Friday, June 14, 2024

ಸತ್ಯ | ನ್ಯಾಯ |ಧರ್ಮ

ಹತ್ತು ದಿನಗಳ ಕಾಲ ಚಳಿಗಾಲದ ಅಧಿವೇಶನ : ಸಚಿವ ಸಂಪುಟ ನಿರ್ಧಾರ

ಬೆಂಗಳೂರು : ಗುರುವಾರದಂದು ನಡೆದ ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಸಭೆ ಬಳಿಕ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌, ಡಿಸೆಂಬರ್‌ 19ರಿಂದ 30 ರವರೆಗೆ ಬೆಳಗಾವಿಯ ಸುವರ್ಣ ಸೌಧದಲ್ಲಿ ಹತ್ತು ದಿನಗಳ ಕಾಲ ಚಳಿಗಾಲದ ಅಧಿವೇಶನ ನಡೆಸಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ  ಸಭೆಯಲ್ಲಿ, ʼರಾಮನಗರದಲ್ಲಿ 600 ಕೋಟಿ ರೂಪಾಯಿ ವೆಚ್ಚದಲ್ಲಿ ರಾಜೀವ್ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣ, ಗೌರಿಬಿದನೂರಿನಲ್ಲಿ 12 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ನ್ಯಾಯಾಲಯ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಸಮ್ಮತಿ ನೀಡಿದೆ ಎಂದು ತಿಳಿಸಿದ್ದಾರೆ.

ʼಶ್ರೀಗಂಧ ನೀತಿ -2022ಕ್ಕೆ ಸಂಪುಟ ಒಪ್ಪಿಗೆ ನೀಡಿದ್ದು, ಇನ್ನು ಮುಂದೆ ರೈತರು ಖಾಸಗಿ ಜಮೀನಿನಲ್ಲಿ ಶ್ರೀಗಂಧ ಬೆಳೆದು, ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದಾಗಿದೆ. ಶ್ರೀಗಂಧ ಮಾರಾಟಕ್ಕಿದ್ದ ನಿರ್ಬಂಧನೆಗಳನ್ನು ಸಡಿಲಿಸಲಾಗಿದೆ ಎಂದು ಹೇಳಿದ್ದಾರೆ.

ಜೊತೆಗೆ ಹಿರೆ ಸೂಲೆ ಕೆರೆ ಕರಡಿ ಸಂರಕ್ಷಣಾ ಮೀಸಲು ಪ್ರದೇಶ, ಚಿಕ್ಕಸಂಗಮ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶ, ಮುಂಡಿಗೆ ಕೆರೆ ಮತ್ತು ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶ ಹಾಗೂ ಬೋನಾಳ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶಗಳನ್ನು ಘೋಷಿಸಬೇಕು ಎಂಬ ಅರಣ್ಯ ಇಲಾಖೆ ಪ್ರಸ್ತಾವನೆಗಳಿಗೆ ಅನುಮೋದಿಸಲಾಗಿದೆ. ರಾಜ್ಯದಲ್ಲಿ ಹೊಸದಾಗಿ ಉತ್ತಾರೆ ಗುಡ್ಡ ವನ್ಯಜೀವಿಧಾಮ, ಬಂಕಾಪುರ ವನ್ಯಜೀವಿಧಾಮ ಮತ್ತು ಅರಸೀಕೆರೆ ಕರಡಿ ಧಾಮಗಳ ಘೋಷಣೆಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯದ ʼಸಿʼ ಗ್ರೂಪ್ ಮತ್ತು ʼಡಿʼ ಗ್ರೂಪ್ ನೌಕರರ ವರ್ಗಾವಣೆ ತಿದ್ದುಪಡಿ ನೀತಿ ಅನುಷ್ಠಾನಗೊಳಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಮಾಹಿತಿ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು