Friday, June 14, 2024

ಸತ್ಯ | ನ್ಯಾಯ |ಧರ್ಮ

ಎಡಗಾಲ ಕವಿತೆ-ಲಿಯೋನೆಲ್  ಮೆಸ್ಸಿ

ಫುಟ್ಬಾಲ್‌ ಜಗತ್ತಿನ ದಂತ ಕತೆ ಲಿಯೋನೆಲ್‌ ಮೆಸ್ಸಿ ಕತಾರ್‌ ನಲ್ಲಿ ತಮ್ಮ ವೃತ್ತಿಜೀವನದ ಕೊನೆಯದೆಂದು ಹೇಳಲಾಗುವ ವಿಶ್ವ ಕಪ್‌ ಅನ್ನು ಆಡಿದ್ದಾರೆ. ಅರ್ಜೆಂಟೀನಾ ಸೋತರೂ ಮೆಸ್ಸಿ ಅನ್ನೋ ಹೆಸರು, ಕವಿತೆಯಂತ ಆತನ ಆಟ ಅಷ್ಟು ಸುಲಭದಲ್ಲಿ ಮನಸ್ಸಿನಿಂದ ಮರೆಯಾಗುವಂತದ್ದಲ್ಲ. ಮೆಸ್ಸಿಗೆ ಹ್ಯಾಟ್ಸಾಪ್‌ ಎಂದಿದ್ದಾರೆ  ಗುರು ಸುಳ್ಯ

ಶಾಲೆಯ ಮೈದಾನ, ಪಕ್ಕದ ಮನೆಯ ಕಿಟಕಿ ಇವೆರಡೂ ಸುಖದ ಒಡ್ಡಾಣವೆನಿಸಿದ್ದ ಕಾಲವೊಂದಿತ್ತು. ಕ್ರಿಕೆಟ್ ಆಡುವುದು ಮತ್ತು ಕಿಟಕಿಯಲ್ಲಿ ಇಣುಕಿ ಕ್ರಿಕೆಟ್‌ ನೋಡುವುದೇ ಬದುಕು ಅನ್ನಿಸಿಕೊಂಡ ಕಾಲ. ತಿಂಡಿ ಕಟ್ಟಿ ತಂದ ಯಾವುದೇ ಕಾಗದ ಸಿಕ್ಕಿದರೂ ಓದುವ ಹಸಿವು ಇದ್ದ ಕಾಲವಾಗಿತ್ತದು. ಆಗ ರದ್ದಿ ಕಾಗದ, ಬಾಟಲಿಗಳು, ಬಟ್ಟೆಯ ಉಂಡೆ, ಅಲ್ಯೂಮೀನಿಯಮ್ ಟಿನ್ ಗಳನ್ನೇ ಬಾಲಾಗಿಸಿ ಆಟವಾಡುವ, ಫುಟ್ಬಾಲ್ ಅಂದ್ರೆ ಜೀವ ಬಿಡುವ ಮಕ್ಕಳಿರುವ ಪ್ರಪಂಚವಿರುವುದು ಗಮನಕ್ಕೆ ಬಂದಿದ್ದು ಕಡಿಮೆಯೇ ಆಗಿತ್ತು. ಪಕ್ಕದ ಕೇರಳದಲ್ಲಿ ಫುಟ್ಬಾಲ್ ಜ್ವರವಿದ್ರೂ, ನಮಗದು ಅಷ್ಟಾಗಿ ತಟ್ಟಿರಲಿಲ್ಲ. ನ್ಯೂಸ್ ಪೇಪರ್ ತಂದರೆ, ಸಿನಿಮಾ ಪುಟಗಳಿಗು ಮೊದಲು ಆಟಕ್ಕೆ ಸಂಬಂಧಿಸಿ ಪುಟವನ್ನು ದಮ್ಮು ಕಟ್ಟಿ ಓದುವುದು ಅಭ್ಯಾಸವಾಗಿತ್ತು. ಅದರಿಂದಾಗಿಯಷ್ಟೇ ಫುಟ್ಬಾಲ್ ಆಟಗಾರರಾದ ರೊನಾಲ್ಡೋ, ರೊನಾಲ್ಡಿನೋ, ಜಿದಾನ್ ಮುಂತಾದವರ ಹೆಸರುಗಳು ಗೊತ್ತಿದ್ದವೇ ಹೊರತು, ಮ್ಯಾಚ್‌ ನೋಡುವ ಉಮೇದಂತೂ ಕ್ರಿಕೆಟಿನಷ್ಟಿರಲೇ ಇಲ್ಲ.

ಫುಟ್ಬಾಲ್ ಜಗತ್ತು

ಈವಾಗ ಫುಟ್ಬಾಲಿನ ಕನಸು ಕಂಗಳು ಯುರೋಪ್ ಮತ್ತು ಲ್ಯಾಟೀನ್ ಅಮೇರಿಕಾವನ್ನು ಮೀರಿ ಜಗತ್ತಿನಾದ್ಯಂತ ತೆರೆದುಕೊಂಡಿವೆ. ಆಫ್ರಿಕಾ, ಗಲ್ಫ್ ದೇಶಗಳು ಫುಟ್ಬಾಲ್ ಹುಚ್ಚಿನಲ್ಲಿ ಮುಳುಗೇಳುತ್ತಿವೆ. ಭಾರತದಲ್ಲೂ ಫುಟ್ಬಾಲ್ ಹೆಚ್ಚು ಜನಪ್ರಿಯವಾಗುತ್ತಿದೆ. ಫುಟ್ಬಾಲ್ ತಾರೆಯರನ್ನು ಕೊಳ್ಳಲು ಫುಟ್ಬಾಲ್ ಕ್ಲಬ್ಬುಗಳು, ಜಾಹಿರಾತು ಕಂಪೆನಿಗಳು ಹೂಡುವ ಹೇರಳವಾದ ಮೊತ್ತ ಮತ್ತಷ್ಟೂ ಹೆಚ್ಚುತ್ತಲೇ ಇದೆ. ಇದೇ ನವೆಂಬರ್ ಇಪ್ಪತ್ತಕ್ಕೆ 2022 ರ ಫುಟ್ಬಾಲ್ ವರ್ಲ್ಡ್ ಕಪ್ ಶುರುವಾಗಿದೆ. ಹುಡುಗಿಯರು ಫುಟ್ಬಾಲ್ ನಲ್ಲಿ ಹಿಂದೆಯೇನು ಇಲ್ಲದಿದ್ದರೂ, ಎಲ್ಲಾ ಕಡೆಯು ಆಗುವಂತೆ ಫುಟ್ಬಾಲ್ ಜಗತ್ತಿನಲ್ಲು ಪುರುಷರದ್ದೇ ಆಧಿಪತ್ಯ. ಗಲ್ಫ್ ದೇಶಗಳ ಶೀತಲ ಸಮರದ ನಡುವೆ ‌ʼಕತಾರ್ʼ ವಿಶ್ವಕಪ್ಪಿನ ಸಾರಥ್ಯ ವಹಿಸಿ, ಈ ಪಂದ್ಯಾಟವನ್ನೇ ಮೂಲವಾಗಿಟ್ಟುಕೊಂಡು ತನ್ನಿಡೀ ಆರ್ಥಿಕ ವ್ಯವಸ್ಥೆಯನ್ನೇ ಜೂಜಿಗಿಟ್ಟಿದೆ. ತಿನ್ನೋದಿಕ್ಕಿಲ್ಲದ ಕೋಟ್ಯಾಂತರ ಜನರ ನಡುವೆ ಆಟಕ್ಕಾಗಿ ಹಣದ ಹೊಳೆ ಹರಿಯುತ್ತಿದೆ. ಇವೆಲ್ಲದರ ನಡುವೆ ಇರಾನ್ ಪುರುಷರ ಫುಟ್ಬಾಲ್ ತಂಡ ತನ್ನ ಮೊದಲ ಪಂದ್ಯದಲ್ಲಿ ರಾಷ್ಟ್ರಗೀತೆಯನ್ನು ಹಾಡಲು ನಿರಾಕರಿಸುವ ಮೂಲಕ, ಇರಾನಿನ ಮಹಿಳಾ ಹಕ್ಕುಗಳ ಪರವಾಗಿ ಮೌನವಾಗಿ ನಿಲ್ಲುವ ಪ್ರಯತ್ನ ಮಾಡಿದೆ. ಈ ವಿಶ್ವಕಪ್ ಪಂದ್ಯಾಟದಲ್ಲಿ, ಇವತ್ತಿನ ಫುಟ್ಬಾಲ್ ಜಗತ್ತಿನ ತಾರೆಗಳಾದ ಮೆಸ್ಸಿ, ರೊನಾಲ್ಡೋ, ನೇಮರ್, ಎಂಬಪೆ ಮುಂತಾದವರ ಬಗ್ಗೆ ಭಾರೀ ನಿರೀಕ್ಷೆಗಳಿವೆ ಮತ್ತು ಅಭಿಮಾನಿ ವರ್ಗ ಇವರುಗಳ ಆಟ ನೋಡಲು ಕಾತರದಿಂದಿದೆ. ಇವರಲ್ಲಿ ನಾನೀಗ ಹೇಳಲು ಹೊರಟಿರುವುದು ತನ್ನ ಎಡಗಾಲಿನಿಂದ ಮೈದಾನದುದ್ದಕ್ಕೂ ಕವಿತೆ ಬರೆಯುವ ಅರ್ಜೆಂಟೇನಿಯನ್ ಫುಟ್ಬಾಲರ್ ‘ಲಿಯೋನಲ್ ಮೆಸ್ಸಿ’ ಬಗ್ಗೆ.

ಫುಟ್ಬಾಲ್ ಮೈದಾನದಲ್ಲಿ  ಹೂವರಳಿಸಿದ..

ಅರ್ಜೇಂಟೀನಾದ ರೊಸಾರಿಯೊ ಗಲ್ಲಿಗಳಲ್ಲಿ ಫುಟ್ಬಾಲ್ ಆಡುತ್ತಿದ್ದ ಪುಟ್ಟ ಹುಡುಗ ಮೆಸ್ಸಿ. ಮುಂದೆ ಎಫ್‌ ಸಿ ಬಾರ್ಸಿಲೋನ’ ಎಂಬ ಪ್ರಖ್ಯಾತ ಫುಟ್ಬಾಲ್ ಕ್ಲಬ್ಬಿನ ಎಲ್ಲವೂ ಆಗಿ ಬದಲಾದದ್ದು, ಆ ಮೂಲಕ ಫುಟ್ಬಾಲ್ ಅಂಗಳಗಳನ್ನು ಕವಿತೆಯ ಗುಚ್ಛಗಳನ್ನಾಗಿ ಅರಳಿಸಿದ್ದು ಇವಾಗ ಇತಿಹಾಸ. ಫುಟ್ಬಾಲ್ ಮೈದಾನದಲ್ಲಿ ಈ ಹುಡುಗ ಬಾರಿಸಿದ ಒಂದೊಂದು ಗೋಲು, ಮಾಡಿದ ಬಹುಪಾಲು ಡ್ರಿಬ್ಲಿಂಗುಗಳು, ಕೊಟ್ಟ ಒಂದೊಂದು ಪಾಸುಗಳು- ಒಂದೊಂದು ಹೂವರಳಿದ ಹಾಗೇ. ತನ್ನ ಎಡಗಾಲಿನಿಂದ ಆತ ಸೃಷ್ಟಿಸಿದ ಹೂದೋಟದಲ್ಲಿ ವಿಹರಿಸುತ್ತಿರುವ ಅಭಿಮಾನಿಗಳು ಅಸಂಖ್ಯ. ಮೆಸ್ಸಿಗೆ ನಾಲ್ಕನೇ ವಯಸ್ಸಿರುವಾಗ ಪುಟ್ಬಾಲ್ ನೋಡಲು ಅವನನ್ನು ಕರೆದುಕೊಂಡು ಹೋಗುತ್ತಿದ್ದ ಅವನ ಅಜ್ಜಿಯೇ, ಮುಂದೆ ಅಲ್ಲಿನ ಸ್ಥಳೀಯ ಫುಟ್ಬಾಲ್ ಕೋಚಿನ ವಿನಂತಿಯಂತೆ ಮೊದಲ ಬಾರಿಗೆ ಮೈದಾನದೊಳಕ್ಕೆ ಬಿಡುತ್ತಾಳೆ. ಹೀಗೆ, ಕ್ಲಬ್ ಫುಟ್ಬಾಲ್ ಆಡಲು ಶುರು ಮಾಡುವ ಮೆಸ್ಸಿ, ಇವತ್ತಿಗೂ ಗೋಲು ಹೊಡೆದಾಗ ಎರಡೂ ಕೈಗಳನ್ನು ಮೇಲಕ್ಕೆತ್ತಿ ಬೆರಳುಗಳನ್ನು ಆಕಾಶದೆಡೆಗೆ ತೋರುವುದು ತನ್ನ ಅಜ್ಜಿಯ ನೆನಪಿಗಾಗಿಯೇ ಅನ್ನಲಾಗುತ್ತದೆ. ಫುಟ್ಬಾಲ್ ಎಂದರೆ ಪ್ರೇಮವೆನ್ನುವಂತೆ ಪುಳಕಿತನಾಗುವ ಮೆಸ್ಸಿ, “ತನ್ನನ್ನು ತಾನೇ ಆಶ್ಚರ್ಯಚಕಿತನಾಗಿಸಲು, ಆನಂದ ತುಂದಿಲನಾಗಿರಲು ಯಾವಾಗಲೂ ಚೆಂಡು ಸಿಗುವ ಮಗುವಿನ ಖುಷಿಯಲ್ಲಿ ಆಡಲಿಚ್ಛಿಸುತ್ತೇನೆ” ಅನ್ನುತ್ತಾನೆ. ಆತ ಗಳಿಸಿದ ಪ್ರಶಸ್ತಿ, ಮೀರಿದ ಫುಟ್ಬಾಲ್ ದಾಖಲೆಗಳಿಗೆ ಲೆಕ್ಕವಿಲ್ಲವಾದರೂ, ಅದನ್ನು ಹೇಳುವುದು ಈ ಬರಹದ ಉದ್ದೇಶವಲ್ಲ.

 ಟಿಶ್ಯೂ ಪೇಪರಿನ ಮೇಲೆ ಕರಾರು!

ಬಾರ್ಸಿಲೋನ ಫುಟ್ಬಾಲ್ ಕ್ಲಬ್ ಹದಿಮೂರು ವರ್ಷದ ಈ ಬಾಲಕನನ್ನು ಕರಾರು ಮಾಡಿಕೊಂಡದ್ದೇ ಒಂದು ಆಸಕ್ತಿಕರ ಘಟನೆ. ಕೇವಲ ಏಳು ನಿಮಿಷ ಈ ಹುಡುಗನ ಆಟ ನೋಡಿ ಅತೀವ ಆಕರ್ಷಿತನಾದ ಅಂದಿನ ಬಾರ್ಸಿಲೋನ ಕ್ಲಬ್ಬಿನ ಜನರಲ್ ಸೆಕ್ರೆಟರಿ ‘ಕಾರ್ಲೆಸ್ ರೆಕ್ಸಾಚ್’ ಮೆಸ್ಸಿಯ ಪೋಷಕರನ್ನು ಒಂದೆರಡು ಸಲ ಭೇಟಿಯಾಗುತ್ತಾನೆ. ಮೆಸ್ಸಿಯನ್ನು ಖರೀದಿಸಿದರೆ ಆತನ ಪೂರ್ತಿ ವೈದ್ಯಕೀಯ ವೆಚ್ಚವನ್ನು ವಹಿಸಬೇಕಾದ್ದರಿಂದ, ಬಾರ್ಸಿಲೋನ ಕ್ಲಬ್ಬಿನ ಉನ್ನತರ ಮನವೊಲಿಸುವುದು ಸುಲಭವಿರಲಿಲ್ಲ. ಕೊನೆಯ ಭೇಟಿಯಲ್ಲಿ ಮೆಸ್ಸಿಯ ತಂದೆ, ನಿಮಗೆ ಬೇಡದಿದ್ದರೆ ಬೇರೆ ಕ್ಲಬ್ಬಿಗೆ ಮೆಸ್ಸಿಯನ್ನು ಕೊಂಡೊಯ್ಯತ್ತೇನೆ ಎಂದಾಗ, ಪರಿಸ್ಥಿತಿಯ ಪೂರ್ತಿ ಭಾರವನ್ನು ಹೊತ್ತುಕೊಳ್ಳುವ ರೆಕ್ಸಾಚ್ ಅಲ್ಲೇ ಇದ್ದ ಟಿಶ್ಯೂ ಪೇಪರಿನ ಮೇಲೆ ಬಾರ್ಸಿಲೋನ ಕ್ಲಬ್ಬಿಗಾಗಿ ಆಡುವ ಆರಂಭದ ಕರಾರನ್ನು ಮೆಸ್ಸಿಯ ಜೊತೆ ಮಾಡಿಕೊಳ್ಳುತ್ತಾನೆ. ಆ ಟಿಶ್ಯೂ ಪೇಪರ್ ಆದರೋ, ಮೆಸ್ಸಿಯ ಪ್ರತಿಭೆಯ ಪ್ರತಿಬಿಂಬವಾಗಿ ಫೋಟೋ ಫ್ರೇಮಿನೊಳಗೆ ಶಾಶ್ವತವಾಗಿ ಕೂತಿದೆ. ‘ಲಿಯೋನಲ್ ಆ್ಯಂಡ್ರೋಸ್ ಮೆಸ್ಸಿ’ ಎಂಬ ಪ್ರತಿಭಾ ಭಂಡಾರವನ್ನು ಇನ್ಯಾರಾದರು ತಮ್ಮದಾಗಿಸಿಕೊಳ್ಳುವ ಮೊದಲೇ ಬಾರ್ಸಿಲೋನ ತನ್ನದಾಗಿಸಿಕೊಂಡದ್ದು ಹೀಗೆ.

ʼಲಾ ಪುಲ್ಗಾʼ

ತನ್ನ ಬಾಲ್ಯದ ದಿನಗಳಿಂದಲೇ ಮೆಸ್ಸಿ ‘ಲಾ ಪುಲ್ಗಾ’ ಎಂದು ಕರೆಯಿಸಿಕೊಳ್ಳುತ್ತಿದ್ದ. ಹುಡುಗರಲ್ಲಿ ನೋಡಲು ಸಣ್ಣವನಾಗಿದ್ದು, ಆಟದಲ್ಲಿ ಮಾತ್ರ ಚುರುಕಾಗಿದ್ದುದರಿಂದ ಮೆಸ್ಸಿಗೆ ಆ ಹೆಸರು ಬಂದಿತ್ತು. ಆರಂಭದ ದಿನಗಳಲ್ಲಿ, ಆಟದ ನಂತರ ಮಾತೇ ಆಡದಿರುತ್ತಿದ್ದ ಮೆಸ್ಸಿಗೆ ಒಂದೊಮ್ಮೆ ಸಹ ತಾರೆಯರು ‘ಮೂಗ’ ಎಂದೂ ಕರೆಯುತ್ತಿದ್ದುದುಂಟು. ಮೊದಲಿಗೆ ಸಣ್ಣ ಸಣ್ಣ ಕ್ಲಬ್ಬುಗಳಲ್ಲಿ ಆಡಿದ ನಂತರ, ಮೆಸ್ಸಿಯನ್ನು ಆಡಿಸಲು ಅರ್ಜೆಂಟೀನಾದ ಫುಟ್ಬಾಲ್ ಕ್ಲಬ್ಬಾದ ‘ರಿವರ್ ಪ್ಲೇಟ್’ ಕೂಡಾ ತಯಾರಿತ್ತಾದರು, ಅವನ ವೈದ್ಯಕೀಯ ಖರ್ಚನ್ನು ವಹಿಸುವಷ್ಟು ಆರ್ಥಿಕವಾಗಿ ಅದು ಬಲಿಷ್ಠವಾಗಿರಲಿಲ್ಲ. ತರಾತುರಿಯಲ್ಲಿ ಮೆಸ್ಸಿ ಅನ್ನೋ ಪುಟ್ಟ ಹುಡುಗನನ್ನು ಕ್ಲಬ್ಬಿಗೆ ಸೇರಿಸಿಕೊಂಡ ಬಾರ್ಸಿಲೋನಾ, ಮುಂದೆ ‘ಬೆಳವಣಿಗೆಯ ಹಾರ್ಮೋನ್’ ಕೊರತೆಯಿಂದ ಬಳಲುತ್ತಿದ್ದ ಮೆಸ್ಸಿಯ ಸಂಪೂರ್ಣ ವೈದ್ಯಕೀಯ ಖರ್ಚನ್ನು ತಾನೇ  ವಹಿಸಿಕೊಂಡಿತ್ತು.

 ಚೆಂಡಿಗೂ ಮೆಸ್ಸಿಯ ಕಾಲಿಗೆ ಅಂಟಿಕೊಂಡಿರಲು ಇಷ್ಟ!

ತನ್ನ ಹನ್ನೊಂದನೇ ವಯಸ್ಸಿನಿಂದಲೇ ಸ್ಪೇನಿನಲ್ಲಿರುವ ಮೆಸ್ಸಿಗೆ, ಸ್ಪೇನ್ ದೇಶದ ಪೌರತ್ವವು ಇದೆ. ಸ್ಪೇನ್ ತನ್ನ ಪರವಾಗಿ ಆಡಲು ಮೆಸ್ಸಿ ಕೇಳಿದ್ದೆಲ್ಲವನ್ನು ಕೊಡಲು ತುದಿಗಾಲಲ್ಲಿ ನಿಂತು ಆಹ್ವಾನಿಸಿತ್ತು. ಆ ಆಹ್ವಾನವನ್ನು ನಯವಾಗಿ ತಿರಸ್ಕರಿಸಿದ ಮೆಸ್ಸಿಗೆ ತನ್ನ ದೇಶವಾದ ಅರ್ಜೆಂಟೀನಾದ ಜೆರ್ಸಿ ಹಾಕಿ ವಿಶ್ವಕಪ್ ಗೆಲ್ಲುವ ಅತೀವ ಹಂಬಲವಿದೆ. ಕ್ಲಬ್ಬಿನ ಪರವಾಗಿ ಆಡುವಾಗಲಷ್ಟೇ ತನ್ನ ಪ್ರತಿಭೆಯ ಔನ್ನತ್ಯವನ್ನು ತಲುಪುತ್ತಾನೆ, ದೇಶದ ಬಗ್ಗೆ ಆತನಿಗೆ ಅಂತಹ ಪ್ರೀತಿಯೇನಿಲ್ಲ ಎಂದು ದೂಷಿಸುವವರಿದ್ದಾರೆ. ನನಗೆ ಆತ ಪ್ರೀತಿಸುವವರ ಮಧ್ಯೆ ಆರಾಮಾಗಿ ಆಡುತ್ತಾನೆ ಎಂಬುದು ದೇಶಪ್ರೇಮವೆಂಬ ಗುಂಗಿಗಿಂತ ಸುಂದರವಾಗಿ ಕಾಣಿಸುತ್ತೆ. ಅಂತರ್ಮುಖಿ ಸ್ವಭಾವವಿರುವ, ನಗು ಬರುವಾಗ ನಗುವ, ಅಳು ಬರುವಾಗ ಬಿಕ್ಕಿ ಅಳುವ ಮೆಸ್ಸಿ ಇಷ್ಟವಾಗುವುದು ಮೈದಾನದೊಳಗಿನ ಆತನ ವ್ಯಕ್ತಿತ್ವದಿಂದಲೂ ಕೂಡ. ಬಲ ಪ್ರಯೋಗಿಸಿ ಎದುರಾಳಿಯನ್ನು ತಳ್ಳುವುದು, ಬೀಳಿಸುವುದು ಫುಟ್ಬಾಲಿನಲ್ಲಿ ನಾವು ಸಾಮಾನ್ಯವಾಗಿ ಕಾಣತ್ತೇವೆ, ಇದಕ್ಕಾಗಿ ಕೆಂಪು ಕಾರ್ಡ್ ಪಡೆಯುವ ಆಟಗಾರರು ಬೇಕಾದಷ್ಟಿದ್ದಾರೆ. ಆದರೆ, ಮೆಸ್ಸಿಯ ವಿಷಯಕ್ಕೆ ಬಂದರೆ, ಎದುರಾಳಿ ಯಾರೇ ಆದರೂ ಆತನ ಮೇಲೆರಗದೆ ಚೆಂಡನ್ನು ಚಲಾಯಿಸುವ ತನ್ನ ಚಾಕಚಕ್ಯತೆಯಿಂದಲೇ ತಬ್ಬಿಬ್ಬುಗೊಳಿಸುವ ಕಲೆಗಾರ ಆತ. ಗೋಲು ಹೊಡೆದಾಗ ತೋರಿಸುವ ಸಂಭ್ರಮದಾಚೆಗೆ ಆತ ಉಳಿದವರಂತೆ ಒರಟನಾಗಿ ವರ್ತಿಸುವುದಿಲ್ಲ. ಆತನಿಗೆ ಫುಟ್ಬಾಲ್ ಶಕ್ತಿ ಪ್ರದರ್ಶಿಸುವ ಅಥವಾ ದರ್ಪ ತೋರಿಸುವ ಆಟವಲ್ಲ. ಫುಟ್ಬಾಲ್ ದಂತಕಥೆ ‘ಡಿಯಾಗೋ ಮರಡೋನ’ ಹೇಳುವಂತೆ ಚೆಂಡಿಗೂ ಮೆಸ್ಸಿಯ ಕಾಲಿಗೆ ಅಂಟಿಕೊಂಡಿರಲು ಇಷ್ಟ.

 ಗೋಲ್ ಸ್ಕೋರರ್ ಅಲ್ಲ ಪ್ಲೇ ಮೇಕರ್

ಬ್ರೆಜಿಲ್ ದೇಶದ, ಉಬ್ಬು ಹಲ್ಲಿನ, ಗುಂಗುರು ಕೂದಲಿನ ಕಪ್ಪು ಹುಡುಗನ ಬೆನ್ನ ಮೇಲೆ ಕೂತು ಗೆಲುವನ್ನು ಸಂಭ್ರಮಿಸುವ ಅರ್ಜೆಂಟೀನಾದ ನೀಳ ಕೂದಲಿನ, ಬಿಳಿ ಹುಡುಗನ ಚಿತ್ರ ಜಗತ್ತಿನ ಫುಟ್ಬಾಲ್ ಪ್ರೇಮಿಗಳಿಗೆಲ್ಲಾ ಚಿರಪರಿಚಿತ. ಬಾರ್ಸಿಲೋನ ಕ್ಲಬ್ಬಿಗಾಗಿ ತನ್ನ ಹದಿನೆಂಟನೇ ವಯಸ್ಸಿನಲ್ಲಿ ಸೀನಿಯರ್ ಲೆವೆಲ್ ಅಲ್ಲಿ ಮೊದಲ ಗೋಲ್ ಹೊಡೆದಾಗ, ಅವನನ್ನು ಬೆನ್ನ ಮೇಲೆ ಹೊತ್ತು ಸಂಭ್ರಮಿಸುವ ರೊನಾಲ್ಡಿನೋನನ್ನು ಮರೆಯಲು ಸಾಧ್ಯವಿಲ್ಲ. ಹಿರಿಯಣ್ಣನಂತೆ ಮೆಸ್ಸಿಯ ಜೊತೆಗಿದ್ದ ರೊನಾಲ್ಡಿನೋಗೆ ಮೆಸ್ಸಿಯ ಬಗ್ಗೆ ಅಪಾರ ಪ್ರೀತಿಯಿತ್ತು ಮತ್ತು ಅದು ಮೆಸ್ಸಿಯ ಬೆಳವಣಿಗೆಗು ಸಹಕಾರಿಯಾಗಿತ್ತು. ಇಪ್ಪತ್ತೆರಡು ವರ್ಷಗಳಿಂದ ಮೆಸ್ಸಿ ಫುಟ್ಬಾಲ್ ಆಡ್ತಾನೇ ಇದ್ದಾನೆ. ಬಾರ್ಸಿಲೋನ ಕ್ಲಬ್ಬಿನೊಂದಿಗಿನ ಸುದೀರ್ಘ 20 ವರ್ಷಗಳ ನಂತರ ಇವಾಗ ಫ್ರಾನ್ಸಿನ ‘ಪ್ಯಾರೀಸ್ ಸೇಂಟ್ ಜರ್ಮನ್’ ಕ್ಲಬ್ಬಿನ ಮುಖಾಂತರ ಆಟ ಮುಂದುವರಿಸಿದ್ದಾನೆ. ಬಾರ್ಸಿಲೋನವನ್ನು ತೊರೆಯುವಾಗ ಕಣ್ಣೀರು ಹಾಕಿದ್ದಾನೆ. ಬಾರ್ಸಿಲೋನ ತೊರೆದು ಕೆಲವು ಕಾಲ ಹೊಂದಾಣಿಕೆ ಮಾಡಿಕೊಳ್ಳಲು ಕಷ್ಟಪಟ್ಟನಾದರು, ಈವಾಗ ತನ್ನ ಎಂದಿನ ಆಟಕ್ಕೆ ಮರಳಿದ್ದಾನೆ. ಗೋಲ್ ಸ್ಕೋರರ್ ಅನ್ನುವುದಕ್ಕಿಂತಲು ಹೆಚ್ಚಾಗಿ ‘ಪ್ಲೇ ಮೇಕರ್’ ಆಗಿ ಪಂದ್ಯಗಳನ್ನು ಗೆಲ್ಲಿಸಿಕೊಡುತ್ತಿದ್ದಾನೆ.

‘ಮೆಸ್ಸಿಯ ಕೊನೆಯ ಡ್ಯಾನ್ಸ್’

ಈ ಬಾರಿ, ತಮ್ಮ ನಾಯಕನನ್ನು ಅತೀವವಾಗಿ ಪ್ರೀತಿಸುವ ಯುವ ಪಡೆಯೊಂದಿಗೆ ಅರ್ಜೆಂಟೀನಾ ತಂಡ ತನ್ನ ಅಂತಿಮ ಪ್ರಯತ್ನಕ್ಕೆ ಸಜ್ಜಾಗಿದೆ. ಮೆಸ್ಸಿ ಆಡುವ ಕೊನೆಯ ವಿಶ್ವಕಪ್ ಇದಾಗಿರುವ ಸಾಧ್ಯತೆಯೇ ಹೆಚ್ಚಿರುವುದರಿಂದ ‘ಮೆಸ್ಸಿಯ ಕೊನೆಯ ಡ್ಯಾನ್ಸ್’ ಎಂಬ ಪ್ರಚಾರ ಕೂಡ ಇದಕ್ಕೆ ಸಿಕ್ಕಿದೆ. ಇದಾಗಲೇ ಮೊದಲ ಪಂದ್ಯದಲ್ಲೇ  ಸೌದಿ ಅರೇಬಿಯಾ ಕೈಯಲ್ಲಿ ಸೋಲುಂಡಿರುವ ಅರ್ಜೆಂಟೀನಾ ತಂಡ ಆಘಾತಕ್ಕೊಳಗಾಗಿದೆ. ಈ ಸೋಲು ಮೆಸ್ಸಿ, ಅರ್ಜೆಂಟೀನಾ ತಂಡ ಮತ್ತು ಅಭಿಮಾನಿಗಳಿಗೆ ದೊಡ್ಡ ಮಟ್ಟದ ನಿರಾಸೆಯನ್ನೂ ಉಂಟುಮಾಡಿದೆ. ಅರ್ಜೆಂಟೀನಾ ವಿಶ್ವಕಪ್ ಗೆದ್ದರೂ, ಇಲ್ಲದಿದ್ದರೂ ಮೆಸ್ಸಿ ಅನ್ನೋ ಹೆಸರು, ಕವಿತೆಯಂತ ಆತನ ಆಟ ಅಷ್ಟು ಸುಲಭದಲ್ಲಿ ಮನಸ್ಸಿನಿಂದ ಮರೆಯಾಗುವಂತದ್ದಲ್ಲ.

ಗುರು ಸುಳ್ಯ

ಕವಿತೆ, ಕತೆ, ಲೇಖನ ಬರೆಯುವ ಹವ್ಯಾಸವಿರುವವರು.

Related Articles

ಇತ್ತೀಚಿನ ಸುದ್ದಿಗಳು