Monday, June 17, 2024

ಸತ್ಯ | ನ್ಯಾಯ |ಧರ್ಮ

ಬೆಳಗಾವಿ ಗಡಿ ವಿವಾದ: ಸರ್ವಪಕ್ಷ ಸಭೆಗೆ ಆಮ್‌ ಆದ್ಮಿ ಪಾರ್ಟಿ ಆಗ್ರಹ, ಭಾಗವಹಿಸಲು ಅವಕಾಶಕ್ಕೆ ಮನವಿ

ಬೆಂಗಳೂರು: ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿ ಮಹಾರಾಷ್ಟ್ರ ಮಾದರಿಯಲ್ಲಿ ಕರ್ನಾಟಕ ಕೂಡ ಸರ್ವಪಕ್ಷಗಳ ಸಭೆ ನಡೆಸಿ ದಿಟ್ಟ ನೆಲುವು ತೆಗೆದುಕೊಳ್ಳಬೇಕೆಂದು ಆಮ್‌ ಆದ್ಮಿ ಪಾರ್ಟಿ ಆಗ್ರಹಿಸಿದ್ದು, ಸಭೆಯಲ್ಲಿ ಭಾಗವಹಿಸಲು ಆಮ್‌ ಆದ್ಮಿ ಪಾರ್ಟಿ ಪ್ರತಿನಿಧಿಗೂ ಅವಕಾಶ ನೀಡಬೇಕೆಂದು ಕೋರಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿಯವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.

ಕರ್ನಾಟಕದ ಹಿತಾಸಕ್ತಿ ಕಾಪಾಡಲು ಆಮ್‌ ಆದ್ಮಿ ಪಾರ್ಟಿ ಬದ್ಧವಾಗಿದೆ ಎಂದು ತಿಳಿಸಿರುವ ಪೃಥ್ವಿ ರೆಡ್ಡಿಯವರು, ʼನಮ್ಮ ರಾಜ್ಯದ ಹಿತಾಸಕ್ತಿಗೆ ಧಕ್ಕೆ ಉಂಟುಮಾಡುವ ಪ್ರಯತ್ನಗಳ ವಿರುದ್ಧ ಎಲ್ಲ ಪಕ್ಷಗಳೂ ಒಗ್ಗೂಡಿ ಹೋರಾಡಬೇಕಾದ ಸಮಯ ಬಂದಿದೆ. ಈ ವಿಷಯದಲ್ಲಿ ನಮ್ಮ ಆಮ್‌ ಆದ್ಮಿ ಪಾರ್ಟಿಯು ರಾಜ್ಯದ ಹಿತಾಸಕ್ತಿ ಕಾಪಾಡಲು ಬದ್ಧವಾಗಿದ್ದು, ಸರ್ವಪಕ್ಷ ಸಭೆಗೆ ರಾಜ್ಯ ಸರ್ಕಾರವು ಆಮ್‌ ಆದ್ಮಿ ಪಾರ್ಟಿಯನ್ನೂ ಆಹ್ವಾನಿಸಬೇಕು. ಭಾರತದ ಚುನಾವಣಾ ಆಯೋಗದ ಕಾನೂನಿನ ಪ್ರಕಾರ ಆಮ್‌ ಆದ್ಮಿ ಪಾರ್ಟಿಗೆ ಇನ್ನೂ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಸಿಗದಿದ್ದರೂ, ಪ್ರಸ್ತುತ ವಸ್ತುಸ್ಥಿತಿಯ ಪ್ರಕಾರ ಆಮ್‌ ಆದ್ಮಿ ಪಾರ್ಟಿಯನ್ನು ರಾಷ್ಟ್ರೀಯ ಪಕ್ಷವೆಂದು ಪರಿಗಣಿಸಿ ಸಭೆಗೆ ಕರೆಯಬಹುದುʼ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ʼನಮ್ಮ ರಾಜ್ಯದ ಹಿತಾಸಕ್ತಿ ಕಾಪಾಡಲು ಸದಾ ಬದ್ಧವಾಗಿರುವ ಅನುಭವಿ ಹಾಗೂ ಜ್ಞಾನವುಳ್ಳ ವ್ಯಕ್ತಿಗಳು ಆಮ್‌ ಆದ್ಮಿ ಪಾರ್ಟಿಯಲ್ಲಿ ಇದ್ದಾರೆ. ಉದಾಹರಣೆಗೆ, ಕಳೆದ ಒಂದು ದಶಕದಿಂದ ನೀರುಹಂಚಿಕೆ ವಿವಾದ ಹಾಗೂ ಗಡಿ ವಿವಾದಕ್ಕೆ ಸಂಬಂಧಿಸಿದ ಸರ್ವಪಕ್ಷ ಸಭೆಗಳಲ್ಲಿ ಭಾಗವಹಿಸಿರುವ ಬ್ರಿಜೇಶ್‌ ಕಾಳಪ್ಪರವರು ಇದ್ದಾರೆ. ಆದ್ದರಿಂದ ಸರ್ವಪಕ್ಷ ಸಭೆಗೆ ನಮ್ಮ ಪಕ್ಷದ ಕೊಡುಗೆಯು ಸತ್ವಯುತವಾಗಿ, ಹೊಸತನವಾಗಿ ಹಾಗೂ ಯೋಗ್ಯವಾಗಿ ಇರುತ್ತದೆ ಎಂದು ಭರವಸೆ ನೀಡುತ್ತಿದ್ದೇನೆ. ರಾಜ್ಯದ ಹಿತಾಸಕ್ತಿಗಾಗಿ ಮುಖ್ಯಮಂತ್ರಿಯವರು ಪರಿಪೂರ್ಣವಾದ ಪ್ರಯತ್ನಗಳನ್ನು ಮಾಡಬೇಕುʼ ಎಂದು ಪೃಥ್ವಿ ರೆಡ್ಡಿ ಪತ್ರದಲ್ಲಿ ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು