Sunday, June 16, 2024

ಸತ್ಯ | ನ್ಯಾಯ |ಧರ್ಮ

ಮಕ್ಕಳ ದಿನದಂದು ನೆಹರೂ ಹೆಸರು ಮರೆತ ಬಿಜೆಪಿಗರು ; ಕಣ್ತಪ್ಪೋ? ಉದ್ದೇಶಪೂರ್ವಕವೋ?

ಇಂದು ಮಕ್ಕಳ ದಿನಾಚರಣೆ. ಎಲ್ಲರಿಗೂ ಗೊತ್ತಿರುವಂತೆ ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ( Nehru ) ಅವರ ಜಯಂತಿಯಂದು ಭಾರತದಲ್ಲಿ ಮಕ್ಕಳ ದಿನ ಎಂದು ಆಚರಿಸಲಾಗುತ್ತದೆ. ಮಕ್ಕಳನ್ನು ನೆಹರೂ ಅವರು ಬಹುವಾಗಿ ಇಷ್ಟ ಪಡುತ್ತಿದ್ದ ಹಿನ್ನೆಲೆಯಲ್ಲಿ ನೆಹರು ಅವರ ನಿಧನದ ನಂತರ, ಅವರ ಜನ್ಮದಿನದ ಸವಿನೆನಪಿಗಾಗಿ ನವೆಂಬರ್ 14ರಂದು ನಾವೆಲ್ಲರೂ ಈ ದಿನವನ್ನು ಆಚರಿಸಿಕೊಂಡು ಬಂದಿರುತ್ತೇವೆ.

ಅಂದಹಾಗೆ ಪ್ರತೀ ಬಾರಿಯ ಮಕ್ಕಳ ದಿನಾಚರಣೆ ಸಂದರ್ಭದಲ್ಲಿ ಸಮಾಜದಲ್ಲಿ ಹಿರಿಯರು, ತಿಳಿದವರು, ಗುರು ಸಮಾನರು ಅನ್ನಿಸಿಕೊಂಡವರು ಮಕ್ಕಳ ದಿನದ ಮಹತ್ವ, ಅದರ ಅಗತ್ಯದ ಜೊತೆಗೆ ಅದರ ಹಿನ್ನಲೆಯನ್ನೂ ತಿಳಿಸಿಕೊಡುವುದು ವಾಡಿಕೆಯಂತೆ ಬಂದಿದೆ. ಜೊತೆಗೆ ಅದು ಇಂದಿನ ತುರ್ತು ಅಗತ್ಯ ಕೂಡಾ. ಯಾಕೆಂದರೆ ಇತ್ತೀಚೆಗೆ ಸುಳ್ಳು ಮತ್ತು ತಪ್ಪು ಮಾಹಿತಿಗಳಿಂದ ಸಮಾಜದಲ್ಲಿ ದಾರಿ ತಪ್ಪಿಸುವ ಕೆಲಸವನ್ನು ಜವಾಬ್ದಾರಿಯುತ ಜನಪ್ರತಿನಿಧಿಗಳೇ ಮಾಡಲು ಶುರುವಿಟ್ಟುಕೊಂಡಿರುವುದು ದುರಂತ.

ಇದರ ಮುಂದುವರಿದ ಭಾಗವಾಗಿ ಈ ದಿನ ಬಿಜೆಪಿ ಪಕ್ಷದ ಎಲ್ಲಾ ಪ್ರಮುಖ ಮುಖಂಡರು ಮಕ್ಕಳ (Children’s day) ದಿನಾಚರಣೆಯಂದು ಎಲ್ಲೂ ಸಹ ಜವಾಹರಲಾಲ್ ನೆಹರೂ ಅವರ ಹೆಸರು, ನೆಹರೂ ಭಾವಚಿತ್ರ, ನೆಹರೂ ಅವರ ಸಣ್ಣ ಪರಿಚಯದ ಉಲ್ಲೇಖವನ್ನೂ ಮಾಡದೇ, ಕೊನೆಯ ಪಕ್ಷ ಅವರೊಬ್ಬ ಮಾಜಿ ಪ್ರಧಾನಿ ಎಂಬ ಗೌರವವನ್ನೂ ಕೊಡದೇ ಅವಮಾನಿಸಿರುವುದು ಬೆಳಕಿಗೆ ಬಂದಿದೆ.

ಪ್ರತೀ ಬಾರಿಯೂ ಭಾರತದಲ್ಲಿ ನೆಹರೂ ಅವರ ವಿಚಾರ ಬಂದಾಗ ಬಿಜೆಪಿ ಪಕ್ಷ ಬೇಕಂತಲೇ ನೆಹರೂ ಅವರನ್ನು ನಿರ್ಲಕ್ಷಿಸಿದ್ದಿದೆ (Avoid). ನಿರ್ಲಕ್ಷ್ಯ ಮಾತ್ರವಲ್ಲ ದೇಶದಲ್ಲಿನ ಯಾವುದೇ ಅವಗಡಗಳಿಗೂ ‘ನೆಹರೂ ಅವರೇ ಕಾರಣ’ ಎಂಬ ರೀತಿಯಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷ ತನ್ನ ತಪ್ಪುಗಳನ್ನು ಮರೆಮಾಚಲು ನೆಹರೂ ಅವರ ಬಗ್ಗೆ ಮೇಲಿಂದ ಮೇಲೆ ಜನರ ಮನಸ್ಸಿನಲ್ಲಿ ತಪ್ಪು ಮತ್ತು ಸುಳ್ಳು ಮಾಹಿತಿಗಳನ್ನು ಬಿತ್ತುತ್ತಲೇ ಬಂದಿದೆ.

ಸಧ್ಯ ಇವತ್ತಿನ ಮಕ್ಕಳ ದಿನಾಚರಣೆ ಕೂಡಾ ಕರ್ನಾಟಕ ಬಿಜೆಪಿ ಪಕ್ಷದ ಪ್ರಮುಖ ಮುಖಂಡರುಗಳು ತಾವೊಬ್ಬ ಆಡಳಿತ ಪಕ್ಷದ ಪ್ರತಿನಿಧಿ ಎಂಬುದನ್ನೂ ಮರೆತು ಬಿಜೆಪಿ ಪಕ್ಷದ ಅಜೆಂಡಾದ ಭಾಗದಂತೆ ವರ್ತಿಸಿರುವುದು ಸ್ಪಷ್ಟ.

ಸಧ್ಯ ಬಿಜೆಪಿ ಪಕ್ಷದ ಪ್ರಮುಖ ಮುಖಂಡರ ಈ ನಡೆ ಕಣ್ತಪ್ಪಿನಿಂದ ಆದ ಪ್ರಮಾದ ಖಂಡಿತಾ ಅಲ್ಲ. ಭಾರತದಲ್ಲಿ ಮಕ್ಕಳ ದಿನಾಚರಣೆ ಅಂತ ಬಂದಾಗ ಮುಖ್ಯವಾಗಿ ಬರುವ ಹೆಸರೇ ಮಕ್ಕಳ ಪ್ರಿಯವಾದ ವ್ಯಕ್ತಿ ಚಾಚಾ ನೆಹರೂ. ಪಕ್ಷ ಸಿದ್ಧಾಂತಗಳ ಆಚೆಗೂ ಭಾರತಕ್ಕೆ ನೆಹರೂ ಅವರ ಕೊಡುಗೆ ಅಪಾರವಾದದ್ದು.

ದುರಂತ ಎಂದರೆ ಇಂತಹ ಸಂದರ್ಭದಲ್ಲಿ ಗಟ್ಟಿ ದನಿಯಲ್ಲಿ ನಿಂತು ಪ್ರಶ್ನಿಸಬೇಕಾದ ಕಾಂಗ್ರೆಸ್ ಪಕ್ಷಕ್ಕೆ ಜಡತ್ವ ಬಂದಂತಿದೆ. ಇಂತಹ ಯಾವುದೇ ಪ್ರಮಾದಗಳಾದ ಸಂದರ್ಭದಲ್ಲಿ ಕಾಂಗ್ರೆಸ್ ದಿಟ್ಟತನದಿಂದ ಬಿಜೆಪಿ ಎದುರು ವಾದಿಸಿದ್ದು ಇತ್ತೀಚಿನ ದಿನಗಳಲ್ಲಿ ಇಲ್ಲವೇ ಇಲ್ಲ. ಇದೂ ಸಹ ಬಿಜೆಪಿ ಪಕ್ಷದ ಇಂತಹ ದೋರಣೆಗೆ ಸುಲಭದ ದಾರಿಯಾದಂತಾಗಿದೆ.

Related Articles

ಇತ್ತೀಚಿನ ಸುದ್ದಿಗಳು