗುತ್ತಿವೆ. ಹುಟ್ಟಿದ ದಿನದಂದೇ ಶಿಶುಗಳು ಅತ್ಯಧಿಕವಾಗಿ ಸಾವನ್ನಪ್ಪುವ 10 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಸದಾ ಇರುತ್ತದೆ ಎಂದರೆ ಮಕ್ಕಳ ಪಾಲಿಗೆ ಇದಕ್ಕಿಂಥಾ ನಿಷ್ಕಾಳಜಿಯ ವಿಷಯ ಇನ್ಯಾವುದಿದೆ? ಹಾಗಾದರೆ ನಮ್ಮ ಮಕ್ಕಳ ಪರವಾದ ನೀತಿ, ಕಾಯ್ದೆ, ಕಾರ್ಯಕ್ರಮ, ಯೋಜನೆಗಳು, ಅದರ ಅನುಷ್ಠಾನಕ್ಕಿರುವ ವಿವಿಧ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸಚಿವಾಲಯ, ಇಲಾಖೆಗಳು, ಸಮಿತಿಗಳು, ಆಯೋಗಗಳು ಏನು ಮಾಡುತ್ತಿವೆ? ವರ್ಷಕ್ಕೆ ಕೋಟ್ಯಾಂತರ ರೂಪಾಯಿಗಳನ್ನು ಮಕ್ಕಳ ರಕ್ಷಣೆ, ಪೋಷಣೆಗಾಗಿಯೇ ವ್ಯಯಿಸುತ್ತಿದ್ದರೂ, ಭವಿಷ್ಯದ ಕುಡಿಗಳ ವಿಷಯದಲ್ಲಿ ನಿರೀಕ್ಷಿತ ಫಲ ಇನ್ನೂ ಕಾಣಲಾಗಿಲ್ಲವೆಂದರೆ ದೇಶವೊಂದರ ಪಾಲಿಗೆ ಇದಕ್ಕಿಂತಾ ದುರಂತ ಬೇರೇನಿದೆ?

ಮಕ್ಕಳ ಪೋಷಣೆ ತೃಪ್ತಿಕರವಾಗಿಲ್ಲ 

2011ರ ಜನಗಣತಿಯಂತೆ ಭಾರತದಲ್ಲಿ 47 ಕೋಟಿ ಮಕ್ಕಳಿದ್ದಾರೆ. ಅಂದರೆ ಒಟ್ಟು ಜನಸಂಖ್ಯೆಯ ಶೇಕಡಾ 39ರಷ್ಟು ಮಕ್ಕಳು. ಇದರಲ್ಲಿ 73% ಮಕ್ಕಳು ಗ್ರಾಮೀಣ ಪ್ರದೇಶದಲ್ಲಿದ್ದಾರೆ. ಒಟ್ಟಾರೆ ಜಗತ್ತಿನ ಆರು ಮಕ್ಕಳಲ್ಲಿ ಒಂದು ಮಗು ಭಾರತದಲ್ಲಿದೆ.

ಜಗತ್ತಿನ ಅತಿ ಹೆಚ್ಚಿನ ಮಕ್ಕಳನ್ನು ಹೊಂದಿರುವ ದೇಶವೆಂದು ಹೆಗ್ಗಳಿಕೆಗೆ ಪಾತ್ರವಾಗಿದ್ದರೂ ಮಕ್ಕಳ ಹಕ್ಕುಗಳ ಸಂರಕ್ಷಣೆಯ ದೃಷ್ಟಿಯಿಂದ ನಮ್ಮ ಸಾಧನೆ ಅತ್ಯಂತ ಕಳಪೆ. ನಮ್ಮ ದೇಶದಲ್ಲಿ ಕಳೆದ ಒಂದೆರಡು ದಶಕದಲ್ಲಿ ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಪೌಷ್ಟಿಕತೆ ವಿಚಾರದಲ್ಲಿ ಸಾಕಷ್ಟು ಸುಧಾರಣೆಯಾಗಿದ್ದರೂ ಮಧ್ಯಮ ಆದಾಯವಿರುವ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಮಕ್ಕಳ ಪೋಷಣೆ ಅಷ್ಟೊಂದು ತೃಪ್ತಿಕರವಾಗಿಲ್ಲವೆಂದು ಅಂತಾರಾಷ್ಟ್ರೀಯ ಮಾನದಂಡಗಳು ನಮ್ಮನ್ನು ಅಪಹಾಸ್ಯ ಮಾಡುತ್ತಿವೆ. ಮಕ್ಕಳ ಪೋಷಣೆ ವಿಚಾರದಲ್ಲಿ 1995ರವರೆಗೆ ಭಾರತ ವಿಶ್ವದಲ್ಲಿಯೇ 12ನೇ ಸ್ಥಾನದಲ್ಲಿ ಇತ್ತು. ನಂತರದ ಇತ್ತೀಚೆಗಿನ ವರ್ಷಗಳಲ್ಲಿ ಅದು 100 ಸ್ಥಾನದಿಂದ ಮೇಲಕ್ಕೆ ಏರುತ್ತಲೇ ಹೋಗುತ್ತಿದೆಯೆಂದು ಮಕ್ಕಳ ಹಕ್ಕುಗಳ ಬಗ್ಗೆ ಕಾರ್ಯ ನಿರ್ವಹಿಸುತ್ತಿರುವ “ಸೇವ್ ದಿ ಚೈಲ್ಡ್” ಅಂತಾರಾಷ್ಟ್ರೀಯ ಸ್ವಯಂಸೇವಾ ಸಂಸ್ಥೆಯು ಬಿಡುಗಡೆ ಮಾಡಿರುವ ವರದಿ ತಿಳಿಸುತ್ತದೆ.

ಶಿಕ್ಷಣ, ಆರೋಗ್ಯ, ಮತ್ತು ಪೌಷ್ಟಿಕಾಂಶಗಳನ್ನು ಮಾನದಂಡವಾಗಿ ಇಟ್ಟುಕೊಂಡು ಎಲ್ಲ ರಾಷ್ಟ್ರಗಳಲ್ಲಿ ಮಕ್ಕಳ ಪೋಷಣೆಯ ಗುಣಮಟ್ಟವನ್ನು ಸಮೀಕ್ಷೆ ಮಾಡಲಾಗಿದೆ. ‘ಭಾರತದಲ್ಲಿ ಆರ್ಥಿಕಾಭಿವೃದ್ಧಿಯ ಸಾಧನೆಯಾಗಿದ್ದರೂ ಈ ಪ್ರಗತಿ ಬಡವರು ಮತ್ತು ಕಡುಬಡವರಿಗೆ ತಲುಪದೇ ಈ ವರ್ಗದ ಮಕ್ಕಳ ಅಭಿವೃದ್ಧಿಯಾಗಿಲ್ಲ’ ಎಂದು ಸಂಸ್ಥೆಯ ವರದಿ ತಿಳಿಸುತ್ತದೆ. ಮಕ್ಕಳನ್ನು ಉತ್ತಮವಾಗಿ ಪೋಷಣೆ ಮಾಡುವ ವಿಚಾರದಲ್ಲಿ ಜಪಾನ್ ವಿಶ್ವದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಸ್ಪೇನ್, ಜರ್ಮನಿ, ಇಟಲಿ, ಫ್ರಾನ್ಸ್, ಕೆನಡಾ, ಸ್ವಿಟ್ಜರ್‍ಲ್ಯಾಂಡ್, ಬ್ರಿಟನ್ ಮತ್ತು ನಾರ್ವೆ ದೇಶಗಳಿವೆ.

ಯೋಜನೆಗಳು ಮಕ್ಕಳನ್ನು ಮುಟ್ಟುತ್ತಿವೆಯೇ?

ಮಕ್ಕಳ ಹಕ್ಕುಗಳ ನಿರ್ಲಕ್ಷ್ಯ, ಅವರು ಅನುಭವಿಸುತ್ತಿರುವ ಅವಿರತ ಶೋಷಣೆಯನ್ನು ಗಮನಿಸಿ, ಭಾರತದಲ್ಲಿ ಅದೇ ಮೊದಲ ಬಾರಿಗೆ ಜಾರಿಯಾದ 1974ರ ಮಕ್ಕಳ ರಾಷ್ಟ್ರೀಯ ನೀತಿ, ಅಲ್ಲಿಂದ ಮುಂದೆ 1986ರ ರಾಷ್ಟ್ರೀಯ ಶಿಕ್ಷಣ ನೀತಿ, 1993ರ ರಾಷ್ಟ್ರೀಯ ಪೌಷ್ಟಿಕಾಂಶ ನೀತಿ, 2000ದ ರಾಷ್ಟ್ರೀಯ ಜನಸಂಖ್ಯಾ ನೀತಿ, 2003ರ ರಾಷ್ಟ್ರೀಯ ಮಕ್ಕಳ ಶಾಸನಾಧಿಕಾರ, 2005ರ ರಾಷ್ಟ್ರೀಯ ಮಕ್ಕಳ ಕಾರ್ಯಯೋಜನೆ, ಮತ್ತೆ ಇತ್ತೀಚೆಗಿನ 2013ರ ರಾಷ್ಟ್ರೀಯ ಮಕ್ಕಳ ನೀತಿ… ಎಲ್ಲವೂ ಮಕ್ಕಳನ್ನೂ ವ್ಯಕ್ತಿಗಳೆಂದು ಗಣಿಸಿದ್ದಕ್ಕೊಂದು ಉದಾಹರಣೆ.

ಮಕ್ಕಳ ವಿವಿಧ ರೋಗನಿರೋಧಕ ಲಸಿಕೆಯನ್ನು ಕಡ್ಡಾಯವಾಗಿ 100ಶೇಕಡಾ ಹಾಕಿಸಬೇಕೆಂದು, ಜನನ-ಮರಣ ನೋಂದಣಿ, ಗರ್ಭಿಣಿ ಹಾಗು ಮಗುವಿನ ಸುರಕ್ಷತೆ, ಮಕ್ಕಳ ಶಿಕ್ಷಣ, ಹೆಣ್ಣುಭ್ರೂಣ ಹತ್ಯೆಯ ಸಂಪೂರ್ಣ ನಿಷೇಧ, ಮಕ್ಕಳ ಮರಣ ಪ್ರಮಾಣ ಕಡಿಮೆ ಮಾಡುವುದು, ಬಾಲ್ಯವಿವಾಹ ನಿಷೇಧ, ಎಲ್ಲ ರೀತಿಯ ದೌರ್ಜನ್ಯ ನಿಷೇಧ, ಆರೈಕೆ, ಪೋಷಣೆ ಮತ್ತು ರಕ್ಷಣೆ ಬಗ್ಗೆ ಮಕ್ಕಳ ಮೂಲಭೂತ ಅವಶ್ಯಕತೆ ಪೂರೈಕೆ… ಈ ಎಲ್ಲ ಕಾರಣಗಳಿಗಾಗಿ ಸಂವಿಧಾನಾತ್ಮಕ ಹಕ್ಕುಗಳನ್ನಾಧರಿಸಿ ಅನೇಕ ಕಾನೂನು, ನೀತಿ ನಿಯಮಗಳನ್ನೂ ಇದರೊಂದಿಗೇ ರೂಪಿಸಲಾಗಿದೆ. ಇದರಲ್ಲಿ ಸಾಮುದಾಯಿಕವಾದ ಮಕ್ಕಳೆಲ್ಲರ ಜೊತೆಗೆ ಬಡತನ ರೇಖೆಗಿಂತಾ ಕೆಳಗಿರುವ ಮಕ್ಕಳು, ಬೀದಿಮಕ್ಕಳು, ಹೆಣ್ಣುಮಕ್ಕಳು, ಅಂಗವಿಕಲ ಮಕ್ಕಳು, ಗುಡ್ಡಗಾಡಿನ ಮಕ್ಕಳು, ತಳಸಮುದಾಯದ ಮಕ್ಕಳ ಕುರಿತು ವಿಶೇಷ ಯೋಜನೆಗಳನ್ನು ಸಹ ರೂಪಿಸಲಾಗಿದೆ. ಎಲ್ಲವೂ ಪ್ರತಿನಿತ್ಯ ಕಡತಗಳಲ್ಲಿ ದಾಖಲಾಗುತ್ತವೆ. ಕೋಟ್ಯಾಂತರ ರೂಪಾಯಿಗಳು ಇದಕ್ಕಾಗಿ ವ್ಯಯವಾಗುತ್ತದೆ. ಆದರೆ ಯಾವುದೂ ನಿಜವಾದ ಸಂಕಷ್ಟದಲ್ಲಿರುವ ಮಕ್ಕಳನ್ನು ಪರಿಣಾಮಕಾರಿಯಾಗಿ ಮುಟ್ಟುತ್ತಿಲ್ಲ. ನಿರೀಕ್ಷಿತ ಮಟ್ಟದಲ್ಲಿ ಬದಲಾವಣೆಯಾಗಿಲ್ಲ.

ಮಕ್ಕಳ ಬದುಕು ಇಲ್ಲಿ ದಿನದಿಂದ ದಿನಕ್ಕೆ ಆತಂಕಕಾರಿಯಾಗುತ್ತಲೇ ಸಾಗುತ್ತಿದೆ. ಅದಕ್ಕೆ ತಾಜಾ ಉದಾಹರಣೆಯಾಗಿ ತುಮಕೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ತುಂಬು ಗರ್ಭಿಣಿಗೆ ಹೆರಿಗೆಗೆ ನಿರಾಕರಿಸಿದ್ದರಿಂದಾಗಿ, ಸಮರ್ಪಕ ವೈದ್ಯಕೀಯ ಸೌಲಭ್ಯಗಳು ಸಿಗದೇ, ಮನೆಯಲ್ಲಿಯೇ ಹೆರಿಗೆಯಾಗುವ ಸಂದರ್ಭದಲ್ಲಿ ತಾಯಿ ಹಾಗೂ ಅವಳಿಜವಳಿ ಹಸುಗೂಸುಗಳು ಸಾವಿಗೀಡಾದ ಹೃದಯ ವಿದ್ರಾವಕ ದಾರುಣ ಘಟನೆ ಕಣ್ಣ ಮುಂದಿದೆ.

ಹೆಣ್ಣುಮಕ್ಕಳು ಎಲ್ಲಿಯೂ ಸುರಕ್ಷಿತವಾಗಿಲ್ಲ

‘ಹೆಣ್ಣುಮಕ್ಕಳ ಮೇಲೆ ಪ್ರತಿ 20 ನಿಮಿಷಕ್ಕೊಂದು ಅತ್ಯಾಚಾರ ನಡೆಯುತ್ತಿದೆಯೆಂಬ, ದಾಖಲಾದ ಅತ್ಯಾಚಾರಗಳ ಅಧ್ಯಯನ ವರದಿ ಸುಳ್ಳಾಗಲಿ’ ಎಂದು ನಾವೆಷ್ಟು ಬೇಡಿಕೊಂಡರೂ ಈ ಪ್ರಮಾಣ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇನ್ನೂ ದಾಖಲಾಗದ ಪ್ರಮಾಣವನ್ನು ನೆನೆದು ಉಸಿರು ಕಟ್ಟಿ, ಜೀವ ನಡುಗುತ್ತದೆ. ಇತ್ತೀಚೆಗಷ್ಟೇ ಚಿತ್ರದುರ್ಗದ ಮುರುಘಾ ಮಠದಲ್ಲಿ ಬಾಲೆಯರ ಮೇಲೆ, ಅಲ್ಲಿನ ಪೀಠಾಧ್ಯಕ್ಷನಿಂದಲೇ ನಡೆದಿದೆ ಎನ್ನಲಾದ ನಿರಂತರ ಲೈಂಗಿಕ ಶೋಷಣೆಯ ಪ್ರಕರಣ, ಮಳವಳ್ಳಿಯಲ್ಲಿ ಟ್ಯೂಷನ್ ಶಿಕ್ಷಕನಿಂದ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಆರನೆಯ ತರಗತಿಯ ವಿದ್ಯಾರ್ಥಿನಿಯ ಪ್ರಕರಣ, ಅಪ್ಪನಿಂದಲೇ ಅತ್ಯಾಚಾರಕ್ಕೊಳಗಾಗಿ ಬಸಿರಾದ ಬಾಲೆಯ ಪ್ರಕರಣ, ದಲಿತ ಹೆಣ್ಣು ಮಕ್ಕಳ ಮೇಲೆ ಎಗ್ಗಿಲ್ಲದಂತೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳು, ಹೆಣ್ಣುಮಕ್ಕಳು ಎಲ್ಲಿಯೂ ಸುರಕ್ಷಿತವಾಗಿಲ್ಲವೆಂಬ ಸತ್ಯವನ್ನು ಬಿಚ್ಚಿಟ್ಟು, ಆತಂಕದಿಂದ ಬೆಚ್ಚಿಬೀಳುವಂತೆ ಮಾಡುತ್ತಿವೆ. ಅತ್ಯಾಚಾರಕ್ಕೆ ಒಳಗಾದ ಅಪ್ರಾಪ್ತ ಹೆಣ್ಣುಮಕ್ಕಳಿಗೆ ಸಮರ್ಪಕ ಪುನರ್ವಸತಿ ದೊರೆಯದಿರುವುದು, ವರ್ಷಗಟ್ಟಲೆಯಾದರೂ ಪರಿಹಾರ ಧನ ವಿತರಣೆಯಾಗದಿರುವುದು, ಸಂತ್ರಸ್ತರು ತಮ್ಮ ಬದುಕನ್ನು, ವ್ಯಕ್ತಿತ್ವವನ್ನು ಪುನರ್ ರೂಪಿಸಿಕೊಳ್ಳುವುದಕ್ಕೆ ಸರ್ಕಾರ ಮೂಲಮಟ್ಟದಲ್ಲಿ ಸಮರ್ಪಕ ಸಹಾಯ ಹಸ್ತವನ್ನೂ ಚಾಚದಿರುವುದು, ವ್ವವಸ್ಥೆಯ ಬಗೆಗೆ ಆಕ್ರೋಶವನ್ನು ಮೂಡಿಸುತ್ತಿದೆ. ಇಲ್ಲಿ ಈ ಪುಟ್ಟ ಬಾಲೆಯರು ಬದುಕುಳಿಯುವುದಾದರೂ ಹೇಗೆ?

ಕಾಣೆಯಾಗುವ ಮಕ್ಕಳು

ಹಾಗೇ ಭಾರತದಲ್ಲಿ ಮಕ್ಕಳ ನಾಪತ್ತೆ ಪ್ರಕರಣಗಳು ಕೂಡ ವರ್ಷದಿಂದ ವರ್ಷಕ್ಕೆ ವಿಪರೀತ ಪ್ರಮಾಣದಲ್ಲಿ ಹೆಚ್ಚುತ್ತಿದ್ದು ನಾಪತ್ತೆಯಾಗಿ ಪ್ರಕರಣ ದಾಖಲಾದವರ ಪೈಕಿ ಕೆಲವರಷ್ಟೇ ಪತ್ತೆಯಾಗುತ್ತಿದ್ದಾರೆ. ಉಳಿದವರ ಶಾಶ್ವತ ಕಣ್ಮರೆ ಆತಂಕ ಮೂಡಿಸುತ್ತಿದೆ. ಪ್ರತಿದಿನ ನಮ್ಮ ರಾಜ್ಯದಲ್ಲಿಯೇ ಸುಮಾರು 18ರಿಂದ 20 ಮಕ್ಕಳು ಕಾಣೆಯಾಗುತ್ತಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ಮಕ್ಕಳ ಬ್ಯೂರೋ ದಾಖಲಿಸಿರುವ ಅಂಕಿ ಅಂಶಗಳ ಪ್ರಕಾರ 2008ರಿಂದ 2012ರವರೆಗೆ ಹದಿನೆಂಟು ವರ್ಷದೊಳಗಿನ ಒಟ್ಟು 19,724 ಗಂಡು ಮತ್ತು ಹೆಣ್ಣುಮಕ್ಕಳು ಕಣ್ಮರೆಯಾಗಿದ್ದಾರೆ. ಅದರಲ್ಲಿ ಪತ್ತೆಯಾಗಿರುವುದು 9,245 ಮಕ್ಕಳು ಮಾತ್ರ! ಇನ್ನುಳಿದ 10,479 ಮಕ್ಕಳ ನಾಪತ್ತೆಯ ನಿಗೂಢತೆಯನ್ನು ನಮ್ಮ ಪೊಲೀಸರಿಂದ ಇನ್ನೂ ಭೇದಿಸಲಾಗಿಲ್ಲ. ಮಕ್ಕಳ ಕಳ್ಳಸಾಗಾಣಿಕೆ, ಮಾರಾಟ, ಅಪಹರಣ, ವೇಶ್ಯಾವಾಟಿಕೆಗೆ ತಳ್ಳುವ ಜಾಲಕ್ಕೆ, ಕಡಿವಾಣ ಬಿದ್ದಿಲ್ಲದಿರುವುದೇ ಇಷ್ಟು ದೊಡ್ಡ ಮೊತ್ತದ ಮಕ್ಕಳು ಶಾಶ್ವತವಾಗಿ ಕಾಣೆಯಾಗಿರುವುದಕ್ಕೆ ಕಾರಣ ಎಂಬುದನ್ನು ಯಾರು ಬೇಕಿದ್ದರೂ ಊಹಿಸಬಹುದಾಗಿದೆ.

ಕಟುಕರು ಯಾರು?

ಕೇಂದ್ರ ಸರ್ಕಾರ ರೂಪಿಸಿರುವ ಭ್ರೂಣಲಿಂಗ ಪತ್ತೆ ಮಾಡುವ ತಂತ್ರ-1994 (ದುರ್ಬಳಕೆ ಮತ್ತು ತಡೆ)ಕಾಯ್ದೆ ಜಾರಿಯಲ್ಲಿದ್ದರೂ ಕಟ್ಟುನಿಟ್ಟಾಗಿ ಅನುಷ್ಠಾನಗೊಂಡಿಲ್ಲವಾದ ಕಾರಣ ಗಂಡು ಮತ್ತು ಹೆಣ್ಣು ಮಕ್ಕಳಲ್ಲಿ ಲಿಂಗ ಅನುಪಾತ ಅಸಮತೋಲನ ಮಿತಿ ಮೀರುತ್ತಿರುವುದು ಆತಂಕಕಾರಿಯಾದ ಬೆಳವಣಿಗೆಯಾಗಿದೆ. ಕಳೆದೊಂದು ದಶಕದಲ್ಲಿ ನಡೆದ ವೈದ್ಯಕೀಯ ಕ್ಷೇತ್ರದ ಕ್ಷಿಪ್ರ ಬೆಳವಣಿಗೆ, ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸೇರಿ ಇತರೆ ಆಧುನಿಕ ಪರಿಕ್ಷಾ ವಿಧಾನಗಳಿಂದ ಭ್ರೂಣಲಿಂಗ ‘ಪತ್ತೆ’ ಅಥವಾ ‘ಆಯ್ಕೆ’ ಚಟುವಟಿಕೆ ಸದ್ದಿಲ್ಲದೇ ನಡೆಯುತ್ತಿದೆ. ಇದು ನಿಸ್ಸಂಶಯವಾಗಿ ಹೆಣ್ಣು ಸಂಕುಲದ ಮೇಲೆ ನಡೆಸುತ್ತಿರುವ ‘ಸಾಂಸ್ಕೃತಿಕ ಅತ್ಯಾಚಾರ’ವೇ ಸರಿ. ಇದರ ಪರಿಣಾಮವಾಗಿ ಹೆಣ್ಣುಶಿಶುಗಳು ಗರ್ಭದಲ್ಲೇ ನಿಷ್ಕರುಣೆಯಿಂದ ಹತ್ಯೆಗೀಡಾಗುತ್ತಿವೆ. ಇದರಿಂದ ಗಂಡು ಮಕ್ಕಳ ಜನನ ಪ್ರಮಾಣಕ್ಕೆ ಹೋಲಿಸಿದರೆ ಹೆಣ್ಣುಮಕ್ಕಳ ಜನನ ಪ್ರಮಾಣ ಸಾವಿರಾರು ಸಂಖ್ಯೆಯಷ್ಟು ಗಣನೀಯವಾಗಿ ಇಳಿಮುಖವಾಗುತ್ತಿದೆ. ಕಟುಕರು ಯಾರು? – ಎಂದರೆ ನಾವಲ್ಲ ಎಂಬ ಉತ್ತರ ಎಲ್ಲರಿಂದಲೂ ಬರುತ್ತದೆ. ಹಾಗಾದರೆ ಹೆಣ್ಣುಮಕ್ಕಳೇಕೆ ಮತ್ತು ಹೇಗೆ ಗರ್ಭದಲ್ಲೇ ಕರಗಿ ಕಾಣೆಯಾಗಿ ಹೋಗುತ್ತಿದ್ದಾರೆ?

ಮಕ್ಕಳ ಕುಂಠಿತ ಬೆಳವಣಿಗೆ

ದಾಖಲೆಯಂತೆ, ಭಾರತದಲ್ಲಿ ಐದು ವರ್ಷದೊಳಗಿನ ಪ್ರತಿ ಐದು ಮಕ್ಕಳಲ್ಲಿ ಎರಡು ಮಕ್ಕಳ ಬೆಳವಣಿಗೆ ಕುಂಠಿತಗೊಂಡಿರುತ್ತದೆ. ಹೀಗಾಗಿ ಜಗತ್ತಿನ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಭಾರತದಲ್ಲಿ ಬೆಳವಣಿಗೆ ಕುಂಠಿತಗೊಂಡ ಅತಿ ಹೆಚ್ಚು ಮಕ್ಕಳಿದ್ದಾರೆ. ವಯಸ್ಸಿಗೆ ತಕ್ಕಂತೆ ಎತ್ತರ ಬೆಳವಣಿಗೆ ಆಗದಿರುವುದು ಮತ್ತು ದೈಹಿಕ ಹಾಗೂ ಮಿದುಳು ಸಾಮರ್ಥ್ಯ ಅಭಿವೃದ್ಧಿ ಹೊಂದದಿರುವುದನ್ನು ಮಾನದಂಡವಾಗಿ ಇಟ್ಟುಕೊಂಡು ಬೆಳವಣಿಗೆ ಕುಂಠಿತಗೊಂಡಿರುವುದನ್ನು ನಿರ್ಧರಿಸಲಾಗುತ್ತದೆ. ಇದಕ್ಕೆ ಪ್ರಮುಖ ಕಾರಣ ತಾಯಂದಿರ ಬಾಲ್ಯವಿವಾಹ! ಮತ್ತೊಂದು ಕಾರಣ ಬಯಲು ಶೌಚದ ಮೂಲಕ ಹರಡುವ ರೋಗ ಮತ್ತು ಸೋಂಕು! ಆ ಮೂಲಕ ಭಾರತದಲ್ಲಿ ಪ್ರತಿ ವರ್ಷ ಅಂದಾಜು 1.4ಲಕ್ಷ ಮಕ್ಕಳು ಭೇದಿಯಿಂದಾಗಿ ಸಾಯುತ್ತಿದ್ದಾರೆ. ಶುದ್ಧ ನೀರಿನ ಕೊರತೆ, ನೈರ್ಮಲ್ಯ ಕೊರತೆಗಳೇ ಶೇಕಡಾ 50ರಷ್ಟು ಭೇದಿ ಪ್ರಕರಣಗಳಿಗೆ ಕಾರಣ. ಬೆಳವಣಿಗೆ ಕುಂಠಿತಗೊಳ್ಳುವ ಸಮಸ್ಯೆಯನ್ನು ಇದು ಇನ್ನಷ್ಟು ಹೆಚ್ಚಿಸುತ್ತದೆ.

ಮಕ್ಕಳ ಸ್ಥಿತಿ ಅಪಾಯಕಾರಿ ಹಂತವನ್ನು ತಲುಪಿದೆ!

ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಸಮಿತಿ 2014ರಲ್ಲಿಯೇ, “ಭಾರತದ ಕಾನೂನು ಅನುಷ್ಠಾನ ಸಂಸ್ಥೆಗಳು ಹಾಗೂ ನ್ಯಾಯಾಂಗ ಇಲಾಖೆಗಳು ಭಾರತ ದೇಶದಲ್ಲಿ ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ತಡೆಗಟ್ಟುವಲ್ಲಿ ತಮ್ಮ ಜವಾಬ್ದಾರಿಯಿಂದ ವಿಫಲವಾಗಿವೆ. ದೇಶಾದ್ಯಂತ ಮಕ್ಕಳ ಮೇಲೆ ನಡೆಯುತ್ತಿರುವ ವ್ಯಾಪಕವಾದ ಹಿಂಸೆ, ದೌರ್ಜನ್ಯ, ಲೈಂಗಿಕ ಕಿರುಕುಳ ಮತ್ತು ಮಕ್ಕಳ ನಿರ್ಲಕ್ಷ್ಯ ಆಘಾತ ಹುಟ್ಟಿಸುವಂತಿದೆ” ಎಂದು ತನ್ನ ವರದಿಯಲ್ಲಿ ಭಾರತ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಆದರೆ ಇಷ್ಟು ವರ್ಷಗಳೇ ಕಳೆದು ಹೋದರೂ ನಾವಿನ್ನೂ ಎಚ್ಚೆತ್ತುಕೊಂಡಿಲ್ಲ. ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಕುರಿತು ಯಾವುದೇ ಪರಿಣಾಮಕಾರಿಯಾದ ರಕ್ಷಣಾ ಯೋಜನೆಯನ್ನೂ ಜಾರಿಗೊಳಿಸಿಲ್ಲ. ಹೀಗೆಂದೇ ಭಾರತದಲ್ಲಿ ಮಕ್ಕಳ ಸ್ಥಿತಿ ನಿಜಕ್ಕೂ ಅಪಾಯಕಾರಿ ಹಂತವನ್ನು ತಲುಪಿದೆ.

ಪೋಷಕರು, ವ್ಯವಸ್ಥೆ ಮತ್ತು ಸರ್ಕಾರದ ಜವಾಬ್ದಾರಿ

ಸಮಾಜದ ವಿವಿಧ ಅಂಗಗಳನ್ನು ಬಗೆದು ನೋಡುತ್ತಾ ಹೋದರೆ ರಾಜಾರೋಷವಾಗಿ ಮಕ್ಕಳ ಶೋಷಣೆಯ, ನಿರ್ಲಕ್ಷ್ಯದ, ಸ್ಪಷ್ಟ ಮಾನವ ಹಕ್ಕು ಉಲ್ಲಂಘನೆಯ ರಾಶಿ ರಾಶಿ ಪ್ರಕರಣಗಳು ಹಾಗೂ ಅಂಕಿಅಂಶಗಳು ಎಲ್ಲೆಂದರಲ್ಲಿ, ಅತ್ಯಂತ ಸಾಮಾನ್ಯವಾಗಿ ಕಾಣಸಿಗುತ್ತವೆ. ಪ್ರತಿ ಮಗುವಿಗೆ ಅತ್ಯವಶ್ಯಕವಾದ ಕನಿಷ್ಠ ಕಾಳಜಿ, ಗಮನಿಸುವಿಕೆ ಮತ್ತು ಪ್ರೀತಿಯನ್ನು ಕಡು ಎಚ್ಚರಿಕೆಯಿಂದ ನಿರ್ಮಾಣ ಮಾಡುವ ಬಹು ದೊಡ್ಡ ಜವಾಬ್ದಾರಿ ಪೋಷಕರು, ವ್ಯವಸ್ಥೆ ಮತ್ತು ಸರ್ಕಾರದ ಮೇಲಿದೆ. ಈ ಹೊಣೆಯನ್ನು ಪ್ರತಿಯೊಂದು ಅಂಗವೂ ಅಕ್ಕರೆಯಿಂದ ಹೊತ್ತುಕೊಳ್ಳಲು ನಿಜಕ್ಕೂ ತಯಾರಿವೆಯೆ? ಇಲ್ಲವೆಂದಾದರೆ ನಾವು ಮಕ್ಕಳ ದಿನಾಚರಣೆಯ ಹೆಸರಿನಲ್ಲಿ ನಡೆಸುವ ಯಾವುದೇ ಆಡಂಬರದ ಆಚರಣೆಗಳು ಆತ್ಮವಂಚನೆಯಷ್ಟೇ!

ರೂಪ ಹಾಸನ

ಜೀವಪರ ಕಾಳಜಿಯೊಂದಿಗೆ ಸಾಹಿತ್ಯ ಕೃಷಿ ಮಾಡುವ ಇವರು ತಮ್ಮದೇ ಆದ ʼಪ್ರೇರಣಾ ವಿಕಾಸ ವೇದಿಕೆʼಯ ಮೂಲಕ ಮಕ್ಕಳ ಹಕ್ಕುಗಳಿಗೆ ದನಿಯಾಗುತ್ತಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು