Sunday, June 16, 2024

ಸತ್ಯ | ನ್ಯಾಯ |ಧರ್ಮ

ಅವಳ ಹಣೆಲಿ ಬರ್ದಂಗ್ ಆಯ್ತದೆ

(ಈವರೆಗೆ…)

ಗಂಗೆಯ ಅಣ್ಣಂದಿರು ಒಪ್ಪಿಕೊಂಡ ಹುಡುಗನ ಜತೆ ಮದುವೆ ಮಾಡಲು ಅವಳ ಅಪ್ಪ ಆಸಕ್ತಿ ತೋರಿಸುವುದಿಲ್ಲ. ಒಂದು ಹಂತದಲ್ಲಿ ಅಪ್ಪ ಮಕ್ಕಳ ಜಗಳ ವಿಪರೀತಕ್ಕೆ ಹೋಗಿ ಅಪ್ಪ ಮನೆ ಬಿಟ್ಟು ಹೊಲದ ಗುಡಿಸಲಿಗೆ ಹೋಗಿ ಅಲ್ಲೇ ಇರುತ್ತಾನೆ. ಅಪ್ಪನ ಒಳಮನದ ನೋವನ್ನು ಸಹಿಸಲಾರದೆ ಗಂಗೆ ಗಟ್ಟಿ ಮನಸು ಮಾಡಿ ತಾನು ಮದುವೆಗೆ ಒಪ್ಪಿಕೊಂಡಿರುವುದಾಗಿ ಹೇಳುತ್ತಾಳೆ. ಗಂಗೆಯ ಅಪ್ಪ ಏನು ಮಾಡಿದರು?  ಓದಿ.. ವಾಣಿ ಸತೀಶ್‌ ಅವರ ತಂತಿ ಮೇಲಣ ಹೆಜ್ಜೆ -೪

ಇಪ್ಪತ್ತೆರಡರ ಮಗಳ ಮಾತುಗಳು ಎಪ್ಪತ್ತರ ಅಪ್ಪನ ಕಿವಿಯಲ್ಲಿ ಗುಂಯ್ ಗುಡುತ್ತಲೇ ಇತ್ತು. ಎಂದೂ ಎದುರು ಬದುರು ನಿಂತು ಮಾತಾಡದ ಮಗಳು ಇಂದು ತನ್ನ ಪ್ರಬುದ್ಧವಾದ ಮಾತುಗಳಿಂದ ತುಸುಮಟ್ಟಿಗೆ ಅಪ್ಪನ ಎದೆಯ ಭಾರ ಇಳಿಸಿದ್ದಳು. ಸಾಲದೆಂಬಂತೆ ಎದುರು ಹೊಲದ ಸಿದ್ದಣ್ಣ ಕೂಡ ಗಂಗೆಯ ಮಾತಿಗೆ ದನಿಗೂಡಿಸಿ, “ಕಳ್ಳು ಬಳ್ಳಿ ಸಂಬಂಧ ಅಂದ್ರೆ ಅಷ್ಟು ಸುಸೂತ್ರ ಅನ್ಕಂಡಿಯನ ಬೋಪಣ್ಣ. ನಾಳೆ ದಿನ ತಂಗಿಗೆ ಏನಾದ್ರು ಆದ್ರೆ ಅಣ್ಣ ತಮ್ಮದಿರ್ ಜೀವ ಚುರ್ ಅಂದಂಗಿರ್ತದ ಹೇಳು?” ಎನ್ನುವ ಪ್ರಶ್ನೆ ಎಸೆಯುವುದರ ಮುಖಾಂತರ ಅಪ್ಪನೊಳಗೆ  ಒಂದು ಸಣ್ಣ ಭರವಸೆಯ ಕಿಡಿ ಹೊತ್ತಿಸಿ, ಹೊಲದ ಗುಡಿಸಲಿನಿಂದ ಊರೊಳಗಿನ ಮನೆಯ ಕಡೆಗೆ ಎಳೆದು ತಂದಿದ್ದ.

ಮುಸ್ಸಂಜೆ ದೀಪ ಹತ್ತಿಸುವ ಹೊತ್ತು, ಎಲ್ಲರ ಮನೆಯ ಅಂಗಳದಲ್ಲಿ ಪೊರಕೆಯ ಸರ ಪರ ಸದ್ದು ಕೇಳಿ ಬರುತ್ತಿತ್ತು. ಮೇಯಲು ಹೋಗಿದ್ದ ಹಸು ಎಮ್ಮೆಗಳು ಕೊರಳ ಗಂಟೆ ಸದ್ದಿನೊಂದಿಗೆ ಕೊಟ್ಟಿಗೆಯ ಹಾದಿ ಹಿಡಿದಿದ್ದವು. ಊರೊಳಗಿನ ಆ ಕಿರಿದಾದ ಹಾದಿಯ ಉದ್ದಕ್ಕೂ ಅಂಟಿಕೊಂಡಿದ್ದ ಮನೆಗಳಿಂದ, ಮುಸ್ಸಂಜೆಯ ಕಾಫಿಯ ಘಮಲು ಹೊರ ಹೊಮ್ಮುತ್ತಿತ್ತು. ಎಷ್ಟೋ ಬಾರಿ ಅಪ್ಪ ಆ ಚಂದದ ಘಮಲನ್ನು ಆಸ್ವಾದಿಸಲೆಂದೇ ಮೇಲಿನ ಬೀದಿಯಲ್ಲಿದ್ದ ತನ್ನ ಮನೆಯಿಂದ ಕೆಳಗಿನ ಬೀದಿಗೂ, ಕೆಳಗಿನ ಬೀದಿಯಿಂದ ಮೇಲಿನ ಬೀದಿಗೂ ನಡೆದಾಡುತ್ತಿದ್ದುದುಂಟು. ಇಂದು ಅದರ ಯೋಚನೆಯೇ ಇಲ್ಲದೆ, ಬದುಕಿನ ಎಣಿಕೆ ಗುಣಿಕೆಯ ಲೆಕ್ಕಾಚಾರದಲ್ಲೇ, ಕಾಲೆಳೆಯುತ್ತಾ ಬರುತ್ತಿದ್ದವನನ್ನು, ಆ ಬೀದಿಯ ಅದೇ ಕಾಫಿಯ ಘಮಲು ಕ್ಷಣ ಜಗ್ಗಿ ನಿಲ್ಲಿಸಿ ಉಲ್ಲಾಸ ತುಂಬಿತು. ಇನ್ನೇನು ಘಮಲಿನ ಒಳಗಿಳಿದು ಮೈ ಮರೆಯಬೇಕು ಎನ್ನುವಷ್ಟರಲ್ಲಿ ಧುತ್ತನೆ ತನ್ನ ಗಂಡು ಮಕ್ಕಳ ಹುಂಬ ಮುಖ ಕಣ್ಣೆದುರು ಬಂದು ಆ ಆನಂದವನ್ನೇ ಕಸಿದು ಬಿಟ್ಟಿತು. ಕಂಕುಳಲ್ಲೊಂದು ಗಂಟನ್ನಿರುಕಿಕೊಂಡಿದ್ದ ಅಪ್ಪ ಕಾಲೆಳೆಯುತ್ತಾ ಒಲ್ಲದ ಮನಸ್ಸಿನಲ್ಲೇ ಮನೆಯ ಮುಂದೆ ಬಂದು ನಿಂತ.

ಬಾಗಿಲಿಗೆ ಎದುರಾಗಿ ಕುಳಿತು, ಕಾಫಿ ಹೀರುತ್ತಿದ್ದ ಚಂದ್ರಹಾಸನ ಮುಖನೋಡಲು ಇಚ್ಛಿಸದ ಅಪ್ಪ, ಮನೆಯ ಹೊರಗಿದ್ದ ದೊಡ್ಡ ಜಗುಲಿ ಕಟ್ಟೆಯ ಮೇಲೇ ಕುಳಿತ. ಅಂಗಳದ ಕಸ ಗುಡಿಸುತ್ತಿದ್ದ ಗಂಗೆ ಅಪ್ಪನನ್ನು ಕಂಡು ಸಂಭ್ರಮಿಸುತ್ತಾ ಪೊರಕೆಯನ್ನು ಬದಿಗೆಸೆದು ಒಳಗೋಡಿ ಅವ್ವನಿಗೆ ಸುದ್ದಿ ಮುಟ್ಟಿಸಿದಳು.

ಅವ್ವ ಬಿಸಿ ಕಾಫಿ ತಂದು ಅಪ್ಪನ ಮುಂದೆ ಹಿಡಿದಳು. ತುಸು ಸೆಟೆದುಕೊಂಡಂತೆಯೇ ಇದ್ದ ಅಪ್ಪ “ನನಗೆ ಕಾಪಿ ಗೀಪಿ ಏನು ಬೇಡ ತಗೊಂಡೋಗು.” ಎಂದು ಮುಖ ತಿರುವಿ ಕುಳಿತ.  ಅವ್ವ “ಅಲ್ಲ ಎಷ್ಟ್ ದಿನಾಂತ ಮಕ್ಕಳಂಗೆ ರಚ್ಚೆ ಹಿಡ್ದೀರಿ. ಹಿಂಗಾದ್ರೆ ಬದುಕು ನಡಿತದ. ಏಳೇಳಿ ಮುಂದಿನ ಕಾರ್ಯ ನೋಡಿ” ಎಂದಳು. ಏನೂ ನಡೆದೇ ಇಲ್ಲ ಎಂಬಂತೆ ಯಾವ ಅಳುಕು ಇಲ್ಲದೇ ಹೊರ ಬಂದ ಚಂದ್ರಹಾಸ. “ಆಗಿದ್ ಆಗೋಯ್ತು ಈಗ ಮದುವೆ ವಿಷಯ ಏನಾಯ್ತು” ಎಂದು ಕೇಳಿದ. ಅಪ್ಪ, ಅವ್ವನ ಮುಖ ನೋಡುತ್ತಾ “ನಾಳೆ ಗಂಗೆಗೆ ಏನು ಹೆಚ್ಚು ಕಮ್ಮಿ ಆದ್ರೂ ಇವರೆಲ್ಲ ಸೇರಿ ಜವಾಬ್ದಾರಿ ತಕ್ಕೊತರ ಕೇಳು ಸಾಕಿ” ಎಂದ. ಚಂದ್ರಹಾಸ, ಗಿರಿಧರ ವೆಂಕಟೇಶ ಮೂರು ಜನರು ಎದೆ ತಟ್ಟಿಕೊಂಡು. “ನಾವಿರೋ ತನ್ಕಾ ಅವಳಿಗೆ ಯಾವ ತೊಂದ್ರೆನು ಆಗ್ದಂಗ್ ನೋಡ್ಕೋತೀವಿ. ನಮ್ಮ ಮೇಲೆ ನಂಬಿಕೆ ಇಡಕೇಳವ್ವ” ಎಂದರು.  ಅಪ್ಪ “ಸರಿ ಅದೇನ್ ಮಾಡ್ತೀರೋ ಅದುನ್ನಾದ್ರು ಅಚ್ಕಾಟ್ಟಗಿ ಮಾಡಿ. ಅವಳ ಹಣೆಲಿ ಬರ್ದಂಗ್ ಆಯ್ತದೆ” ಎಂದು ಹೇಳಿ ಹೊಟ್ಟೆಯ ಸಂಕಟ ತಾಳಲಾರದೆ ಹಿತ್ತಿಲ ಕಡೆ ಹೆಜ್ಜೆ ಹಾಕಿದ.

ಕಷ್ಟ ಪಟ್ಟು ಅಪ್ಪ ಹೊಂದಿಸಿ ತಂದಿದ್ದ ಅಷ್ಟೋ ಇಷ್ಟೋ ದುಡ್ಡಿನಲ್ಲಿ, ಚಂದ್ರಹಾಸ  ಮುವತ್ತು ರೂಪಾಯಿ ಕೊಟ್ಟು  ತನ್ನ ಹೆಂಡತಿಯ ಅಡವಿಟ್ಟಿದ್ದ ಚಿನ್ನದ ಕುಚ್ಚಿನ ಕುಪ್ಪಿಗೆಯನ್ನು ಬಿಡಿಸಿ ತಂದ. ಅದನ್ನು ಕರಗಿಸಿ ಗಂಗೆಗೆ ತಾಳಿ, ಕಾಲುಂಗುರ, ಹುಡುಗ ಹುಡುಗಿಗೆ ಒಂದು ಜೊತೆ ಬಟ್ಟೆ ತರುವಷ್ಟರಲ್ಲಿ ಅಪ್ಪ ಕೂಡಿಸಿ ಕೊಟ್ಟಿದ್ದ ಅಷ್ಟೂ ಹಣವೂ ಖಾಲಿಯಾಯಿತು. ಇನ್ನು ಮದುವೆಯ ರಿಜಿಸ್ಟರ್ ಖರ್ಚು, ನಾರಿಪುರದಿಂದ ಮಾದಲಪುರಕ್ಕೆ ಅವರೆಲ್ಲರ ಓಡಾಟದ ಖರ್ಚು, ಗಂಡನ ಮನೆಗೆ ಹೋಗುವಾಗ ಮಗಳ ಕೈಗಿಡಲು ಬೇಕಾದ ಒಂದಷ್ಟು ಪುಡಿಗಾಸು ಹೀಗೆ ಸಣ್ಣ ಪುಟ್ಟ ಖರ್ಚು ವೆಚ್ಚವೇ ತಲೆ ಮೇಲೆ ಬೆಟ್ಟದಂತೆ ಕೂತಿತ್ತು. ದಾರಿ ಕಾಣದಂತಾದ ಅಪ್ಪ, ವಿಧಿಯೇ ಇಲ್ಲದೆ ಸತ್ತ ಮಗಳು ಲಕ್ಷ್ಮೀ ಹೆಸರಿನಲ್ಲಿ ಬಿಟ್ಟುಕೊಂಡಿದ್ದ ಹಸುವನ್ನು  ಮಾರಲೇಬೇಕಾದ ಪರಿಸ್ಥಿತಿ ಎದುರಾಯಿತು. ಅವ್ವ ತನ್ನ ಜೀವವನ್ನೇ ಕಿತ್ತು ಕೊಡುತ್ತಿದ್ದೇನೋ ಎನ್ನುವಂತಹ ವೇದನೆ ಅನುಭವಿಸುತ್ತಾ  ಹಸುವಿಗೆ ಪೂಜೆ ಮಾಡಿ  ನಮಸ್ಕರಿಸಿದಳು. ಮಗಳು, ಲಕ್ಷ್ಮಿಗೆ ಇಷ್ಟದ ಕೆಲವು ತಿಂಡಿಗಳನ್ನು ತಿನ್ನಿಸಿ ಗೂಟಕ್ಕೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿ ಚಂದ್ರಹಾಸನ ಕೈಗಿತ್ತಳು. ಮಾತು ಕಳೆದುಕೊಂಡ ಅಪ್ಪ ತನ್ನ ಗಂಡು ಮಕ್ಕಳ ಹಠಮಾರಿತನಕ್ಕೆ  ಬೇಸರಿಸುತ್ತಾ, ರೆಕ್ಕೆ ಮುರಿದ ಹಕ್ಕಿಯಂತೆ ಚಡಪಡಿಸುತ್ತಾ ಕೊಟ್ಟಿಗೆಯ ಒಂದು ಬದಿಗೆ ನಿಂತಿದ್ದ.  ಹಸುವನ್ನು ತಬ್ಬಿ ಹಿಡಿದು ಒಂದೇ ಸಮನೆ ಅಳುತ್ತಿದ್ದ ಗಂಗೆಯ ಕೈಕೊಸರಿದ ಚಂದ್ರಹಾಸ, “ಈ ನಾಟ್ಕನೆಲ್ಲಾ ನಿಲ್ಸಿ ಹಸ ಬುಟ್ಟು ಆ ಕಡೆ ಹೋಗು. ನಿನ್ನಿಂದ್ಲೆ ತಾನೇ ಈ ಹಸ ಮಾರ್ತಿರದು”  ಎಂದು ಗದರಿದ. “ನಿನ್ನಿಂದಲೇ” ಎನ್ನುವ ಮಾತನ್ನು ಕೇಳಿ ಗಂಗೆಯ ಕೋಪ ನೆತ್ತಿಗೇರಿತು. “ನನ್ನ್ ಮದುವೆ ಮಾಡಿ ಅಂತ ನಿಮ್ಮ ಎದೆ ಮೇಲೆ ನಿಂತಿದ್ದೀನಿ ಅನ್ನೊ ಹಂಗೆ ಹೇಳ್ತಿದ್ದಿಯಲ್ಲ ನಾಚ್ಕೆ ಆಗಬೇಕು ನಿನ್ ಮಕ್ಕೆ” ಎಂದು ಉಗಿದಳು. ಚಂದ್ರಹಾಸ “ನನಗೆ ಉಗಿತಿಯೇನೆ ಗಂಡ್ ಬೀರಿ” ಎಂದು ಗಂಗೆಯ ಮುಂದಲೆಗೆ ಕೈ ಹಾಕಿದ. ನಡುವೆ ಬಂದ ಅವ್ವ “ಹೂಂ ಇವುಳುನ್ನು ಹೊಡ್ದು ಕೊಂದು ಬುಡಪ್ಪ ಅತ್ಲಗಿ. ಆ ಮಗಳಿರೋವರಿಗೂ ಅವಳನ್ನ ಹುರ್ದು ಮುಕ್ಕಿದ್ರಿ. ಇನ್ನು ಹೆಣ್ ಸಂತಾನ ಅಂತ ಉಳಿದಿರೋದು ಇವ್ಳೊಬ್ಬಳು. ಇವ್ಳುನ್ನು ಬಡ್ದು ಬಾಯ್ಗಾಕೋ ಬುಡಿ” ಎಂದು ಚಂದ್ರಹಾಸನ ಬೆನ್ನಿನ ಮೇಲೆ ಗುದ್ದಿದಳು. ಎಂದೂ ಯಾವ ಹೊತ್ತು ಗಂಡುಮಕ್ಕಳನ್ನು ಬಿಟ್ಟು ಕೊಟ್ಟು ಮಾತಾಡಿದ ಚರಿತ್ರೆಯೇ ಇಲ್ಲದ ಅವ್ವನ ನಡವಳಿಕೆಗೆ ಅಪ್ಪನೇ ಕ್ಷಣ ಬೆರಗಾಗಿ ಹೋದ. ಮೂರು ಜನ ಗಂಡು ಮಕ್ಕಳ ಮೇಲೆ ಹೆಣ್ಣು ಮಗು ಹುಟ್ಟಿದರೆ ದಟ್ಟ ದರಿದ್ರ ಅಡರಿಕೊಳ್ಳುತ್ತದೆ ಎಂದು ಯಾರೋ ಹೇಳಿದ್ದ ಮಾತನ್ನು ಬಲವಾಗಿ ನಂಬಿದ್ದ ಅವ್ವ, ಇದೇ ಮಗಳು ಸಾಯಲೆಂದು ಮೂರುದಿನ ಹಾಲು ನೀರು ಕೊಡದೆ ಹಠ ಹಿಡಿದು ಕೂತ ದಿನಗಳು ಅಪ್ಪನ ಕಣ್ಣ ಮುಂದೆ ರಪ್ ಎಂದು ಹಾದು ಹೋಯಿತು. ಇದೇ ಹೆಂಡತಿಯ ದೊಡ್ಡತನವನ್ನು ಕಣ್ಣಾರೆ ಕಂಡಿದ್ದ ಅಪ್ಪ, ಮನುಷ್ಯನೊಳಗಿನ ವೈರುಧ್ಯಗಳ ಬಗ್ಗೆ ಸದಾ ಕುತೂಹಲವನ್ನೂ, ಗೌರವವನ್ನೂ ಹೊಂದಿದ್ದ. ಹಾಗಾಗಿಯೇ ಎಂದೂ ಯಾವ ಉದ್ವೇಗಕ್ಕೂ ಒಳಗಾಗದೆ ಅವ್ವನ ಈ ಅವಿವೇಕದ ನಡೆಯನ್ನು ಕೂಡ ತಾಳ್ಮೆಯಿಂದಲೇ ಸರಿಪಡಿಸಿದ್ದ.

ಇದೇ ಅವ್ವ ಬಿದಿರು ಮೆಳೆಯೊಳಗೆ ಸಾವಿನ ದವಡೆಯಲ್ಲಿದ್ದ  ಮೂರು ದಿನದ ಹಸುಳೆಯನ್ನು ರಕ್ಷಿಸಿ ಹೆಣ್ಣು ,ಗಂಡು, ಜಾತಿ, ಜಾತಕ, ಸೂತಕ, ಏನೊಂದು ನೋಡದೇ ಮಡಿಲಿಗೆ ಕಟ್ಟಿಕೊಂಡು ಬಂದು, ಮಹಾಲಕ್ಷ್ಮಿ ಎಂದು ಹೆಸರಿಟ್ಟು ಇಪ್ಪತ್ತು ವರ್ಷಗಳು ಹೂವಿನಂತೆ ಸಾಕಿದ್ದಳು. ತನ್ನ ಎಲ್ಲಾ ಮಕ್ಕಳಿಗಿಂತಲೂ ಒಂದು ಹಿಡಿ ಹೆಚ್ಚೇ ಪ್ರೀತಿ ನೀಡಿ ಬಹಳ ಮುಚ್ಚಟೆಯಿಂದ ಬೆಳೆಸಿದ್ದಳು. ತಿಂಗಳು ಎನ್ನುವುದರೊಳಗೆ ಮದುವೆ ಮಂಟಪವೇರಬೇಕಾದ ಲಕ್ಷ್ಮಿ ವಾರ ಎನ್ನುವುದರೊಳಗೆ ದೆವ್ವ ಹಿಡಿದು ಸತ್ತೇ ಹೋದಳು. ಈ ಘಟನೆ ನಡೆದು ಆರು ವರ್ಷಗಳೇ ಕಳೆದು ಹೋದವು ಈ ಕಟು ಸತ್ಯವನ್ನು ಅರಗಿಸಿಕೊಳ್ಳಲು ಅವ್ವನಿಗಾಗಲಿ, ಅಪ್ಪನಿಗಾಗಲಿ, ಗಂಗೆಗಾಗಲಿ  ಇಂದಿಗೂ ಸಾಧ್ಯವಾಗಿಲ್ಲ.

(ಮುಂದುವರೆಯುವುದು)

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು