Friday, June 14, 2024

ಸತ್ಯ | ನ್ಯಾಯ |ಧರ್ಮ

ಸಾವರ್ಕರ್‌ ಬ್ರಿಟಿಷರ ಪರವಿದ್ದಿದ್ದು ನಿಜ, ಇದು ವಾಟ್ಸಾಪ್‌ ಯೂನಿವರ್ಸಿಟಿ ಸತ್ಯವಲ್ಲ; ತುಷಾರ್‌ ಗಾಂಧಿ

ಲೇಖಕ ಮತ್ತು ಹೋರಾಟಗಾರರಾದ ಮಹಾತ್ಮ ಗಾಂಧಿಯವರ ಮರಿ ಮೊಮ್ಮಗ ತುಷಾರ್ ಗಾಂಧಿಯವರು ಶುಕ್ರವಾರ ವಿಡಿ ಸಾವರ್ಕರ್ ಕುರಿತು ರಾಹುಲ್ ಗಾಂಧಿಯವರು ನೀಡಿದ್ದ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಗಾಂಧಿಯವರು ‘ಇತಿಹಾಸದಲ್ಲಿರುವ ಪುರಾವೆ’ಯ ಬಗ್ಗೆ ಮಾತನಾಡುತ್ತಾ,’ … ವೀರ ಸಾವರ್ಕರ್ ಬ್ರಿಟಿಷರೊಂದಿಗೆ ಸ್ನೇಹದಿಂದಿದ್ದರು ಮತ್ತು ಅವರು ಜೈಲಿನಿಂದ ಬಿಡುಗಡೆ ಹೊಂದುವ ಸಲುವಾಗಿ ಬ್ರಿಟಿಷರಲ್ಲಿ ಕ್ಷಮೆಯಾಚಿಸಿದರು ಎನ್ನುವುದು ನಿಜ’ ಎಂದು ಹೇಳಿದರು. “ನಮ್ಮ ಬಳಿಯಿರುವ ದಾಖಲೆ ವಾಟ್ಸಾಪ್‌ ಯೂನಿವರ್ಸಿಟಿಯದ್ದಲ್ಲ, ನೈಜವಾದದ್ದು,” ಎಂದು ಮಾರ್ಮಿಕವಾಗಿ ಹೇಳಿದರು.

ಇದುವರೆಗೆ ಸಾಮಾಜಿಕ ಜಾಲತಾಣಗಳಲ್ಲಷ್ಟೇ ಚರ್ಚೆಯ ವಿಷಯವಾಗಿದ್ದ ಸಾವರ್ಕರ್‌ ವಿವಾದವು ಈಗ ನೇರ ರಾಜಕೀಯದ ಅಂಗಳದಲ್ಲಿ ಬಂದು ಬಿದ್ದಿದೆ. ಮತ್ತು ಅದು ಭಾರತ್‌ ಜೋಡೊ ಯಾತ್ರೆಯು ಮಹಾರಾಷ್ಟ್ರದಲ್ಲಿರುವಾಗಲೇ ಎನ್ನುವುದು ಗಮನಾರ್ಹ. ʼಸಾವರ್ಕರ್ ಬ್ರಿಟಿಷರಿಗೆ ಕ್ಷಮಾಪಣಾ ಪತ್ರ ಬರೆದಿದ್ದರು ಮತ್ತು ಪಿಂಚಣಿಯನ್ನೂ ಸ್ವೀಕರಿಸಿದ್ದರು. ಇದಕ್ಕೆ ಕಾರಣ ಭಯʼ ಎಂದು ಗುರುವಾರ ಮಹಾರಾಷ್ಟ್ರದಲ್ಲಿ ರಾಹುಲ್‌ ಗಾಂಧಿ ನೀಡಿದ್ದ ಹೇಳಿಕೆಯು ಮಹಾರಾಷ್ಟ್ರ ಹಾಗೂ ದೇಶದ ಬಲಪಂಥೀಯ ವಲಯದಲ್ಲಿ ತಲ್ಲಣವನ್ನು ಹುಟ್ಟು ಹಾಕಿತ್ತು. ಈಗ ತುಷಾರ್‌ ಗಾಂಧೀಯವರೂ ರಾಹುಲ್‌ ಹೇಳಿಕೆಗೆ ಬೆಂಬಲ ನೀಡುವ ಮೂಲಕ ವಿವಾದಕ್ಕೆ ಮತ್ತು ಅದರ ಹಿಂದಿನ ಸತ್ಯಕ್ಕೆ ಮತ್ತಷ್ಟು ಬಲ ಬಂದಂತಾಗಿದೆ.

ಮುಂದುವರೆದು ಮಾತನಾಡಿದ ಅವರು, “ಯಾತ್ರೆಗಳು ಪರಂಪರೆಯ ಭಾಗವಾಗಿದ್ದು, ಇತಿಹಾಸದಲ್ಲಿ ಇವು ಹಲವಾರು ಕ್ರಾಂತಿಗಳಿಗೆ ಜನ್ಮ ನೀಡಿವೆ. ಇಂದು ನಮ್ಮ ಪೂರ್ವಜರು ರೂಪಿಸಲು ಬಯಸಿದ್ದ ದಿಕ್ಕಿಗೆ ವಿರುದ್ಧವಾಗಿ ದೇಶ ಚಲಿಸುತ್ತಿರುವಾಗ, ನಾವು ನಮ್ಮ ಹೋರಾಟವನ್ನು ಬಿಟ್ಟುಕೊಟ್ಟಿಲ್ಲ ಎಂಬುದನ್ನು ಜನರು ಅರಿತುಕೊಳ್ಳುವುದು ಮುಖ್ಯ” ಎಂದು ಹೇಳಿದರು.

ಭಾರತ್‌ ಜೋಡೋ ಯಾತ್ರೆಯಲ್ಲಿ ತುಷಾರ್‌ ಗಾಂಧಿ ಮತ್ತು ರಾಹುಲ್‌ ಗಾಂಧಿಯವರನ್ನು ಒಟ್ಟಿಗೆ ಕಂಡು ರೋಮಾಂಚಿತರಾಗಿರುವ ಕಾಂಗ್ರೆಸ್‌ ಬೆಂಬಲಿಗರು ಈ ಹಿಂದೆ ನೆಹರೂ ಮತ್ತು ಗಾಂಧಿ ಒಟ್ಟಾಗಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ ಕೂಡಾ ತನ್ನ ಟ್ವಿಟರ್‌ ಹ್ಯಾಂಡಲ್ಲಿನಲ್ಲಿ ಗಾಂಧಿ-ನೆಹರೂ ರಾಹುಲ್-ತುಷಾರ್‌ ಗಾಂಧಿ ಜೊತೆಗಿರುವ ಚಿತ್ರದ ಕೊಲಾಜ್‌ ಒಂದನ್ನು ಹಂಚಿಕೊಂಡಿದ್ದಾರೆ.

ಇಂದಿನ ಬೆಳವಣಿಗೆಯಲ್ಲಿ ಭಾರತ್‌ ಜೋಡೋ ಯಾತ್ರೆಯ ಮುಂಚೂಣಿಯಲ್ಲಿರುವ ಜೈರಾಮ್‌ ರಮೇಶ್‌ ಅವರೂ ರಾಹುಲ್‌ ಗಾಂಧೀಯವರ ಹೇಳಿಕೆಯನ್ನು ಸಮರ್ಥಿಸಿ ಹೇಳಿಕೆ ನೀಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ

Related Articles

ಇತ್ತೀಚಿನ ಸುದ್ದಿಗಳು