Monday, June 17, 2024

ಸತ್ಯ | ನ್ಯಾಯ |ಧರ್ಮ

ಕೆಂಪು ಕೋಟೆಗೊಂದು ಸುಸ್ತಿನ ಸುತ್ತು

ʼನೀವು ಹಾಕಿರೋ ಚಾಂದಿನಿ ಚೌಕ್ ಡೆಸ್ಟಿನೇಶನ್ ಗೆ ಈ ಟ್ರಾಫಿಕ್ಕಲ್ಲಿ ತಲುಪೋದು ಕಷ್ಟʼ ಎಂದು ಹೇಳಿದ ಟ್ಯಾಕ್ಸಿವಾಲಾ ಪರಿಹಾರವನ್ನೂ ಅವನೇ ಸೂಚಿಸಿದ. ಆ ಪರಿಹಾರ ಏನಾಗಿತ್ತು? ಓದಿ.. ರೋಹಿತ್‌ ಅಗಸರಹಳ್ಳಿಯವರ ತಿರುಗಾಡಿ ಬಂದೋ ಅಂಕಣ-೪

ಅಕ್ಷರಧಾಮದ ನಿರಾಶೆಯನ್ನು ಇಲ್ಲವಾಗಿಸಲು ಕೆಂಪು ಕೋಟೆ ಕಡೆಗೆ ಧಾಳಿ ಮಾಡಿದೆವು. ಅದು ಸಂಜೆ ಟ್ರಾಫಿಕಿನ ಪೀಕ್ ಸಮಯ. ಟ್ಯಾಕ್ಸಿವಾಲಾ ಮೊದಲೇ ಹೇಳಿಬಿಟ್ಟ. ನೀವು ಹಾಕಿರೋ ಚಾಂದಿನಿ ಚೌಕ್ ಡೆಸ್ಟಿನೇಶನ್ ಗೆ ಈ ಟ್ರಾಫಿಕ್ಕಲ್ಲಿ ತಲುಪೋದು ಕಷ್ಟ ಎಂದು. ಪರಿಹಾರವನ್ನೂ ಅವನೇ ಸೂಚಿಸಿದ. ಕೆಂಪು ಕೋಟೆಯ ಗೇಟಿನ ಬಳಿ ಬಿಡ್ತೀನಿ, ಅದರ ಎದುರೇ ಚಾಂದಿನಿ ಚೌಕ್ ಮತ್ತು ಜಾಮಾ ಮಸ್ಜಿದ್ ಎಂದು ಟಿಕೆಟ್ ಕೌಂಟರೊಂದರ ಬಳಿ ವಿಲೇವಾರಿ ಮಾಡಿ ಪರಾರಿಯಾದ. ಕೋಟೆ ಪ್ರವೇಶದ ಟಿಕೇಟ್ ಖರೀದಿಸಿ ಪ್ರವೇಶಕ್ಕೆ ಜಾಗ ಹುಡುಕಿದಾಗ ತಿಳಿಯಿತು ಅವನ ಚಾಲಾಕಿತನ. ಬೃಹತ್ ವ್ಯಾಪ್ತಿಯ ಆ ಕೋಟೆಗೆ ಒಂದಕ್ಕಿಂತ ಹೆಚ್ಚು ಕೌಂಟರುಗಳಿದ್ದರೂ ಪ್ರವೇಶ ಒಂದೇ ಇದ್ದಂಗಿತ್ತು. ನಾವು ಟಿಕೆಟ್ ಖರೀದಿಸಿದ‌ ಜಾಗದಿಂದ ಕಿ.ಮಿ. ದೂರದಲ್ಲಿತ್ತು ಎಂಟ್ರಿ ಗೇಟು. ಅದೂ ಕ್ಲೋಸಿಂಗ್ ಸಮಯ ಬೇರೆ. ಆರು ಮಂದಿ ಮೂರು ಗುಂಪಾಗಿ‌ ನಡೆದು ಒಳಹೋಗುವ ಹೊತ್ತಿಗೆ ಸೂರ್ಯ ಬಾಯ್ ಹೇಳಿ ಚಂದ್ರನಿಗೆ ಚಾರ್ಜು ಕೊಡುವ ಹೊತ್ತಾಗಿತ್ತು.


ಈ ಹಿಂದೆ ದೆಹಲಿಗೆ ಬಂದಿದ್ದರೂ ಕೆಂಪು ಕೋಟೆ ನೋಡಿರಲಿಲ್ಲ. ಬಹುಶಃ ಟಿವಿಯಲ್ಲಿ ಬಿಟ್ಟ ಕಣ್ಣು ಬಿಟ್ಟ ಹಾಗೇ ಕೆಂಪು ಕೋಟೆ ನೋಡಿದ್ದು ದೇವೇಗೌಡರು ಅಲ್ಲಿಂದ ಒಮ್ಮೆ ಸ್ವಾತಂತ್ರ್ಯೊತ್ಸವದ ಭಾಷಣ ಮಾಡಿದಾಗ ಅಂತ ಕಾಣ್ತದೆ. ಆಗಿನ್ನೂ ಖಾಸಗಿ ಚಾನೆಲುಗಳ ಭರಾಟೆ ಕೂಡ ಅಷ್ಟಿರಲಿಲ್ಲ. ಇದ್ದವೆರಡೇ ಚಾನೆಲು. ಡಿಡಿ -೧ ಮತ್ತು ಡಿ.ಡಿ.-೯. ಇತ್ತೀಚೆಗೆ ಪಂಜಾಬ್ ರೈತ‌ಹೋರಾಟದ ಸಂದರ್ಭದಲ್ಲಿ ಕೂಡ ಕೆಂಪುಕೋಟೆ ಬಹಳ ಸದ್ದು ಮಾಡಿತ್ತು. ಅಲ್ಲಿದ್ದ ರಾಷ್ಟ್ರಧ್ವಜದ ಪಕ್ಕದಲ್ಲಿ ಮತ್ಯಾರೊ ಜೆಂಡಾ ಏರಿಸಿದ್ದರೆಂದು.

ದಿಲ್ಲಿ ಕೋಟೆಯ ನಮ್ಮ ಭೆಟ್ಟಿ ತೀರ ಅವಸರದ್ದಾಗಿತ್ತು. ಅದೂ ಅಲ್ಲದೆ ಮುಂಜಾನೆಯಿಂದ ಸುತ್ತಾಡಿ ಏನನ್ನಾದರೂ ಕುತೂಹಲದಿಂದ ನೋಡಿ ತಣಿಯುವ ತಾಳ್ಮೆಯೂ ಉಳಿದಿರಲಿಲ್ಲ. ಆದರೂ ನಾನು, ದಿನೇಶ್, ರೋಹಿಣಿ ಮೇಡಂ ಮತ್ತು ಆರುಷ ಒಂದು ಸುತ್ತು ಬಂದೆವು; ಸುಜಾತಾ‌ ಮತ್ತು ಪ್ರಣತಿ ಒಳಾವರಣದ ಪಾರ್ಕಿನಲ್ಲಿ ನಮಗಾಗಿ ಕಾಯುತ್ತಿದ್ದರು.


ದಿಲ್ಲಿ ಕೆಂಪು ಕೋಟೆಯ ಚರಿತ್ರೆಯೇ ರೋಚಕ. ಷಹಜಹಾನ್ ಆಗ್ರಾದಿಂದ ದಿಲ್ಲಿಗೆ ತನ್ನ ರಾಜಧಾನಿ ವರ್ಗಾಯಿಸಿದಾಗ ಕಟ್ಟಿಸಿದ್ದೇ ಈ ಕೋಟೆ. ಶಿಲ್ಪಿ ತಾಜ್ ಮಹಲ್ ನಿರ್ಮಿಸಿದ್ದ ಉಸ್ತಾದ್ ಅಹಮದ್ ಲಾಹೋರಿ. ಕೋಟೆ ನಿರ್ಮಾಣವಾದಾಗ ಪೂರ್ಣ ಕಂದಕದಲ್ಲಿ ಯಮುನಾ ನದಿ ನೀರು ಹರಿಯುವಂತೆ ನಿರ್ಮಿಸಲಾಗಿತ್ತಂತೆ. ಆಗಿನ ಷಹಜಹಾನಾಬಾದ್‌ನಲ್ಲಿ ಅಂದರೆ ಇಂದಿನ ಪುರಾನಿ ದಿಲ್ಲಿಯಲ್ಲಿ ಕಟ್ಟಲ್ಪಟ್ಟ ಮುಘಲ್ ಕಾಲದ ಅತ್ಯುಚ್ಚ ಕಟ್ಟೋಣಿಕೆ ಇದು. ೧೬೩೮ ರಲ್ಲಿ ಆರಂಭವಾಗಿ ೧೬೪೮ ರಲ್ಲಿ ಮುಗಿಯಿತು. ಮೋತಿ ಮಸೀದಿ ಔರಂಗಝೇಬ್ ನ ಕಾಲದಲ್ಲಿ ಸೇರ್ಪಡೆಯಾಯ್ತು. ಔರಂಗಝೇಬ್ ನಂತರ ದಿಲ್ಲಿ ಮತ್ತು ಕೋಟೆ ಎರಡೂ ಪತನದತ್ತ ಸಾಗಿದವು.

ಫರುಕ್ಷಿಯಾರ್ ಕಾಲದಲ್ಲಿ ಧಾಳಿ ಮಾಡಿದ ನಾದಿರ್ ಶಾ ಸುಲಭಕ್ಕೆ ದಿಲ್ಲಿಯನ್ನು ಗೆದ್ದು ಲೂಟಿ ಮಾಡಿದ್ದೂ ಅಲ್ಲದೆ ಮಯೂರ ಸಿಂಹಾಸನವನ್ನೂ ಹೊತ್ತೊಯ್ದ. (ನಾದಿರ್ ಶಾ ನ ವಿಕ್ಷಿಪ್ತ ವ್ಯಕ್ತಿತ್ವದ ಬಗ್ಗೆ ನಮ್ಮ ಲಂಕೇಶ್ ಅವರು ಗುಣಮುಖ ಎಂಬ ಅದ್ಭುತ ನಾಟಕ ಬರೆದಿದ್ದಾರೆ. ನಾಟಕ ಚರಿತ್ರೆಯ ಯಾಂತ್ರಿಕ ವಿವರಗಳಿಗೆ ಮಾತ್ರ ಕಟ್ಟುಬೀಳದೆ ಹಲವು ಸಂಕೀರ್ಣ ಸಂಗತಿಗಳನ್ನು ಅಭಿವ್ಯಕ್ತಿಸುತ್ತದೆ ಎನ್ನುವುದು ಬೇರೆ ಮಾತು; ಆದರೆ ನಾಟಕದಲ್ಲಿ ದುರ್ಬಲ ಮುಘಲ್ ದೊರೆಯ ಚಿತ್ರಣ ಸಮರ್ಥವಾಗಿ ಬಂದಿದೆ)


 ೧೭೫೨ ರ ರಾಜಕೀಯ ಬೆಳವಣಿಗೆಗಳಂತೆ ಮರಾಠರು ದೆಹಲಿ ಸಿಂಹಾಸನದ ರಕ್ಷಣೆಗೆ ನಿಂತರು. ೧೭೬೦ ರಲ್ಲಿ ಕೆಂಪುಕೋಟೆಯೊಳಗಿನ ದಿವಾನ್ ಇ ಖಾಸ್ ( ಮಂತ್ರಿ ಪರಿಷತ್ ಸಭೆ ಸೇರುತ್ತಿದ್ದ ಸ್ಥಳವಂತೆ) ಮೇಲ್ಛಾವಣಿಗೆ ಹೊದಿಸಿದ್ದ ಬೆಳ್ಳಿಯನ್ನು ದುರ್ರಾನಿಯಿಂದ ದಿಲ್ಲಿ ಉಳಿಸಲು ಖರ್ಚಿಗೆ ಕಾಸಿಲ್ಲದೆ ಕರಗಿಸಿದರಂತೆ. ಆದರೆ ದುರ್ರಾನಿ ಎದುರಿನ ಮೂರನೇ ಪಾಣಿಪಟ್ ಯುದ್ಧದಲ್ಲಿ ಮರಾಠರಿಗೆ ಸೋಲಾಯ್ತು. ಮತ್ತೆ ಷಾ ಆಲಂ ಕಾಲಕ್ಕೆ ಮಹದಾಜಿ‌ ಸಿಂಧ್ಯ ದಿಲ್ಲಿಯ ಸಿಂಹಾಸನಕ್ಕೆ ಬೆಂಬಲವಾಗಿ ನಿಂತ.
 ೧೭೬೦ ರಲ್ಲಿ ಜಾಟ್ ದೊರೆ ಜವಾಹರ್ ಸಿಂಗ್ ದೆಹಲಿ ಮೇಲೆ ಧಾಳಿ ಮಾಡಿ ಕೆಂಪು ಕೋಟೆ ಹಿಡಿದನಂತೆ. ನಂತರದ ಎರಡೇ ದಿನಗಳಲ್ಲಿ  ಕೋಟೆ ಬಾಗಿಲುಗಳನ್ನು ಕಿತ್ತು ಅವನು ತನ್ನ ಗೆಲುವಿನ ಗೌರವಾರ್ಥ ಭರತ್ಪುರದ ಲೋಹಗಡ ಕೋಟೆಗೆ ಹೊತ್ತೊಯ್ದ. (ಅವು ಈಗಲೂ ಅಲ್ಲಿಯೇ ಇವೆಯಂತೆ)

ನಂತರದ ಧಾಳಿಯ ಸರದಿ ಸಿಕ್ಖ್ ಅರಸರದು. ೧೭೮೩ ರ ಈ ದಾಳಿಯ ಗುರಿ ಕೂಡ ದಿಲ್ಲಿ ಹಾಗು ಕೆಂಪುಕೋಟೆ. ಈ ಲೂಟಿ ಆವಧ್ ನಿಂದ ಜೋಧಪುರದ ವರೆಗೆ ವಿಸ್ತರಿಸಿತ್ತಂತೆ. ದಿಲ್ಲಿಯಲ್ಲಿ ಏಳು ಗುರುದ್ವಾರಗಳನ್ನು ಸ್ಥಾಪಿಸುವ ಒಪ್ಪಂದದೊಂದಿಗೆ ಮತ್ತೆ ದಿಲ್ಲಿಗೆ ಮುಕ್ತಿ. ಅವುಗಳಲ್ಲಿ ಒಂದು ಕೆಂಪು ಕೋಟೆ ಎದುರಿನ ಚಾಂದನಿ ಚೌಕದಲ್ಲಿದೆ. ೧೭೮೮ ರಲ್ಲಿ ಮತ್ತೆ ಮರಾಠರ ಹಿಡಿತಕ್ಕೆ ಬಂದ ಕೋಟೆ ಅಂತಿಮವಾಗಿ ೧೮೦೩ ಎರಡನೇ ಆಂಗ್ಲೋ ಮರಾಠ ಯುದ್ಧದ ಸೋಲಿನಿಂದ ಈಸ್ಟ್ ಇಂಡಿಯಾ ಕಂಪೆನಿಯ ಹಿಡಿತಕ್ಕೆ ಬಂತು. ಇದರ ಬಳಿಕ ಕೆಂಪುಕೋಟೆ ಬ್ರಿಟಿಷರ ಕೈತಪ್ಪಿದ್ದು ೧೮೫೭ ರ ದಂಗೆಯ ಸಂದರ್ಭದಲ್ಲಿ ಮುಘಲ್ ವಂಶದ ಕಡೆಯ ಕುಡಿ ಬಹುದ್ದೂರ್ ಶಾ ಜಫರ್ ನ ಕಾರಣದಿಂದ ಮಾತ್ರ. ದಂಗೆಯನ್ನು ಅಡಗಿಸಿದ ನಂತರ ಪ್ರತಿರೋಧದ ರೂಪಕದಂತಿದ್ದ ದಿಲ್ಲಿಯ ಕೆಂಪು ಕೋಟೆಯನ್ನು ಬ್ರಿಟಿಷರು ಯೋಜನಾ ಬದ್ಧವಾಗಿ ಹಾಳುಗೆಡವಿದರು. ಆಗ ಕೋಟೆಯ ಒಳಾವರಣದ ಶೇಕಡ ೮೦ ರಷ್ಟು ರಚನೆಗಳನ್ನು ಕೆಡವಿ ಹಾಕಲಾಯ್ತಂತೆ. ಈಗ ಉಳಿದಿರುವುದು ಕೋಟೆಯ ಸುತ್ತಿನ ಕೇವಲ ಅಸ್ಥಿಪಂಜರದಂಥ ರಚನೆ ಮಾತ್ರ. ನಂತರ ಕರ್ಜನ್ನನ ಅವಧಿಯಲ್ಲಿ ಒಂದಷ್ಟು ಪುನರುಜ್ಜೀವನ ನಡೆಯಿತಂತೆ.


 ಕೆಂಪುಕೋಟೆಯಲ್ಲಿದ್ದ ಮಹತ್ವದ ವಸ್ತುಗಳಲ್ಲಿ ಹಲವು ೧೭೪೭ ರಲ್ಲಿ ನಾದಿರ್ ಶಾ ನೊಂದಿಗೆ ಪರ್ಶಿಯಾಗೆ ಪಯಣಿಸಿದರೆ; ಉಳಿದವು ೧೮೫೭ ರಲ್ಲಿ ಬ್ರಿಟಿಷರಿಂದ ಇಂಗ್ಲೆಂಡಿಗೆ ಮತ್ತು ಖಾಸಗಿ ಮ್ಯೂಸಿಯಂಗಳಿಗೆ ಬಿಕರಿಯಾದವಂತೆ. ೧೯೧೧ ರಲ್ಲಿ ಇಂಗ್ಲೆಂಡಿನ ರಾಜ-ರಾಣಿಯರ ಭೇಟಿಯ ಸಂದರ್ಭದಲ್ಲಿ ಖಾಸಗಿ ದರ್ಬಾರ್ ನಡೆಸುವ ಕಾರಣಕ್ಕೆ ಕೋಟೆಯೊಳಗಿನ ಕೆಲ ರಚನೆಗಳನ್ನು ಪುನ ಸ್ಥಾಪಿಸಲಾಯ್ತೆಂದು ಹೇಳಲಾಗಿದೆ.

೧೯೪೫ ರಲ್ಲಿ ಎರಡನೇ ಜಾಗತಿಕ ಯುದ್ಧ ಮುಗಿದಾಗ ತಾತ್ವಿಕವಾಗಿ ಮಿತ್ರರಾಷ್ಟ್ರಗಳ ವಿರೋಧ ಪಾಳೆಯದಲ್ಲಿದ್ದ ಐ ಎನ್ ಎ ಸೈನಿಕರ ವಿಚಾರಣೆ ನಡೆಸುವ ಯತ್ನ ನಡೆದದ್ದು ಇದೇ ಕೆಂಪು ಕೋಟೆಯಲ್ಲಿ. ಆಗ ಐ ಎನ್ ಎ ಸೈನಿಕರ ಪರ ವಕಾಲತ್ತು ಹಾಕಿದ ವಕೀಲ ಪಂಡಿತ್ ನೆಹರೂ. ಹಾಗೇ ೧೯೪೭ ರಲ್ಲಿ ಇದೇ ‌ಕೋಟೆಯ ಮೇಲೆ ಮೊದಲ ಸ್ವತಂತ್ರ ‌ಭಾರತದ ಧ್ವಜ ಹಾರಿಸಿದ್ದೂ ಕೂಡ ಅದೇ ನೆಹರೂ. ಈ ಧ್ವಜಾರೋಹಣ ಸಂಪ್ರದಾಯ ಯಾಕೋ ರಾಜಪ್ರಭುತ್ವದ ಪಳೆಯುಳಿಕೆಯಂತೆ ಕಂಡರೂ ಅದಕ್ಕೊಂದು ಚಾರಿತ್ರಿಕ ಮಹತ್ವ ಪ್ರಾಪ್ತವಾಗಿಬಿಟ್ಟಿದೆ. ಕೋಟೆಯ ಶಿಲ್ಪಿ ಲಾಹೋರಿಯ ಹೆಸರನ್ನು ಈಗ ಒಂದು ಪ್ರವೇಶ ದ್ವಾರಕ್ಕೆ ಇರಿಸಲಾಗಿದೆ. ಬ್ರಿಟಿಷರು ಕೋಟೆಯೊಳಗಿನ ಮೂರನೇ ಎರಡರಷ್ಟು ರಚನೆಗಳನ್ನು ನೆಲಸಮ ಮಾಡಿದ ಮೇಲೆಯೂ ಈಗಲೂ ಕೂಡ ಚಚ್ಚಾ ಚೌಕ್, ನೌಬತ್ ಖಾನ, ದಿವಾನ್ ಇ ಖಾಸ್, ದಿವಾನ್ ಇ ಆಮ್, ಮುಮ್ತಾಜ್ ಮಹಲ್, ರಂಗ್ ಮಹಲ್, ಖಾಸ್ ಮಹಲ್, ಬಾವ್ಡಿ, ಮೋತಿ ಮಸೀದಿ, ಹೀರಾ‌ಮಹಲ್ ಉಳಿದಿವೆ. ಈ ಸ್ಮಾರಕಗಳ ಸಂರಕ್ಷಣೆ‌ ತಕ್ಕ ಮಟ್ಟಿಗೆ ನಡೆದಿದ್ದರೂ ಭೆಟ್ಟಿ ನೀಡುವ ಅಧಿಕ ಪ್ರವಾಸಿಗಳ ಕಾರಣಕ್ಕೋ, ಕೋಟೆಯ ಒಳಾವರಣವನ್ನೂ ಸಹ ಹಲವು ವಾಣಿಜ್ಯ ಚಟುವಟಿಕೆಗಳಿಗೆ ಮುಕ್ತ ಮಾಡಿರುವ ಕಾರಣಕ್ಕೋ ಸ್ಮಾರಕಗಳ ಸಂರಕ್ಷಣೆ ಉಳಿದ ಹಲವೆಡೆಯಷ್ಟು ವ್ಯವಸ್ಥಿತವಾಗಿ ಇದ್ದಂತೆ ಎನಿಸಲಿಲ್ಲ. ಮೇಲೆ ಪಟ್ಟಿ ಮಾಡಿದವುಗಳಲ್ಲಿ ಮೂರ್ನಾಲ್ಕನ್ನು ಮಾತ್ರ ನಮಗೆ ಕ್ವಚಿತ್ತಾಗಿ ನೋಡಲು ಅವಕಾಶವಾಯ್ತು. ಉಳಿದವನ್ನು ಮುಂದೆಂದಾದರೂ ಮತ್ತೆ‌ ದೆಹಲಿಗೆ ಹೋಗುವ ಅವಕಾಶ ಸಿಕ್ಕಾಗ ಸಾವಕಾಶವಾಗಿ ನೋಡಬೇಕಿದೆ.

ರೋಹಿತ್‌ ಅಗಸರಹಳ್ಳಿ

ಹಾಸನದ ನಿವಾಸಿಯಾದ ರೋಹಿತ್‌ ಅಗಸರಹಳ್ಳಿ ವೃತ್ತಿಯಿಂದ ಕನ್ನಡ ಉಪನ್ಯಾಸಕರು. ಪ್ರವೃತ್ತಿ ಓದು, ಸಿನೆಮಾ ಮತ್ತು ತಿರುಗಾಟ.

Related Articles

ಇತ್ತೀಚಿನ ಸುದ್ದಿಗಳು